ತೇವಾಂಶದ ನೆಪ ಹೆಸರು ಖರೀದಿಸದ ಅಧಿಕಾರಿಗಳು; ಮಾರಾಟಕ್ಕೆ ರೈತರ ಪರದಾಟ

By Kannadaprabha News  |  First Published Oct 19, 2022, 1:44 PM IST

ತೇವಾಂಶದ ನೆಪ ಹೇಳಿ ಅಧಿಕಾರಿಗಳು ಹೆಸರು ಖರೀದಿ ನಿಲ್ಲಿಸಿದ ಹಿನ್ನೆಲೆಯಲ್ಲಿ ರೈತರು ತಾವು ತಂದ ಹೆಸರು ಬೆಳೆಯನ್ನು ಮಾರಲು ಪರದಾಡುತ್ತಿದ್ದಾರೆ. ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ತಾಲೂಕಿನ ರೈತ ಸಮುದಾಯ ಪ್ರತಿ ಎಕರೆಗೆ ಸಾವಿರಾರು ರುಪಾಯಿ ಹಣ ಖರ್ಚು ಮಾಡಿ ಹೆಸರು ಬೆಳೆದಿದ್ದರು. ಆದರೆ, ಅತಿಯಾದ ಮಳೆ ಸುರಿದು ಕಟಾವಿಗೆ ಬಂದ ಶೇ.70ರಷ್ಟುಫಸಲು ಜಮೀನಿನಲ್ಲಿಯೇ ಕೊಳೆತು ಹೋಯಿತು.


ಎಸ್‌.ಜಿ. ತೆಗ್ಗಿನಮನಿ

 ನರಗುಂದ (ಅ.19) : ತೇವಾಂಶದ ನೆಪ ಹೇಳಿ ಅಧಿಕಾರಿಗಳು ಹೆಸರು ಖರೀದಿ ನಿಲ್ಲಿಸಿದ ಹಿನ್ನೆಲೆಯಲ್ಲಿ ರೈತರು ತಾವು ತಂದ ಹೆಸರು ಬೆಳೆಯನ್ನು ಮಾರಲು ಪರದಾಡುತ್ತಿದ್ದಾರೆ. ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ತಾಲೂಕಿನ ರೈತ ಸಮುದಾಯ ಪ್ರತಿ ಎಕರೆಗೆ ಸಾವಿರಾರು ರುಪಾಯಿ ಹಣ ಖರ್ಚು ಮಾಡಿ ಹೆಸರು ಬೆಳೆದಿದ್ದರು. ಆದರೆ, ಅತಿಯಾದ ಮಳೆ ಸುರಿದು ಕಟಾವಿಗೆ ಬಂದ ಶೇ.70ರಷ್ಟುಫಸಲು ಜಮೀನಿನಲ್ಲಿಯೇ ಕೊಳೆತು ಹೋಯಿತು. ಉಳಿದ ಅಲ್ಪಸ್ವಲ್ಪ ಬೆಳೆಯನ್ನು, ಮಾರುಕಟ್ಟೆಯಲ್ಲಿ ಯೋಗ್ಯ ಬೆಲೆ ಇಲ್ಲದೇ ಇರುವುದರಿಂದಾಗಿ ಸರ್ಕಾರ ಪ್ರಾರಂಭಿಸಿರುವ ಬೆಂಬಲ ಬೆಲೆಯಲ್ಲಿ ಮಾರಾಟ ಮಾಡಲು ಹೋದರೆ ಅಲ್ಲಿಯೂ ರೈತರಿಗೆ ನ್ಯಾಯ ದೊರಕದಂತಹ ಪರಿಸ್ಥಿತಿ ಎದುರಾಗಿದೆ.

Tap to resize

Latest Videos

undefined

ಬಾಗಿಲು ಮುಚ್ಚಿದ ಹೆಸರು ಖರೀದಿ ಕೇಂದ್ರಗಳು!

