ಮೆಣಸಿನಕಾಯಿ ದರದಲ್ಲಿ ಹೆಚ್ಚಳ: ರೈತರ ಮೊಗದಲ್ಲಿ ಮಂದಹಾಸ..!

By Kannadaprabha NewsFirst Published Oct 21, 2023, 2:00 AM IST
Highlights

ರಾಜ್ಯದ ಮಟ್ಟಿಗೆ ಸಕಾಲಕ್ಕೆ ಮಳೆಯಾದಲ್ಲಿ (ಅಕ್ಟೋಬರ್ ಅಂತ್ಯದೊಳಗೆ) ಮೆಣಸಿನಕಾಯಿ ಇಳುವರಿಯಲ್ಲಿ ಕುಂಠಿತಗೊಳ್ಳಲು ಸಾಧ್ಯವಿಲ್ಲ. ಇನ್ನೂ ತೆಲಂಗಾಣ ಮತ್ತು ಆಂಧ್ರದಲ್ಲಿಯೂ ಇದೇ ಸನ್ನಿವೇಶ ಇದೆ. ಮಳೆಯಾದಲ್ಲಿ ಮೆಣಸಿನಕಾಯಿ ಬೆಳೆ ರೈತನ ಕೈಹಿಡಿಯುವುದರಲ್ಲಿ ಯಾವುದೇ ಸಂಶಯವಿಲ್ಲ.

ಶಿವಾನಂದ ಮಲ್ಲನಗೌಡರ

ಬ್ಯಾಡಗಿ(ಅ.21):  ಪಟ್ಟಣದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರಸಕ್ತ ವರ್ಷ (ಸೀಸನ್) ಮೆಣಸಿನಕಾಯಿ ದರವು ಪ್ರತಿ ಕ್ವಿಂಟಲ್‌ಗೆ ₹50 ಸಾವಿರ ಗಡಿ ದಾಟಿದ್ದು ರೈತರಲ್ಲಿ ಹರ್ಷ ಮೂಡಿಸಿದೆ. ಆದರೆ ಮಾರುಕಟ್ಟೆಯಲ್ಲಿನ ವರ್ತಕರು (ಟ್ರೇಡರ್ಸ್‌) ಕಳೆದಾರು ತಿಂಗಳಲ್ಲಿ ಸುಮಾರು ₹300 ಕೋಟಿಗೂ ಹೆಚ್ಚು ನಷ್ಟ ಅನುಭವಿಸಿದ್ದಾರೆ. ಕಳೆದ ಸೀಸನ್‌ನಲ್ಲಿ ರೈತ ಸೇಫ್ ಜೋನ್‌ನಲ್ಲಿ ಉಳಿದರೆ ವರ್ತಕರು ಮಾತ್ರ ಡೇಂಜರ್ ಜೋನ್‌ಗೆ ತಳ್ಳಲ್ಪಟ್ಟಿದ್ದು ವಾಸ್ತವ.

