ವಸಂತಕುಮಾರ್ ಕತಗಾಲ
ಕಾರವಾರ : ನೆರೆ ಜಿಲ್ಲೆಗಳಲ್ಲಿ ಅಡಕೆ ತೋಟವನ್ನು ಆಪೋಶನ ತೆಗೆದುಕೊಳ್ಳುತ್ತಿರುವ ಎಲೆ ಚುಕ್ಕಿ ರೋಗ ಉತ್ತರ ಕನ್ನಡದಲ್ಲೂ ದಾಳಿ ಇಟ್ಟಿದ್ದು, ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದಿದ್ದಲ್ಲಿ ಮುಂದಿನ ವರ್ಷ ಅಡಕೆ ಬೆಳೆಗಾರರ ಆಕ್ರಂದನ ಕೇಳಿಬರುವ ಸಾಧ್ಯತೆ ದಟ್ಟವಾಗಿದೆ.
ಎಲೆಚುಕ್ಕಿ ರೋಗ ಹಿನ್ನೆಲೆ ಆತ್ಮಸ್ಥೈರ್ಯ ಕಳೆದುಕೊಳ್ಳಬೇಡಿ: ಆರಗ ಜ್ಞಾನೇಂದ್ರ
ಎಲೆ ಚುಕ್ಕಿ ರೋಗದಿಂದ ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ 500ಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದ ಅಡಕೆ ತೋಟ ನಾಶವಾಗಿದೆ. ಆಗುಂಬೆ, ಶೃಂಗೇರಿ, ಕೊಪ್ಪ, ತೀರ್ಥಹಳ್ಳಿ ಮತ್ತಿತರ ಕಡೆ ತೋಟಕ್ಕೆ ತೋಟವೇ ನಾಶವಾಗಿ ಬೆಳೆಗಾರರು ತತ್ತರಿಸಿದ್ದಾರೆ. ಉತ್ತರ ಕನ್ನಡದ ಶಿರಸಿಯ ಬನವಾಸಿ, ಕೊರ್ಲಕೈ, ಅಂಡಗಿ, ಸಿದ್ಧಾಪುರದ ಹೆಗ್ಗರಣಿ ಮತ್ತಿತರ ಕಡೆ ದಾಳಿ ಇಟ್ಟಿದೆ. ಹತೋಟಿಗೆ ಕ್ರಮ ಕೈಗೊಳ್ಳದೆ ಇದ್ದಲ್ಲಿ ಮುಂದಿನ ವರ್ಷ ಈ ರೋಗ ಉಲ್ಬಣಿಸಿ, ಅಡಕೆ ತೋಟಗಳಲ್ಲಿ ರುದ್ರನರ್ತನ ಮಾಡಲಿದೆ. ಇದೊಂದು ಫಂಗಸ್‌ನಿಂದ ಬರುವ ರೋಗವಾಗಿದ್ದು, ಅಡಕೆಯ ಎಲೆಗಳ ಮೇಲೆ ಕಪ್ಪು ಬಣ್ಣದ ಚುಕ್ಕಿ ಚುಕ್ಕಿಗಳು ಕಾಣಿಸಿಕೊಳ್ಳುತ್ತವೆ. ಕ್ರಮೇಣ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಸಾಯುತ್ತವೆ. ಎಲೆಗಳು ಸತ್ತ ಮೇಲೆ ಆಹಾರವೇ ಇಲ್ಲದೆ ಮರಗಳೇ ಸತ್ತು ಹೋಗುತ್ತವೆ.
ಹಾಗಂತ ಇದೇನು ಹೊಸದಾಗಿ ಬಂದ ರೋಗ ಅಲ್ಲ. ದಶಕಗಳಿಂದಲೂ ಇರುವ ರೋಗ ಇದು. ಆದರೆ ಹಿಂದೆಲ್ಲ ಅಡಕೆ ಮರಳ 2-3 ಹೆಡೆಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿತ್ತು. ಈ ಬಾರಿ 7-8 ಹೆಡೆಗಳಿಗೂ ರೋಗ ವ್ಯಾಪಿಸಿದೆ. ಅಡಕೆ ಮರದ ಎಲೆಗಳು ಸಾಯುತ್ತಿದ್ದಂತೆ ಆಹಾರವೇ ಇಲ್ಲದೆ ಅಡಕೆಮರಗಳೇ ಬಲಿಯಾಗುತ್ತವೆ.
ನೆರೆಯ ಜಿಲ್ಲೆಗಳ ಅಡಕೆ ತೋಟದಲ್ಲಿನ ಎಲೆ ಚುಕ್ಕಿಯ ರುದ್ರ ನರ್ತನ ನೋಡಿ ಉತ್ತರ ಕನ್ನಡ ಜಿಲ್ಲೆಯ ಅಡಕೆ ಬೆಳೆಗಾರರು ತೀವ್ರ ಕಳವಳಗೊಂಡಿದ್ದಾರೆ. ಅಡಕೆ ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆ. ಈ ಬೆಳೆಯನ್ನೇ ನಂಬಿ ಸಾವಿರಾರು ಕುಟುಂಬಗಳು ಜೀವನ ನಿರ್ವಹಣೆ ಮಾಡುತ್ತಿವೆ. ಈ ರೋಗ ತೀವ್ರ ದಾಳಿ ಇಟ್ಟಲ್ಲಿ ಮುಂದೇನು ಎಂಬ ಪ್ರಶ್ನೆ ಮನೆಮಾಡಿದೆ.
