ಕೊಪ್ಪಳ: ದರ ಕುಸಿತದಿಂದ ಎಲೆಕೋಸು ಹೊಲದಲ್ಲಿ ಕುರಿ ಮೇಯಿಸಿದ ರೈತ

By Kannadaprabha NewsFirst Published Mar 22, 2021, 12:36 PM IST
Highlights

ಮೈತುಂಬಿ ಬೆಳೆದಿದ್ದ ಬೆಳೆನಾಶ| ಕಣ್ಣೀರು ಹಾಕುತ್ತಿರುವ ರೈತರು| ಕೊಪ್ಪಳ ತಾಲೂಕಿನ ಚಿಲವಾಡಗಿ ಗ್ರಾಮದಲ್ಲಿ ಕಂಡುಬಂದ ದೃಶ್ಯ| ರೈತರು ಮಾರುಕಟ್ಟೆಗೆ ತೆಗೆದುಕೊಂಡು ಹೋದರೆ ಹಮಾಲಿ, ದಲ್ಲಾಳಿ ಮತ್ತು ವಾಹನ ಬಾಡಿಗೆ ಕೈಗೆ ನೀಡಬೇಕಾದ ಸ್ಥಿತಿ| ಜಿಲ್ಲಾದ್ಯಂತ ಎಲೆಕೋಸು ಬೆಳೆದಿರುವ ರೈತರದ್ದು ಇದೇ ಪರಿಸ್ಥಿದೆ| 

ಸೋಮರಡ್ಡಿ ಅಳವಂಡಿ

ಕೊಪ್ಪಳ(ಮಾ.21): ಕಟಾವಿಗೆ ಬಂದಿರುವ ಎಲೆಕೋಸು ಕಣ್ಣಿಗೆ ಕುಕ್ಕುವಂತಿದೆ. ಆದರೂ ಕಟಾವು ಮಾಡುವ ಬದಲು ರೈತ ಕುರಿ ಮೇಯುತ್ತಿದ್ದಾನೆ. ಇದನ್ನು ನೋಡಿದರೆ ಎಂಥವರ ಕರುಳು ಚುರ್‌ ಎನ್ನದಿರ​ದು. ಇದು ಕಂಡುಬಂದಿದ್ದು ಕೊಪ್ಪಳ ತಾಲೂಕಿನ ಚಿಲವಾಡಗಿ ಗ್ರಾಮದಲ್ಲಿ. ಎಲೆಕೋಸು ದರ ಪಾತಳಕ್ಕೆ ಬಿದ್ದಿದೆ. ಅದನ್ನು ಮಾರುಕಟ್ಟೆಯಲ್ಲಿ ಕೇಳುವವರೇ ಇಲ್ಲ. ರೈತರು ಮಾರುಕಟ್ಟೆಗೆ ತೆಗೆದುಕೊಂಡು ಹೋದರೆ ಅದರ ಹಮಾಲಿ, ದಲ್ಲಾಳಿ ಮತ್ತು ವಾಹನ ಬಾಡಿಗೆ ಕೈಗೆ ನೀಡಬೇಕಾದ ಸ್ಥಿತಿ ಇದೆ.

ಸಾಮಾನ್ಯವಾಗಿ ಒಂದು ಚೀಲ(10-12 ಕೆಜಿ) ನೂರು ರುಪಾಯಿ ಆಸುಪಾ​ಸು ಮಾರಾಟ ಮಾಡಿದರೆ ರೈತರಿಗೆ ಒಳ್ಳೆಯ ಆದಾಯ ಬರುತ್ತದೆ. ಆದರೆ, ಈಗ ಮಾರುಕಟ್ಟೆಯಲ್ಲಿ ಕೇವಲ .40- 50ಗೂ ಕೇಳುವವರೇ ಇಲ್ಲ. ಅಂದರೆ ವಾಹನದ ಬಾಡಿಗೆ ಮತ್ತು ಕಟಾವು ಮಾಡಿದ ಕೂಲಿಯೂ ಬರುವುದಿಲ್ಲ. ಹೀಗಾಗಿ ರೈತರು ಎಲೆಕೋಸನ್ನು ಕುರಿ ಮೆಯಿಸಿ ಹರಗುತ್ತಿದ್ದಾರೆ. ಕಣ್ಣು ಕುಕ್ಕುವಂತೆ ಬೆಳೆದಿರುವ ಬೆಳೆಯನ್ನು ಸ್ವಯಂ ನಾಶ ಮಾಡುವುದು ಎಂದರೆ ಎಂಥವರಿಗೂ ಈ ಸ್ಥಿತಿ ಬರಬಾರದು ಎನ್ನುತ್ತಾರೆ ರೈತರು.

