: ರೈತರ ಬೆಳೆಯ ರಕ್ಷಣೆಗೆ ಬೆಳೆ ವಿಮೆ ಮತ್ತು ಕೃಷಿ ಬೆಳೆ ವಹಿವಾಟಿಗೆ ರಾಗಿ ಖರೀದಿ ಕೇಂದ್ರ ಅವಶ್ಯಕತೆ ಇದೆ. ಕೊರಟಗೆರೆ ಕ್ಷೇತ್ರದ ರೈತರ ಮನವಿಗೆ ಮಾಜಿ ಸಿಎಂ ಕುಮಾರಸ್ವಾಮಿ ಉತ್ತರ ನೀಡಿದ್ದಾರೆ. ಕೊರಟಗೆರೆಯಲ್ಲಿ ರೈತಚೈತನ್ಯ ಮತ್ತು ರೈತ ಸಂಕ್ರಾಂತಿ ಸಂವಾದ ಕಾರ್ಯಕ್ರಮವು ಯಶಸ್ವಿಯಾಗಿದೆ ಎಂದು ಮಾಜಿ ಶಾಸಕ ಪಿ.ಆರ್.ಸುಧಾಕರಲಾಲ್ ತಿಳಿಸಿದರು.
ಕೊರಟಗೆರೆ (ಜ. 18): ರೈತರ ಬೆಳೆಯ ರಕ್ಷಣೆಗೆ ಬೆಳೆ ವಿಮೆ ಮತ್ತು ಕೃಷಿ ಬೆಳೆ ವಹಿವಾಟಿಗೆ ರಾಗಿ ಖರೀದಿ ಕೇಂದ್ರ ಅವಶ್ಯಕತೆ ಇದೆ. ಕೊರಟಗೆರೆ ಕ್ಷೇತ್ರದ ರೈತರ ಮನವಿಗೆ ಮಾಜಿ ಸಿಎಂ ಕುಮಾರಸ್ವಾಮಿ ಉತ್ತರ ನೀಡಿದ್ದಾರೆ. ಕೊರಟಗೆರೆಯಲ್ಲಿ ರೈತಚೈತನ್ಯ ಮತ್ತು ರೈತ ಸಂಕ್ರಾಂತಿ ಸಂವಾದ ಕಾರ್ಯಕ್ರಮವು ಯಶಸ್ವಿಯಾಗಿದೆ ಎಂದು ಮಾಜಿ ಶಾಸಕ ಪಿ.ಆರ್.ಸುಧಾಕರಲಾಲ್ ತಿಳಿಸಿದರು.
ಕೊರಟಗೆರೆ ಪಟ್ಟಣದ ಲಕ್ಷ್ಮೇನರಸಿಂಹ ಕಲ್ಯಾಣ ಮಂಟಪದಲ್ಲಿ ಜಾತ್ಯತೀತ ಜನತಾದಳ ಪಕ್ಷದಿಂದ ಸೋಮವಾರ ಏರ್ಪಡಿಸಲಾಗಿದ್ದ ರೈತನಾಯಕ ಕುಮಾರಸ್ವಾಮಿ ಜೊತೆ ರೈತಚೈತನ್ಯ ಮತ್ತು ರೈತ ಸಂಕ್ರಾಂತಿಯ ವಿಡೀಯೊ ಸಂವಾದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಕರ್ನಾಟಕದ 224 ಕ್ಷೇತ್ರದ ರೈತರ ಸಂಕಷ್ಟವನ್ನು ತಿಳಿಯುವ ಉದ್ದೇಶದಿಂದ ರೈತ ಸಂಕ್ರಾಂತಿ ಸಂವಾದ ಕಾರ್ಯಕ್ರಮ ನಡೆದಿದೆ. ರೈತನ ಪರವಾಗಿ ಸದಾ ಚಿಂತಿಸುವ ರೈತನಾಯಕ ಕುಮಾರಸ್ವಾಮಿ ಮುಖ್ಯಮಂತ್ರಿ ಆದರೆ ರೈತರ ಆರ್ಥಿಕ ಅಭಿವೃದ್ಧಿಗೆ ಸಹಕಾರಿ ಆಗಲಿದೆ. ಕೊರಟಗೆರೆಯ ರೈತರು ಮುಸುಕಿನ ಜೋಳ ಮತ್ತು ರಾಗಿಬೆಳೆಯ ಬಗ್ಗೆ ಸಂವಾದ ಕಾರ್ಯಕ್ರಮದಲ್ಲಿ ಚರ್ಚಿಸಿದ್ದಾರೆ ಎಂದು ಹೇಳಿದರು.
