ಮತ್ತೆ ಬೀದಿಗಳಿದ ಕಬ್ಬು ಬೆಳೆಗಾರರು: ಬೆಳಗಾವಿಯ ಸುವರ್ಣಸೌಧ ಮುತ್ತಿಗೆಗೆ ವಿಫಲ ಯತ್ನ..!

By Girish Goudar  |  First Published Oct 21, 2022, 9:15 PM IST

ಪ್ರತಿ ಟನ್ ಕಬ್ಬಿಗೆ 5500 ರೂ.ನಿಗದಿಗೆ ಆಗ್ರಹ: ಸುವರ್ಣಸೌಧಕ್ಕೆ ಬರುವ ಮುನ್ನವೇ ರೈತರನ್ನು ವಶಕ್ಕೆ ಪಡೆದ ಪೊಲೀಸರು 


ವರದಿ: ಮಹಾಂತೇಶ ಕುರಬೇಟ, ಏಷ್ಯಾನೆಟ್ ಸುವರ್ಣ ನ್ಯೂಸ್, ಬೆಳಗಾವಿ

ಬೆಳಗಾವಿ(ಅ.21):  ಪ್ರತಿ ಟನ್ ಕಬ್ಬಿಗೆ 5500 ರೂ. ದರ ನೀಡುವಂತೆ ಆಗ್ರಹಿಸಿ ಕಬ್ಬು ಬೆಳೆಗಾರರು ಮತ್ತೆ ಹೋರಾಟ ಶುರು ಮಾಡಿದ್ದಾರೆ. ಪಂಜಾಬ್, ಮಹಾರಾಷ್ಟ್ರ, ಉತ್ತರಪ್ರದೇಶ ಸೇರಿ ವಿವಿಧೆಡೆ ಪ್ರತಿ ಟನ್ ಕಬ್ಬಿಗೆ 3 ಸಾವಿರ ರೂ.ಗಿಂತಲೂ ಹೆಚ್ಚಿನ ದರ ನೀಡಲಾಗುತ್ತಿದೆ. ಆದ್ರೆ ರಾಜ್ಯದಲ್ಲಿ ಕಬ್ಬು ಬೆಳೆಗಾರರಿಗೆ ಕಡಿಮೆ ದರ ನೀಡುತ್ತಿದ್ದು ಕಬ್ಬು ಬೆಳೆಗಾರರಿಗೆ ಕಾರ್ಖಾನೆ ವತಿಯಿಂದ ಪ್ರತಿ ಟನ್ ಕಬ್ಬಿಗೆ 3500 ರೂ. ನೀಡಬೇಕು ಹಾಗೂ ಸರ್ಕಾರದ ವತಿಯಿಂದ ಪ್ರತಿ ಟನ್ ಕಬ್ಬಿಗೆ 2 ಸಾವಿರ ರೂ ಸಹಾಯ ಧನ ನೀಡಿ ಒಟ್ಟು 5500 ರೂ. ದರ ನೀಡುವಂತೆ ಆಗ್ರಹಿಸಿದ್ದಾರೆ. 

Latest Videos

undefined

ಈ ಸಂಬಂಧ ಅ. 15ರಂದು ಸಕ್ಕರೆ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಸಭೆ ನಡೆಸಿದ್ದರು. ಎರಡು ದಿನಗಳಲ್ಲಿ ಸಿಎಂ ಜೊತೆ ಮಾತುಕತೆ ನಡೆಸಿ ಸಿಹಿ ಸುದ್ದಿ ನೀಡುವುದಾಗಿ ಭರವಸೆ ನೀಡಿದ್ದರಂತೆ. ಆದ್ರೆ ಭರವಸೆ ಹುಸಿಯಾದ ಹಿನ್ನೆಲೆ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸಾಮೂಹಿಕ ನಾಯಕತ್ವದಡಿ ಬೆಳಗಾವಿಯ ಸುವರ್ಣಸೌಧಕ್ಕೆ ಇಂದು(ಶುಕ್ರವಾರ) ಮುತ್ತಿಗೆ ಹಾಕಲು ನಿರ್ಧರಿಸಿದ್ದರು. 

