ಚಿಕ್ಕೋಡಿ: ಕಾಲುವೆಗೆ ಬಾರದ ನೀರು, ಸರ್ಕಾರದ ವಿರುದ್ಧ ಸಿಡಿದೆದ್ದ ರೈತರು

By Girish Goudar  |  First Published Sep 22, 2023, 9:34 PM IST

ಹಿಡಕಲ್ ಜಲಾಶಯದಿಂದ ಘಟಪ್ರಭಾ ಎಡದಂಡೆ ಕಾಲುವೆ ವ್ಯಾಪ್ತಿಯ ರಾಯಬಾಗ ಉನ್ನತಮಟ್ಟದ ಕಾಲುವೆಗೆ ನೀರು ಹರಿಸುವಂತೆ ಆಗ್ರಹಿಸಿ ಕಳೆದ ಇಪ್ಪತ್ತು ವರ್ಷಗಳಿಂದ ಹೋರಾಟ ಮಾಡುತ್ತ ಬಂದಿದ್ದಾರೆ. ಆದ್ರೆ ಈವರೆಗೂ ಚಿಕ್ಕೋಡಿ ತಾಲೂಕಿನ ಕೇರೂರು ಭಾಗಕ್ಕೆ ನೀರು ಬಂದು ತಲುಪಿಲ್ಲ. 


ಚಿಕ್ಕೋಡಿ(ಸೆ.22): ಆ ಭಾಗದ ರೈತರು ಕಾಲುವೆಗೆ ನೀರು ಹರಿಸುವಂತೆ ಕಳೆದ ಹದಿನೈದು ವರ್ಷಗಳಿಂದ ಹೋರಾಟ ಮಾಡುತ್ತ ಬಂದಿದ್ದಾರೆ. ಕಳೆದ ಎರಡು ತಿಂಗಳ ಅವಧಿಯಲ್ಲಿ ನಾಲ್ಕೈದು ಬಾರಿ ಪ್ರತಿಭಟನೆ ನಡೆಸಿದರೂ ಕ್ರಮ ಕೈಗೊಳ್ಳದ ಹಿನ್ನೆಲೆ ಇಂದು ಸರ್ಕಾರದ ವಿರುದ್ಧ ಸಿಡಿದೆದ್ದಿದ್ದರು. ಇಂದು(ಶುಕ್ರವಾರ) ಉರಿಬಿಸಿಲಿನಲ್ಲೇ ಸತತ ನಾಲ್ಕು ಗಂಟೆಗಳ ಕಾಲ ನೂರಾರು ರೈತರು ಹೋರಾಟ ನಡೆಸಿದರು. ಕೊನೆಗೆ ಅಧಿಕಾರಿಗಳ ಭರವಸೆ ಹಿನ್ನೆಲೆ ಎಂಟು ದಿನಗಳ ಗಡುವು ನೀಡಿದ್ದಾರೆ. ಪ್ರತಿಭಟನೆಯಲ್ಲಿ ಭಾಗವಹಿಸುವುದಾಗಿ ಹೇಳಿ ಕೈಕೊಟ್ಟ ರೈತ ಮುಖಂಡ ಯಾರು? ಅಷ್ಟಕ್ಕೂ ರೈತರ ಬೇಡಿಕೆ ಏನು? ಅಧಿಕಾರಿಗಳು ಹೇಳೋದು ಏನು? ಈ ಸ್ಟೋರಿ ನೋಡಿ..

