ಜೋಯಿಡಾ: ಅರಣ್ಯ ಇಲಾಖೆ ವಿರುದ್ಧ ಬೃಹತ್ ಪ್ರತಿಭಟನೆ

By Ravi JanekalFirst Published Nov 2, 2022, 7:25 PM IST
Highlights

ಜಿಲ್ಲೆಯ ಜೊಯಿಡಾ ತಾಲೂಕಿನಲ್ಲಿ ಅರಣ್ಯ ಇಲಾಖೆ ಜನರಿಗೆ ಪ್ಯಾಕೇಜ್ ಹಾಗೂ ಇತರ ಆಮಿಷೆ ನೀಡಿ ಒಕ್ಕಲೆಬ್ಬಿಸಲು ಯತ್ನಿಸುತ್ತಿದೆ ಎಂದು ಆರೋಪಿಸಿ ಸರ್ವ ಪಕ್ಷಗಳು ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಜೊಯಿಡಾದಲ್ಲಿ ಭಾರೀ ಪ್ರತಿಭಟನೆ ನಡೆಯಿತು. 

ಉತ್ತರಕನ್ನಡ (ನ.2): ಜಿಲ್ಲೆಯ ಜೊಯಿಡಾ ತಾಲೂಕಿನಲ್ಲಿ ಅರಣ್ಯ ಇಲಾಖೆ ಜನರಿಗೆ ಪ್ಯಾಕೇಜ್ ಹಾಗೂ ಇತರ ಆಮಿಷೆ ನೀಡಿ ಒಕ್ಕಲೆಬ್ಬಿಸಲು ಯತ್ನಿಸುತ್ತಿದೆ ಎಂದು ಆರೋಪಿಸಿ ಸರ್ವ ಪಕ್ಷಗಳು ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಜೊಯಿಡಾದಲ್ಲಿ ಭಾರೀ ಪ್ರತಿಭಟನೆ ನಡೆಯಿತು. 

ಜೋಯಿಡಾ-ಕಾರವಾರ ಹೆದ್ದಾರಿ ಸಂಚಾರಕ್ಕೆ ಮುಕ್ತಗೊಳಿಸಲು ಆಗ್ರಹ

ಕುಣಬಿ ಸಮಾಜ, ಕಾಳಿ ಬ್ರಿಗೇಡ್ ಮತ್ತು ವಿವಿಧ ಸಂಘಟನೆಗಳ ಸಹಯೋಗದಲ್ಲಿ ಕುಣಬಿ ಭವನದಿಂದ ಪ್ರಾರಂಭಗೊಂಡ ಪ್ರತಿಭಟನೆ, ತಹಸೀಲ್ದಾರ್ ಕಚೇರಿಯವರೆಗೆ ನಡೆಯಿತು. ಪ್ರತಿಭಟನೆಯಲ್ಲಿ ಪಾಲ್ಗೊಂಡ ಹಳಿಯಾಳ- ಜೊಯಿಡಾ ಶಾಸಕ ಆರ್.ವಿ.ದೇಶಪಾಂಡೆ, ಜೊಯಿಡಾ ತಾಲೂಕಿನ ಜನರಿಗೆ ಅರಣ್ಯ ಇಲಾಖೆಯಿಂದ ಯಾವುದೇ ಅನ್ಯಾಯ ಆಗದಂತೆ ನಾನು ಜನರ ಜೊತೆ ಇರುತ್ತೇನೆ ಎಂದು ಪ್ರತಿಭಟನೆಗೆ ಬೆಂಬಲ ನೀಡಿದರು.

 ತಾಲೂಕಿನ ಜನರು ಕಾಡನ್ನು ಎಂದು‌ ನಾಶ‌ ಮಾಡಿಲ್ಲ. ಮರಗಿಡಗಳನ್ನು ದೇವರಂತೆ ಪೂಜಿಸಿದ್ದಾರೆ‌. ಇಲ್ಲಿಯ ಜನರಿಗೆ ಅನ್ಯಾಯ ಆಗಬಾರದು. ತಾಲೂಕಿನ ಅಭಿವೃದ್ಧಿಗೆ ಅರಣ್ಯ ಇಲಾಖೆ ಅಡ್ಡಗಾಲು ಹಾಕುತ್ತಿರುವುದು ಬೇಸರದ ವಿಚಾರ. ಎಲ್ಲಾ ಕೆಲಸ ಕಾರ್ಯಗಳಿಗೂ ಅಡ್ಡಿ ಮಾಡಿದರೆ ಭಾರೀ ಹೋರಾಟ ಮಾಡಬೇಕಾದೀತು ಎಂದು ಎಚ್ಚರಿಸಿದರು.

