ಬಾರದ ಮಳೆ: ರೈತರ ಮೊಗದಲಿಲ್ಲ ಕಳೆ..!

By Kannadaprabha News  |  First Published Jun 30, 2022, 9:39 PM IST

*  ಸರಿಯಾದ ಸಮಯಕ್ಕೆ ಮಳೆಬಾರದಿರುವ ಕಾರಣಕ್ಕೆ ಕಂಗಾಲಾದ ಅನ್ನದಾತ
*  ಸಾಲ ಮಾಡಿ ಜಮೀನು ಹದ ಮಾಡಿ ಬಿತ್ತನೆ ಕಾರ್ಯ ಮಾಡಲಾಗಿದೆ
*  ಮಳೆಯೂ ಇಲ್ಲ, ಬೆಳೆಯೂ ಇಲ್ಲ ಇನ್ನೇನಿದ್ದರೂ ನಮಗೆ ದೇವರೇ ದಿಕ್ಕು ಅಂತ ರೈತರ ಅಳಲು 


ಸಿದ್ದಯ್ಯ ಹಿರೇಮಠ

ಕಾಗವಾಡ(ಜೂ.30):  ಅವಧಿಗೆ ಮುನ್ನವೇ ಮುಂಗಾರು ಮಳೆ ಪ್ರಾರಂಭವಾದಾಗ ಅನ್ನದಾತನ ಮೊಗದಲ್ಲಿ ಎಲ್ಲಿಲ್ಲದ ಸಂಭ್ರಮ ಮನೆ ಮಾಡಿತ್ತು. ಇದೇ ಜೋಶ್‌ನಲ್ಲೇ ಮನೆ ಮಂದಿಯೆಲ್ಲ ಕೂಡಿಕೊಂಡು ಬಿತ್ತನೆ ಮಾಡಿ ಆಕಾಶದತ್ತ ಮುಖ ಮಾಡಿ ಕುಳಿತುಕೊಂಡಿದ್ದರು. ಆದರೆ, ಸರಿಯಾದ ಸಮಯಕ್ಕೆ ಮಳೆಬಾರದಿರುವ ಕಾರಣಕ್ಕೆ ಇದೀಗ ಅನ್ನದಾತ ಕಂಗಾಲಾಗಿದ್ದಾನೆ.

Latest Videos

undefined

ಕಾಗವಾಡ, ಅಥಣಿ ಹಾಗೂ ರಾಯಬಾಗ ತಾಲೂಕುಗಳಲ್ಲಿ ಆರಂಭದಲ್ಲಿ ಆರ್ಭಟ ತೋರಿದ ಮುಂಗಾರು ಮಳೆ, ಈಗ ಮಾಯವಾಗಿದೆ. ಬಿತ್ತನೆ ಮಾಡಿದ ಬೆಳೆಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ರೈತ ಸಮುದಾಯ ಪರದಾಡುವಂತಾಗಿದೆ. ಈ ಮೂರು ತಾಲೂಕುಗಳಲ್ಲಿ ಆರಂಭದಲ್ಲಿ ಕೊಂಚ ನೆಮ್ಮದಿ ತರುವ ನಿಟ್ಟಿನಲ್ಲಿ ಸುರಿದ ಮುಂಗಾರು ಮಳೆ ಈ ಬಾರಿ ಉತ್ತಮ ಫಸಲು ಬರಬಹುದೆಂಬ ನಿರೀಕ್ಷೆಯೊಂದಿಗೆ ರೈತರು ಸೋಯಾಬಿನ್‌, ಗೋವಿನಜೋಳ, ಹೆಸರು, ಶೇಂಗಾ, ಸಜ್ಜೆ, ಹುರುಳಿ, ಅಲಸಂದಿ ಮುಂತಾದ ಬೆಳೆಗಳನ್ನು ಬಿತ್ತನೆ ಮಾಡಿದ್ದಾರೆ. ಬಿತ್ತನೆ ಸಮಯದಲ್ಲಿ ಅಗತ್ಯವಿರುವ ಬೀಜ ಹಾಗೂ ರಸಗೊಬ್ಬರಗಳು ಸಮರ್ಪಕವಾಗಿ ಸಿಗದಿದ್ದಾಗ್ಯೂ ರೈತ ಸುಮ್ಮನೆ ಕೈಕಟ್ಟಿಕೂಡದೆ, ಸಾಲ ಮಾಡಿ ನಾಟಿ ಮಾಡಿದ್ದಾರೆ. ಈಗ ಬೆಳೆಗಳು ನೆಲದಿಂದ ಮೇಲೆದ್ದು ಆಗಸದತ್ತ ಮುಖ ಮಾಡಿದಾಗ ಬೆಳೆಗಳಿಗೆ ರಸಗೊಬ್ಬರ ನೀಡಿದ್ದು, ಕೆಲವು ಕಡೆ ಕಳೆ ತೆಗೆದು ಕುಂಟೆ ಹೊಡೆಯುತ್ತಿದ್ದು, ವರುಣನ ಆಗಮನಕ್ಕಾಗಿ ಹಾತೊರೆಯುತ್ತಿದ್ದಾರೆ. ಆರಂಭದಲ್ಲಿ ಉತ್ತಮ ಭರವಸೆ ತೋರಿದ ಮುಂಗಾರು ಮಳೆ ಈಗ ಕೈಕೊಟ್ಟಿದ್ದರಿಂದ ಸಹಜವಾಗಿಯೇ ರೈತಾಪಿ ವರ್ಗ ಆತಂಕಕೊಂಡು ಆಕಾಶದತ್ತ ಮುಖ ಮಾಡಿದೆ.

