* ಸಾಲ ಸೂಲ ಮಾಡಿ ಬಿತ್ತನೆ ಮಾಡಿರೋ ಬೆಳೆಗೆ ಚುಕ್ಕೆ ರೋಗ, ಬೆಂಕಿ ರೋಗ ಅಟ್ಯಾಕ್
* ಮಳೆಗಾಗಿ ಪ್ರತಿಕ್ಷಣ ಪರಿತಪಿಸುತ್ತಿರುವ ಅನ್ನದಾತರು
* ಮಳೆಯಿಲ್ಲದೆ ಸೊರಗುತ್ತಿರುವ ಬೆಳೆ
ವರದಿ: ಕಿರಣ್ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ
ಚಿತ್ರದುರ್ಗ(ಜು.05): ರಾಜ್ಯ ಕೆಲ ಭಾಗಗಳಲ್ಲಿ ಒಂದೆಡೆ ವರುಣ ದೇವ ತನ್ನ ರೌದ್ರ ನರ್ತನ ಮಾಡ್ತಿದ್ದಾನೆ. ಆದ್ರೆ ಮಧ್ಯ ಕರ್ನಾಟಕದ ರೈತರು ಮಾತ್ರ ಮಳೆರಾಯನ ಆಗಮನವಿಲ್ಲದೇ ಮೋಡದ ಕಡೆ ಮುಖ ಮಾಡಿ ಪರಿತಪಿಸುತ್ತಿದ್ದಾನೆ. ಮುಂಗಾರು ಮಳೆ ಕೈ ಕೊಟ್ಟಿರೋ ಹಿನ್ನೆಲೆ, ಜಮೀನುಗಳಲ್ಲಿ ಬೆಳೆ ಬೆಳೆಯಲಾಗದೆ ರೈತ ಕಂಗಾಲಾಗಿ ಹೋಗಿದ್ದಾನೆ.
undefined
ರಾಜ್ಯದ ನಾನಾ ಭಾಗಗಳಲ್ಲಿ ವರಣುನ ಆರ್ಭಟ ಮಿತಿ ಮೀರಿದೆ. ಆದ್ರೆ ಮಧ್ಯ ಕರ್ನಾಟಕದ ಚಿತ್ರದುರ್ಗ ಜಿಲ್ಲೆಯಲ್ಲಿ ಮಾತ್ರ ಮುಂಗಾರು ಬೆಳೆ ಬೆಳೆಯಲಿಕ್ಕೂ ಆಗದೇ ಮಳೆರಾಯ ಕೈ ಕೊಟ್ಟಿದ್ದಾನೆ. ಇಷ್ಟೊತ್ತಿಗಾಗಲೇ ಎಲ್ಲಾ ಜಮೀನುಗಳಲ್ಲಿ ಬೆಳೆ ಬೆಳೆಯುತ್ತಿದ್ದ ರೈತರು, ಸದ್ಯದ ಪರಿಸ್ಥಿತಿಯಲ್ಲಿ ಸೂರ್ಯಕಾಂತಿ, ಮೆಕ್ಕೆಜೋಳ ಹಾಕಿ ಮಳೆರಾಯನಿಗಾಗಿ ಜಪ ಮಾಡ್ತಿದ್ದಾರೆ. ಒಂದ್ಕಡೆ ಮಳೆರಾಯ ಕೈ ಕೊಟ್ಟಿದ್ರೆ, ಮತ್ತೊಂದೆಡೆ ಬೆಳೆಗಳಿಗೆ ಚುಕ್ಕೆ ರೋಗ, ಬೆಂಕಿ ರೋಗ ಶುರುವಾಗಿರೋದು ರೈತರಲ್ಲಿ ಆತಂಕ ಮೂಡಿಸಿದೆ. ಸಾಲ ಸೂಲ ಮಾಡಿ ಬೀಜ, ಗೊಬ್ಬರ ತಂದು ರೈತರು ಬಿತ್ತಿದ್ದಾರೆ. ಆದ್ರೆ ಮಳೆಯಿಲ್ಲದೆ ಬೆಳೆ ಮಾತ್ರ ಸೊರಗುತ್ತಿದೆ. ನಾವು ಹಾಕಿರುವ ಬಂಡವಾಳ ಆದ್ರು ಬಂದ್ರೆ ಸಾಕಪ್ಪ ಅಂತ ಮಳೆ ಕಾಯ್ತಿದ್ರೆ, ಮಳೆಯೇ ಬರ್ತಿಲ್ಲ. ಇನ್ನೊಂದು ಹದಿನೈದು ದಿನಗಳ ಒಳಗೆ ಮಳೆ ಬಂದ್ರೆ ಪರವಾಗಿಲ್ಲ, ಇಲ್ಲ ಅಂದ್ರೆ ಕಳೆದ ಎರಡ್ಮೂರು ವರ್ಷ ರೈತರು ಅನುಭವಿಸಿದ ಗತಿಯೇ ಈ ಬಾರಿಯೂ ಆಗಲಿದೆ ಅಂತ ಲಿಂಗಾವರಹಟ್ಟಿ ಗ್ರಾಮದ ರೈತ ಲಕ್ಷ್ಮಿಕಾಂತ್ ರೈತ ಅಳಲು ತೋಡಿಕೊಂಡಿದ್ದಾನೆ.
