Mysuru : ಬೀಜ - ರಸಗೊಬ್ಬರ ಕಂಪನಿಗಳು ಬ್ರಿಟಿಷರು ಇದ್ದಂತೆ

By Kannadaprabha News  |  First Published Dec 6, 2022, 5:43 AM IST

ಬೀಜ-ರಸಗೊಬ್ಬರ ಕಂಪನಿಗಳು ಭಾರತೀಯ ಬ್ರಿಟಿಷರು ಇದ್ದಂತೆ. ಈ ಬ್ರಿಟಿಷರು ರೈತರನ್ನು ದಿಕ್ಕು ತಪ್ಪಿಸಿ ವಿಪರೀತ ರಸಗೊಬ್ಬರ, ಔಷಧಿ ಸಿಂಪಡಣೆಯ ಪ್ರೇರಣೆ ನೀಡಿ ಅವರನ್ನು ಸಾಲಗಾರರನ್ನಾಗಿ ಮಾಡುತ್ತವೆ.


 ಬಳ್ಳಾರಿ (ಡಿ.06):  ಬೀಜ-ರಸಗೊಬ್ಬರ ಕಂಪನಿಗಳು ಭಾರತೀಯ ಬ್ರಿಟಿಷರು ಇದ್ದಂತೆ. ಈ ಬ್ರಿಟಿಷರು ರೈತರನ್ನು ದಿಕ್ಕು ತಪ್ಪಿಸಿ ವಿಪರೀತ ರಸಗೊಬ್ಬರ, ಔಷಧಿ ಸಿಂಪಡಣೆಯ ಪ್ರೇರಣೆ ನೀಡಿ ಅವರನ್ನು ಸಾಲಗಾರರನ್ನಾಗಿ ಮಾಡುತ್ತವೆ.ರೈತರು ಬಹಳ ಎಚ್ಚರದಿಂದ ಇರಬೇಕು.ರಸಗೊಬ್ಬರ ಕಂಪನಿಗಳ ಮಾಯಾ ಮೋಸಕ್ಕೆ ಬಲಿಯಾಗಬಾರದು ಎಂದು ಕೃಷಿ ಪಂಡಿತ ಎಸ್‌. ವಿಶ್ವೇಶ್ವರ ಸಜ್ಜನ ರೈತರಿಗೆ ಸಲಹೆ ನೀಡಿದರು.

ಸಿರುಗುಪ್ಪ ತಾಲೂಕಿನ ಭೈರಾಪುರ ಗ್ರಾಮದ (Farmer)  ಈರಪ್ಪಯ್ಯಅವರ ಕೃಷಿ-ಋುಷಿ Farmನಲ್ಲಿ ಭಾನುವಾರ ಜರುಗಿದ (ಸಾವಯವ) ದೇಸಿ ಭತ್ತ ತಳಿಗಳ ‘ಸುಗ್ಗಿಹಬ್ಬ’ ಕಾರ್ಯಕ್ರಮದಲ್ಲಿ ಮಾತನಾಡಿದರು.

Latest Videos

undefined

ಕೃಷಿಕರು ಜ್ಞಾನಿಗಳಾಗಬೇಕು. ನಮ್ಮ ಪರಂಪರೆಯ ಕೃಷಿ (Agriculture)  ಜ್ಞಾನದ ಜೊತೆಗೆ ಆಧುನಿಕ ತಂತ್ರಗಳನ್ನು ಬಳಸಿಕೊಂಡು ಪ್ರಗತಿ ಸಾಧಿಸಬೇಕು. ಸರ್ಕಾರದ ಸಬ್ಸಿಡಿಗಳ ಹಿಂದೆ ಬೀಳದೆ, ಇರುವ ಒಂದಷ್ಟುಜಾಗದಲ್ಲಿಯೇ ಪ್ರಗತಿದಾಯಿಕವಾಗಿ ಕೃಷಿ ಮಾಡುವುದು ಹೇಗೆ ಎಂಬುದನ್ನು ಕಂಡುಕೊಳ್ಳಬೇಕು.ರೈತನನ್ನು ರಾಷ್ಟ್ರಕವಿ ಕುವೆಂಪು ಅವರು ನೇಗಿಲಯೋಗಿ ಎಂದು ಕರೆದರು.ವಿಪರ್ಯಾಸ ಎಂದರೆ ಈ ನೇಗಿಲಯೋಗಿಗಳು ಸರ್ಕಾರದ ಸಬ್ಸಿಡಿಗಾಗಿ ಬೇಡುವ ಜೋಗಿಗಳಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರಲ್ಲದೆ, ಸಾವಯವ ಕೃಷಿ ಪದ್ಧತಿಯಿಂದ ರೋಗಮುಕ್ತ ಜೀವನ ನಡೆಸಬಹುದು ಎಂದು ಗೊತ್ತಿದ್ದೂ ರೈತರು ದುಬಾರಿ ರಸಗೊಬ್ಬರ ಬಳಕೆಯ ಅವೈಜ್ಞಾನಿಕ ಕೃಷಿಯ ಕಡೆ ಮನಸ್ಸು ಹಾಯಿಸುತ್ತಿರುವುದು ಅತ್ಯಂತ ನೋವಿನ ಸಂಗತಿ.ಇದಕ್ಕೆ ಕಡಿವಾಣ ಬೀಳದೆ ಹೋದರೆ ಭವಿಷ್ಯದಲ್ಲಿ ನಮ್ಮ ಭೂಮಿ ಬಂಜರು ಆಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಎಚ್ಚರಿಸಿದರು.

