ಸಿರಿಧಾನ್ಯಗಳಿಗೆ ಬಂಗಾರದ ಬೆಲೆ : ಬೆಳೆಯಲು ರೈತರ ಹಿಂದೇಟು

By Kannadaprabha News  |  First Published Aug 31, 2021, 2:25 PM IST
  • ರಾಷ್ಟ್ರದಲ್ಲಿ ಮಾತ್ರವಲ್ಲದೇ ಜಾಗತಿಕವಾಗಿ ನವಣೆ, ಸಾಮೆ, ಆರ್ಕಾ ಮತ್ತಿತರ ಸಿರಿಧಾನ್ಯಗಳಿಗೆ ಎಲ್ಲಿಲ್ಲದ ಬೇಡಿಕೆ ಇದೆ.
  • ಮಾರುಕಟ್ಟೆಯಲ್ಲಿ ಸಿರಿಧಾನ್ಯಗಳಿಗೆ ಬಂಗಾರದ ಬೆಲೆ ನಿಗದಿಯಾಗಿದ್ದರೂ ಸಹ ರೈತರ ನಿರಾಸಕ್ತಿ

 ಚಿಕ್ಕಬಳ್ಳಾಪುರ (ಆ.31):  ರಾಷ್ಟ್ರದಲ್ಲಿ ಮಾತ್ರವಲ್ಲದೇ ಜಾಗತಿಕವಾಗಿ ನವಣೆ, ಸಾಮೆ, ಆರ್ಕಾ ಮತ್ತಿತರ ಸಿರಿಧಾನ್ಯಗಳಿಗೆ ಎಲ್ಲಿಲ್ಲದ ಬೇಡಿಕೆ ಇದೆ. ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಸಿರಿಧಾನ್ಯಗಳಿಗೆ ಬಂಗಾರದ ಬೆಲೆ ನಿಗದಿಯಾಗಿದ್ದರೂ ಸಹ ಜಿಲ್ಲೆಯಲ್ಲಿ ಮಾತ್ರ ಅನ್ನದಾತರು ಸಿರಿಧಾನ್ಯಗಳ ಬಿತ್ತನೆ ಕಡೆಗೆ ಒಲವು ತೋರಿಲ್ಲ.

ಹೌದು, ಕೃಷಿ ಇಲಾಖೆ 2021-22ನೇ ಸಾಲಿನ ಮುಂಗಾರು ಹಂಗಮಿನಲ್ಲಿ ಒಟ್ಟು 470 ಹೆಕ್ಟೇರ್‌ ಪ್ರದೇಶದಲ್ಲಿ ಜಿಲ್ಲಾದ್ಯಂತ ಸಿರಿಧಾನ್ಯಗಳ ಬಿತ್ತನೆ ಗುರಿ ಹೊಂದಿತ್ತು. ಬಿತ್ತನೆ ಅವಧಿ ಮುಗಿಯುವ ಹೊತ್ತಿಗೆ ಜಿಲ್ಲೆಯಲ್ಲಿ ಬರೋಬ್ಬರಿ ಕೇವಲ 85 ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರ ರೈತರು ಸಿರಿಧಾನ್ಯಗಳ ಬಿತ್ತನೆ ಮಾಡಿದ್ದು ಶೇ.18.1 ರಷ್ಟುಗುರಿ ಸಾಧನೆ ಮಾಡಲಾಗಿದೆ.

Latest Videos

ಸಿರಿಧಾನ್ಯಗಳಿಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಇದ್ದರೂ ಇತಂಹ ಸಿರಿಧಾನ್ಯಗಳ ಬೆಳೆಯಲು ಮಾತ್ರ ಜಿಲ್ಲೆಯ ರೈತರು ನಿರಾಸಕ್ತಿ ತೋರುತ್ತಿರುವುದು ಎದ್ದು ಕಾಣುತ್ತಿದ್ದು ಜಿಲ್ಲೆಯಲ್ಲಿ ಬೆರಣಿಕೆಯಷ್ಟುರೈತರು ಮಾತ್ರ ಈ ಬಾರಿ ಸಿರಿಧಾನ್ಯಗಳ ಬಿತ್ತನೆಗೆ ಮುಂದಾಗಿದ್ದಾರೆ. ಸಿರಿಧಾನ್ಯಗಳ ಮಹತ್ವ, ಮಾರುಕಟ್ಟೆ, ಮೌಲ್ಯವರ್ಧನೆಯ ಸಮರ್ಪಕ ಅರಿವು, ಪ್ರೋತ್ಸಾಹ ಇಲ್ಲದ ಪರಿಣಾಮ ಸಿರಿಧಾನ್ಯಗಳ ಬಿತ್ತನೆ ಬಗ್ಗೆ ರೈತರು ಅಷ್ಟಾಗಿ ತಲೆ ಕೆಡಿಸಿಕೊಳ್ಳುತ್ತಿಲ್ಲ.

