ಕೊಪ್ಪಳ: ತುಂಗಭದ್ರಾ ಜಲಾಶಯಕ್ಕೆ ಒಂದೇ ದಿನ ಲಕ್ಷ ಕ್ಯುಸೆಕ್‌ ನೀರು..!

By Kannadaprabha NewsFirst Published Aug 8, 2020, 1:06 PM IST
Highlights

ಜಲಾಶಯ ಇನ್ನೂ ಒಂದು ವಾರದಲ್ಲಿ ಭರ್ತಿ?| 46 ಟಿಎಂಸಿ ನೀರು ಜಲಾಶಯದಲ್ಲಿ ಶೇಖರಣೆ| ಪ್ರಸಕ್ತ ಸಾಲಿನಲ್ಲಿ ಜಲಾಶಯಕ್ಕೆ ಹರಿದು ಬಂದಿರುವ ಅತ್ಯಧಿಕ ಪ್ರಮಾಣದ ನೀರು| ಅಚ್ಚುಕಟ್ಟು ಪ್ರದೇಶದಲ್ಲಿ ರೈತರಲ್ಲಿ ಸಂತಸ|

ಮುನಿರಾಬಾದ್‌(ಆ.08): ಮಲೆನಾಡಿನಲ್ಲಿ ವ್ಯಾಪಕ ಪ್ರಮಾಣದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಶುಕ್ರವಾರ ತುಂಗಭದ್ರಾ ಜಲಾಶಯಕ್ಕೆ ಒಂದೇ ದಿನದಲ್ಲಿ ಒಂದು ಲಕ್ಷ ಕ್ಯುಸೆಕ್‌ಗಿಂತ ಅಧಿಕ ಪ್ರಮಾಣದಲ್ಲಿ ನೀರು ಹರಿದು ಬಂದಿರುತ್ತದೆ. ಇದು ಪ್ರಸಕ್ತ ಸಾಲಿನಲ್ಲಿ ಜಲಾಶಯಕ್ಕೆ ಹರಿದು ಬಂದಿರುವ ಅತ್ಯಧಿಕ ಪ್ರಮಾಣದ ನೀರು.

ಪ್ರತಿದಿನ ಇದೇ ಪ್ರಮಾಣದಲ್ಲಿ ನೀರು ಹರಿದು ಬಂದರೆ ತುಂಗಭದ್ರಾ ಜಲಾಶಯವು ಒಂದು ವಾರದಲ್ಲಿ ಭರ್ತಿಯಾಗಲಿದೆ ಎಂದು ನೀರಾವರಿ ಇಲಾಖೆಯ ಮುಖ್ಯ ಅಭಿಯಂತರರಾದ ಮಂಜಪ್ಪ ‘ಕನ್ನಡಪ್ರಭ’ಕ್ಕೆ ದೂರವಾಣಿ ಮೂಲಕ ತಿಳಿಸಿದ್ದಾರೆ.

ಶುಕ್ರವಾರ ಬೆಳಗಿನ ಜಾವ ಜಲಾಶಯಕ್ಕೆ 81,218 ಕ್ಯುಸೆಕ್‌ ನೀರು ಹರಿದು ಬಂದಿದೆ ಹಾಗೂ ಜಲಾಶಯದ ನೀರಿನ ಮಟ್ಟ1,615 ಅಡಿಗಳಷ್ಟು ಇತ್ತು. ಜಲಾಶಯದಲ್ಲಿ 46 ಟಿಎಂಸಿ ನೀರು ಶೇಖರಣೆಯಾಗಿದೆ. ಬೆಳಗ್ಗೆ 11 ಗಂಟೆಯ ನಂತರ ಜಲಾಶಯಕ್ಕೆ ನೀರಿನ ಒಳಹರಿವಿನ ಪ್ರಮಾಣ ಮತ್ತಷ್ಟು ಅಧಿಕವಾಗಿ ಜಲಾಶಯಕ್ಕೆ ಒಂದು ಲಕ್ಷ ಕ್ಯುಸೆಕ್‌ಗಿಂತ ಅಧಿಕ ನೀರು ಬರಲಾರಂಭಿಸಿತು.

ಕೊಪ್ಪಳ: ಪ್ರವಾಸಿಗರನ್ನು ಕೈಬಿಸಿ ಕರೆಯುತ್ತಿರುವ ಬಿಸಿಲ ನಾಡಿನ ಕಪ್ಪಲೆಪ್ಪ ಜಲಪಾತ..!

ಜು. 25ಕ್ಕೆ ಜಲಾಶಯದಲ್ಲಿ ನಿಗದಿತ ಪ್ರಮಾಣದಲ್ಲಿ ನೀರಿನ ಶೇಖರಣೆ ಇಲ್ಲದಿದ್ದರೂ ತಾವು ರೈತರಿಗಾಗಿ ರಿಸ್ಕ್‌ ತೆಗೆದುಕೊಂಡು ಅಂದು ಕಾಲುವೆಗಳಲ್ಲಿ ನೀರು ಹರಿಸಿದ್ದು ಈಗ ಸಾರ್ಥಕವಾಗಿದೆ ಎಂದು ಮುಖ್ಯ ಅಭಿಯಂತರ ಮಂಜಪ್ಪ ತಿಳಿಸಿದ್ದಾರೆ.

ಅಚ್ಚುಕಟ್ಟು ಪ್ರದೇಶದಲ್ಲಿ ರೈತರಲ್ಲಿ ಸಂತಸ

ಇಂದಿನ ಬೆಳವಣಿಗೆಯಿಂದ ಅಚ್ಚುಕಟ್ಟು ಪ್ರದೇಶದ ರೈತರಲ್ಲಿ ಸಂತಸ ಮೂಡಿದೆ. ಕಳೆದ ತಿಂಗಳು 25ರಂದು ಜಲಾಶಯದಲ್ಲಿ 39 ಟಿಎಂಸಿ ನೀರು ಶೇಖರಣೆಯಾಗಿದ್ದಾಗ ಕಾಲುವೆಗಳಿಗೆ ನೀರು ಹರಿಸಲಾಯಿತು. ಆದರೆ ಜಲಾಶಯಕ್ಕೆ ಹರಿದು ಬರುತ್ತಿರುವ ಒಳಹರಿವಿನ ಪ್ರಮಾಣ ಕುಗ್ಗಿದ್ದರಿಂದ ಅಚ್ಚುಕಟ್ಟು ಪ್ರದೇಶದ ರೈತರಲ್ಲಿ ಆತಂಕ ಮನೆ ಮಾಡಿತ್ತು. ಈಗ ಅತಂಕ ಮಾಯವಾಗಿದೆ. ಕಳೆದ ಬಾರಿಯಂತೆ ಈ ಬಾರಿಯು ಅಚ್ಚುಕಟ್ಟು ಪ್ರದೇಶದ ರೈತರ ಗದ್ದೆಗಳಿಗೆ ಎರಡು ಬೆಳೆಗಳಿಗೆ ನೀರು ಲಭಿಸಲಿದೆ ಎಂದು ತುಂಗಭದ್ರಾ ರೈತ ಸಂಘದ ಅಧ್ಯಕ್ಷ ಪುರುಷೋತ್ತಮಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.
 

click me!