CHITRADURGA: ಕಾರ್ಮಿಕರ ಆರೋಗ್ಯ ಕಾಳಜಿಗೆ ಸಂಚಾರಿ ಕ್ಲಿನಿಕ್: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ
ಇನ್ನೂ ಈ ಮೊದಲು ಮುಂಗಾರು ಶುರುವಾಗುವ ಸಮಯದಲ್ಲಿ ಸ್ವಲ್ಪ ಬಳೆ ಬಂತು ಅಂತ ನಾವೆಲ್ಲರೂ ಬಂದಷ್ಟು ಬರ್ಲಿ ಅಂತ ಬಿತ್ತನೆ ಮಾಡಿದ್ದೀವಿ. ಇಷ್ಟೊತ್ತಿಗಾಗಲೇ ಸೂರ್ಯಕಾಂತಿ ಮಗ್ಗು, ಹೂವಾಗಬೇಕಾಗಿತ್ತು. ಆದ್ರೆ ಈ ಬಾರಿ ಎರಡು ಅಡಿ ಕೂಡ ಮೇಲೆ ಬೆಳೆದಿಲ್ಲ ಇದಕ್ಕೆಲ್ಲಾ ಕಾರಣ ಮಳೆ ಕೊರತೆ. ಕಳೆದ ಬಾರಿ ಸೂರ್ಯಕಾಂತಿ ಒಳ್ಳೆ ಬೆಳೆ ಕೊಟ್ಟಿತ್ತು ಅಂತ ಈ ಬಾರಿಯೂ ಹಾಕಿದ್ದೀವಿ. ಆದ್ರೆ ಮಳೆಯ ಅಭಾವದಿಂದ ಆ ಬೆಳೆಯೂ ಲಾಸ್ ಆಗ್ತಿದೆ. ಇಷ್ಟೆಲ್ಲಾ ಅನ್ನದಾತರಿಗೆ ತೊಂದರೆ ಆಗ್ತಿದ್ರು ಅಧಿಕಾರಿಗಳು ಮಾತ್ರ ಅವರ ಕೂಗು ಕೇಳ್ತಿಲ್ಲ. ಇತ್ತ ಮಳೆಯೂ ಬಾರದೇ ಇರುವುದು ತುಂಬಾ ನೋವಿನ ಸಂಗತಿ. ಅಲ್ವ ಸ್ವಲ್ಪ ಆದ್ರು ಮಳೆ ಬಂದಲ್ಲಿ ಮಾತ್ರ ನಾವು ಹಾಕಿರುವ ಬೆಳೆ ಉಳಿಯುತ್ತೆ. ಅಂದ್ರೆ ಸಾಲ ಮಾಡಿ ತಂದು ಹಾಕಿರುವ ಬೆಳೆಯೂ ರೈತರಿಗೆ ಕಂಟಕವಾಗುತ್ತೆ.
ಒಟ್ಟಾರೆಯಾಗಿ ಮಳೆಯ ಆಗಮನವಿಲ್ಲದೇ ಮುಂಗಾರುವಿನಲ್ಲಿ ಬಿತ್ತನೆ ಮಾಡಬೇಕಿದ್ದ ರೈತರು ಇಂದು ಕಂಗಾಲಾಗಿ ಹೋಗಿದ್ದಾರೆ. ಇತ್ತ ಮಳೆಯೂ ಇಲ್ಲ, ಹಾಕಿರುವ ಬಂಡವಾಳವೂ ಬರೋದಿಲ್ಲ ಅಂತ ಅನ್ನದಾತರು ಪ್ರತಿಕ್ಷಣ ಮಳೆಗಾಗಿ ಪರಿತಪಿಸುತ್ತಿದ್ದಾರೆ. ಇನ್ನಾದ್ರೂ ಕೋಟೆನಾಡಿನ ರೈತರಿಗೆ ವರುಣ ದೇವ ಕೃಪೆ ತೋರಿಸುವ ಮೂಲಕ ಆದಷ್ಟು ಮಳೆ ಬರಲಿ ಎಂಬುದು ಎಲ್ಲಾ ಅನ್ನದಾತರ ಬಯಕೆಯಾಗಿದೆ.