ಹತೋಟಿ ಹೇಗೆ?:
ಇದರ ನಿಯಂತ್ರಣಕ್ಕೆ ಟ್ರಾಪಿಕನಾಜೋಲ…, ಹೆಕ್ಸಾಕನಾಜೋಲ…, ಕಾರ್ಬೆಂಡಾಜೋನ್, ರೆಡಾಮಿಲ್ ಮಿಶ್ರಣವನ್ನು ಎಲೆಯ ಹಿಂಭಾಗದಲ್ಲಿ ಸ್ಪ್ರೇ ಮಾಡಬೇಕು. 30 ದಿನಗಳಲ್ಲಿ ನಿಯಂತ್ರಣಕ್ಕೆ ಬಾರದಿದ್ದರೆ ಮತ್ತೊಮ್ಮೆ ಸ್ಪ್ರೇ ಮಾಡಬೇಕು. ಜತೆಗೆ ಮರಕ್ಕೆ ಗೊಬ್ಬರ, ಸುಣ್ಣ ಹಾಕಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬೇಕು. ಬಸಿಗಾಲುವೆಯನ್ನು ನಿರ್ವಹಣೆ ಮಾಡಬೇಕು. ಇದು ಗಾಳಿಯಲ್ಲಿ ಹರಡುವ ರೋಗವಾಗಿರುವುದರಿಂದ ಒಂದು ಊರಿನ ತೋಟದಲ್ಲಿ ಕಾಣಿಸಿಕೊಂಡರೆ ಇಡಿ ಊರಿನ ತೋಟಕ್ಕೆ ಸ್ಪ್ರೇ ಮಾಡಬೇಕು.
ಅಡಿಕೆ ಬೆಳೆಗಾರರಿಗೆ ನೆರವಾಗಿ: ಸರ್ಕಾರಕ್ಕೆ ಎಚ್‌ಡಿಕೆ ಒತ್ತಾಯ
ಹಿಂದೆಲ್ಲ ಸೆಪ್ಟೆಂಬರ್ ತಿಂಗಳಲ್ಲಿ ಮಳೆ ನಿಲ್ಲುತ್ತಿತ್ತು. 2-3 ವರ್ಷಗಳಿಂದ ಆಗೊಮ್ಮೆ ಈಗೊಮ್ಮೆ ವರ್ಷದ ಎಲ್ಲ ತಿಂಗಳುಗಳಲ್ಲೂ ಬಿಸಿಲಿನ ನಡುವೆಯೂ ಮಳೆಯಾಗುತ್ತಿದೆ. ಈ ಹವಾಮಾನ ವೈಪರೀತ್ಯವೇ ಈ ರೋಗ ತೀವ್ರವಾಗಿ ವ್ಯಾಪಿಸಲು ಕಾರಣವಾಗಿದೆ. ಸರ್ಕಾರ ರೋಗ ತಡೆಗಟ್ಟಲು ಉಚಿತವಾಗಿ ಔಷಧಿಯನ್ನು ವಿತರಿಸಲು ಕ್ರಮ ಕೈಗೊಂಡಿದೆ. ಉತ್ತರ ಕನ್ನಡಕ್ಕೆ ಬೆಳೆಗಾರರಿಗೆ ಔಷಧಿ ನೀಡಲು .20 ಲಕ್ಷ ಬಂದಿದೆ.
ಈ ವರ್ಷ ಎಲೆ ಚುಕ್ಕಿ ರೋಗ ಕೆಲವೆಡೆ ಕಾಣಿಸಿಕೊಂಡಿದೆ. ಮುಂಜಾಗರೂಕತಾ ಕ್ರಮ ಕೈಗೊಳ್ಳದಿದ್ದಲ್ಲಿ ಮುಂದಿನ ವರ್ಷ ಭಾರಿ ಪ್ರಮಾಣದಲ್ಲಿ ವ್ಯಾಪಿಸಲಿದೆ.
ಸತೀಶ ಹೆಗಡೆ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರು
ಎಲೆ ಚುಕ್ಕಿ ರೋಗದ ನಿಯಂತ್ರಣದ ಬಗ್ಗೆ ತೋಟಗಾರಿಕೆ ಇಲಾಖೆ ತಕ್ಷಣ ಕಾರ್ಯೋನ್ಮುಖವಾಗಬೇಕು. ಅಡಕೆ ಬೆಳೆಗಾರರಲ್ಲಿ ಜಾಗೃತಿ ಜತೆಗೆ ರೋಗ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬೇಕು.
ಶಿವರಾಮ ಗಾಂವಕರ- ಜಿಲ್ಲಾ ಅಧ್ಯಕ್ಷರು, ಭಾರತೀಯ ಕಿಸಾನ್ ಸಂಘ