ಯಾದಗಿರಿ: ಬೆಳೆಗೆ ಟ್ಯಾಂಕರ್ ನೀರಿಗೆ ಮೊರೆ ಹೋದ ರೈತರು..!

By Kannadaprabha News  |  First Published Oct 20, 2023, 10:30 PM IST

ಬೆಳೆಗಳು ಒಣಗಿ ಹೋಗುತ್ತಿರುವುದನ್ನು ಕಂಡು ರೈತರು ಸಾಲ ಮಾಡಿ ಹೊಲಗಳಿಗೆ ಟ್ಯಾಂಕರ್ ಮೂಲಕ ನೀರು ಹರಿಸುತ್ತಿದ್ದಾರೆ. ಈಗಾಗಲೇ ರೈತರು ಬಿತ್ತನೆ ಮಾಡಿ ಬೀಜ, ಗೊಬ್ಬರ, ಕ್ರಿಮಿನಾಶಕ ಕಳೆ ತೆಗೆಸುವುದು ಇನ್ನಿತರ ಕೆಲಸಗಳಿಗೆ ಲಕ್ಷಾನುಗಟ್ಟಲೆ ಹಣ ಖರ್ಚು ಮಾಡಿ ಹೈರಾಣಾಗಿದ್ದಾರೆ.


ಯಾದಗಿರಿ(ಅ.20):  ಮಳೆ ಬಾರದಿರುವುದು ಮತ್ತು ಕಾಲುವೆಗಳಿಗೆ ನೀರು ಬಿಡದ ಕಾರಣ ಬೆಳೆ ಒಣಗುತ್ತಿರುವ ಹಿನ್ನೆಲೆ ಜಿಲ್ಲೆಯ ವಡಗೇರಾ ಪಟ್ಟಣದಲ್ಲಿ ಯುವ ರೈತ ಕಾಶಿನಾಥ್ ಕಲ್ಲಪ್ಪನೂರ ತನ್ನ ಎರಡು ಎಕರೆ ಹತ್ತಿ, ತೊಗರಿ ಬೆಳೆಗೆ ಟ್ಯಾಂಕರ್ ಮೂಲಕ ನೀರುಣಿಸುವ ಕಾರ್ಯಕ್ಕೆ ಮೊರೆ ಹೋಗಿದ್ದಾರೆ.

ಈ ವಿಷಯ ತಿಳಿದ ವಡಗೇರಾ ತಾಲೂಕು ರಾಜ್ಯ ರೈತ ಸಂಘ ಹಸಿರು ಸೇನೆ ವಾಸುದೇವ ಮೇಟಿ ಬಣದ ತಾಲೂಕಾಧ್ಯಕ್ಷ ವಿದ್ಯಾಧರ್ ಜಾಕಾ ನೇತೃತ್ವದಲ್ಲಿ ರೈತ ಸಂಘದ ಪದಾಧಿಕಾರಿಗಳು ಯುವ ರೈತನ ಹೊಲಕ್ಕೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬೆಳೆಗಳು ಒಣಗಿ ಹೋಗುತ್ತಿರುವುದನ್ನು ಕಂಡು ರೈತರು ಸಾಲ ಮಾಡಿ ಹೊಲಗಳಿಗೆ ಟ್ಯಾಂಕರ್ ಮೂಲಕ ನೀರು ಹರಿಸುತ್ತಿದ್ದಾರೆ. ಈಗಾಗಲೇ ರೈತರು ಬಿತ್ತನೆ ಮಾಡಿ ಬೀಜ, ಗೊಬ್ಬರ, ಕ್ರಿಮಿನಾಶಕ ಕಳೆ ತೆಗೆಸುವುದು ಇನ್ನಿತರ ಕೆಲಸಗಳಿಗೆ ಲಕ್ಷಾನುಗಟ್ಟಲೆ ಹಣ ಖರ್ಚು ಮಾಡಿ ಹೈರಾಣಾಗಿದ್ದಾರೆ.

