ಆಲ್ಕೋಮೀಟರ್‌ ಬಳಸಿ ಲಕ್ಷ ಲಕ್ಷ ಸುಲಿಯುತ್ತಿದ್ದ ಪೊಲೀಸ್ !

By Kannadaprabha NewsFirst Published Dec 16, 2019, 8:13 AM IST
Highlights

ಆಲ್ಕೋಮೀಟರ್ ಲಕ್ಷ ಲಕ್ಷ ಹಣ ಸುಲಿಗೆ ಮಾಡುತ್ತಿದ್ದ ಪೊಲೀಸ್ ಇನ್ಸ್‌ಪೆಕ್ಟರ್ ಹಾಗೂ ಇಬ್ಬರು ಪೇದೆಗಳನ್ನು ಸಸ್ಪೆಂಡ್ ಮಾಡಲಾಗಿದೆ. 

ಬೆಂಗಳೂರು [ಡಿ.16]:  ಅಕ್ರಮವಾಗಿ ಆಲ್ಕೋಮೀಟರ್‌ ಬಳಸಿ ಪಾನಮತ್ತ ಚಾಲಕರನ್ನು ಹಿಡಿದು ಲಕ್ಷಾಂತರ ರುಪಾಯಿ ಸುಲಿಗೆ ಮಾಡುತ್ತಿದ್ದ ಸಹಾಯಕ ಸಬ್‌ಇನ್‌ಸ್ಪೆಕ್ಟರ್‌ (ಎಎಸ್‌ಐ) ಹಾಗೂ ಇಬ್ಬರು ಕಾನ್‌ಸ್ಟೇಬಲ್‌ಗಳು ಸಿಕ್ಕಿ ಬಿದ್ದಿದ್ದಾರೆ.

ಅಶೋಕ್‌ ನಗರ ಠಾಣೆಯ ಸಹಾಯಕ ಸಬ್‌ ಇನ್‌ಸ್ಪೆಕ್ಟರ್‌ ಮುನಿಯಪ್ಪ, ಕಾನ್‌ಸ್ಟೇಬಲ್‌ಗಳಾದ ಗಂಗರಾಜ್‌ ಮತ್ತು ನಾಗರಾಜ್‌ ಸಿಕ್ಕಿ ಬಿದ್ದವರು. ಮೂವರು ಸಿಬ್ಬಂದಿಯನ್ನು ಹೆಚ್ಚುವರಿ ಪೊಲೀಸ್‌ ಆಯುಕ್ತ ರವಿಕಾಂತೇಗೌಡ ಅವರು ಅಮಾನತುಗೊಳಿಸಿದ್ದು, ತನಿಖೆಗೆ ಆದೇಶಿಸಿದ್ದಾರೆ.

ಈಶಾನ್ಯ ಸಂಚಾರ ವಿಭಾಗದ ಎಸಿಪಿ ಸತೀಶ್‌, ಸಂಚಾರ ಯೋಜನೆ ವಿಭಾಗದ ಎಸಿಪಿ ಕವಿತಾ ಅವರ ನೇತೃತ್ವದಲ್ಲಿ ತನಿಖಾ ತಂಡ ರಚಿಸಲಾಗಿದ್ದು, ತನಿಖಾ ತಂಡ ವರದಿ ಕೊಟ್ಟಬಳಿಕ ಆರೋಪ ಕೇಳಿ ಬಂದಿರುವ ಸಿಬ್ಬಂದಿ ವಿರುದ್ಧ ಕಾನೂನು ಕ್ರಮಕೈಗೊಳ್ಳುವುದಾಗಿ ಸಂಚಾರ ವಿಭಾಗದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಇತರೆ ಸಿಬ್ಬಂದಿ ಅಥವಾ ಮೇಲಾಧಿಕಾರಿಗಳು ಇದರಲ್ಲಿ ಭಾಗಿಯಾಗಿರುವ ಬಗ್ಗೆ ಮಾಹಿತಿ ಇಲ್ಲ. ತನಿಖೆ ಬಳಿಕ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ ಎಂದರು.

ಡ್ರಿಂಕ್‌ ಆ್ಯಂಡ್‌ ಡ್ರೈವ್‌ ಪರಿಶೀಲನೆಗೆಂದು ಇಲಾಖೆ ಅಧಿಕೃತವಾಗಿ ಆಲ್ಕೋಮೀಟರ್‌ಗಳನ್ನು ಖರೀದಿಸಿ, ಸಂಚಾರ ಪೊಲೀಸರಿಗೆ (ಎಎಸ್‌ಐ ಮಟ್ಟದ ಪೊಲೀಸರು) ನೀಡುತ್ತದೆ. ಆಲ್ಕೋಮೀಟರ್‌ನಲ್ಲಿ ತಪಾಸಣೆ ನಡೆಸಿದರೆ ಪ್ರತಿ ದಿನ ಎಷ್ಟುತಪಾಸಣೆ ನಡೆದಿದೆ? ಪರಿಶೀಲನೆಗೆ ಒಳಪಟ್ಟವರಲ್ಲಿ ಪಾನಮತ್ತರು ಎಷ್ಟುಮಂದಿ ಸಿಕ್ಕಿ ಬಿದ್ದಿದ್ದಾರೆ, ಅವರಿಗೆ ಎಷ್ಟುದಂಡ ವಿಧಿಸಲಾಗಿದೆ ಎನ್ನುವ ಮಾಹಿತಿ ದಾಖಲಾಗಿರುತ್ತದೆ.