ಸರ್ಕಾರ ಹೆಸರು ಬೆಳೆಗೆ .7755 ಬೆಂಬಲ ಬೆಲೆ ನಿಗದಿಗೊಳಿಸಿದೆ. ರೈತರು ಖರೀದಿ ಕೇಂದ್ರದಲ್ಲಿ ಹೆಸರು ನೋಂದಾಯಿಸಿ 40 ದಿನ ಗತಿಸಿದರೂ ಸಹ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಂಡಳಿಯವರು ನೋಂದಣಿ ಮಾಡಿರುವ ಹೆಸರು ಖರೀದಿಸದೇ ಇರುವ ಹಿನ್ನೆಲೆಯಲ್ಲಿ ರೈತರು ಮತ್ತಷ್ಟುಸಂಕಷ್ಟಎದುರಿಸುವಂತಾಗಿದೆ.

ಅಧಿಕಾರಿಗಳ ನಿರ್ಲಕ್ಷ್ಯ:

ತಾಲೂಕಿನಲ್ಲಿ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಸರ್ಕಾರ ಬೆಂಬಲ ಬೆಲೆ ಖರೀದಿ ಕೇಂದ್ರವನ್ನು ತೆರೆದಿದೆ. ಸರ್ಕಾರದ ನಿಯಮದ ಪ್ರಕಾರ ಪ್ರತಿ ಖರೀದಿ ಕೇಂದ್ರಕ್ಕೆ ಹೆಸರು ತೇವಾಂಶ ಪರಿಶೀಲನೆ ಮಾಡಲು ಓರ್ವ ಗ್ರೇಡರ್‌ನನ್ನು ನೇಮಕ ಮಾಡಿ ಹೆಸರು ಖರೀದಿ ಮಾಡಬೇಕು ಎಂಬ ಆದೇಶವಿದೆ. ಆದರೆ, ರಾಜ್ಯ ಸಹಕಾರ ಮಾರಾಟ ಮಂಡಳಿಯ ತಾಲೂಕು ಅಧಿಕಾರಿ ಸಚಿನ ಪಾಟೀಲರು ಕೇಂದ್ರಕ್ಕೆ ಗ್ರೇಡರ್‌ನನ್ನು ನೇಮಕ ಮಾಡದೆ ನಿರ್ಲಕ್ಷ್ಯ ತೋರಿದ್ದಾರೆ ಎಂಬುದು ರೈತರ ಆರೋಪವಾಗಿದೆ.

ಹವಾಮಾನ ವೈಪರಿತ್ಯ:

ಕಳೆದ ಹಲವು ದಿನಗಳಿಂದ ಬಿಸಿಲು ಬೀಳದೇ ತಂಪಾದ ವಾತಾವರಣ ಮುಂದುವರೆದಿದ್ದು, ಈ ವೇಳೆ ಹೆಸರು ಒಕ್ಕಲು ಮಾಡಿ ಮಾರಾಟಕ್ಕೆ ತಂದರೆ ಅಧಿಕಾರಿಗಳು ಇವು ಇನ್ನೂ ಹಸಿಯಾಗಿದ್ದು, ಖರೀದಿ ಮಾಡಲು ಆಗುವುದಿಲ್ಲ ಎಂದು ಹೇಳುತಿದ್ದಾರೆ. ಇದರಿಂದ ರೈತರ ಹೆಸರು ಚೀಲಗಳನ್ನು ಹೇರಿಕೊಂಡು ಬಂದ ಲಾರಿಗಳು ಉಗ್ರಾಣದ ಎದುರು ನಿಲ್ಲುವಂತಾಗಿದೆ. ಒಂದೆಡೆ ಹೆಸರು ಮಾರಾಟವಾಗುತ್ತಿಲ್ಲ. ಇನ್ನೊಂದೆಡೆ ಸಾವಿರಾರು ರು. ಲಾರಿ ಬಾಡಿಗೆಯನ್ನೂ ಭರಿಸಬೇಕಾಗಿದೆ.

