ಗದಗ: ಕಪ್ಪತ್ತಗುಡ್ಡದಲ್ಲಿ ಚಿರತೆ ವಿಡಿಯೋ ವೈರಲ್‌

By Kannadaprabha NewsFirst Published Jun 30, 2022, 9:10 PM IST
Highlights

*   ಒಂದು ತಿಂಗಳ ಹಿಂದೆ ಫ್ಯಾನ್‌ ನಿರ್ವಹಣೆ ಮಾಡುವ ಸಿಬ್ಬಂದಿಗೆ ಕಾಣಿಸಿದ ಚಿರತೆ
*   ಪ್ರವಾಸಿಗರು ಹೋಗುವ ಮಾರ್ಗದಲ್ಲೇ ಕಾಣಿಸಿಕೊಂಡ ಚಿರತೆ 
*  ಕಪ್ಪತ್ತಗುಡ್ಡ ಭಾಗದಲ್ಲಿ ಅನೇಕ ವರ್ಷಗಳಿಂದ 3-4 ಚಿರತೆಗಳ ವಾಸ

ಡಂಬಳ(ಜೂ.30): ಹೋಬಳಿ ವ್ಯಾಪ್ತಿಯಲ್ಲಿ ಬರುವ ಕಪ್ಪತ್ತಗುಡ್ಡದ ವ್ಯಾಪ್ತಿಯ ನವಣಿ ರಾಶಿ ಮತ್ತು ಗಾಳಿಗುಂಡಿ ಬಸವಣ್ಣ ಅರಣ್ಯ ಪ್ರದೇಶದಲ್ಲಿ ಚಿರತೆಯೊಂದು ಕಾಣಿಸಿಕೊಂಡಿರುವ ವಿಡಿಯೋ ಬುಧವಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಆದರೆ ಒಂದು ತಿಂಗಳ ಹಿಂದೆ ಫ್ಯಾನ್‌ ನಿರ್ವಹಣೆಗೆಂದು ಹೋದವರು ಮಾಡಿದ ವಿಡಿಯೋ ಇದು ಎಂದು ತಿಳಿದುಬಂದಿದೆ.

ಕಪ್ಪತ್ತಗುಡದಲ್ಲಿ ಚಿರತೆಗಳು ವಾಸವಾಗಿವೆ. ಆದರೆ ಪ್ರವಾಸಿಗರು ಹೋಗುವ ಮಾರ್ಗದಲ್ಲೇ ಚಿರತೆ ಕಾಣಿಸಿಕೊಂಡಿದ್ದು, ಎಚ್ಚರಿಕೆ ವಹಿಸುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ರವಾನಿಸಲಾಗಿದೆ. ಮುಂಜಾನೆ ಮತ್ತು ಮುಸ್ಸಂಜೆ ಸಮಯದಲ್ಲಿ ಕಪ್ಪತ್ತಗುಡ್ಡಕ್ಕೆ ಪ್ರವಾಸಿಗರು ಆಗಮಿಸುತ್ತಾರೆ. ಆದರೆ ಕಪ್ಪತ್ತಗುಡ್ಡ ನಿರ್ಜನ ಪ್ರದೇಶದಲ್ಲಿ ಪ್ರವಾಸಿಗರ ಸಂಚಾರಕ್ಕೆ ಕಡಿವಾಣ ಹಾಕಬೇಕು ಎಂದು ಡೋಣಿ ಮತ್ತು ಡೋಣಿ ತಾಂಡಾ ಗ್ರಾಮಸ್ಥರು ಆಗ್ರಹಿಸುತ್ತಾರೆ. ಅಲ್ಲದೆ ಕಪ್ಪತ್ತಗುಡ್ಡದಲ್ಲಿ ಕಂಡುಬರುವ ಪ್ರಾಣಿಗಳ ವಿಡಿಯೋ ಚಿತ್ರಣವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕದಂತೆ ಫ್ಯಾನ್‌ ನಿರ್ವಹಣೆ ಮಾಡುವ ಸಿಬ್ಬಂದಿಗೆ ಸೂಚಿಸಬೇಕು ಎಂದು ಪರಿಸರಪ್ರೇಮಿಗಳು ಒತ್ತಾಯಿಸಿದ್ದಾರೆ.

Latest Videos

'ಉತ್ತರ ಕರ್ನಾಟಕದ ಸಹ್ಯಾದ್ರಿ ಕಪ್ಪ​ತ್ತ​ಗು​ಡ್ಡ​ದಲ್ಲಿ ಗಣಿ​ಗಾ​ರಿ​ಕೆಗೆ ಅವ​ಕಾಶ ನೀಡು​ವು​ದಿಲ್ಲ'

ಚಿರತೆ ವಿಷಯವಾಗಿ ಕಪ್ಪತ್ತಗುಡ್ಡ ಹಿಲ್ಸ್‌ ವಲಯ ಅರಣ್ಯ ಅಧಿಕಾರಿ ವೀರೇಂದ್ರ ಬರಿಬಸನ್ನವರ ಅವರನ್ನು ಮಾತನಾಡಿಸಿದಾಗ, ಕಪ್ಪತ್ತಗುಡ್ಡ ಭಾಗದಲ್ಲಿ ಅನೇಕ ವರ್ಷಗಳಿಂದ 3-4 ಚಿರತೆಗಳು ವಾಸಿಸುತ್ತಿವೆ. ಇಲ್ಲಿಯವರೆಗೆ ಸಿಸಿ ಕ್ಯಾಮೆರಾದಲ್ಲಿ 2 ಚಿರತೆಗಳು ಕಾಣಿಸಿಕೊಂಡಿವೆ. ಅದನ್ನು ಹೊರತುಪಡಿಸಿ ಈಗ ಕಾಣಿಸಿರುವುದು ಹೊಸತು. ಅವು ಯಾರಿಗೂ ತೊಂದರೆ ಉಂಟುಮಾಡುವುದಿಲ್ಲ. ಭಯ ಪಡುವ ಅಗತ್ಯವಿಲ್ಲ ಎಂದರು.
 

click me!