ಪ್ರತಿಭಟನೆಗೆ ಬರ್ತೀನಿ ಎಂದು ರೈತರಿಗೆ ಕೈ ಕೊಟ್ಟ ಕೋಡಿಹಳ್ಳಿ ಚಂದ್ರಶೇಖರ್

Tap to resize

Latest Videos

ಹಿಡಕಲ್ ಜಲಾಶಯದಿಂದ ಘಟಪ್ರಭಾ ಎಡದಂಡೆ ಕಾಲುವೆ ವ್ಯಾಪ್ತಿಯ ರಾಯಬಾಗ ಉನ್ನತಮಟ್ಟದ ಕಾಲುವೆಗೆ ನೀರು ಹರಿಸುವಂತೆ ಆಗ್ರಹಿಸಿ ಕಳೆದ ಇಪ್ಪತ್ತು ವರ್ಷಗಳಿಂದ ಹೋರಾಟ ಮಾಡುತ್ತ ಬಂದಿದ್ದಾರೆ. ಆದ್ರೆ ಈವರೆಗೂ ಚಿಕ್ಕೋಡಿ ತಾಲೂಕಿನ ಕೇರೂರು ಭಾಗಕ್ಕೆ ನೀರು ಬಂದು ತಲುಪಿಲ್ಲ. ಕಳೆದ ಎರಡು ತಿಂಗಳ ಅವಧಿಯಲ್ಲಿ ನಾಲ್ಕೈದು ಬಾರಿ ಪ್ರತಿಭಟನೆ ನಡೆಸಿದ್ದ ರೈತರು ಇಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಚಿಕ್ಕೋಡಿ ಮಿರಜ್ ರಾಜ್ಯ ಹೆದ್ದಾರಿ ತಡೆದು ಬೃಹತ್ ಪ್ರತಿಭಟನೆಗೆ ಮುಂದಾಗಿದ್ದರು. ಆದ್ರೆ ನಿನ್ನೆ ರಾತ್ರಿಯವರೆಗೂ ರೈತರ ಪ್ರತಿಭಟನೆಯಲ್ಲಿ ಭಾಗವಹಿಸುವುದಾಗಿ ಸ್ಥಳೀಯರ ರೈತರಿಗೆ ತಿಳಿಸಿದ್ದ ಕೋಡಿಹಳ್ಳಿ ಚಂದ್ರಶೇಖರ್ ಬೆಳಗ್ಗೆ ಮೊಬೈಲ್ ಸ್ವಿಚ್ ಆಫ್ ಮಾಡಿದ್ದರು. ಆದರೂ ಪ್ರತಿಭಟನೆ ಹಿಂಪಡೆಯದ ರೈತರು ನೂರಾರು ಸಂಖ್ಯೆಯಲ್ಲಿ ಜಮಾವಣೆಗೊಂಡು ಕೇರೂರು ಕ್ರಾಸ್ ಬಳಿ ಚಿಕ್ಕೋಡಿ ಮಿರಜ್ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆಗೆ ಮುಂದಾದರು.

ಈ ವೇಳೆ ಪೊಲೀಸರು ರೈತರಿಗೆ ತಡೆಯೊಡ್ಡಿದಾಗ ಚಿಕ್ಕೋಡಿ ಕೇರೂರು ರಸ್ತೆಯಲ್ಲಿ ಕೇರೂರು ಕ್ರಾಸ್​ನಲ್ಲಿಯೇ ಧರಣಿ ಕುಳಿತರು. ರಾಜ್ಯ ರೈತ ಸಂಘ ಚಿಕ್ಕೋಡಿ ತಾಲೂಕು ಅಧ್ಯಕ್ಷ ಮಂಜುನಾಥ ಪರಗೌಡ ನೇತೃತ್ವದಲ್ಲಿ ನಡೆದ ಪ್ರತಿಭಟನೆಗೆ ಅಥಣಿ ಭಾಗದಿಂದಲೂ ರೈತ ಮುಖಂಡ ಮಹಾದೇವ ಮಡಿವಾಳರ ನೇತೃತ್ವದಲ್ಲಿ ರೈತರು ಆಗಮಿಸಿದ್ದರು. ಸತತವಾಗಿ ನಾಲ್ಕು ಗಂಟೆಗಳ ಉರಿಬಿಸಿಲಿನಲ್ಲಿಯೇ ಧರಣಿ ಕುಳಿತ ರೈತರ ಮನವೊಲಿಸಲು ಚಿಕ್ಕೋಡಿ ಉಪವಿಭಾಗಾಧಿಕಾರಿ ಮಾಧವ್ ಗಿತ್ತೆ, ತಹಶಿಲ್ದಾರ್ ಚಿದಂಬರ ಕುಲಕರ್ಣಿ ಆಗಮಿಸಿದ್ರು. ಆದ್ರೂ ನೀರು ಬಿಡುಗಡೆ ಮಾಡೋವವರೆಗೂ ಪ್ರತಿಭಟನೆ ಹಿಂಪಡೆಯಲ್ಲ ಅಂತಾ ರೈತರು ಪಟ್ಟು ಹಿಡಿದರು. ಹಿಡಕಲ್ ಜಲಾಶಯದಿಂದ ನೀರು ಬಿಡುಗಡೆ ಮಾಡಲು ಆಗದೇ ಇದ್ದರೆ ಕೃಷ್ಣಾ ನದಿಯಿಂದ ಚಿಕ್ಕೋಡಿ ಉಪಕಾಲುವೆಗೆ ಬಿಡುಗಡೆ ಮಾಡುವ ನೀರನ್ನೇ ಹರಿಸುವಂತೆ ಪಟ್ಟು ಹಿಡಿದರು. ಕೊನೆಗೆ ಸಂಜೆ 4 ಗಂಟೆ ಸುಮಾರಿಗೆ ಉಪವಿಭಾಗಾಧಿಕಾರಿ ಎಂಟು ದಿನಗಳಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಹೇಳಿದ ಬಳಿಕ ಪ್ರತಿಭಟನೆ ವಾಪಸ್ ಪಡೆದಿದ್ದಾರೆ. ಎಂಟು ದಿನಗಳಲ್ಲಿ ಭರವಸೆ ಈಡೇರಿಸದಿದ್ದರೆ ಇಡೀ ಜಿಲ್ಲೆಯಿಂದ ರೈತರನ್ನು ಕರೆಯಿಸಿ ಪ್ರತಿಭಟನೆ ನಡೆಸುವುದಾಗಿ ರೈತ ಮುಂಡ ಮಂಜುನಾಥ ಪರಗೌಡ ಎಚ್ಚರಿಕೆ ನೀಡಿದ್ದಾರೆ.

ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭ: ಬಡ ಮಕ್ಕಳ ಪಾಲಕರ ಬಹುದಿನಗಳ ಕನಸು ಸಾಕಾರ..!

ಇನ್ನು ಕಳೆದ ಇಪ್ಪತ್ತು ವರ್ಷಗಳಿಂದ ರಾಯಬಾಗ ಉನ್ನತಮಟ್ಟದ ಕಾಲುವೆಗೆ ನೀರು ಹರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತ ಬಂದಿದ್ದರೂ ಕ್ರಮ ಕೈಗೊಳ್ಳದ ಜನಪ್ರತಿನಿಧಿಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಮಾತನಾಡಿದ ರೈತ ಮುಖಂಡ ಮಂಜುನಾಥ ಪರಗೌಡರ,  ಕಳೆದ 20 ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ. ಒಂದು ತಿಂಗಳಲ್ಲೇ ಮೂರು ಬಾರಿ ಪ್ರತಿಭಟನೆ ಮಾಡಿದಾಗ ಆಶ್ವಾಸನೆ ಕೊಟ್ಟಿದ್ದರು ಈಗಲೂ ಆಶ್ವಾಸನೆ ಕೊಟ್ಟಿದ್ದಾರೆ. ಪೈಪ್​ಲೈನ್ ಮೂಲಕ ನೀರು ಕೊಡೋದಾಗಿ ಹೇಳಿದ್ದಾರೆ. ಎಂಟು ದಿನಗಳಲ್ಲಿ ನೀರು ಹರಿಸದೇ ಇದ್ರೆ ಯಾವುದೇ ಮುನ್ಸೂಚನೆ ನೀಡದೇ ನಾವು ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ರು. ಇನ್ನು ಪ್ರತಿಭಟನೆಗೆ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಆಗಮಿಸದ ಕುರಿತು ಪ್ರತಿಕ್ರಿಯಿಸಿ,  ಕೋಡಿಹಳ್ಳಿ ಚಂದ್ರಶೇಖರ್ ನಿನ್ನೆ ರಾತ್ರಿಯವರೆಗೂ ಬರುವುದಾಗಿ ಹೇಳಿದ್ದರು. ಕಾವೇರಿ ನದಿ ನೀರಿಗಾಗಿ ಹೋರಾಟ ಇದ್ದ ಹಿನ್ನೆಲೆ ಬಂದಿಲ್ಲ ಅನಿಸುತ್ತೆ. ಕೋಡಿಹಳ್ಳಿ ಚಂದ್ರಶೇಖರ್ ಬಂದಿಲ್ಲ ಅಂತಾ ನಮಗೇನೂ ನೋವಿಲ್ಲ. ಪ್ರಾಮಾಣಿಕತೆಯಿಂದ ನೀರು ಕೊಡುವ ಕೆಲಸ ಮಾಡೋದಾಗಿ ಈಗ ಅಧಿಕಾರಿಗಳು ಹೇಳಿದ್ದಾರೆ. ಹಿಡಕಲ್ ಜಲಾಶಯದಿಂದ ನೀರು ಬಿಡುಗಡೆ ಮಾಡಲು ಆಗದೇ ಇದ್ರೆ ಕೃಷ್ಣಾ ನದಿಯಿಂದ ಸಿಬಿಸಿ ಕಾಲುವೆಗೆ ಬರುವ ನೀರು ಹದಿನೈದು ದಿನಗಳ ಕಾಲ ನಮಗೆ ಕೊಟ್ಟರೆ ನಾವು ಸಹ ಬದುಕುತ್ತೇವೆ. ಈ ಭಾಗದ ರೈತರ ಬಗ್ಗೆ ನಿರ್ಲಕ್ಷ್ಯ ವಹಿಸಬೇಡಿ, ಸಿಬಿಸಿ ಕಾಲುವೆ ಮೂಲಕ ನೀರು ಬಿಡುಗಡೆ ಮಾಡಿ ಎಂದು ಮನವಿ ಮಾಡಿದ್ರು, ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಚಿಕ್ಕೋಡಿ ಉಪವಿಭಾಗಾಧಿಕಾರಿ ಮಾಧವ್ ಗಿತ್ತೆ, ಮಳೆ ಬಾರದ ಹಿನ್ನೆಲೆ ರೈತರಿಗೆ ಬಹಳಷ್ಟು ಸಮಸ್ಯೆಯಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನೀರಾವರಿ ಸಲಹಾ ಸಮಿತಿ ಇರುತ್ತೆ. ಆ ಸಮಿತಿಯಿಂದ ಒಪ್ಪಿಗೆ ಸಿಕ್ಕ ಬಳಿಕ ಹಿಡಕಲ್ ಡ್ಯಾಂನಿಂದ ನೀರು ಬಿಡುಗಡೆ ಮಾಡಲಾಗುತ್ತೆ. ಮಾರ್ಚ್ ಏಪ್ರಿಲ್ ತಿಂಗಳಲ್ಲಿ ಕುಡಿಯಲು ನೀರು ಸಿಗಲ್ಲ ಎಂದು ಸಮಸ್ಯೆ ಬರುತ್ತೆ ಎಂದು ತಡೆ ಹಿಡಿದಿದ್ದಾರೆ. ಸಚಿವರು, ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇವೆ. ಕೃಷ್ಣಾ ನದಿ ನೀರು ಮೂಲಕ ನೀರು ಹರಿಸಲು ತಾಂತ್ರಿಕ ಸಮಸ್ಯೆ ಇದೆ. ನಾನೂ ಸಹ ಇಂಜಿನಿಯರ್ ಏನಲ್ಲ ನನಗೂ ಆ ಬಗ್ಗೆ ಗೊತ್ತಿಲ್ಲ. ಹೀಗಾಗಿ ಒಂದು ವಾರ ಸಮಯ ಕೇಳಿದ್ದೇವೆ. ರೈತರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ನಾವೂ ಪ್ರಯತ್ನ ಮಾಡುತ್ತೇವೆ ಎಂದು ಚಿಕ್ಕೋಡಿ ಉಪವಿಭಾಗಾಧಿಕಾರಿ ಮಾಧವ್ ಗಿತ್ತೆ ತಿಳಿಸಿದ್ದಾರೆ.

ಅದೇನೇ ಇರಲಿ ಕಳೆದ ಇಪ್ಪತ್ತು ವರ್ಷಗಳಿಂದ ಕಾಲುವೆಗೆ ನೀರು ಹರಿಸುವಂತೆ ರೈತರು ಪ್ರತಿಭಟನೆ ನಡೆಸುತ್ತಾ ಬಂದಿದ್ದರೂ ಯಾವುದೇ ಕ್ರಮ ಕೈಗೊಳ್ಳದೇ ಇರೋದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

click me!