* ಉಡುಪಿ ಜಿಲ್ಲೆಯಲ್ಲಿ ಇಂದು ಮತ್ತು ನಾಳೆ ಆರೆಂಜ್ ಅಲರ್ಟ್
* ಕುಂದಾಪುರ ತಾಲೂಕಿನ ಸಿದ್ದಾಪುರದಲ್ಲಿ ಅತಿ ಹೆಚ್ಚು 248 ಮಿಮೀ ಮಳೆ
* ಕೃಷಿ ಕಾಯಕಕ್ಕೆ ತೆರಳಿದ್ದ ಮಹಿಳೆ ಸಾವು
ವರದಿ- ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್, ಉಡುಪಿ
ಉಡುಪಿ(ಜು.05): ಜಿಲ್ಲೆಯಲ್ಲಿ ಮಳೆ ನಿರಂತರವಾಗಿ ಮುಂದುವರೆದಿದೆ. ಇಂದು ಮತ್ತು ನಾಳೆ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ. ಜಿಲ್ಲೆಯ ಮೂಲೆ ಮೂಲೆಗಳಲ್ಲೂ ಅಪಾರ ಮಳೆಯಾಗಿದ್ದು, ರಾಜ್ಯದಲ್ಲಿ ಅತಿ ಹೆಚ್ಚು ಮಳೆ ಕುಂದಾಪುರ ತಾಲೂಕಿನ ಸಿದ್ದಾಪುರದಲ್ಲಿ ದಾಖಲಾಗಿದೆ. ಕರಾವಳಿ ಜಿಲ್ಲೆ ಉಡುಪಿಯಲ್ಲಿ ಮಳೆಯ ತೀವ್ರತೆ ಜೋರಾಗಿದೆ. ಅರೆಕ್ಷಣವು ಬಿಡದೆ ಮಳೆ ಸುರಿಯುತ್ತಿದೆ. ತಗ್ಗು ಪ್ರದೇಶಗಳಲ್ಲಿ ನೆರೆ ಭೀತಿ ಉಂಟಾಗಿದೆ. ಉಡುಪಿ ನಗರದ ಬನ್ನಂಜೆ
ಪರಿಸರದಲ್ಲಿ ಹಲವಾರು ಮನೆಗಳಿಗೆ ನೀರು ನುಗ್ಗಿದೆ. ಬ್ರಹ್ಮಾವರ ತಾಲೂಕಿನ ಮಟಪಾಡಿ, ನೀಲಾವರ ಪರಿಸರದಲ್ಲಿ ಗದ್ದೆಗಳು ಜಲಾವೃತಗೊಂಡಿವೆ. ಉಪ್ಫೂರು ಪರಿಸರದಲ್ಲೂ ನೀರಿನ ಮಟ್ಟ ಹೆಚ್ಚಿದ್ದು ಸೀತಾ ನದಿ ತುಂಬಿ ಹರಿಯುತ್ತಿದೆ. ಉದ್ಯಾವರದ ಮಠದ ಕುದ್ರು ಪರಿಸರದ ಪಾಪನಾಶಿನಿ ನದಿಯಲ್ಲಿ ನೀರಿನ ಹರಿವು ಜೋರಾಗಿದೆ. ಜಿಲ್ಲೆಯ ಮುಳೂರು, ಕೋಡಿಬೆಂಗ್ರೆ, ಪಡುಕೆರೆ ಭಾಗದಲ್ಲಿ ಕಡಲು ಕೊರತ ಹೆಚ್ಚಾಗಿದ್ದು, ಮರವಂತೆಯಲ್ಲಿ ಕಡಲಿನಬ್ಬರಕ್ಕೆ ಹಲವು ತೆಂಗಿನ ಮರಗಳು ನೀರು ಪಾಲಾಗಿದೆ. ನಿರ್ಲಕ್ಷತೋರಿರುವ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ಸ್ಥಳೀಯರು ಸಿಟ್ಟಾಗಿದ್ದಾರೆ.
ಉಡುಪಿ: ಬಣ್ಣದ ಬಲೆಗಳೇ ಮೀನುಗಾರರಿಗೆ ಮಳೆಗಾಲದ ಬದುಕು..!
ಕೃಷಿ ಕಾಯಕಕ್ಕೆ ತೆರಳಿದ್ದ ಮಹಿಳೆ ಸಾವು- ಕೃಷಿ ಗದ್ದೆಯಲ್ಲಿ ತುಂಬಿದ್ದ ನೀರನ್ನು ಕಡಿಯಲೆಂದು ಗದ್ದೆಗೆ ತೆರಳಿದ್ದ ಸಂದರ್ಭ ಆಕಸ್ಮಿಕವಾಗಿ ನೀರು ತುಂಬಿಕೊಂಡ ಗದ್ದೆಗೆ ಬಿದ್ದು ಕೃಷಿಕ ಮಹಿಳೆಯೋರ್ವರು ಸಾವನ್ನಪ್ಪಿದ ಖೇದಕರ ಘಟನೆ ಕುಂದಾಪುರ ತಾಲೂಕಿನ ಹಲ್ತೂರು ಎಂಬಲ್ಲಿ ನಡೆದಿದೆ. ಹಲ್ತೂರು ಗ್ರಾಮದ ಕೆಳಬೆಟ್ಟು ನಿವಾಸಿ ಶೀನ ಪೂಜಾರಿ ಎಂಬವರ ಪತ್ನಿ ಲಕ್ಷ್ಮೀ ಪೂಜಾರ್ತಿ (66) ಮೃತಪಟ್ಟ ಕೃಷಿಕ ಮಹಿಳೆ. ಗದ್ದೆಯಲ್ಲಿ ತುಂಬಿದ್ದ ಮಳೆ ನೀರನ್ನು ಸರಾಗವಾಗಿ ಹರಿಯಲು ಅನುವು ಮಾಡಿಕೊಡಲು, ಗದ್ದೆಯ ಅಂಚನ್ನು ಕಡಿದು ಕೊಡಲೆಂದು ಹಾರೆಯನ್ನು ತೆಗೆದುಕೊಂಡು ದಂಪತಿಗಳಿಬ್ಬರೂ ಹಲ್ತೂರು ಬೈಲಿನ ತಮ್ಮ ಕೃಷಿ ಗದ್ದೆಗಳಿಗೆ ತೆರಳಿದ್ದರು. ಪತಿ ಶೀನ ಪೂಜಾರಿ ಅವರು ಹಾರೆಯನ್ನು ಹಿಡಿದುಕೊಂಡು ಮುಂದಿನ ಗದ್ದೆಗೆ ಹೋಗಿದ್ದ ವೇಳೆ ಲಕ್ಷ್ಮೀ ಪೂಜಾರ್ತಿ ಅವರು ಹಿಂದಿನ ಗದ್ದೆಯಲ್ಲಿ ನೀರು ಕಡಿಯಲೆಂದು ಹಾರೆಯಿಂದ ಕೆಲಸ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಆಯ ತಪ್ಪಿ ಗದ್ದೆಗೆ ಕುಸಿದು ಬಿದ್ದಿದ್ದಾರೆ.
ಜಿಲ್ಲಾದ್ಯಂತ ರಜೆ ಗೊಂದಲ
ಸೋಮವಾರ ಸಂಜೆ ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿಗೆ ಮಾತ್ರ ರಜೆ ಘೋಷಿಸಲಾಗಿತ್ತು, ಆದರೆ ನಿರಂತರ ಮಳೆ ಮುಂದುವರಿದ ಕಾರಣ ಮಂಗಳವಾರ ಬೆಳಿಗ್ಗೆ 8:00 ಸುಮಾರಿಗೆ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ಜಿಲ್ಲಾಧಿಕಾರಿ ಕೂರ್ಮಾ ರಾವ್ ರಜೆ ಘೋಷಿಸಿದರು. ಆದರೆ ತಡವಾಗಿ ರಜೆ ಘೋಷಣೆಯಾಗಿ ವಿದ್ಯಾರ್ಥಿಗಳಲ್ಲಿ, ಪೋಷಕರಲ್ಲಿ ಗೊಂದಲ ಉಂಟಾಯಿತು. ರಜೆ ಘೋಷಣೆಯಾದಾಗ ಬಹುತೇಕ ಖಾಸಗಿ ಶಾಲೆ ವಿದ್ಯಾರ್ಥಿಗಳು ಶಾಲೆಗಳಿಗೆ ತೆರಳಿದ್ದರು, ಕೆಲವು ಬಸ್ಸುಗಳು ಅದಾಗಲೇ ವಿದ್ಯಾರ್ಥಿಗಳನ್ನು ಕರಕೊಂಡು ಹೊರಟಾಗಿತ್ತು. ಮಳೆ ಬರುತ್ತಿದ್ದ ಕಾರಣ ಮಕ್ಕಳನ್ನು ಶಾಲೆಯಿಂದ ವಾಪಾಸು ಕಳುಹಿಸಲು ಸಾಧ್ಯವಾಗದೆ, ಅನೇಕ ಕಡೆ ತರಗತಿ ನಡೆಸಲಾಗಿದೆ. ಹವಾಮಾನ ಇಲಾಖೆಯ ಮುನ್ಸೂಚನೆಗಳನ್ನು ಅರಿತು ಮುಂಚಿತವಾಗಿ ರಜೆ ನೀಡಬೇಕೆಂದು ಪೋಷಕರು ಶಿಕ್ಷಕರು ಒತ್ತಾಯಿಸಿದ್ದಾರೆ.
