Untimely Rain Effect: ಬೆಳೆ ಹಾನಿ ಹೆಚ್ಚಿನ ಪರಿಹಾರ ಶೀಘ್ರ ಕೊಡುವಂತೆ ರೈತರ ಪಟ್ಟು

By Kannadaprabha News  |  First Published Dec 19, 2021, 9:00 AM IST

*   ಹಾವೇರಿ ಜಿಲ್ಲೆಯ ಅತಿವೃಷ್ಟಿ ಹಾನಿ ಪ್ರದೇಶಕ್ಕೆ ಕೇಂದ್ರ ತಂಡ ಭೇಟಿ
*  ಶಿಗ್ಗಾಂವಿ, ಸವಣೂರು, ರಾಣಿಬೆನ್ನೂರು, ಹಿರೇಕೆರೂರು ತಾಲೂಕುಗಳಲ್ಲಿ ಸಂಚಾರ
*  ಅಕಾಲಿಕ ಮಳೆಯಿಂದ ಹಾಳಾದ ಬೆಳೆ 
 


ಹಾವೇರಿ(ಡಿ.19):  ಅಕಾಲಿಕ ಮಳೆಯಿಂದ(Untimely Rain) ಬೆಳೆ ಮತ್ತು ಮನೆ ಹಾನಿಯಾದ ಪ್ರದೇಶಗಳಿಗೆ ಕೇಂದ್ರ ಅಧಿಕಾರಿಗಳ ತಂಡ ಶನಿವಾರ ಭೇಟಿ ನೀಡಿ ವಾಸ್ತವಾಂಶ ಕುರಿತು ಪರಿಶೀಲನೆ ನಡೆಸಿತು. ಈ ವೇಳೆ ಸಂತಸ್ತ ರೈತರು, ಹೆಚ್ಚಿನ ಪರಿಹಾರವನ್ನು(compensation) ಶೀಘ್ರದಲ್ಲಿ ಕೊಡುವಂತೆ ಒತ್ತಾಯಿಸಿದರು. ಕೇಂದ್ರ ಹಣಕಾಸು ಸಚಿವಾಲಯದ ಉಪನಿರ್ದೇಶಕ ಮಹೇಶಕುಮಾರ, ಕೇಂದ್ರ ಜಲಸಂಪನ್ಮೂಲ ಇಲಾಖೆಯ ಅಧೀಕ್ಷಕ ಎಂಜಿನಿಯರ್‌ ಗುರುಪ್ರಸಾದ ಅವರನ್ನೊಳಗೊಂಡ ಅಧ್ಯಯನ ತಂಡ ಜಿಲ್ಲೆಯ ನಾಲ್ಕು ತಾಲೂಕುಗಳ ಆಯ್ದ ಹಾನಿ ಪ್ರದೇಶಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿತು.

ಶಿಗ್ಗಾಂವಿ(Shiggon) ತಾಲೂಕು ಕುನ್ನೂರ ಗ್ರಾಮ ವ್ಯಾಪ್ತಿಯ ಬತ್ತದ ಬೆಳೆ ಪ್ರದೇಶ, ದುಂಡಶಿ ಗ್ರಾಮದಲ್ಲಿ ಮಳೆಯಿಂದ ಮನೆಗಳು ಬಿದ್ದ ಪ್ರದೇಶಕ್ಕೆ ಭೇಟಿ ನೀಡಿ ಮಾಲೀಕರಾದ ಮಹಬೂಬ್‌ಬಾನು ಮಾರಡಗಿ ಹಾಗೂ ರೇಖಾಬಾನು ಗೌಸುಸಾಬ್‌ ಕುಂದಗೋಳ ಅವರಿಂದ ಮಾಹಿತಿ ಪಡೆದರು.

Latest Videos

undefined

Crop Insurance Golmaal: ಬೆಳೆ ವಿಮೆ ಕಂತು ಕಟ್ಟಿದ ರೈತ​ರಿ​ಗಿಲ್ಲ ಪರಿ​ಹಾ​ರ..!

ಈ ವೇಳೆ ರೈತ ವೀರಭದ್ರಪ್ಪ ಚನ್ನಬಸಪ್ಪ ವಾಲಿಶೆಟ್ರ ಮಾತನಾಡಿ, ಕಳೆದ ತಿಂಗಳು ಸತತ ಮಳೆಯಿಂದ ಬತ್ತ, ಗೋವಿನಜೋಳ, ಶೇಂಗಾ, ಹತ್ತಿ ಹಾಗೂ ಕಬ್ಬಿನ ಬೆಳೆಗಳಿಗೆ ಹಾನಿಯಾಗಿದೆ(Crop Damage). ಇಳುವರಿ ಸಹ ಕುಂಠಿತಗೊಂಡಿದೆ. ಬೆಳೆಗಳ ನಿರ್ವಹಣೆ ಮಾಡಿದ ಖರ್ಚು-ವೆಚ್ಚ ದುಬಾರಿಯಾಗಿದೆ. ಹಾಗಾಗಿ ರೈತರಿಗೆ(Farmers) ಕೇಂದ್ರ ಸರ್ಕಾರದಿಂದ(Central Government) ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿಕೊಂಡರು.