Karnataka Rain ಕರ್ನಾಟಕದಲ್ಲಿಯೇ ಉಡುಪಿಯ ನಾಡ ಗ್ರಾಮದಲ್ಲಿ ಅತಿ ಹೆಚ್ಚು ಮಳೆ

ಇನ್ನೆರಡು ದಿನಗಳಲ್ಲಿ ಮಳೆ ಬಾರದೆ ಇದ್ದಲ್ಲಿ ಚಿಗುರಿ ನಿಂತಿರುವ ಅಲ್ಪಸ್ವಲ್ಪ ಬೆಳೆಗಳು ಕೂಡ ಮತ್ತೆ ಭೂಮಿಯಲ್ಲೇ ಹುದುಗುವುದು ಮಾತ್ರ ಸುಳ್ಳಲ್ಲ. ಈ ಬಗ್ಗೆ ಕೃಷಿ ಚಟುವಟಿಕೆಯಲ್ಲಿ ನಿರತರಾಗಿರುವ ರೈತ ಮಹಿಳೆಯೊರ್ವಳನ್ನು ಸಂಪರ್ಕಿಸಿದಾಗ ಮಳೆರಾಯ ಕಣ್‌ ಬಿಟ್ಟಿಲ್ಲ, ಬಿತ್ತಿದ ಬೆಳೆಗಳೆಲ್ಲ ಸುಟ್ಟಬದನಿಕಾಯಿ ಹಾಂಗ ಆಗ್ಯಾವ ನೋಡ್ರಿ, ಇನ್ನ ಮುಂದ ನಾವ ಬದಕುದಾದ್ರು ಹೆಂಗ ಎಂದು ತನ್ನ ಮನದಾಳದ ನೋವನ್ನು ಹಂಚಿಕೊಂಡಳು.

ಕಳೆದ ನಾಲ್ಕೈದು ವರ್ಷಗಳಿಂದ ದೈತ್ಯಾಕಾರದ ಪ್ರವಾಹವನ್ನು ಎದುರಿಸಿ ಈಗ ಚೇತರಿಸಿಕೊಂಡ ರೈತ ಈ ವರ್ಷವಾದರೂ ಮುಂಗಾರು ಬೆಳೆಗಳನ್ನು ಬೆಳೆದು ಹಿಂದೆ ಮಾಡಿದ ಕೃಷಿ ಸಾಲವನ್ನು ತೀರಿಸಿ ಋುಣ ಮುಕ್ತನಾಗಬೇಕೆಂದಿದ್ದನು. ಆದರೆ ನಿಸರ್ಗದ ಮುನಿಸಿನಿಂದ ಮತ್ತೆ ರೈತರಿಗೆ ಆಘಾತವನ್ನುಂಟು ಮಾಡಿದೆ. ಕೃಷಿಕನ ಮೊರೆಗೆ ಓಗೊಟ್ಟು ವರುದೇವ ಕೃಪೆ ತೋರಿಯಾನೆ? ಕಾದು ನೋಡಬೇಕು.

ಈ ಬಾರಿ ಮುಂಗಾರು ಹಂಗಾಮು ತಡ ಅಂತಾ ಹವಾಮಾನ ಇಲಾಖೆ ವರದಿಯಲ್ಲಿ ಹೇಳಲಾಗಿತ್ತು. ಆದರೆ ಈಗ ಪರಿಸ್ಥಿತಿ ತೀರ ಕೈಮೀರಿದೆ. ಸಾಲ ಮಾಡಿ ಜಮೀನು ಹದ ಮಾಡಿ ಬಿತ್ತನೆ ಕಾರ್ಯ ಮಾಡಲಾಗಿದೆ. ಮಳೆಯೂ ಇಲ್ಲ, ಬೆಳೆಯೂ ಇಲ್ಲ ಇನ್ನೇನಿದ್ದರೂ ನಮಗೆ ದೇವರೇ ದಿಕ್ಕು ಅಂತ ಮದಭಾವಿ ರೈತರು ಈಶ್ವರ ಕುಂಬಾರೆ ತಿಳಿಸಿದ್ದಾರೆ.  
 

click me!