ಮಂಡ್ಯ: ಪ್ರತಿಭಟಿಸಿದ ರೈತರನ್ನು ಹೊರದಬ್ಬಿದ ಪೊಲೀಸರು

By Kannadaprabha NewsFirst Published Oct 1, 2019, 11:24 AM IST
Highlights

ವಿವಾದಿತ ಜಮೀನಿನಲ್ಲಿ ವಸತಿ ಶಾಲೆ ನಿರ್ಮಿಸುವುದನ್ನು ವಿರೋಧಿಸಿ ರೈತರು ಪ್ರತಿಭಟನೆ ನಡೆಸಿದ ಸಂದರ್ಭ ಪೊಲೀಸರು ಬಲವಂತವಾಗಿ ಅವರನ್ನು ಹೊರ ಹಾಕಿದ್ದಾರೆ. ಮದ್ದೂರು ತಾಲೂಕಿನಲ್ಲಿ ಪ್ರತಿಭಟಿಸುತ್ತಿದ್ದ ರೈತರನ್ನು ಹೊರದಬ್ಬಲಾಗಿದೆ.

ಮಂಡ್ಯ(ಅ.01): ಮದ್ದೂರು ತಾಲೂಕಿನ ಆತಗೂರು ಹೋಬಳಿ, ಕೆಸ್ತೂರು ಗ್ರಾಮದ ಹೊರವಲಯದಲ್ಲಿರುವ ವಿವಾದಾತ್ಮಕ ಜಮೀನಿನಲ್ಲಿ ವಸತಿ ಶಾಲೆ ನಿರ್ಮಾಣದ ಕಾಮಗಾರಿಗೆ ಅಡ್ಡಿಪಡಿಸಿ ಪ್ರತಿಭಟನೆಗಿಳಿದ ರೈತರನ್ನು ಪೊಲೀಸರು ಬಲವಂತವಾಗಿ ಹೊರದಬ್ಬಿದ ಘಟನೆ ಸೋಮವಾರ ಜರುಗಿತು.

ಪ್ರತಿಭಟನೆ ವೇಳೆ ಶಾಸಕ ಡಿ.ಸಿ.ತಮ್ಮಣ್ಣ ಬೆಂಬಲಿಗರು ಹಾಗೂ ಮಹಿಳೆಯರು ಸೇರಿದಂತೆ ರೈತರ ನಡುವೆ ಮಾತಿನ ಚಕಮಕಿ ನಡೆದ ಪರಿಣಾಮ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಸ್ಥಳದಲ್ಲಿದ್ದ ಪೊಲೀಸರು ಉಭಯ ಗುಂಪಿನ ಜನರನ್ನು ಜಮೀನಿನಿಂದ ಹೊರತಬ್ಬಿದ ನಂತರ ಟ್ರ್ಯಾಕ್ಟರ್‌ ಹಾಗೂ ಜೆಸಿಬಿಗಳ ಸಹಾಯದಿಂದ ರೈತರು ಬೆಳೆದಿದ್ದ ಹುರುಳಿ ಬೆಳೆಯನ್ನು ನಾಶಪಡಿಸಿದ ಬಳಿಕ ಪೊಲೀಸ್‌ ಬಂದೋಬಸ್‌್ತನಲ್ಲಿ ಮೊರಾರ್ಜಿ ವಸತಿ ಶಾಲೆ ಕಟ್ಟಡ ಕಾಮಗಾರಿಯ ಮಾರ್ಕಿಂಗ್‌ ಕಾರ್ಯ ಪ್ರಾರಂಭಿಸಲಾಯಿತು.

ಮದ್ದೂರು ಹಾಗೂ ಚನ್ನಪಟ್ಟಣ ತಾಲೂಕಿನ ಗಡಿಯಂಚಿನಲ್ಲಿ ಬರುವ ಬೊಮ್ಮನಾಯಕನಹಳ್ಳಿ ಗ್ರಾಮದ ಕೆಲ ರೈತರು ಹಳೇ ಸರ್ವೆ ನಂಬರ್‌ 107 ಹಾಗೂ ಹೊಸ ಸರ್ವೆ ನಂಬರ್‌ 93ರಲ್ಲಿರುವ ಒಟ್ಟು 10.09 ಗುಂಟೆ ಜಮೀನನ್ನು 1929ರಿಂದಲೂ ಒತ್ತುವರಿ ಮಾಡಿಕೊಂಡು ಉಳುಮೆ ಮಾಡುತ್ತಿದ್ದರು.

ಈ ಜಮೀನನ್ನು ಶಾಸಕ ಡಿ.ಸಿ.ತಮ್ಮಣ್ಣ ಮೊರಾರ್ಜಿ ವಸತಿ ಶಾಲೆ ಹಾಗೂ ಐಟಿಐ ಕಾಲೇಜು ನಿರ್ಮಾಣಕ್ಕೆ ಸರ್ಕಾರದಿಂದ ಮಂಜೂರು ಮಾಡಿಸಿದ್ದರು. 2012ರಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಉಪವಿಭಾಗಾಧಿಕಾರಿಗಳು ಸದರಿ ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದ ರೈತರನ್ನು ಒಕ್ಕಲೆಬ್ಬಿಸಿ ತಾಲೂಕು ಆಡಳಿತದ ವಶಕ್ಕೆ ಜಮೀನನ್ನು ತೆಗೆದುಕೊಳ್ಳುವಂತೆ ಆದೇಶ ನೀಡಿತ್ತು.