ಅರಟಾಳ ಗ್ರಾಮದ ಪಾಯಪ್ಪ ಬ್ಯಾಹಟ್ಟಿ ಅವರ ಬತ್ತದ(Paddy) ತಾಕುಗಳಿಗೆ ಭೇಟಿ ನೀಡಿದ ವೇಳೆ, ಬತ್ತ ಕಟಾವಿಗೆ ಬಂದ ಸಂದರ್ಭದಲ್ಲಿ ಮಳೆಯಾದ ಹಿನ್ನೆಲೆಯಲ್ಲಿ ಬೆಳೆ ಸಂಪೂರ್ಣ ಹಾಳಾಗಿದೆ. ಒಂದು ಎಕರೆಗೆ 40 ಕ್ವಿಂಟಲ್‌ ಬತ್ತದ ಇಳುವರಿ ಬರುತ್ತಿತ್ತು. ಅತಿಯಾದ ಮಳೆಯಿಂದ ಬತ್ತದ ಬೆಳೆ ಸಂಪೂರ್ಣ ಹಾಳಾಗಿದೆ. ಶೇ. 70ರಷ್ಟು ಹುಲ್ಲು ಸಹ ಹಾಳಾಗಿದೆ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಒಂದು ಎಕರೆ ಬತ್ತದ ಬೆಳೆಗೆ ಸುಮಾರು . 25 ಸಾವಿರದಿಂದ 30 ಸಾವಿರ ಖರ್ಚಾಗಿದೆ. ಮುಂದಿನ ಹಂಗಾಮಿಗೆ ಬಿತ್ತನೆ ಬೀಜ(Sowing Seed) ಸಂಗ್ರಹಿಸದ ರೀತಿಯಲ್ಲಿ ಬೆಳೆಗಳ ಹಾನಿಯಾಗಿದೆ. ಹಾಗಾಗಿ ರೈತರಿಗೆ ಹೆಚ್ಚಿನ ಪರಿಹಾರ ನೀಡುವಂತೆ ಮನವಿ ಮಾಡಿಕೊಂಡರು.

ಸವಣೂರು ತಾಲೂಕಿನ ಮನ್ನಂಗಿ ಗ್ರಾಮದಲ್ಲಿ ಮಳೆಯಿಂದ ಹಾನಿಯಾದ ಶಾಲಾ ಕಟ್ಟಡ ಹಾಗೂ ಮನೆ ಹಾನಿ ಪ್ರದೇಶಕ್ಕೆ ಅಧಿ​ಕಾ​ರಿ​ಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದಕ್ಕೂ ಮುನ್ನ ಶಿಗ್ಗಾಂವಿ ತಹಸೀಲ್ದಾರ್‌ ಕಚೇರಿಯಲ್ಲಿ ಜಿಲ್ಲೆಯ ಅಧಿಕಾರಿಗಳಿಂದ ಹಾನಿಯ ಕುರಿತಂತೆ ತಂಡ ಮಾಹಿತಿ ಪಡೆದುಕೊಂಡಿತು.

ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಹಾಗೂ ಜಂಟಿ ಕೃಷಿ ನಿರ್ದೇಶಕ ಮಂಜುನಾಥ್‌ ಅವರು ಕೇಂದ್ರ ತಂಡಕ್ಕೆ ಅತಿವೃಷ್ಟಿಯಿಂದ ಉಂಟಾದ ಪ್ರವಾಹ ಹಾಗೂ ಹಾನಿಯ ಮಾಹಿತಿಯನ್ನು ನೀಡಿದರು.