30 ಸಾವಿರ ವೆಚ್ಚ:

ಚಿಲವಾಡಗಿಯ ರೈತ ಮಾರುತಿ ಮುಂದಲಮನಿ ಅವರು ಒಂದು ಎಕರೆಯಲ್ಲಿ ಹಾಕಿದ್ದ ಎಲೆಕೋಸು ಬಂಪರ್‌ ಬೆಳೆ ಬಂದಿದೆ. ಇದಕ್ಕಾಗಿ ಸುಮಾರು .30 ಸಾವಿರ ವೆಚ್ಚ ಮಾಡಿದ್ದಾರೆ. ನಯಾಪೈಸೆಯೂ ಬರದಂತಾಗಿದೆ. ಬೆಳೆದಿದ್ದನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋದರೂ ಕೂಲಿಯೂ ಬಾರದಿರುವುದರಿಂದ ಈಗ ಕುರಿ ಮೇಯಿಸಿ ಹರಗುತ್ತಿದ್ದೇವೆ ಎನ್ನುತ್ತಾರೆ ರೈತರು.

ಕೇಳೋರೆ ಇಲ್ಲ ಎಲೆಕೋಸು, ರೊಚ್ಚಿಗೆದ್ದ ರೈತ, ಡಿಸಿ ಕಚೇರಿ ಎದುರು ಪ್ರತಿಭಟನೆ

ಬೀಜ, ಗೊಬ್ಬರ ಹಾಗೂ ಕೂಲಿ ಸೇರಿದಂತೆ ಸುಮಾರು 30 ಸಾವಿರ ವೆಚ್ಚವಾಗಿದೆ. ಸರಿಯಾದ ದರ ಇದ್ದಿದ್ದರೆ ಬರೋಬ್ಬರಿ 1 ಲಕ್ಷ ಆದಾಯ ಬರಬೇಕಿತ್ತು. ಆದರೆ, ಏನು ಮಾಡುವುದು ಎಲ್ಲವೂ ತಲೆ ಕೆಳಗಾಗುವಂತೆ ಮಾಡಿದೆ ಎನ್ನುತ್ತಾರೆ ರೈತರು.

ಇದು ಕೇವಲ ಒಬ್ಬ ರೈತನ ಸ್ಥಿತಿಯಲ್ಲ, ಜಿಲ್ಲಾದ್ಯಂತ ಎಲೆಕೋಸು ಬೆಳೆದಿರುವ ರೈತರದ್ದು ಇದೇ ಪರಿಸ್ಥಿದೆ ಇದೆ. ಜಿಲ್ಲಾದ್ಯಂತ ಸುಮಾರು ಸಾವಿರಾರು ಎಕರೆ ಪ್ರದೇಶದಲ್ಲಿ ಎಲೆಕೋಸು ಬೆಳೆಯಲಾಗಿದೆ. ಕಳೆದೆರಡು ವರ್ಷಗಳಿಂದ ಎಲೆಕೋಸು ಕೇಳುವವರೇ ಇಲ್ಲದಂತಾಗಿದೆ. ಈ ವರ್ಷವಾದರೂ ರೇಟು ಬಂದಿತು ಎನ್ನುವ ನಂಬಿಕೆಯಿಂದ ಬೆಳೆದಿದ್ದ ರೈತರು ಮತ್ತೆ ಕೈ ಸುಟ್ಟುಕೊಂಡಿದ್ದಾರೆ.

ಎಕರೆಯಲ್ಲಿ ಬೆಳೆದಿದ್ದ ಎಲೆಕೋಸು ಅತ್ಯುತ್ತಮವಾಗಿಯೇ ಬಂದಿದೆ. ಆದರೆ, ಕಟಾವು ಮಾಡಿದ ಕೂಲಿಯೂ ಬಾರದಂತೆ ರೇಟು ಇರುವುದರಿಂದ ದಿಕ್ಕು ತಿಳಿಯದಾಗಿ ಕುರಿ ಮೇಯಿಸಿ ಹರಗುತ್ತಿದ್ದೇವೆ ಎಂದು ಮಾರುತಿ ಮುಂದಿನಮನಿ ತಿಳಿಸಿದ್ದಾರೆ.
 

click me!