* ಕರಾವಳಿ ಜಿಲ್ಲೆ ಉಡುಪಿಯಲ್ಲಿ ಧಾರಾಕಾರ ಮಳೆ
* ಉಡುಪಿಯ ನಾಡ ಗ್ರಾಮದಲ್ಲಿಯೇ ಅತಿ ಹೆಚ್ಚು ಮಳೆ
* ಮುಂಗಾರು ಅಬ್ಬರಕ್ಕೆ ನಗರದ ಹಲವೆಡೆ ನೆರೆಭೀತಿ
ವರದಿ -ಶಶಿಧರ ಮಾಸ್ತಿಬೈಲು ಏಷ್ಯಾನೆಟ್ ಸುವರ್ಣ ನ್ಯೂಸ್
ಉಡುಪಿ, (ಜೂನ್.30): ಕರಾವಳಿ ಜಿಲ್ಲೆ ಉಡುಪಿಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಕಳೆದ 24 ತಾಸುಗಳಲ್ಲಿ ಸುರಿದಮಳೆ ಜಿಲ್ಲೆಯ ಜನಜೀವನದ ಮೇಲೆ ಪರಿಣಾಮ ಬೀರಿದೆ. ನಾಳೆಯೂ ಜಿಲ್ಲೆಯಲ್ಲಿ ಆರೆಂಜ್ ಎಲರ್ಟ್ ಘೋಷಣೆಯಾಗಿದ್ದು ವ್ಯಾಪಕ ಮಳೆ ಮುಂದುವರೆಯಲಿದೆ. ಮುಂಗಾರು ಕೈ ಕೊಟ್ಟು ಕಂಗಾಲಾಗಿದ್ದ ಉಡುಪಿ ಜಿಲ್ಲೆಯ ಜನರಿಗೆ ಈ ಋತುವಿನ ಮೊದಲ ಮಳೆಯ ಅಬ್ಬರ ಕಾಣುವಂತಾಗಿದೆ.
ಬುಧವಾರ ರಾತ್ರಿಯಿಂದಲೇ ನಿರಂತರ ಮಳೆಯಾಗುತ್ತಿದ್ದು, ರಾಜ್ಯದಲ್ಲಿ ಅತಿ ಹೆಚ್ಚು ಮಳೆಯನ್ನು ಜಿಲ್ಲೆ ಕಾಣುವಂತಾಗಿದೆ. ಬೈಂದೂರು ತಾಲೂಕಿನ ನಾಡ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕರ್ನಾಟಕದಲ್ಲೇ ಅತಿ ಹೆಚ್ಚು ಮಳೆ ಬಿದ್ದಿದೆ. ಈ ಗ್ರಾಮದಲ್ಲಿ 248 ಮಿಲಿ ಮೀಟರ್ ಮಳೆ ದಾಖಲಾಗಿದೆ. ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿ ಅತಿ ಹೆಚ್ಚು ಮಳೆಯಾಗಿದ್ದು, ಅಂತಿಮ ವಿವರ ಬಂದಾಗ 119 ಮಿಲಿ ಮೀಟರ್ ಮಳೆ ಸುರಿದಿದೆ. ಇಂದು ಮತ್ತು ನಾಳೆ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಣೆಯಾಗಿದೆ.
undefined
ಭಾರೀ ಮಳೆಯ ಮುನ್ಸೂಚನೆ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ
ಕಡಲು ನಾಡ ದೋಣಿ ಮೀನುಗಾರರ ಸಂತಸ
ಮಳೆಯ ಜೊತೆ ಗಾಳಿಯ ತೀವ್ರತೆಯೂ ಹೆಚ್ಚಾಗಿದೆ. ಗಂಟೆಗೆ ನಲವತ್ತರಿಂದ ಐವತ್ತು ಕಿಲೋಮೀಟರ್ ವೇಗದ ಗಾಳಿ ಪಶ್ಚಿಮಕರಾವಳಿಯ ಮೂಲಕ ಹಾದು ಬರುತ್ತಿದೆ. ಇದರಿಂದ ಸಮುದ್ರದಲ್ಲಿ ಅಲೆಗಳ ಆರ್ಭಟ ಹೆಚ್ಚಿದೆ. ಜಿಲ್ಲೆಯ ಪಡುಕೆರೆ ಮೂಳೂರು, ಮರವಂತೆ ಭಾಗದಲ್ಲಿ ಎಂದಿನಂತೆ ಕಡಲು ಕೊರೆತ ಆರಂಭವಾಗಿದೆ. ಈ ನಡುವೆ ತೂಫಾನಿನ ಲಕ್ಷಣಗಳು ಕಂಡಿರುವುದರಿಂದ ನಾಡ ದೋಣಿ ಮೀನುಗಾರರು ಖುಷಿಪಟ್ಟಿದ್ದಾರೆ. ತೂಫಾನು ಬಂದರೆ ಮಾತ್ರ ನಾಡ ದೋಣಿ ಮೀನುಗಾರಿಕೆ ಸಾಧ್ಯ. ಇದೀಗ ಕಡಲಿನ ಅಬ್ಬರ ಹೆಚ್ಚಿರುವ ಕಾರಣ ಮಳೆ ಮುಗಿದ ನಂತರ ನಾಡ ದೋಣಿಗಳು ನೀರಿಳಿಯುವ ಸಾಧ್ಯತೆ ಇದೆ. ಪಶ್ಚಿಮ ಕರಾವಳಿಯಲ್ಲಿ ಅಲೆಗಳ ಆರ್ಭಟ ಮುಂದುವರೆದಿದೆ.
