ಸುಮಾರು ಒಂದು ತಿಂಗಳಿನಿಂದಲೂ ಎಡೆಬಿಡದೇ ಸುರಿದ ಉತ್ತಮ ಮಳೆಯಿಂದಾಗಿ ಚಿತ್ರದುರ್ಗ ಜಿಲ್ಲೆಯಾದ್ಯಂತ ಕೃಷಿ ಚಟುವಟಿಕೆ ಗರಿಗೆದರಿದೆ. ರೈತರು ಜಮೀನನ್ನು ಹದಗೊಳಿಸಿಕೊಂಡು ಬಿತ್ತನೆ ಕಾರ್ಯ ಶುರು ಮಾಡಿದ್ದಾರೆ. ಆದ್ರೆ ಬರದ ಬವಣೆಗೆ ಸಿಲುಕಿ ಅನ್ನದಾತರಲ್ಲಿ ನಯಾಪೈಸ ಹಣವಿಲ್ಲ, ಬೀಜಗೊಬ್ಬರ ತರಲು ಶಕ್ತಿಯಿಲ್ಲ. ಹೀಗಾಗಿ ಉತ್ತಮ ಮಳೆಯಾದರು ಸಹ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಉಳುಮೆ ಮಾಡಲು ಅನ್ನದಾತರು ಹಿಂದೇಟು ಹಾಕುವ ಸ್ಥಿತಿ ನಿರ್ಮಾಣವಾಗಿದೆ.
ವರದಿ: ಕಿರಣ್.ಎಲ್.ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ
ಚಿತ್ರದುರ್ಗ(ಜೂ.07): ಬರದನಾಡು ಚಿತ್ರದುರ್ಗದಲ್ಲಿ ಕಳೆದೊಂದು ತಿಂಗಳಿನಿಂದಲೂ ಉತ್ತಮ ಮಳೆಯಾಗ್ತಿದೆ. ಆದ್ರೆ ನಿರಂತರ ಬರದಿಂದ ಕಂಗೆಟ್ಟಿರುವ ರೈತರ ಕೈನಲ್ಲಿ ಬಿತ್ತನೆ ಬೀಜಕ್ಕೂ ಕಾಸಿಲ್ಲದಂತಾಗಿದೆ. ಹೀಗಾಗಿ ಸರ್ಕಾರ ನೀಡುವ ಬರ ಪರಿಹಾರ ಹಾಗೂ ಬೆಳೆ ವಿಮೆ ನಿರೀಕ್ಷೆಯಲ್ಲಿ ಕೋಟೆನಾಡಿನ ಅನ್ನದಾತರಿದ್ದಾರೆ. ಈ ಕುರಿತು ಇಲ್ಲಿದೆ....
ಸುಮಾರು ಒಂದು ತಿಂಗಳಿನಿಂದಲೂ ಎಡೆಬಿಡದೇ ಸುರಿದ ಉತ್ತಮ ಮಳೆಯಿಂದಾಗಿ ಕೋಟೆನಾಡು ಚಿತ್ರದುರ್ಗ ಜಿಲ್ಲೆಯಾದ್ಯಂತ ಕೃಷಿ ಚಟುವಟಿಕೆ ಗರಿಗೆದರಿದೆ. ರೈತರು ಜಮೀನನ್ನು ಹದಗೊಳಿಸಿಕೊಂಡು ಬಿತ್ತನೆ ಕಾರ್ಯ ಶುರು ಮಾಡಿದ್ದಾರೆ. ಆದ್ರೆ ಬರದ ಬವಣೆಗೆ ಸಿಲುಕಿ ಅನ್ನದಾತರಲ್ಲಿ ನಯಾಪೈಸ ಹಣವಿಲ್ಲ, ಬೀಜಗೊಬ್ಬರ ತರಲು ಶಕ್ತಿಯಿಲ್ಲ. ಹೀಗಾಗಿ ಉತ್ತಮ ಮಳೆಯಾದರು ಸಹ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಉಳುಮೆ ಮಾಡಲು ಅನ್ನದಾತರು ಹಿಂದೇಟು ಹಾಕುವ ಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ಚಿತ್ರದುರ್ಗ ಜಿಲ್ಲೆಯನ್ನು ಸರ್ಕಾರ ಬರಪೀಡಿತ ಪ್ರದೇಶ ಅಂತ ಘೋಷಿಸಿ ಆರೇಳು ತಿಂಗಳು ಕಳೆದರು ಸಹ ಸಮರ್ಪಕವಾಗಿ ರೈತರ ಕೈಗೆ ಬರಪರಿಹಾರದ ಹಣ ತಲುಪಿಲ್ಲ. ತಾಂತ್ರಿಕ ದೋಷ ಹಾಗು ವಿವಿದ ನೆಪವೊಡ್ಡಿ ಸರ್ಕಾರಿ ಯೋಜನೆಗಳು ಸಹ ಹಳ್ಳ ಹಿಡಿದಿದ್ದು, ಕೊಳವೆಬಾವಿ ಇದ್ದವರಿಗೆ ಹಣ ಬಿಡುಗಡೆಯಾಗಿಲ್ಲ. ಕೇವಲ ಮಳೆಯಾಶ್ರಿತ ಜಮೀನಿಗೆ ಮಾತ್ರ ಪರಿಹಾರ ನೀಡಿದ್ದು, ಎಕರೆಗೆ ಕೇವಲ ಎರಡು ಸಾವಿರ ಪರಿಹಾರ ನೀಡಿದ್ದಾರೆ. ಹಾಗೆಯೇ ಕೇವಲ ಬರ ಪರಿಹಾರವಲ್ದೇ ಬೆಳೆವಿಮೆ ಸಹ ಶೇಕಡ 40% ನಷ್ಟು ರೈತರಿಗೆ ಸರ್ಕಾರದ ಬೆಳೆವಿಮೆ ಸಿಕ್ಕಿಲ್ಲ. ಆದ್ರೆ ಜಮೀನು ಉಳುಮೆಗೆ ದುಬಾರಿ ವೆಚ್ಚ ತಗುಲುವ ಪರಿಣಾಮ ಕನಿಷ್ಟ 20 ಸಾವಿರ ಪರಿಹಾರ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ರೈತರು ಆಗ್ರಹಿಸಿದ್ದಾರೆ.
ಬೋವಿ ನಿಗಮದಲ್ಲಿ 100 ಕೋಟಿ ಅವ್ಯವಹಾರ: ಕೋಟ ಶ್ರೀನಿವಾಸ್ ಪೂಜಾರಿ ವಿರುದ್ಧ ಗೂಳಿಹಟ್ಟಿ ಶೇಖರ್ ಆರೋಪ
ಇನ್ನೂ ಜಿಲ್ಲೆಯಾದ್ಯಂತ ಕಳೆದ ಬಾರಿ ಮುಂಗಾರು ಕೈ ಕೊಟ್ಟ ಕಾರಣ ರೈತರು ಜಮೀನು ಉಳುಮೆ ಮಾಡಲು ಹಿಂದೇಟು ಹಾಕ್ತಿದ್ದರು. ಆದ್ರೆ ಈ ಬಾರಿ ಮುಂಗಾರು ಬೆತ್ತನೆಗೆ ಉತ್ತಮ ಮಳೆಯಾಗಿದ್ದು, ಮೊದಲ ಬೆಳೆಯಾಗಿ ಕೆಲವೆಡೆ ಈರುಳ್ಳಿ, ಟೊಮ್ಯಾಟೋ, ಸೊಪ್ಪು ತರಕಾರಿಗಳನ್ನು ಬೆಳೆಯಲು ರೈತರು ಜಮೀನು ಹದ ಮಾಡಿಕೊಂಡಿದ್ದಾರೆ. ಆದ್ದರಿಂದ ಸರ್ಕಾರ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಬಿತ್ತನೆ ಮಾಡುವ ಸಲುವಾಗಿ ರೈತರ ಬೆಳೆ ವಿಮೆ, ಬರ ಪರಿಹಾರದ ಹಣವನ್ನು ಶೀಘ್ರವಾಗಿ ಬಿಡುಗಡೆ ರೈತರು ಬೆಳೆ ಬೆಳೆಯಲು ಅನುಕೂಲ ಮಾಡಿಕೊಡಲಿ ಎಂದು ರೈತರು ಆಗ್ರಹಿಸಿದರು.
ಒಟ್ಟಾರೆ ಚಿತ್ರದುರ್ಗ ಜಿಲ್ಲೆಯಾದ್ಯಂತ ಕೃಷಿ ಚಟುವಟಿಕೆ ಗರಿಗೆದರಿದೆ. ಆದ್ರೆ ಬೀಜಗೊಬ್ಬರಕ್ಕೆ ಹಣವಿಲ್ಲದೇ ರೈತರು ತಲೆಮೇಲೆ ಕೈಹೊತ್ತು ಕೂರುವಂತಾಗಿದೆ. ಇನ್ನಾದ್ರು ಸರ್ಕಾರ ಬೆಳೆನಷ್ಟ ಪರಿಹಾರ ಹಾಗು ಬರಪರಿಹಾರವನ್ನು ರೈತರಿಗೆ ಬಿಡುಗಡೆ ಮಾಡುವ ಮೂಲಕ ಅನ್ನದಾತರಿಗೆ ನೆರವಾಗಬೇಕಿದೆ.