ತೋವಿನಕೆರೆ ರೈತ ಭೀಮರಾಜು ಮಾತನಾಡಿ, ಕೊರಟಗೆರೆ ಕ್ಷೇತ್ರದಲ್ಲಿ ಮಳೆಯಿಂದ ರಾಗಿ ಬೆಳೆಯು ಕೊಚ್ಚಿಹೋಗಿದೆ. ರಾಗಿ ಬೆಳೆಗೆ ಸರ್ಕಾರ ಬೆಂಬಲ ಬೆಲೆ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ. ರಾಗಿ ಮಾರಾಟಕ್ಕೆ ಕೊರಟಗೆರೆ ರೈತರು ಅಲೆದಾಡುವ ಪರಿಸ್ಥಿತಿ ನಿರ್ಮಾಣ ಆಗಿದೆ. ಕೊರಟಗೆರೆ ಕ್ಷೇತ್ರಕ್ಕೆ ರಾಗಿ ಖರೀದಿ ಕೇಂದ್ರದ ಅವಶ್ಯಕತೆಯು ಇದೆ. ಸರ್ಕಾರ ರಾಗಿ ಬೆಳೆಗೆ ಬೆಂಬಲ ಬೆಲೆಯ ಜೊತೆ ಆರ್ಥಿಕವಾಗಿ ಅನುಕೂಲ ಕಲ್ಪಿಸಬೇಕಿದೆ ಎಂದು ಮನವಿ ಮಾಡಿದರು.
ಪುರವಾರ ರೈತ ಗೋವರ್ಧನ್ ಮಾತನಾಡಿ, ಕೃಷಿ ಬೆಳೆಗೆ ಸರ್ಕಾರ ಬೆಳೆವಿಮೆ ಕಟ್ಟಿಸಿಕೊಂಡಿದೆ. ಮಳೆರಾಯನ ಆರ್ಭಟಕ್ಕೆ ಕೃಷಿಬೆಳೆಯು ಸಂಪೂರ್ಣ ನಷ್ಟವಾಗಿದೆ. ಬೆಳೆವಿಮೆ ಯೋಜನೆಯಿಂದ ರೈತರಿಗೆ ಅನುಕೂಲ ಆಗುತ್ತಿಲ್ಲ. ಕೊರಟಗೆರೆಯ ರೈತರಿಗೆ ಲಕ್ಷಾಂತರ ರು.ಬೆಳೆನಷ್ಟವಾದರೂ ಬೆಳೆವಿಮೆಯ ಹಣವೇ ಬರುತ್ತಿಲ್ಲ. ರೈತರು ಯಾವ ಇಲಾಖೆಗೆ ಕೇಳಬೇಕು ಎಂಬುದೇ ಗೊತ್ತಿಲ್ಲ ಎಂದು ತಿಳಿಸಿದರು.
ಸಂವಾದ ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯದರ್ಶಿ ಮಹಾಲಿಂಗಪ್ಪ, ಜೆಡಿಎಸ್ ಕಾರ್ಯಧ್ಯಕ್ಷ ನರಸಿಂಹರಾಜು, ಕಾರ್ಯದರ್ಶಿ ಲಕ್ಷ್ಮಣ್, ವಕ್ತಾರ ಲಕ್ಷ್ಮೇಶ್, ಜಿಪಂ ಸದಸ್ಯ ಶಿವರಾಮಯ್ಯ, ಮುಖಂಡರಾದ ಸಿದ್ದಮಲ್ಲಪ್ಪ, ಕಾಮರಾಜು, ವೀರಕ್ಯಾತರಾಯ, ಲಕ್ಷ್ಮೇಕಾಂತ, ರವಿವರ್ಮ, ಸಾಕಣ್ಣ, ನಾಗರಾಜು, ರಮೇಶ್, ಸತೀಶ್, ಲಕ್ಷ್ಮೇನರಸಪ್ಪ ಸೇರಿದಂತೆ ಇತರರು ಇದ್ದರು.
ರೈತರ ಪ್ರಶ್ನೆಗಳಿಗೆ ಕುಮಾರಸ್ವಾಮಿ ಉತ್ತರ
ವಿಧಾನಸಭೆಯಲ್ಲಿ ಹತ್ತಾರು ಸಲ ಬೆಳೆ ವಿಮೆಯ ಬಗ್ಗೆ ಚರ್ಚಿಸಲಾಗಿದೆ. ಕೇಂದ್ರ ಸರ್ಕಾರದ ಖಾಸಗಿ ಕಂಪನಿಯ ಬೆಳೆವಿಮೆ ಯೋಜನೆಯು ರೈತರಿಗೆ ದಾರಿ ತಪ್ಪಿಸುವ ಕೆಲಸ ಮಾಡ್ತಿದೆ. ರಾಗಿ ಖರೀದಿ ಕೇಂದ್ರಗಳಿಂದ ರೈತರಿಗೆ ಅನುಕೂಲ ಆಗುತ್ತಿಲ್ಲ. ರೈತರ ಬೆಳೆಗಳಿಗೆ ತಕ್ಷಣ ಮಾರಾಟ ಹಣ ನೀಡಬೇಕಿದೆ. ಕರ್ನಾಟಕದ ರೈತ ಯಾವುದೇ ಕಾರಣಕ್ಕೂ ಸಂಕಷ್ಟಕ್ಕೆ ಸಿಲುಕಬಾರದು. ರಾಜ್ಯ ಸರ್ಕಾರದಿಂದಲೇ ಬೆಳೆವಿಮೆ ಯೋಜನೆ ಜಾರಿಗೊಳಿಸುತ್ತೇನೆ ಎಂದು ಕೊರಟಗೆರೆ ಕ್ಷೇತ್ರದ ರೈತರ ಪ್ರಶ್ನೆಗಳಿಗೆ ಮಾಜಿ ಸಿಎಂ ಕುಮಾರಸ್ವಾಮಿ ಉತ್ತರ ನೀಡಿದರು.