ಸ್ವಂತ ಅಪಾರ್ಟ್‌ಮೆಂಟ್, ಖಾತೆಯಲ್ಲಿ ಲಕ್ಷ ಲಕ್ಷ ಹಣ : ವಿದ್ಯಾರ್ಥಿಗೆ ಇದೆಲ್ಲಾ ಬಂದಿದ್ದೆಲ್ಲಿಂದ?..

ಹೀಗಾಗಿ ಆರೋಪಿತ ಸಿಬ್ಬಂದಿ ತಾವೇ ಸ್ವಂತ ಹಣದಲ್ಲಿ ಆಲ್ಕೋಮೀಟರ್‌ಗಳನ್ನು ಖರೀದಿಸಿದ್ದರು. ಕರ್ತವ್ಯದಲ್ಲಿದ್ದ ವೇಳೆ ಇದೇ ಯಂತ್ರದಲ್ಲಿ ಸಿಬ್ಬಂದಿ ಆಲ್ಕೋಮೀಟರ್‌ ಉಪಯೋಗಿಸಿ ಡ್ರಿಂಕ್‌ ಆ್ಯಂಡ್‌ ಡ್ರೈವ್‌ ತಪಾಸಣೆ ನಡೆಸುತ್ತಿದ್ದರು. ಮದ್ಯ ಸೇವನೆ ಮಾಡಿ ಸಿಕ್ಕಿ ಬಿದ್ದ ಚಾಲಕರಿಗೆ ಪರಿಷ್ಕೃತ ಹೊಸ ದಂಡದ ಬಗ್ಗೆ ಹೇಳಿ ಭಯ ಹುಟ್ಟಿಸುತ್ತಿದ್ದರು. ಬಳಿಕ ಅವರಿಂದ ದಂಡಕ್ಕಿಂತ ಕಡಿಮೆ ಹಣ ಪಡೆದು ವಾಹನ ಸಮೇತ ಬಿಟ್ಟು ಕಳುಹಿಸುತ್ತಿದ್ದರು. ನಗದು ಇಲ್ಲದಿದ್ದರೆ ಪೇಟಿಎಂನಲ್ಲಿ ತಮ್ಮ ಖಾತೆಗೆ ಹಣ ವರ್ಗಾವಣೆ ಮಾಡಿಸಿಕೊಳ್ಳುತ್ತಿದ್ದರು. ಈ ಸಿಬ್ಬಂದಿ ಆಲ್ಕೋಮೀಟರ್‌ನಲ್ಲಿ ತಪಾಸಣೆ ನಡೆಸುತ್ತಿದ್ದರಿಂದ ಯಾರಿಗೂ ಕೂಡ ಅನುಮಾನ ಬರುತ್ತಿರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದರು.

ಅಶೋಕ್‌ನಗರ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಪಬ್‌ಗಳು, ಡಿಸ್ಕೋಥೆಕ್‌ಗಳು, ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ಗಳು ಸೇರಿದಂತೆ ಡ್ಯಾನ್ಸ್‌ಬಾರ್‌ಗಳು ಹೆಚ್ಚಿವೆ. ಈ ಭಾಗದಲ್ಲಿ ಕುಡಿದು ವಾಹನ ಚಾಲನೆ ಮಾಡುವವರ ಸಂಖ್ಯೆ ಕೂಡ ಹೆಚ್ಚಿದೆ. ಹೀಗಾಗಿ ಇದನ್ನೇ ಬಂಡವಾಳ ಮಾಡಿಕೊಂಡು ಈ ಅಕ್ರಮಕ್ಕೆ ಎಸಗುತ್ತಿದ್ದರು ಎನ್ನಲಾಗಿದೆ.

ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದರು!

ಅಕ್ರಮ ನಡೆಸುವ ಬಗ್ಗೆ ತಿಳಿದ ಠಾಣಾ ಸಿಬ್ಬಂದಿಯೊಬ್ಬರು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ವಿಷಯ ತಿಳಿದ ಹಿರಿಯ ಅಧಿಕಾರಿ ರೆಡ್‌ಹ್ಯಾಂಡ್‌ ಆಗಿ ಹಿಡಿಯಲು ಮುಂದಾಗಿದ್ದಾಗ ತಪ್ಪಿಸಿಕೊಂಡಿದ್ದರು. ಈ ಬಾರಿ ಸಿಕ್ಕಿ ಬಿದ್ದರು ಎಂದು ವಿವರಿಸಿದರು. ಆರೋಪಿಗಳಿಂದ .32 ಸಾವಿರ ನಗದು ಮತ್ತು ಆಲ್ಕೋ ಮೀಟರ್‌ಗಳನ್ನು ವಶಕ್ಕೆ ಪಡೆಯಲಾಗಿದೆ.

click me!