ನಗರದಲ್ಲಿ ಹಲವೆಡೆ ನೆರೆಭೀತಿ
ಉಡುಪಿ ನಗರದ ಆಯಕಟ್ಟಿನ ಸ್ಥಳಗಳಲ್ಲಿ ನೆರೆ ಭೀತಿ ಉಂಟಾಗಿದೆ. ನಿರಂತರ ಮಳೆಯಿಂದ ಬೈಲಕೆರೆ ಕಲ್ಸಂಕ, ಪರಂಪಳ್ಳಿ, ಮಠದ ಬೆಟ್ಟು ಮುಂತಾದ ಪ್ರದೇಶಗಳಲ್ಲಿ ಹರಿಯುವ ನೀರಿನ ಮಟ್ಟ ಮೇಲೇರಿದೆ. ಮಳೆ ಇದೇ ರೀತಿ ಮುಂದುವರಿದರೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗುವ ಸಾಧ್ಯತೆ ಇದೆ. ನಗರದ ಹೊರವಲಯದಲ್ಲಿರುವ ಉಪ್ಪುರು ಪರಿಸರದಲ್ಲೂ ನೀರಿನ ಮಟ್ಟ ಹೆಚ್ಚಿದೆ.ನಗರದಲ್ಲಿ ಸುರಿದ ಗಾಳಿ ಮಳೆಗೆ ಪರ್ಕಳ ಪೇಟೆಯಲ್ಲಿ ಮರ ಬಿದ್ದಿದೆ. ಕುಂದಾಪುರ ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ನಡುವೆ ಅಲ್ಲಲ್ಲಿ ರಸ್ತೆಯಲ್ಲೇ ನೀರು ನದಿಯಂತೆ ಹರಿಯುತ್ತಿದೆ. ನಗರದ ಕರಾವಳಿ ಬೈಪಾಸ್, ಅಂಬಲಪಾಡಿ ಬೈಪಾಸ್ ನಲ್ಲಿ ಸರ್ವಿಸ್ ರಸ್ತೆಯಲ್ಲಿ ಎರಡು ಅಡಿಗೂ ಹೆಚ್ಚು ಎತ್ತರದಲ್ಲಿ ಮಳೆ ನೀರು ಹರಿಯುತ್ತಿದೆ. ಇದರಿಂದ ಜನ ಸಂಚಾರಕ್ಕೆ ಅಡ್ಡಿಯಾಗಿದ್ದು ವಾಹನಗಳು ಚಾಲಕರು ಪರದಾಡುವಂಥಾಯ್ತು.
ಭತ್ತದ ಕೃಷಿ ಚುರುಕು
ಮಳೆಯ ತೀವ್ರತೆ ಹೆಚ್ಚಿದೆಯಾದರೂ, ಈ ಬಾರಿ ಮಳೆ ರೈತರಿಗೆ ಖುಷಿ ಕೊಟ್ಟಿದೆ. ಜೂನ್ ತಿಂಗಳಲ್ಲಿ ಜಿಲ್ಲೆಯಾದ್ಯಂತ ಶೇಖಡ 30ಕ್ಕೂ ಅಧಿಕ ನಾಟಿ ಕಾರ್ಯ ನಡೆಯುತ್ತಿತ್ತು. ಆದರೆ ಮಳೆಯ ಕೊರತೆಯಿಂದ ನೂರಾರು ಎಕರೆ ಭತ್ತದ ಗದ್ದೆಗಳು ನಾಟಿ ಇಲ್ಲದೆ ಸೊರಗಿದ್ದವು. ಇದೀಗ ಉತ್ತಮ ಮಳೆ ಆಗುತ್ತಿದ್ದು ಭತ್ತ ಬೆಳೆಯುವ ಕೃಷಿಕರಲ್ಲಿ ಹರ್ಷ ಮೂಡಿದೆ. ಮಳೆ ಕಡಿಮೆಯಾದ ನಂತರ ನಾಟಿ ಕಾರ್ಯ ಆರಂಭಿಸಲು ತಯಾರಿ ನಡೆಸಿದ್ದಾರೆ.
ಮಳೆ ಇದೇ ರೀತಿ ಮುಂದುವರಿದರೆ, ನದಿ ಪಾತ್ರದ ಪ್ರದೇಶಗಳ ಜನರನ್ನು ಸ್ಥಳಾಂತರ ಮಾಡಬೇಕಾಗುತ್ತದೆ. ಈ ಬಗ್ಗೆ ಜಿಲ್ಲಾಡಳಿತ ಎಲ್ಲಾ ತಯಾರಿಗಳನ್ನು ಮಾಡಿಕೊಂಡಿರುವುದಾಗಿ ಜಿಲ್ಲಾಧಿಕಾರಿ ಕೂರ್ಮರಾವ್ ತಿಳಿಸಿದ್ದಾರೆ.