ಸೀಸನ್‌ನ ಆರಂಭದಲ್ಲಿ ಬ್ಯಾಡಗಿ ತಳಿ ಮೆಣಸಿನಕಾಯಿ ದರ ಪ್ರತಿ ಕ್ವಿಂಟಲ್‌ಗೆ ₹1 ಲಕ್ಷ ಸಮೀಪಿಸಿ ದಾಖಲೆ ನಿರ್ಮಿಸಿತ್ತು, 2023ರ ಮಾರ್ಚ್‌ ಅಂತ್ಯದವರೆಗೆ ದರದಲ್ಲಿ ಸ್ಥಿರತೆ ಕಾಯ್ದುಕೊಂಡಿತ್ತು. ಆದರೆ ಏಪ್ರಿಲ್ ಮೊದಲ ವಾರದಿಂದ ದರದಲ್ಲಿ ಕುಸಿತ ಕಂಡಿತು. ಬಹುತೇಕ ಎಲ್ಲ ತಳಿಗಳು ಖರೀದಿಸಿದ ಮೂಲ ದರಕ್ಕಿಂತ ₹10ರಿಂದ 15 ಸಾವಿರ ಕುಸಿತಗೊಂಡಿದ್ದು ಮತ್ತೆ ಚೇತರಿಸಿಕೊಳ್ಳಲಿಲ್ಲ. ಹೀಗಾಗಿ ಬಹುತೇಕ ವರ್ತಕರು ನಷ್ಟಕ್ಕೆ ಸಿಲುಕಿದರು. ಆದರೆ ಅಷ್ಟೊತ್ತಿಗೆ ಶೇ. 80 ರಷ್ಟು ರೈತರು ತಾವು ಬೆಳೆದ ಮೆಣಸಿನಕಾಯಿ ಮಾರಾಟ ಮಾಡಿದ್ದರು. ಮತ್ತೆ ಅಕ್ಟೋಬರ್ ಮೊದಲ ವಾರದಲ್ಲಿ ಹೊಸದಾಗಿ ಬೆಳೆದ ಮಾಲಿಗೆ ಮತ್ತೆ ಬೇಡಿಕೆ ಹೆಚ್ಚಾಗುತ್ತಿದ್ದು ದರದಲ್ಲಿ ಸ್ವಲ್ಪಮಟ್ಟಿನ ಚೇತರಿಕೆ ಕಂಡು ಬಂದಿದೆ.

ಸಿದ್ದರಾಮಯ್ಯ ಕನಸಿನ ಯೋಜನೆಯಲ್ಲೂ ಅಕ್ರಮ: ಗುತ್ತಿಗೆದಾರ,ಅಧಿಕಾರಿಗಳ ನಡುವೆ ಕಮಿಷನ್ ಫೈಟ್

ಬಿತ್ತನೆ ಪ್ರದೇಶ ಬಹುತೇಕ ಎರಡು ಪಟ್ಟು:

ಕಳೆದ ವರ್ಷದಲ್ಲಿ ಮೆಣಸಿನಕಾಯಿ ಬೆಳೆದ ರೈತರಂತೂ ಕೈತುಂಬ ಹಣ ಪಡೆದು ಖುಷಿಪಟ್ಟರು. ಇದೀಗ ಅದೇ ಸಂತಸದಲ್ಲಿ ಪ್ರಸಕ್ತ ವರ್ಷ ಮೆಣಸಿನಕಾಯಿ ಬಿತ್ತನೆ ಪ್ರದೇಶ ಕರ್ನಾಟಕ, ತೆಲಂಗಾಣ, ಮಹಾರಾಷ್ಟ್ರ ಆಂಧ್ರಪ್ರದೇಶ ಸೇರಿ ಸುಮಾರು 2 ಲಕ್ಷ ಹೆಕ್ಟೇರ್ ದಾಟುವ ಸಾಧ್ಯತೆಯಿದೆ. ಕಳೆದ ಬಾರಿಗೆ ಹೋಲಿಸಿದಲ್ಲಿ ಪ್ರಸಕ್ತ ವರ್ಷ ಇದು ದುಪ್ಪಟ್ಟು ಆಗಿದೆ.

ರಾಜ್ಯದ ಮಟ್ಟಿಗೆ ಸಕಾಲಕ್ಕೆ ಮಳೆಯಾದಲ್ಲಿ (ಅಕ್ಟೋಬರ್ ಅಂತ್ಯದೊಳಗೆ) ಮೆಣಸಿನಕಾಯಿ ಇಳುವರಿಯಲ್ಲಿ ಕುಂಠಿತಗೊಳ್ಳಲು ಸಾಧ್ಯವಿಲ್ಲ. ಇನ್ನೂ ತೆಲಂಗಾಣ ಮತ್ತು ಆಂಧ್ರದಲ್ಲಿಯೂ ಇದೇ ಸನ್ನಿವೇಶ ಇದೆ. ಮಳೆಯಾದಲ್ಲಿ ಮೆಣಸಿನಕಾಯಿ ಬೆಳೆ ರೈತನ ಕೈಹಿಡಿಯುವುದರಲ್ಲಿ ಯಾವುದೇ ಸಂಶಯವಿಲ್ಲ.