ಬೆಳಗಾವಿ: ಅ. 29ರಿಂದ ಯಡೂರನಿಂದ ಶ್ರೀಶೈಲವರೆಗೆ ಪಾದಯಾತ್ರೆ, ಶ್ರೀಶೈಲ ಜಗದ್ಗುರು ಶ್ರೀ

ಈ ಸುದ್ದಿ ತಿಳಿಯುತ್ತಿದ್ದ ಬೆಳಗಾವಿ ಜಿಲ್ಲೆ ಹಾಗೂ ನಗರ ಪೊಲೀಸರು ಅಲರ್ಟ್ ಆಗಿದ್ದರು. ಬೆಳಗಾವಿ ನಗರ ಪ್ರವೇಶಿಸುವ ಹತ್ತರಗಿ, ಹಿರೇಬಾಗೇವಾಡಿ ಟೋಲ್‌‌ಗೇಟ್ ಹಾಗೂ ಬೆಳಗಾವಿ ಬಾಗಲಕೋಟ ರಸ್ತೆಯಲ್ಲಿ ಬಿಗಿ ಪೊಲೀಸ್ ಭದ್ರತೆ ನಿಯೋಜಿಸಿದ್ದರು. ಹತ್ತರಗಿ ಟೋಲ್‌ಗೇಟ್ ಬಳಿ ಎಎಸ್‌ಪಿ ಮಹಾನಿಂಗ ನಂದಗಾವಿ ನೇತೃತ್ವದಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿತ್ತು. ಚಿಕ್ಕೋಡಿ, ನಿಪ್ಪಾಣಿ, ಹುಕ್ಕೇರಿ, ಸಂಕೇಶ್ವರ, ಗೋಕಾಕದಿಂದ ಆಗಮಿಸುತ್ತಿದ್ದ ರೈತರನ್ನು ಹತ್ತರಗಿ ಟೋಲ್‌ಗೇಟ್ ಬಳಿಯೇ ತಡೆಯಲಾಯಿತು. 

ಖಾಕಿ ಸರ್ಪಗಾವಲು ಭೇದಿಸಿ ಸೌಧಕ್ಕೆ ನುಗ್ಗಲು ರೈತರ ಯತ್ನ

ಮತ್ತೊಂದೆಡೆ ಸುವರ್ಣಸೌಧದ ಎದುರು ಕೂಡ ಡಿಸಿಪಿ ರವೀಂದ್ರ ಗಡಾದಿ ನೇತೃತ್ವದಲ್ಲೂ 100 ಕ್ಕೂ ಅಧಿಕ ಪೊಲೀಸರು ಕಾವಲಿದ್ದರು‌. ಹೀಗಿದ್ದರೂ ಖಾಕಿ ಸರ್ಪಗಾವಲು ಭೇದಿಸಿ ಸೌಧಕ್ಕೆ ನುಗ್ಗಲು ರೈತರು ಯತ್ನಿಸಿದರು. ಈ ವೇಳೆ ಪೊಲೀಸರು 10ಕ್ಕೂ ಅಧಿಕ ರೈತರನ್ನು ವಶಕ್ಕೆ ಪಡೆದು ಎಪಿಎಂಸಿ ಠಾಣೆಗೆ ಕರೆದೊಯ್ದರು. ಪೊಲೀಸರ ವರ್ತನೆಗೆ ಸಿಡಿದೆದ್ದ ರೈತ ಮುಖಂಡರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರ ಪೊಲೀಸರನ್ನು ಮುಂದೆ ಬಿಟ್ಟು ನಮ್ಮ ಹೋರಾಟ ಹತ್ತಿಕುತ್ತಿದೆ ಎಂದು ಆಕ್ರೋಶ ‌ವ್ಯಕ್ತಪಡಿಸಿದರು.