ಸರ್ವ ಕಾಲಕ್ಕೂ ಸಲ್ಲುವ ಆಹಾರ ಮಿಲ್ಲೆಟ್...

ಬಿತ್ತನೆಯಾದ 85 ಹೆಕ್ಟೇರ್‌ ಎಲ್ಲಲ್ಲಿ?

ಚಿಕ್ಕಬಳ್ಳಾಪುರ ತಾಲೂಕಿನಲ್ಲಿ 77 ಹೆಕ್ಟೇರ್‌ಗೆ ಬರೀ 10 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾದರೆ ಗುಡಿಬಂಡೆ ತಾಲೂಕಿನಲ್ಲಿ 52 ಹೆಕ್ಟೇರ್‌ ಪ್ರದೇಶಕ್ಕೆ ಬರೀ 2 ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆ ಆಗಿದೆ. ಇನ್ನೂ ಬಾಗೇಪಲ್ಲಿ ತಾಲೂಕಿನಲ್ಲಿ 82 ಹೆಕ್ಟೇರ್‌ ಪ್ರದೇಶದ ಪೈಕಿ 26 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಆಗಿದೆ. ಚಿಂತಾಮಣಿ ತಾಲೂಕಿನಲ್ಲಿ 103 ಹೆಕ್ಟೇರ್‌ ಪ್ರದೇಶದ ಪೈಕಿ 40 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಗೊಂಡಿದೆ. ಶಿಡ್ಲಘಟ್ಟತಾಲೂಕಿನಲ್ಲಿ 52 ಹೆಕ್ಟೇರ್‌ ಪ್ರದೇಶದ ಪೈಕಿ ಕೇವಲ 7 ಹೆಕ್ಟೇರ್‌ನಲ್ಲಿ ಮಾತ್ರ ಸಿರಿಧಾನ್ಯಗಳ ಬಿತ್ತನೆಗೊಂಡಿದೆ. ಈಗಾಗಲೇ ಸಿರಿಧಾನ್ಯಗಳ ಬಿತ್ತನೆ ಅವಧಿ ಜಿಲ್ಲೆಯಲ್ಲಿ ಪೂರ್ಣಗೊಂಡಿದೆಯೆಂದು ಜಿಲ್ಲಾ ಜಂಟಿ ಕೃಷಿ ನಿರ್ದೇಶಕಿ ಎಲ್‌.ರೂಪ ಕನ್ನಡಪ್ರಭಗೆ ತಿಳಿಸಿದರು.

 ಮಾಜಿ ಕೃಷಿ ಸಚಿವರ ತವರಲ್ಲಿ ಶೂನ್ಯ!

ವಿಪರ್ಯಾಸದ ಸಂಗತಿಯೆಂದರೆ ರಾಜ್ಯದ ಮಾಜಿ ಕೃಷಿ ಸಚಿವರಾದ ಜಿಲ್ಲೆಯ ಗೌರಿಬಿದನೂರು ಕ್ಷೇತ್ರದ ಶಾಸಕ ಎನ್‌.ಎಚ್‌.ಶಿವಶಂಕರರೆಡ್ಡಿ ತವರು ಕ್ಷೇತ್ರದಲ್ಲಿ 104 ಹೆಕ್ಟೇರ್‌ ಪ್ರದೇಶದಲ್ಲಿ ಸಿರಿಧಾನ್ಯ ಬಿತ್ತನೆ ಗುರಿ ಇದ್ದರೂ ಇದುವರೆಗೂ ಬಿತ್ತನೆಯೆ ಆಗಿಲ್ಲ. ಶಿವಶಂಕರರೆಡ್ಡಿ ಕೃಷಿ ಸಚಿವರಾಗಿದ್ದಾಗ ಸಿರಿಧಾನ್ಯ ಬೆಳೆಯುವ ರೈತರಿಗೆ ಪ್ರತಿ ಹೆಕ್ಟೇರ್‌ ಪ್ರೋತ್ಸಾಹ ಧನ ನೀಡುವುದಾಗಿ ಬಜೆಟ್‌ನಲ್ಲಿ ಘೋಷಿಸಿದ್ದರು. ಆದರೆ ಸಮ್ಮಿಶ್ರ ಸರ್ಕಾರ ಬಿದ್ದ ಬಳಿಕ ಆ ಯೋಜನೆ ಅನುಷ್ಟಾನವಾಗಲಿಲ್ಲ.

click me!