ಅಕಾಲಿಕ ಮಳೆಯಿಂದ ಮನೆ, ಬೆಳೆ ಹಾನಿ ಹಾಗೂ ಮೂಲಸೌಕರ್ಯಗಳ(Infrastructure) ಹಾನಿಗೆ ಎನ್‌ಡಿಆರ್‌ಎಫ್‌(NDRF) ಮಾರ್ಗಸೂಚಿಯಂತೆ ಪರಿಹಾರದ ಬೇಡಿಕೆಯನ್ನು ಸಲ್ಲಿಸಲಾಗಿದೆ. ಕೃಷಿ(Agriculture) ಮತ್ತು ತೋಟಗಾರಿಕೆ ಬೆಳೆಹಾನಿಗೆ 42.15 ಕೋಟಿ ಪರಿಹಾರ ಅಗತ್ಯವಾಗಿದೆ. ರಸ್ತೆ, ಸೇತುವೆ, ಕಟ್ಟಡ, ಕುಡಿಯುವ ನೀರಿನ ಸಂಪರ್ಕ ಹಾನಿ ಒಳಗೊಂಡಂತೆ ಪರಿಹಾರದ ಅಗತ್ಯವಿದೆ ಎಂದು ಸ್ಥಳೀಯ ಅಧಿ​ಕಾ​ರಿ​ಗಳು ಮಾಹಿತಿ ನೀಡಿದರು.
ಅತಿವೃಷ್ಟಿ ಹಾಗೂ ಪ್ರವಾಹದಿಂದಾಗಿ 50,638 ಹೆಕ್ಟೇರ್‌ ಪ್ರದೇಶದ ಅಂದಾಜು 131.84 ಕೋಟಿ ಮೊತ್ತದ ಕೃಷಿ ಬೆಳೆಹಾನಿ, 1,846 ಹೆಕ್ಟೇರ್‌ ಪ್ರದೇಶದ ಅಂದಾಜು 18.81 ಕೋಟಿ ಮೊತ್ತದ ತೋಟಗಾರಿಕೆ ಬೆಳೆಹಾನಿಯಾಗಿದೆ ಎಂದು ಹೇಳಿದರು.

Crop Insurance Fraud: ರೈತರ ಬೆಳೆವಿಮೆ ಪರಿಹಾರ ಕಬಳಿಸಲು ಖದೀಮರ ಯತ್ನ

ಗ್ರಾಮೀಣ ಪ್ರದೇಶದಲ್ಲಿ 81 ಹಾಗೂ ನಗರ ಪ್ರದೇಶದಲ್ಲಿ 22 ಎ ವರ್ಗದ, ಗ್ರಾಮೀಣ ಬಿ ವರ್ಗದ 3,155 ಹಾಗೂ ನಗರ 265, ಸಿ ವರ್ಗದ ಗ್ರಾಮೀಣ 905 ಹಾಗೂ ನಗರ ಪ್ರದೇಶದಲ್ಲಿ 64 ಸೇರಿ ಒಟ್ಟು ಗ್ರಾಮೀಣ ಭಾಗದಲ್ಲಿ 4,141 ಹಾಗೂ ನಗರ ಭಾಗದಲ್ಲಿ 351 ಸೇರಿ 4,492 ಹಾನಿ​ಗೀ​ಡಾದ ಮನೆಗಳನ್ನು ಗುರುತಿಸಲಾಗಿದೆ. 271 ಪ್ರಾಥಮಿಕ ಶಾಲಾ ಕಟ್ಟಡಗಳಿಗೆ ಹಾನಿಯಾಗಿದೆ. ಸಣ್ಣ ನೀರಾವರಿ(Small irrigation), ಲಿಫ್ಟ್‌ ಇರಿಗೇಷನ್‌(Lift Irrigation), ಪೈಲ್‌ಲೈನ್‌ ದುರಸ್ತಿ, ಮೂಲ ಸೌಕರ್ಯಗಳು ಸೇರಿದಂತೆ 134 ಸರ್ಕಾರಿ ಆಸ್ತಿಗಳಿಗೆ ಹಾನಿಯಾಗಿದ್ದು, 76 ಕೋಟಿ ಹಾನಿ ಅಂದಾಜಿಸಲಾಗಿದೆ. 203 ಕಿಮೀ ಜಿಲ್ಲಾ ರಸ್ತೆ, 1504 ಕಿಮೀ ಗ್ರಾಮೀಣ ರಸ್ತೆ(Road) ಹಾನಿಯಾಗಿದೆ ಎಂದು ಮಾಹಿತಿ ನೀಡಿದರು.

ಜಿಪಂ ಸಿಇಒ ಮಹಮ್ಮದ ರೋಷನ್‌, ಅಪರ ಜಿಲ್ಲಾಧಿಕಾರಿ ಡಾ. ಎನ್‌. ತಿಪ್ಪೇಸ್ವಾಮಿ, ಉಪವಿಭಾಗಾಧಿಕಾರಿ ಅನ್ನಪೂರ್ಣಾ ಮುದಕಮ್ಮನವರ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಪ್ರದೀಪ ಇತರರು ಇದ್ದರು. ಬಳಿಕ ಕೇಂದ್ರ ತಂಡವು ಹಿರೇಕೆರೂರು ತಾಲೂಕಿನ ಚನ್ನಹಳ್ಳಿ, ದಂಡಿಗಿಹಳ್ಳಿ ಹಾಗೂ ರಾಣಿಬೆನ್ನೂರು ತಾಲೂಕಿನ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
 

click me!