ಕೃಷಿ ಮಾಡುವುದು ಈ ಹಿಂದಿನಷ್ಟುಕಷ್ಟವಿಲ್ಲ. ಎಲ್ಲ ಸೌಕರ್ಯಗಳು ಈಗ ಲಭ್ಯವಿವೆ. ಇಷ್ಟಿದ್ದಾಗ್ಯೂ ಹೊಲ-ಗದ್ದೆಗಳಲ್ಲಿ ಇಳಿದು ಕೆಲಸ ಮಾಡುವವರ ರೈತರ ಸಂಖ್ಯೆ ಕಡಿಮೆಯಾಗುತ್ತದೆ.ಸುಲಭವಾಗಿ ಲಾಭ ಮಾಡುವ ಯೋಚನೆಗಳು ಹೆಚ್ಚಾಗುತ್ತಿವೆ. ಸುಲಭದಲ್ಲಿ ಯಾವುದೂ ಸಿಗುವುದಿಲ್ಲ.ಕಷ್ಟಪಡದೆ ಕೃಷಿಯಲ್ಲಿ ಪ್ರಗತಿ ಕಂಡುಕೊಳ್ಳಲು ಸಾಧ್ಯವೇ ಇಲ್ಲ ಎಂದು ತಿಳಿಸಿದರು.

ನಿಮ್ಮ ಮಕ್ಕಳಿಗೆ ವಿಷವಿಕ್ಕದಿರಿ:

ಸಾವಯವ ಕೃಷಿ ಸಾಧಕ ಈರಪ್ಪಯ್ಯ ಮಾತನಾಡಿ, ವಿಪರೀತವಾದ ರಸಗೊಬ್ಬರ ಬಳಕೆಯಿಂದ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಶೇ. 22ರಷ್ಟುಭೂಮಿ ಸವಳಾಗಿದೆ. ಈಗಲಾದರೂ ರೈತರು ಎಚ್ಚೆತ್ತುಕೊಳ್ಳಬೇಕು. ಭೂಮಿಯ ಫಲವತ್ತತೆ ಕಾಪಾಡಿಕೊಳ್ಳದೇ ಹೋದರೆ ಮುಂದಿನ ಪೀಳಿಗೆಗೆ ಭೂಮಿಗಳು ಉಳಿಯುವುದಿಲ್ಲ. ಬರೀ ಬಂಜರು ಭೂಮಿ ಬಿಟ್ಟುಕೊಡಬೇಕಾಗುತ್ತದೆ. ಹೀಗಾಗಿ ರೈತರು ಸಾವಯವ ಕೃಷಿಗೆ ಗಮನ ನೀಡಬೇಕು. ನಿಮ್ಮ ಮನೆಯ ಮಕ್ಕಳಿಗಾದರೂ ಗುಣಮಟ್ಟದ ಆಹಾರ ಧಾನ್ಯಗಳನ್ನು ಬೆಳೆಯಲು ನಿಮಗೆ ಮನೆಗೆ ಬೇಕಾದಷ್ಟಾದರೂ ಸಾವಯವ ಪದ್ಧತಿಯಲ್ಲಿ ಬತ್ತ ಮತ್ತಿತರ ಧಾನ್ಯಗಳನ್ನು ಬೆಳೆಯಿರಿ ಎಂದು ಸಲಹೆ ನೀಡಿದರು.

ಸಿರುಗುಪ್ಪ ತಾಲೂಕು ಸಹಾಯಕ ಕೃಷಿ ನಿರ್ದೇಶಕ ಎಸ್‌.ಬಿ.ಪಾಟೀಲ್‌ ಮಾತನಾಡಿ, ಸಾವಯವ ಕೃಷಿಯಿಂದಲೂ ಉತ್ತಮ ಉಳುವರಿ ಪಡೆದು,ಹೆಚ್ಚಿನ ಲಾಭ ಪಡೆಯಲು ಸಾಧ್ಯವಿದೆ.ರೈತರು ಈ ಬಗ್ಗೆ ಹೆಚ್ಚಿನ ತಿಳಿವಳಿಕೆ ಪಡೆದುಕೊಳ್ಳಬೇಕು.ರಸಗೊಬ್ಬರ ಹಾಗೂ ಔಷಧಿಗಳ ಅತಿಯಾದ ಬಳಿಕೆಯಿಂದ ಭೂಮಿ ಹಾಳಾಗುತ್ತಿದ್ದು,ಇದಕ್ಕೆ ಕಡಿವಾಣ ಹಾಕಬೇಕು.ಹೆಚ್ಚು ಹೆಚ್ಚು ರಸಗೊಬ್ಬರ, ಔಷಧಿ ಬಳಕೆಯಿಂದ ಉತ್ತಮ ಇಳುವರಿ ಬರಲಿದೆ ಎಂಬ ಅವೈಜ್ಞಾನಿಕ ನಂಬಿಕೆಗಳಿಂದ ರೈತರು ಮೊದಲು ಹೊರ ಬರಬೇಕು ಎಂದು ತಿಳಿಸಿದರು.