ಜಮೀನು ಉಳುಮೆ ಮಾಡುತ್ತಿದ್ದ ಒತ್ತುವರಿದಾರ ರೈತರು ಡಿಸಿ ಮತ್ತು ಎಸಿ ಆದೇಶ ಪ್ರಶ್ನಿಸಿ ಹೈಕೋರ್ಟ್‌ ಮೊರೆ ಹೋಗಿದ್ದರು. ಆನಂತರ ರೈತರಲ್ಲಿ ಸೂಕ್ತ ದಾಖಲಾತಿ ಇಲ್ಲದ ಕಾರಣ ಒತ್ತುವರಿದಾರರ ಮೇಲ್ಮನವಿ ಅರ್ಜಿಯನ್ನು ವಜಾಗೊಳಿಸಿತ್ತು. ಆದರೂ ಸಹ ರೈತರು ಕಳೆದ ಕೆಲ ತಿಂಗಳುಗಳಿಂದ ವಸತಿ ಶಾಲೆ ಕಾಮಗಾರಿಗೆ ಅಡ್ಡಿಪಡಿಸಿದ್ದರು. ಇದರಿಂದ ಪೊಲೀಸರು ಕಳೆದ ತಿಂಗಳು ಲಾಠಿ ಪ್ರಹಾರ ಮಾಡಿ ಗುಂಪನ್ನು ಚದುರಿಸಿ ವಸತಿ ಶಾಲೆ ಕಾಂಪೌಂಡ್‌ ನಿರ್ಮಾಣಕ್ಕೆ ಪೊಲೀಸ್‌ ಬಂದೋಬಸ್‌್ತನಲ್ಲಿ ಕ್ರಮ ಕೈಗೊಂಡಿದ್ದರು.

ಕಳೆದ ಎರಡು-ಮೂರು ದಿನಗಳ ಹಿಂದೆ ಪಿತೃಪಕ್ಷದ ಹಬ್ಬದ ಹಿನ್ನಲೆಯಲ್ಲಿ ಪೊಲೀಸರು ಬಂದೋಬಸ್‌್ತ ಸಡಿಲಪಡಿಸಿದ್ದನ್ನು ಮನಗಂಡು ಜಮೀನಿನಲ್ಲಿ ಉಳುಮೆ ಮಾಡುವ ಮೂಲಕ ಜಮೀನು ವಶಕ್ಕೆ ಮುಂದಾಗಿದ್ದರು. ವಸತಿ ಶಾಲೆ ನಿರ್ಮಾಣಕ್ಕೆ ರೈತರು ಪದೇಪದೆ ಅಡ್ಡಿಪಡಿಸುತ್ತಿರುವುದರ ವಿರುದ್ಧ ಗುತ್ತಿಗೆದಾರ ದಯಾನಂದ ಮದ್ದೂರು ಜೆಎಂಎಫ್‌ಸಿ ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯದ ಗುತ್ತಿಗೆದಾರ ದಯಾನಂದ ಅವರಿಗೆ ಮಧ್ಯಂತರ ಆದೇಶ ನೀಡಿ ಪೊಲೀಸ್‌ ಬಂದೋಬಸ್‌್ತನಲ್ಲಿ ಕಾಮಗಾರಿ ಆರಂಭಿಸುವಂತೆ ಸೂಚಿಸಿತ್ತು.

ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಗುತ್ತಿಗೆದಾರರು ಕಟ್ಟಡ ಕಾಮಗಾರಿಗೆ ಮಾರ್ಕಿಂಗ್‌ ನಡೆಸುತ್ತಿದ್ದ ವೇಳೆ ಜಮೀನಿಗೆ ನುಗ್ಗಿದ ರೈತರ ಗುಂಪು ಕಾಮಗಾರಿಗೆ ಅಡ್ಡಿಪಡಿಸಿ, ಉಳುಮೆ ಮಾಡಿ ಜಮೀನು ವಶಕ್ಕೆ ಪಡೆದುಕೊಳ್ಳಲು ಯತ್ನಿಸಿದರು. ಈ ವೇಳೆ ಸ್ಥಳಕ್ಕೆ ಧಾವಿಸಿದ ಡಿ.ಸಿ.ತಮ್ಮಣ್ಣ ಬೆಂಬಲಿಗ ಕೆ.ದಾಸೇಗೌಡ ಮತ್ತು ಆತನ ಸಹಚರರು ಗುತ್ತಿಗೆದಾರನ ಪರ ನಿಂತರು.

ಈ ವೇಳೆ ರೈತರು ಹಾಗೂ ಗುತ್ತಿಗೆದಾರರ ನಡುವೆ ಮಾತಿನ ಚಕಮಕಿ ನಡೆಯಿತು. ಇದರಿಂದ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು. ಸ್ಥಳದಲ್ಲಿದ್ದ ಸಿಪಿಐ ಎನ್‌.ವಿ.ಮಹೇಶ್‌, ಕೆಸ್ತೂರು ಠಾಣೆ ಪಿಎಸ್‌ಐ ಪ್ರಭ, ಕೊಪ್ಪ ಠಾಣೆ ಪಿಎಸ್‌ಐ ಆಯ್ಯನ್‌ ಗೌಡ ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಪೊಲೀಸರು ಜಮೀನಿನಲ್ಲಿ ಧರಣಿ ಹೂಡಿದ್ದ ರೈತರು ಮತ್ತು ತಮ್ಮಣ್ಣ ಬೆಂಬಲಿಗರನ್ನು ಬಲವಂತವಾಗಿ ಜಮೀನಿನಿಂದ ಹೊರದಬ್ಬಿದರು. ಬಳಿಕ ಬಿಗಿ ಪೊಲೀಸ್‌ ಭದ್ರತೆಯಲ್ಲಿ ಕಾಮಗಾರಿಯನ್ನು ಆರಂಭಿಸಿದರು.

Farmers forcefully taken out from protesting place in manday

click me!