ಅಬ್ಬಬ್ಬಾ! ಡಿವೈಡರ್‌ ಮೇಲೆ ಗಿಡ ನೆಟ್ಟು ಸಾಕೋಕೆ 1.80 ಕೋಟಿ ರು..!

By Kannadaprabha News  |  First Published Jan 18, 2023, 1:30 AM IST

ಚಿತ್ರದುರ್ಗದ ಡಿವೈಡರ್‌ಗಳು ಸದ್ಯಕ್ಕೆ ರಾಜ್ಯದ ಮನೆ ಮಾತು. ಈ ಡಿವೈಡರ್‌ ನಿರ್ಮಾಣಕ್ಕೆ ಎಷ್ಟು ವೆಚ್ಚವಾಗಿದೆಯೋ ಅಷ್ಟೇ ಪ್ರಮಾಣದಲ್ಲಿ ಅವುಗಳ ಮೇಲೆ ಗಿಡ ನೆಡಲು ಖರ್ಚು ಮಾಡಲಾಗುತ್ತಿದೆ. 


ಚಿಕ್ಕಪ್ಪನಹಳ್ಳಿ ಷಣ್ಮುಖ

ಚಿತ್ರದುರ್ಗ(ಜ.18):  ಎದೆ ಮಟ್ಟಟೊಳ್ಳು ಗೋಡೆ, ಗೊಡೆಯೊಳಗೆ ಮಣ್ಣು, ಮಣ್ಣಿನ ಮೇಲೆ ಗಿಡ, ಗಿಡದ ಬುಡದಲ್ಲಿ ತೊಟ್ಟಿಕ್ಕುವ ನೀರು, ಗೋಡೆ ಮೇಲೊಂದು ಕಂಬ, ಕಂಬದ ತುದಿಗೆ ಎರಡು ಬೆಳ್ಳಕ್ಕಿ... ಮಕ್ಕಳಾ ಈ ಒಗಟು ಬಿಡಿಸಿ ನೋಡುವಾ ಅಂತ ಭವಿಷ್ಯದಲ್ಲಿ ಚಿತ್ರದುರ್ಗದ ಶಾಲೆ ಹುಡುಗರ ಕೇಳಿದರೆ, ತಕ್ಷಣವೇ ಗೊತ್ತು ಬಿಡಿ ಸರ್‌, ನಮ್ಮೂರ ಡಿವೈಡರ್‌ ಅಲ್ಲವಾ ಎಂದು ಉತ್ತರಿಸಿದರೆ ಅಚ್ಚರಿಯೇನಲ್ಲ. ಹೌದು ಚಿತ್ರದುರ್ಗದ ಡಿವೈಡರ್‌ಗಳು ಸದ್ಯಕ್ಕೆ ರಾಜ್ಯದ ಮನೆ ಮಾತು. ಈ ಡಿವೈಡರ್‌ ನಿರ್ಮಾಣಕ್ಕೆ ಎಷ್ಟು ವೆಚ್ಚವಾಗಿದೆಯೋ ಅಷ್ಟೇ ಪ್ರಮಾಣದಲ್ಲಿ ಅವುಗಳ ಮೇಲೆ ಗಿಡ ನೆಡಲು ಖರ್ಚು ಮಾಡಲಾಗುತ್ತಿದೆ ಎಂದರೆ ಯಾರಿಗಾದರೂ ಅಚ್ಚರಿ ಎನಿಸದೇ ಇರದು.

Latest Videos

undefined

ಡಿವೈಡರ್‌ ನಿರ್ಮಾಣ ಹಾಗೂ ಅದನ್ನು ಹೇಗೆ ನಿರ್ವಹಣೆ ಮಾಡಬೇಕೆಂಬುದರ ಬಗ್ಗೆ ನಗರಸಭೆ ವರ್ಷದ ಹಿಂದೆಯೇ ನಿರ್ಧರಿಸಿದಂತಿದೆ. ಕಳೆದ ವರ್ಷದ ಬಜೆಟ್‌ನಲ್ಲಿ ಅಲಂಕಾರಿಕ ಗಿಡಗಳ ನಿರ್ವಹಣೆ ಎಂದು ನಮೂದಿಸಿ 1.80 ಕೋಟಿ ರುಪಾಯಿಯಷ್ಟು ಮೊತ್ತ ಕಾಯ್ದಿರಿಸಲಾಗಿತ್ತು. ಈ ಅಲಂಕಾರಿಕ ಗಿಡಗಳ ಎಲ್ಲಿ ನೆಡುತ್ತಾರೆ, ಇಷ್ಟೊಂದು ದುಬಾರಿ ಮೊತ್ತ ಏಕೆ ಎತ್ತಿಡಲಾಗಿದೆ ಎಂಬ ಬಗ್ಗೆ ಅಷ್ಟಾಗಿ ಸದಸ್ಯರಿಗೆ ಗೊತ್ತಿರಲಿಲ್ಲ. ಇದೀಗ ಅದು ಬಹಿರಂಗಗೊಂಡಿದೆ. ಚಿತ್ರದುರ್ಗದಲ್ಲಿ ತಲೆಎತ್ತಿ ನಿಂತಿರುವ ಅವೈಜ್ಞಾನಿಕ ಡಿವೈಡರ್‌ಗಳ ನಡುವೆ ಅಲಂಕಾರಿಕ ಗಿಡ ಬೆಳೆಸಲು ಈ ದುಡ್ಡು ಬಳಸಿಕೊಳ್ಳಲಾಗುತ್ತಿದೆ.