ಹಗರಿ ಕೃಷಿ ಸಂಶೋಧನಾ ಕೇಂದ್ರದ ಕ್ಷೇತ್ರಾಧಿಕಾರಿ ಡಾ. ರವಿಕುಮಾರ್‌, ಹಗರಿ ಸಂಶೋಧನಾ ಕೇಂದ್ರದಿಂದ ರೈತರಿಗೆ ಸಿಗುವ ಸೇವೆ ಹಾಗೂ ಸೌಕರ್ಯಗಳ ಕುರಿತು ಮಾಹಿತಿ ನೀಡಿದರಲ್ಲದೆ, ರೈತರು ಪಾರಂಪರಿಕ ಕೃಷಿಯನ್ನು ಉಳಿಸಿಕೊಳ್ಳುವ ಮೂಲಕ ಭೂಮಿ ಫಲವತ್ತತೆಯನ್ನು ರಕ್ಷಿಸಿಕೊಳ್ಳಬೇಕು ಎಂದು ತಿಳಿಸಿದರು.

ಹಗರಿ ಸಂಶೋಧನಾ ಕೇಂದ್ರಕ್ಕೆ ರೈತರು ಭೇಟಿ ನೀಡಬೇಕು. ಅಲ್ಲಿ ಸಿಗುವ ಸೌಕರ್ಯಗಳನ್ನು ಬಳಸಿಕೊಳ್ಳಬೇಕು ಎಂದು ತಿಳಿಸಿದರು.ರಾಯಚೂರು ಜಿಲ್ಲೆ ಸಿಂಧನೂರಿನ ಸ್ವಾಸ್ಥ್ಯ ಸಂಸ್ಥೆ ಮುಖ್ಯಸ್ಥ ಹಾಗೂ ಪ್ರಗತಿಪರ ರೈತ ಸೋಮನಗೌಡ ಸಾವಯವ ಕೃಷಿಯಿಂದಾಗುವ ಲಾಭಗಳ ಕುರಿತು ವಿವರಿಸಿದರು. ತಾವರಗೇರಿಯ ಚೆನ್ನಬಸಯ್ಯ ಸ್ವಾಮಿ ಅವರು ನುಗ್ಗೆ ಕೃಷಿ ಕುರಿತು ಮಾಹಿತಿ ನೀಡಿದರು.

ಕೃಷಿ ಅಧಿಕಾರಿ ಆರ್‌.ಪರಮೇಶ್ವರ ರೆಡ್ಡಿ, ಸ್ಮೈಲ್‌ ಸಂಸ್ಥೆಯ ಮುಖ್ಯಸ್ಥ ಉಮಾಪತಿಗೌಡ ಕುರುಗೋಡು, ಸಹಕಾರಿ ಧುರೀಣ ಶಾಂತನಗೌಡ, ಕುರುಗೋಡಿನ ಭೈರಾಪುರ ಮಠದ ಎರಿಸ್ವಾಮಿ, ಗೆಣಿಕೆಹಾಳ್‌ ಅರವಿ ಶರಣನಗೌಡ, ಗದುಗಿನ ಪ್ರಭಯ್ಯ ವಿರಕ್ತಮಠ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಸಮಾರಂಭ ಉದ್ಘಾಟನೆ ಮುನ್ನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ರೈತರು ಹಾಗೂ ಕೃಷಿ ಆಸಕ್ತರು ಸಾವಯವ ಬತ್ತದ ಬೆಳೆಗಳನ್ನು ವೀಕ್ಷಿಸಿದರಲ್ಲದೆ, ಕೃಷಿ ತಜ್ಞರಿಂದ ಸೂಕ್ತ ಮಾಹಿತಿಯನ್ನು ಪಡೆದುಕೊಂಡರು. ಮಧ್ಯಾಹ್ನದ ಬಳಿಕ ರೈತರು ಕೃಷಿ ತಜ್ಞರ ನಡುವೆ ಮುಕ್ತ ಸಂವಾದ ಜರುಗಿತು. ಸಾವಯವ ಕೃಷಿ ಪದ್ಧತಿ ವೇಳೆ ಎದುರಾಗುವ ಸಮಸ್ಯೆಗಳು ಹಾಗೂ ಪರಿಹಾರೋಪಾಯಗಳ ಕುರಿತು ಮಾಹಿತಿ ಪಡೆದುಕೊಂಡರು.

click me!