ಇನ್ನು ಕಬ್ಬು ಬೆಳೆಗಾರರು ಸುವರ್ಣವಿಧಾನಸೌಧಕ್ಕೆ ಮುತ್ತಿಗೆ ಹಾಕುವ ವಿಚಾರ ಪೊಲೀಸರಿಗೆ ಮೊದಲೇ ಗೊತ್ತಿತ್ತು. ಹೀಗಾಗಿ ಬೆಳಗ್ಗೆಯಿಂದಲೇ ಪೊಲೀಸರು ಸಹ ಅಲರ್ಟ್ ಆಗಿದ್ರು. ಹಿರೇಬಾಗೇವಾಡಿ, ಹತ್ತರಗಿ ಟೋಲ್‌ಗೇಟ್ ಬಳಿ ಅಗತ್ಯ ಪೊಲೀಸರ ನಿಯೋಜಿಸಿದ್ದರು. ರೈತರು ಬೆಳಗಾವಿ ಬರುವ ಮುನ್ನವೇ ಮಾರ್ಗಮಧ್ಯೆ ತಡೆಯಲಾಯಿತು. ಹತ್ತರಗಿ ಟೋಲ್ ಬಳಿ ರೈತ ಹೋರಾಟಗಾರ ಚೂನಪ್ಪ ಪೂಜಾರಿ ಸೇರಿದಂತೆ 50 ಕ್ಕೂ ಅಧಿಕ ರೈತರನ್ನು ಪೊಲೀಸರು ತಡೆದರು. ಆಗ ಆಕ್ರೋಶ ವ್ಯಕ್ತಪಡಿಸಿದ ಹೋರಾಟಗಾರರು ಅರೆಬೆತ್ತಲಾಗಿ ಪ್ರತಿಭಟನೆ ನಡೆಸಿದರು.

ಸಿಎಂ ಬೊಮ್ಮಾಯಿ ವಿರುದ್ಧ ಆಕ್ರೋಶ 

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿ ಟನ್ ಕಬ್ಬಿಗೆ 5500 ರೂ. ದರ ನಿಗದಿ  ಮಾಡುವಂತೆ ಒತ್ತಾಯಿಸಿದರು. ಪ್ರತಿಭಟನೆ ನಿಲ್ಲಿಸುವಂತೆ ಪೊಲೀಸರ ಮನವಿ ಮಾಡಿದ್ರು ಕೇಳದ ರೈತರು ಸುವರ್ಣ ಸೌಧ ಕಡೆಗೆ ಬರಲು ಮುಂದಾದರು. ಆಗ 50ಕ್ಕೂ ಹೆಚ್ಚು ರೈತರು ವಶಕ್ಕೆ ಪಡೆಯಲಾಯಿತು. ಮೂರು ಪೊಲೀಸ್ ವಾಹನಗಳಲ್ಲಿ ರೈತರನ್ನು ವಶಕ್ಕೆ ಪಡೆದು ಪೊಲೀಸರು ಕರೆದೊಯ್ಯಲಾಯಿತು.

ಅ.23ರಂದು ಕಿತ್ತೂರು ಉತ್ಸವಕ್ಕೆ ಆಗಮಿಸುತ್ತಿರುವ ಸಿಎಂ ವಿರುದ್ದ ಪ್ರತಿಭಟನೆಗೆ ನಿರ್ಧಾರ

ಇನ್ನು ಪೊಲೀಸರು ವಶಕ್ಕೆ ಪಡೆಯಲು ಮುಂದಾಗುತ್ತಿದ್ದಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಚೂನಪ್ಪ ಪೂಜಾರಿ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದರು‌‌. 'ಅಕ್ಟೋಬರ್ 15ರಂದು ಬೆಂಗಳೂರಿನಲ್ಲಿ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಸಭೆ ನಡೆಸಿದ್ದರು‌. ಈ ವೇಳೆ ಎರಡು ದಿನಗಳಲ್ಲಿ ಸಿಎಂ ಜೊತೆ ಚರ್ಚಿಸಿ ಸಿಹಿ ಸುದ್ದಿ ಕೊಡೋದಾಗಿ ಹೇಳಿದ್ರು.