ಮಳೆಯಿಂದ ಜಾರುವ ರಸ್ತೆಗಳು, ಸರಣಿ ಅಪಘಾತ
ನಿರಂತರ ಸುರಿಯುತ್ತಿರ ಮಳೆಯಿಂದಾಗಿ ರಸ್ತೆಗಳಲ್ಲಿ ಸಂಚಾರ ಕಷ್ಟಕರವಾಗಿತ್ತು. ಜಿಲ್ಲೆಯ ವಿವಿಧಡೆ ಅಪಘಾತಗಳಾಗಿದ್ದು ಓರ್ವ ಮೃತರಾಗಿದ್ದು, ಗಾಯಾಳುಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ.
Udupi; ಅಮೇರಿಕಾದ ಆಸ್ಟಿನ್ ನಗರದಲ್ಲಿ ಪುತ್ತಿಗೆ ಶ್ರೀಗಳಿಂದ ಮುದ್ರಾಧಾರಣೆ
ಬೈಂದೂರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಮತ್ತು ಬಸ್ ಡಿಕ್ಕಿಯಾಗಿ ಕಾರು ಚಾಲಕ ಗಂಭೀರ ಗಾಯಗೊಂಡಿದ್ದಾನೆ. ಈ ಘಟನೆಯಲ್ಲಿ ಮೂವರಿಗೆ ಗಾಯಗಳಾಗಿವೆ.ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ನಾವುಂದದಲ್ಲಿ ನೆಡೆದ ಘಟನೆನಡೆದಿದೆ. ಕಾಪು ತಾಲೂಕಿನ ಪಡುಬಿದ್ರೆ ಪೇಟೆಯಲ್ಲಿ ದ್ವಿಚಕ್ರ ವಾಹನದ ಮೇಲೆ ಲಾರಿ ಉರುಳಿ ಬಿದ್ದಿದೆ. ದ್ವಿಚಕ್ರ ವಾಹನ ಸವಾರ ಸಂಶುದ್ದೀನ್ ಎಂಬವರು ಸ್ಥಳದಲ್ಲಿ ಮೃತರಾಗಿದ್ದಾರೆ.
ನಗರದ ಅಂಬಲಪಾಡಿ ಜಂಕ್ಷನ್‌ನಲ್ಲಿ ಶಾಲಾ ವಿದ್ಯಾರ್ಥಿಗೆ ಟೆಂಪೋ ಡಿಕ್ಕಿಯಾಗಿ ವಿದ್ಯಾರ್ಥಿ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಸೈಕಲ್ ಮೂಲಕ ಶಾಲೆಗೆ ಹೊರಟಿದ್ದ ಆದಿತ್ಯ ಎಂಬ ಬಾಲಕನಿಗೆ ಅಂಬಲಪಾಡಿ ಜಂಕ್ಷನ್‌ನಲ್ಲಿ ಅತೀ ವೇಗದಿಂದ ಬಂದ ಬೊಲೆರೋ ಟೆಂಪೊ ಡಿಕ್ಕಿ ಹೊಡೆದಿದೆ. ಬಾಲಕ ತೀವ್ರವಾಗಿ ಗಾಯಗೊಂಡ ಹಿನ್ನಲೆಯಲ್ಲಿ ತಕ್ಷಣ ಸಮೀಪದ ಹೈಟೆಕ್ ಆಸ್ಪತ್ರೆಗೆ ಕೊಂಡೊಯ್ಯಲಾದರೂ, ಅಲ್ಲಿನ ವೈದ್ಯರ ಶಿಫಾರಸ್ಸಿನಂತೆ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಯಿತು. ಉಡುಪಿ ಜಿಲ್ಲೆಯಲ್ಲಿ ನಾಳೆಯೂ ಆರೆಂಜ್ ಅಲರ್ಟ್ ಇರುತ್ತೆ. ಜಿಲ್ಲೆಯ ಕುಂದಾಪುರ ತಾಲೂಕಿನ ಸಿದ್ದಾಪುರದಲ್ಲಿ ಅತಿ ಹೆಚ್ಚು 248 ಮಿಮೀ ಮಳೆಯಾಗಿದೆ.