ತಾಲೂಕಿನಲ್ಲಿ ಒಟ್ಟು 13682 ರೈತರು ಹೆಸರು ಮಾರಾಟ ಮಾಡಲು ನೋಂದಣಿ ಮಾಡಿದ್ದಾರೆ. ಸದ್ಯ 2184 ರೈತರಿಂದ 20500 ಕ್ವಿಂಟಲ್‌ ಹೆಸರು ಖರೀದಿ ಮಾತ್ರ ಮಾಡಿದ್ದಾರೆ. ರೈತ ಅತಿವೃಷ್ಟಿಗೆ ತುತ್ತಾಗಿ ಬಂದ ಹೆಸರು ಬೆಳೆಯನ್ನು ಬಿಸಲಿಗೆ ಒಣಗಿಸಿ ಖರೀದಿ ಕೇಂದ್ರಕ್ಕೆ ತಂದಿದ್ದಾರೆ. ಆದರೆ, ಹವಾಮಾನ ವೈಪರಿತ್ಯದಿಂದ ಕಳೆದ ಹಲವು ದಿನಗಳಿಂದ ತಂಪಾದ ವಾತಾವರಣ ಇರುವುದರಿಂದ ಹೆಸರು ತಂಪಾದ ಗಾಳಿಯಿಂದ ಅಲ್ಪ ಪ್ರಮಾಣದಲ್ಲಿ ಹಸಿಯಾದಂತೆ ತೋರುತ್ತಿದ್ದು, ಇದನ್ನೇ ನೆಪವಾಗಿಟ್ಟುಕೊಂಡು ಅಧಿಕಾರಿಗಳು ಹೆಸರು ಬೆಳೆ ಖರೀದಿ ಮಾಡುತ್ತಿಲ್ಲ. ಇದರಿಂದಾಗಿ ರೈತರಿಗೆ ಮತ್ತಷ್ಟುಸಂಕಷ್ಟಅನುಭವಿಸುವಂತಾಗಿದೆ. ಆದ್ದರಿಂದ ಸರ್ಕಾರ ಯಾವುದೇ ತೇವಾಂಶ ನೋಡದೆ ರೈತರು ತಂದ ಹೆಸರು ಖರೀದಿ ಮಾಡಲು ಅಧಿಕಾರಿಗಳಿಗೆ ಖಡಕ್‌ ಸೂಚನೆ ನೀಡಬೇಕೆಂದು ಜಿಲ್ಲಾ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಬಸವರಾಜ ಸಾಬಳೆ ಒತ್ತಾಯಿಸಿದರು.

ಮೊಳಕೆ ಕಾಳು ಸೂಪರ್‌ಫುಡ್‌ ನಿಜ, ಆದ್ರೆ ತಿನ್ನೋದ್ರಿಂದ ಇಷ್ಟೆಲ್ಲಾ ತೊಂದ್ರೆನೂ ಆಗುತ್ತೆ !

ರೈತರು ಬೆಳೆದ ಹೆಸರು ಬೆಳೆ ಖರೀದಿಸದೇ ಅಧಿಕಾರಿಗಳು ಅನ್ಯಾಯ ಮಾಡುತ್ತಿದ್ದಾರೆ. ಆದ್ದರಿಂದ ಜಿಲ್ಲಾಧಿಕಾರಿಗಳು ಗಮನ ಹರಸಿ ಎಲ್ಲ ರೈತರ ಹೆಸರು ಖರೀದಿ ಮಾಡಲು ಸೂಚನೆ ನೀಡಬೇಕು. ಇಲ್ಲದೇ ಹೋದಲ್ಲಿ ರೈತರೆಲ್ಲ ಸೇರಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು.

- ಆರ್‌.ಎನ್‌. ಪಾಟೀಲ, ಜೆಡಿಎಸ್‌ ಪಕ್ಷದ ತಾಲೂಕು ಅಧ್ಯಕ್ಷ

ತಂಪಾದ ವಾತಾವರಣ ಇರುವುದರಿಂದ ಹೆಸರು ಖರೀದಿಗೆ ತೊಂದರೆ ಆಗಿದೆ. ಹೆಸರು ಮಾರಾಟ ಮಾಡಲು ನೋಂದಣಿ ಮಾಡಿದ ಎಲ್ಲ ರೈತರಿಂದ ಹಂತ ಹಂತವಾಗಿ ಖರೀದಿ ಮಾಡಲಾಗುವುದು. ರೈತರು ಆತಂಕ ಪಡುವ ಅವಶ್ಯಕತೆಯಿಲ್ಲ.

- ಸಚಿನ ಪಾಟೀಲ, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿಯ ತಾಲೂಕು ಅಧಿಕಾರಿ

click me!