
ಕೋಲಾರ(ಜು.13): ಟೊಮೆಟೋ ಬೆಲೆ ದಿನದಿಂದ ದಿನಕ್ಕೆ ಗಗನಮುಖಿಯಾಗುತ್ತಿದ್ದರೆ, ಇತ್ತ ಟೊಮೆಟೋ ಬೆಳೆದ ರೈತನ ಮೊಗದಲ್ಲಿ ಸಮಾಧಾನದ ನಿಟ್ಟುಸಿರು. ಆದರೆ, ಇದರ ಬೆನ್ನಲ್ಲೇ ಕಳ್ಳರ ಹಾವಳಿಯು ರೈತರಲ್ಲಿ ಆತಂಕ ಸೃಷ್ಟಿಸಿದ್ದು, ಇದೀಗ ರೈತರು ಟೊಮೆಟೋ ಬೆಳೆಯ ಕಾವಲಿಗೆ ತಮ್ಮ ಹೊಲದಲ್ಲೇ ಟೆಂಟ್ ಹಾಕಿಕೊಂಡು ಕಾವಲು ಕಾಯುತ್ತಿದ್ದಾರೆ.
ಕೋಲಾರ ಜಿಲ್ಲೆಯ ಹಲವೆಡೆ ರೈತರು ಟೊಮೆಟೋ ಕಾವಲಿಗೆ ರಾತ್ರಿಪಾಳಿಗೆ ಇಳಿದಿದ್ದು, ತಾಲೂಕಿನ ಹೊಸಮಟ್ನಹಳ್ಳಿ ಗ್ರಾಮದ ರೈತ ಕೆ.ಶ್ರೀನಿವಾಸಗೌಡ ಎಂಬುವವರು ತಮ್ಮ 3 ಎಕರೆ ಜಮೀನಿನಲ್ಲಿ ಟೊಮೆಟೋ ಬೆಳೆದಿದ್ದು, ಕಳ್ಳರಿಂದ ಬೆಳೆ ರಕ್ಷಿಸಿಕೊಳ್ಳಲು ಹಗಲಿರುಳೆನ್ನದೇ ಕಳೆದ 15 ದಿನಗಳಿಂದ ನಿರಂತರವಾಗಿ ಟೊಮೆಟೋ ಬೆಳೆಯನ್ನು ಕಾಯುತ್ತಿದ್ದಾರೆ.
ಟೊಮೆಟೊ ಬೆಲೆ ಗಗನಕ್ಕೆ, ಕೋಲಾರದಿಂದ 2 ಲಕ್ಷ ರೂ ಮೌಲ್ಯದ ಟೊಮೆಟೊ ತುಂಬಿದ ಗಾಡಿ ಹೈಜಾಕ್!
ಇನ್ನು, ಜುಲೈ 6ರಂದು ಹಾಸನ ಜಿಲ್ಲೆ ಗೋಣಿ ಸೋಮನಹಳ್ಳಿ ಗ್ರಾಮದ ಹೊಲವೊಂದರಲ್ಲಿ ಬೆಳೆದಿದ್ದ ಸುಮಾರು 3 ಲಕ್ಷ ರು.ಮೌಲ್ಯದ ಟೊಮೆಟೋ ಬೆಳೆಗೆ ಕಳ್ಳರು ಕನ್ನ ಹಾಕಿದ್ದ ಬೆನ್ನಲ್ಲೇ ರೈತರಲ್ಲಿ ಆತಂಕ ಮನೆಮಾಡಿತ್ತು. ಇದರಿಂದ ಎಚ್ಚೆತ್ತ ರೈತರು ಇದು ಹಲವೆಡೆ ಕುದ್ದು ಕಾವಲಿಗೆ ನಿಂತಿದ್ದು, ಅದರಲ್ಲೂ ಟೊಮೆಟೋ ಹೆಚ್ಚು ಬೆಳೆವ ಕೋಲಾರ ಜಿಲ್ಲೆಯಲ್ಲಿ ಟೊಮೆಟೊ ಹೊಲಗಳ ಸುತ್ತಮುತ್ತ ತಿರುಗಾಡುವವರ ಮೇಲೂ ರೈತರು ಹದ್ದಿನ ಕಣ್ಣು ಇರಿಸಿದ್ದಾರೆ.