 ಈ ವೇಳೆ ಮಾತನಾಡಿದ ಮಾಜಿ ಶಾಸಕ ಸುನೀಲ್ ಹೆಗಡೆ, ಅರಣ್ಯ ಇಲಾಖೆ ಅಧಿಕಾರಿಗಳು ಜೋಯಿಡಾ ತಾಲೂಕಿನಲ್ಲಿ ಜನರು ಬದುಕುವುದೇ ಬೇಡ ಎಂಬ ನಿರ್ಧಾರ ಮಾಡಿದಂತೆ ಅನಿಸುತ್ತದೆ. ಅರಣ್ಯ ಇಲಾಖೆ ಕಟ್ಟಡ ಕಟ್ಟಬಹುದು, ತಮಗೆ ಬೇಕಾದಲ್ಲಿ ರಸ್ತೆ ಮಾಡಬಹುದು, ತಮಗೆ ಬೇಕಾದ ಎಲ್ಲಾ ಅಭಿವೃದ್ಧಿ ಕೆಲಸ ಮಾಡಬಹುದು. ಆದರೆ, ಜನರಿಗೆ ಬೇಕಾದ ಅಭಿವೃದ್ಧಿ ಕೆಲಸಗಳಿಗೆ ಅರಣ್ಯ ಇಲಾಖೆ ತೊಂದರೆ ನೀಡುತ್ತಿದೆ. ಅರಣ್ಯ ಇಲಾಖೆಗೆ ಒಂದು ನ್ಯಾಯ, ಜನರಿಗೆ ಒಂದು ನ್ಯಾಯ ಎಂಬತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಮುಂದುವರಿದು, ಇಲಾಖೆ 15 ಲಕ್ಷ ರೂ. ಪ್ಯಾಕೇಜ್ ನೀಡಿ ಇಲ್ಲಿನ ಜನರನ್ನು ಓಡಿಸುವ ನಿರ್ಧಾರ ಮಾಡಿದೆ. ಅಧಿಕಾರಿಗಳಿಗೆ ನಾವೇ 30 ಲಕ್ಷ ರೂ. ಕೊಡುತ್ತೇವೆ. ನೀವು ಜೊಯಿಡಾ ತಾಲೂಕನ್ನು ಬಿಟ್ಟು ಹೋಗಿ. ನಮ್ಮ ರೈತರ ಜಮೀನಿಗೆ ಕಾಲಿಟ್ಟರೆ ಎಚ್ಚರಿಕೆ ಎಂದರು. 

ಪ್ರತಿಭಟನಾಕಾರರ ಒತ್ತಾಯದ ಮೇರೆಗೆ ಸ್ಥಳಕ್ಕಾಗಮಿಸಿ ಮಾತನಾಡಿದ ಅರಣ್ಯ ಇಲಾಖೆಯ ಡಿಸಿಎಫ್ ಮಾರಿಯೋ ಕ್ರಿಸ್ತರಾಜ್, ಅರಣ್ಯ ಇಲಾಖೆಯಡಿಯಲ್ಲಿ ಮಾಡಿಕೊಡಬಹುದಾದ ಎಲ್ಲಾ ಸಹಕಾರ ನಾವು ನೀಡಿದ್ದೇವೆ. ಪ್ಯಾಕೇಜ್ ಯಾರಿಗೆ ಬೇಕು ಅವರು ಸ್ವತಃ ಕೇಳಿದಾಗ ಮಾತ್ರ ಅಂತವರಿಗೆ ನಾವು ಪ್ಯಾಕೇಜ್ ನೀಡಿದ್ದೇವೆ ಎಂದರು.

ಜೋಯಿಡಾ: ಒಲೆ ಬೆಂಕಿಯ ಬೆಳಕಲ್ಲಿ ಮಕ್ಕಳ ವಿದ್ಯಾಭ್ಯಾಸ..!

ಕೊನೆಗೆ ಎಲ್ಲಾ ರಾಜಕೀಯ ಮುಖಂಡರು, ವಿವಿಧ ಸಂಘಟನೆಗಳ ನಾಯಕರು ಹಾಗೂ ಅರಣ್ಯ ಇಲಾಖೆಯ ಎಲ್ಲಾ ಅಧಿಕಾರಿಗಳ ಸಮ್ಮುಖದಲ್ಲಿ ತಾಲೂಕು ಪಂಚಾಯತ್ ಕಾರ್ಯಾಲಯದಲ್ಲಿ ನಡೆದ ಸಭೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಪ್ರತಿಭಟನಾಕಾರರ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದರು‌. ಈ ಸಂದರ್ಭದಲ್ಲಿ ಕುಣಬಿ ಸಮಾಜದ ಅಧ್ಯಕ್ಷ ಅಜಿತ ಮಿರಾಶಿ, ಜಿಲ್ಲಾಧ್ಯಕ್ಷ ಸುಭಾಷ ಗಾವಡಾ, ಕಾಳಿ ಬ್ರಿಗೇಡ್ ನ ರವಿ ರೇಡ್ಕರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾನಂದ ದಬ್ಗಾರ, ಬಿಜೆಪಿ ಅಧ್ಯಕ್ಷ ಸಂತೋಷ ರೇಡ್ಕರ್ ಮತ್ತಿತರರು ಭಾಗವಹಿಸಿದ್ದರು.‌

click me!