ಸಂಕಷ್ಟದಲ್ಲಿ ಮೆಣಸಿನಕಾಯಿ ಉದ್ಯಮ:

ಕೇವಲ ಎರಡ್ಮೂರು ದಶಕಗಳಲ್ಲಿ ನಡೆದ ಔದ್ಯೋಗಿಕ ಕ್ರಾಂತಿ ಪರಿಣಾಮ ಮೆಣಸಿನಕಾಯಿ ವಹಿವಾಟಿನಲ್ಲಿ ಮಾತ್ರ ಅಮೂಲಾಗ್ರ ಬದಲಾವಣೆ ನಡೆದಿದೆ. ಮೆಣಸಿನಕಾಯಿಗೆ ಸಂಬಂಧಿಸಿದ ಒಂದಿಲ್ಲೊಂದು ಉದ್ಯಮಗಳು ಕ್ರಮೇಣವಾಗಿ ಆರಂಭವಾಗುತ್ತಿವೆ. ಮಾರುಕಟ್ಟೆ ವಹಿವಾಟನ್ನೇ ನೆಚ್ಚಿಕೊಂಡು ಕೋಲ್ಡ್ ಸ್ಟೊರೇಜ್, ಪೌಡರ್ ಫ್ಯಾಕ್ಟರಿ, ಓಲಿಯೋರಿಸನ್‌ ಅವುಗಳಂತಹ ಬೃಹತ್ ವೆಚ್ಚದ ಉದ್ಯಮಗಳು ಏಪ್ರಿಲ್ ನಂತರ ದರದಲ್ಲಿ ಕಂಡು ಬಂದ ಏಕಾಏಕಿ ಕುಸಿತದಿಂದ ನಷ್ಟವನ್ನು ಅನುಭವಿಸುತ್ತಿದ್ದು ಚೇತರಿಸಿಕೊಳ್ಳಲು ಇಂದಿಗೂ ಒದ್ದಾಡುತ್ತಿವೆ.

ಕಾಂಗ್ರೆಸ್‌ ಸರ್ಕಾರ ಬಿದ್ದರೂ ಆಶ್ಚರ್ಯವಿಲ್ಲ: ಬಿ.ಸಿ.ಪಾಟೀಲ್

ಸಕಾಲಕ್ಕೆ ಮಳೆಯಾದಲ್ಲಿ ಬೇಡಿಕೆಗೆ ತಕ್ಕಂತೆ ಹೊಸ ಮೆಣಸಿನಕಾಯಿ ಮರುಕಟ್ಟೆಗೆ ಲಭ್ಯವಾಗಲಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಥಿರತೆ ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಕಳೆದ ಎರಡು ವಾರದಿಂದ ಮೆಣಸಿನಕಾಯಿ ಧಾರಣೆಯಲ್ಲಿ ಸುಧಾರಣೆ ಕಂಡು ಬಂದಿದೆ ಎನ್ನುತ್ತಾರೆ ವರ್ತಕರ ಸಂಘದ ಗೌರವ ಕಾರ್ಯದರ್ಶಿ ರಾಜು ಮೋರಿಗೇರಿ

ಮೆಣಸಿನಕಾಯಿ ದರದಲ್ಲಿ ಹೆಚ್ಚಳವಾಗಿದ್ದು ಖುಷಿ ತಂದಿದೆ. ಕಳೆದ ವರ್ಷ ನಾವು ನಿರೀಕ್ಷೆಗಿಂತ ಹೆಚ್ಚು ಆದಾಯ ಪಡೆದಿದ್ದೇವೆ. ಪ್ರಸಕ್ತ ಸಾಲಿನಲ್ಲಿ ಮಳೆಯಾದಲ್ಲಿ ಇಳುವರಿಯೂ ಹೆಚ್ಚಾಗಲಿದ್ದು, ಬ್ಯಾಡಗಿ ಮಾರುಕಟ್ಟೆ ನಮ್ಮ ರೈತರ ಕೈ ಹಿಡಿದಿದೆ ಎನ್ನುತ್ತಾರೆ ಕರ್ನೂಲ ಜಿಲ್ಲೆಯ ಡಿ. ಬೆಳಗಲ್ಲ ಗ್ರಾಮದ ರೈತ.

click me!