ಯೂರಿಯಾ ಗೊಬ್ಬರಕ್ಕಾಗಿ ಅನ್ನದಾತರ ಪರದಾಟ| ಲಕ್ಷ್ಮೇಶ್ವರ ತಾಲೂಕಿನಲ್ಲಿ ಕಳೆದ 15 ದಿನಗಳಿಂದ ಯೂರಿಯಾ ಗೊಬ್ಬರ ಕೊರತೆ| ಕೃಷಿ ಇಲಾಖೆಯ ಅಧಿಕಾರಿಗಳು ಇತ್ತ ಗಮನ ನೀಡುತ್ತಿಲ್ಲ ಎಂಬುದು ರೈತರ ಆರೋಪ|
ಲಕ್ಷ್ಮೇಶ್ವರ(ಆ.08): ಯೂರಿಯಾ ಗೊಬ್ಬರ ಕೊಳ್ಳಲು ಸತತ ಸುರಿಯುತ್ತಿರುವ ಮಳೆಯನ್ನೂ ಲೆಕ್ಕಿಸದೆ ಸರದಿ ಸಾಲಿನಲ್ಲಿ ನಿಂತು ಗೊಬ್ಬರಕ್ಕಾಗಿ ಪರದಾಡುತ್ತಿರುವ ದೃಶ್ಯ ಶುಕ್ರವಾರ ಪಟ್ಟಣದ ರೇಣುಕಾದೇವಿ ಅಗ್ರೋ ಸೆಂಟರ್ ಮುಂದೆ ಕಂಡುಬಂದಿತು.
ತಾಲೂಕಿನಾದ್ಯಂತ ಕಳೆದ 4-5 ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಪ್ರಮುಖವಾಗಿ ಶೇಂಗಾ, ಗೋವಿನ ಜೋಳ, ಬಿಟಿ ಹತ್ತಿ, ಈರುಳ್ಳಿ ಬೆಳೆಗಳೆಲ್ಲ ಹಳದಿ ಬಣ್ಣಕ್ಕೆ ತಿರುಗುತ್ತಿದ್ದು ಅವುಗಳನ್ನು ರಕ್ಷಿಸಿಕೊಳ್ಳಲು ಯೂರಿಯಾ ಗೊಬ್ಬರ ಬೇಕು. ಇಲ್ಲವಾದಲ್ಲಿ ನಮ್ಮ ವರ್ಷದ ಅನ್ನ ಮಣ್ಣು ಪಾಲಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಅದಕ್ಕಾಗಿ ಯೂರಿಯಾ ಗೊಬ್ಬರ ಬೇಕು ಎನ್ನುವುದು ರೈತರ ವಾದವಾಗಿದೆ.
ಲಕ್ಷ್ಮೇಶ್ವರ ತಾಲೂಕಿನಲ್ಲಿ ಕಳೆದ 15 ದಿನಗಳಿಂದ ಯೂರಿಯಾ ಗೊಬ್ಬರ ಕೊರತೆ ಕಾಡುತ್ತಿದ್ದರೂ ಕೃಷಿ ಇಲಾಖೆಯ ಅಧಿಕಾರಿಗಳು ಇತ್ತ ಗಮನ ನೀಡುತ್ತಿಲ್ಲ ಎಂಬುದು ರೈತರ ಆರೋಪ. ಆದ್ದರಿಂದ ಆದಷ್ಟು ಶೀಘ್ರ ಸಾಕಷ್ಟು ಪ್ರಮಾಣದಲ್ಲಿ ಯೂರಿಯಾ ಗೊಬ್ಬರ ಪೂರೈಸಬೇಕು ಎಂದು ಲಕ್ಷ್ಮೇಶ್ವರದ ರೈತ ಶಿವಾನಂದ ಲಿಂಗಶೆಟ್ಟಿ ಮತ್ತು ಅಫ್ಜಲ್ ರಿತ್ತಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಗದಗ: ಕೊರೋನಾ ಸೋಂಕಿತರಿಗೂ ಮಳೆ ಕಾಟ, ಬೆಡ್ ಸಿಗದೆ ಯೋಧನ ತಾಯಿಗೆ ಸಂಕಷ್ಟ
ಇದೆ ಸಂದರ್ಭದಲ್ಲಿ ಕೆಲ ರೈತರು ಪಟ್ಟಣದ ಬಜಾರ್ ರಸ್ತೆಯಲ್ಲಿ ಗೊಬ್ಬರ ವಿತರಣೆ ಮಾಡುವುದರಿಂದ ರೈತರಿಗೆ ಸಾಕಷ್ಟು ತೊಂದರೆಯಾಗುತ್ತಿದ್ದು, ಪಟ್ಟಣದ ಎಪಿಎಂಸಿ ಮಾರುಕಟ್ಟೆಯ ಪ್ರಾಂಗಣದಲ್ಲಿ ಗೊಬ್ಬರ ಮಾರಾಟಕ್ಕೆ ಅನುಕೂಲ ಮಾಡಿಕೊಟ್ಟಲ್ಲಿ ಯಾವುದೇ ಗದ್ದಲ ಮತ್ತು ಗೊಂದಲ ಉಂಟಾಗುವುದಿಲ್ಲವೆಂದು ತಹಸೀಲ್ದಾರರಿಗೆ ರೈತರಾದ ಪುಲಕೇಶಿ ಬಟ್ಟೂರ, ಹಾಲನಗೌಡ ಪಾಟೀಲ, ಅಶೋಕ ಹುಗಲೂರ, ಶ್ರೀನಿವಾಸ ಬಾದಾಮಿ, ರಾಮಣ್ಣ ಬಳಗಾನೂರ, ಹನಮಂತಪ್ಪ ತಳವಾರ, ನಿಂಗಪ್ಪ ಗೌರಿ, ಮಹ್ಮದ್ ಹನೀಫ್ ಮುಳಗುಂದ, ಗಿರೀಶ ಪಶುಪತಿಹಾಳ ಮನವಿ ಮಾಡಿದರು.
ಕಳೆದ ಎರಡು ದಿನಗಳಲ್ಲಿ ಸುಮಾರು 1000 ಚೀಲ ಯೂರಿಯಾ ಗೊಬ್ಬರ ಪೂರೈಕೆ ಮಾಡಲಾಗಿದ್ದು. ಇನ್ನೆರಡು ದಿನಗಳಲ್ಲಿ ಮತ್ತೆ ಯೂರಿಯಾ ಗೊಬ್ಬರ ಬರುತ್ತಿದ್ದು ರೈತರು ಗೊಬ್ಬರಕ್ಕಾಗಿ ಆತಂಕ ಪಡುವುದು ಬೇಡ ಎಂದು ಲಕ್ಷ್ಮೇಶ್ವರ ತಾಲೂಕು ಕೃಷಿ ನಿರ್ದೇಶಕ ಚಂದ್ರಶೇಖರ ನರಸಮ್ಮನವರ ಅವರು ತಿಳಿಸಿದ್ದಾರೆ.