Tap to resize

Latest Videos

undefined

ಯಾದಗಿರಿ: ಸರ್ಕಾರಿ ಕಚೇರಿಗೆ ಸೂರು, ಬಾಡಿಗೆ ಮಾಫಿಯಾ ಜೋರು..!

ಮತ್ತೆ ಈಗ ದುಡ್ಡು ಕೊಟ್ಟು ಟ್ಯಾಂಕರ್ ಮೂಲಕ ನೀರು ಹರಿಸಬೇಕಾದರೆ ಕನಿಷ್ಠ ಒಂದು ಎಕರೆಗೆ 20 ಸಾವಿರ ರು. ಖರ್ಚಾಗುತ್ತಿದೆ. ಕೆಳಭಾಗಕ್ಕೆ ಸಮರ್ಪಕವಾಗಿ ನೀರು ಹರಿಸಿದ್ದರೆ ರೈತರು ಇಷ್ಟೊಂದು ಕಷ್ಟ ಪಡಬೇಕಾಗಿರಲಿಲ್ಲ ಎಂದರು.
ಕಳೆದ ಕೆಲ ದಿನಗಳ ಹಿಂದೆ ಸರ್ಕಾರ ವಡಗೇರಾ ತಾಲೂಕನ್ನು ಬರಪೀಡಿತ ತಾಲೂಕೆಂದು ಹೆಸರಿಗಷ್ಟೇ ಘೋಷಣೆ ಮಾಡಿದೆ. ಇಲ್ಲಿಯವರೆಗೆ ಯಾವುದೇ ರೀತಿ ಬರ ಪರಿಹಾರದ ಕಾರ್ಯ ಕೂಡ ಆರಂಭವಾಗಿಲ್ಲ. ಹಣವು ಕೂಡ ರೈತರಿಗೆ ಜಮಾ ಆಗಿಲ್ಲ. ಕೂಡಲೆ ಜನಪ್ರತಿನಿಧಿಗಳು ಸಂಬಂಧಪಟ್ಟ ಅಧಿಕಾರಿಗಳು ವಡಗೇರಾ ಕೊನೆ ಭಾಗದ ಕಾಲುವೆಗಳಿಗೆ ಸಮರ್ಪಕ ನೀರು ಹರಿಸಬೇಕು ಮತ್ತು ರೈತರ ಪಂಪ್‌ಸೆಟ್‌ಗಳಿಗೆ ಕನಿಷ್ಠ 8 ಗಂಟೆ ವಿದ್ಯುತ್ ನೀಡುವುದರ ಜೊತೆಗೆ ಬರ ಪರಿಹಾರದ ಹಣವನ್ನು ಶೀಘ್ರ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದರು.

ಒಂದು ವೇಳೆ ನಿರ್ಲಕ್ಷ್ಯ ವಹಿಸಿದಲ್ಲಿ ವಡಗೇರಾ ತಹಸೀಲ್ದಾರ್ ಕಚೇರಿ ಮುಂದೆ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳುವುದಾಗಿ ತಾಲೂಕಾಧ್ಯಕ್ಷ ವಿದ್ಯಾಧರ, ಶರಣು ಜಡಿ, ಮಹ್ಮದ್ ಖುರೇಶಿ, ಕೃಷ್ಣಾ ಟೇಲರ್, ವೆಂಕಟೇಶ್ ಇಟಗಿ, ನಿಂಗಪ್ಪ, ಮಲ್ಲು ನಾಟೇಕರ್, ಮರಲಿಂಗ ಗೋನಾಲ, ತಿರುಮಲ ಮುಸ್ತಾಜೀರ್, ಮಲ್ಲು ಬಾಡದ, ರಾಘವೇಂದ್ರ ಗುತ್ತೇದಾರ, ನಾಗರಾಜ ಸ್ವಾಮಿ, ಸುರೇಶ್ ಬಾಡದ ಎಚ್ಚರಿಸಿದ್ದಾರೆ.

click me!