ಬೆಳಗಾವಿ: ಕೆಎಲ್‌ಇ ಆಸ್ಪತ್ರೆಯಲ್ಲಿ ಮೊದಲ ಬಾರಿಗೆ ಲೀವರ್‌ ಕಸಿ ಯಶಸ್ವಿ

ಒಂದು ಟನ್ ಕಬ್ಬಿಗೆ ಸರ್ಕಾರಕ್ಕೆ ಕಾರ್ಖಾನೆಗಳಿಂದ 4500 ರೂ. ತೆರಿಗೆ ಹೋಗುತ್ತೆ. ಹೀಗಾಗಿ ಅದರಲ್ಲಿ ರಾಜ್ಯ ಸರ್ಕಾರ 2000 ರೂ. ಸಹಾಯಧನ ಕಬ್ಬು ಬೆಳೆಗಾರರಿಗೆ ನೀಡಬೇಕು. ಕಾರ್ಖಾನೆಗಳು ರೈತರಿಗೆ ಪ್ರತಿ ಟನ್‌ಗೆ 3500 ರೂಪಾಯಿ ನೀಡಬೇಕು. ಒಟ್ಟಾರೆ ಪ್ರತಿ ಟನ್‌ ಕಬ್ಬಿಗೆ 5500 ರೂ. ದರ ಘೋಷಣೆ ಮಾಡಬೇಕು‌. ಇಲ್ಲವಾದ್ರೆ ಸಿಎಂ ಭೇಟಿ ನೀಡುವ ಸ್ಥಳದಲ್ಲೆಲ್ಲಾ ಹೋರಾಟ ನಡೆಸುತ್ತೇವೆ. ಯಾವುದೇ ಶಾಸಕ, ಸಚಿವರು  ಕಿತ್ತೂರು ಉತ್ಸವದಲ್ಲಿ ಭಾಗವಹಿಸಬಾರದು. ಕಿತ್ತೂರು ಉತ್ಸವದೊಳಗೆ ಕಬ್ಬು ಬೆಳೆಗಾರರಿಗೆ ಸಿಹಿ ಸುದ್ದಿ ನೀಡಬೇಕು. ಇಲ್ಲವಾದ್ರೆ ಕಿತ್ತೂರು ಉತ್ಸವಕ್ಕೆ ಆಗಮಿಸುವ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಪ್ರತಿಭಟನೆ ನಡೆಸುತ್ತೇವೆ' ಎಂದು ಎಚ್ಚರಿಕೆ ನೀಡಿದರು.

ನೆರೆ, ಬರದ ಪರಿಣಾಮ ಕಳೆದೊಂದು ದಶಕದಿಂದ ಬೆಳಗಾವಿ ಜಿಲ್ಲೆಯ ಕಬ್ಬು ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಹಲವು ರಾಜಕೀಯ ನಾಯಕರು ಸಕ್ಕರೆ ಕಾರ್ಖಾನೆ ಮಾಲೀಕರಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಲ್ಲ ಜನಪ್ರತಿನಿಧಿಗಳ, ಸಕ್ಕರೆ ಕಾರ್ಖಾನೆ ಮಾಲೀಕರ, ಕಬ್ಬು ಬೆಳೆಗಾರರ ಸಭೆ ಕರೆಯಲಿ. ಈ ಭಾಗದ ರೈತರ ಸಮಸ್ಯೆಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಸರ್ಕಾರ ಕ್ರಮ ವಹಿಸಲಿ ಎಂಬುದು ಕಬ್ಬು ಬೆಳೆಗಾರರ ಹಕ್ಕೊತ್ತಾಯ.
 

click me!