ಶಾಸಕ ತಿಪ್ಪಾರೆಡ್ಡಿ ವಿರುದ್ಧ ಭ್ರಷ್ಟಾಚಾರ ಆರೋಪ: ಲೋಕಾಯುಕ್ತ ತನಿಖೆಗೆ ಆಗ್ರಹಿಸಿದ ರಘು ಆಚಾರ್‌

ಚಿತ್ರದುರ್ಗ ನಗರದ ಚಳ್ಳಕೆರೆ ಟೋಲ್‌ಗೇಟ್‌ನಿಂದ ಗಾಂಧಿ ವೃತ್ತ ಹಾಗೂ ಗಾಂಧಿ ವೃತ್ತದಿಂದ ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣ, ಶಾಸಕ ತಿಪ್ಪಾರೆಡ್ಡಿ ಮನೆ ಮುಂಭಾಗದಿಂದ ಜೆಎಂಐಟಿ ವೃತ್ತದವರೆಗೆ ಎಂದು ಎರಡು ಪ್ಯಾಕೇಜ್‌ಗಳ ನಮೂದಿಸಿ, ಡಿವೈಡರ್‌ಗಳಲ್ಲಿ ಅಲಂಕಾರಿಕ ಗಿಡಗಳ ಸಾಕಲು ಟೆಂಡರ್‌ ಕರೆಯಲಾಗಿದೆ. ಬೆಂಗಳೂರು ಮೂಲದ ರಮೇಶ್‌ ಎಂಬುವರು ಡಿವೈಡರ್‌ನಲ್ಲಿ ಗಿಡ ಸಾಕುವ ಗುತ್ತಿಗೆ ಪಡೆದು ಮುಂದುವರಿದಿದ್ದಾರೆ.

ಡಿವೈಡರ್‌ಗಳಿಗೆ ಮಣ್ಣು ತುಂಬಿ ಅದಕ್ಕೆ ಡ್ರಿಪ್‌ಲೈನ್‌ ಎಳೆಯಲಾಗಿದೆ. ಕೊಳವೆಬಾವಿ ಸಂಪರ್ಕದ ಮೂಲಕ ಈ ಡ್ರಿಪ್‌ಗೆ ನೀರು ಹಾಯಿಸಲಾಗುತ್ತಿದೆ. ಇದಲ್ಲದೇ ಗೋಡೆಗಳ ಮೇಲೆ ಹುಲ್ಲು ಬೆಳೆಸಲಾಗುತ್ತಿದೆ. ಒಟ್ಟಾರೆ ಡಿವೈಡರ್‌ಗಳು ಅಚ್ಚ ಹಸುರಿನಿಂದ ಕಂಗೊಳಿಸಬೇಕೆಂಬ ಉದ್ದೇಶ ಹೊಂದಲಾಗಿದೆ. ಒಂದು ವರ್ಷದವರೆಗೆ ಗುತ್ತಿಗೆದಾರ ಗಿಡ ಸಾಕುವ ಜವಾಬ್ದಾರಿ ಹೊರುತ್ತಾನೆ. ಮುಂದೇನು ಎಂಬುದಕ್ಕೆ ನಗರಸಭೆ ಬಳಿ ಉತ್ತರಗಳಿಲ್ಲ.

ಶಾಸಕ ತಿಪ್ಪಾರೆಡ್ಡಿಗೆ 90 ಲಕ್ಷ ರೂ. ಕಮೀಷನ್‌ ಕೊಟ್ಟಿದ್ದೇನೆ: ಗುತ್ತಿಗೆದಾರ ಮಂಜುನಾಥ್ ಆರೋಪ

ಈ ಅಲಂಕಾರಿಕ ಗಿಡಗಳು ಯಾವ ಜಾತಿಯವು, ವಿದೇಶದಿಂದ ತರಿಸಲಾಗಿದೆಯಾ ಅಥವಾ ಕರ್ನಾಟಕದ ಕಾಡಿನಿಂದ ಹೆಕ್ಕಿಕೊಂಡು ಬರಲಾಗಿದೆಯಾ ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರಗಳು ಲಭ್ಯವಾಗುತ್ತಿಲ್ಲ. ಆದರೆ ಡಿವೈಡರ್‌ಗಳಲ್ಲಿ ಡ್ರಿಪ್‌ ಮಾಡಿ ಸಸಿ ಬೆಳೆಸುವ ಕೈಂಕರ್ಯ ಮಾತ್ರ ಸೋಜಿಗ. ಹಾಲಿ ಡಿವೈಡರ್‌ಗಳು ಒಂದುವರೆ ಮೀಟರ್‌ನಷ್ಟು ಎತ್ತರ ಇವೆ. ಇವುಗಳ ಮೇಲೆ ಒಂದು ಮೀಟರ್‌ನಷ್ಟು ಗಿಡಗಳು ಬೆಳೆದರೆ ದ್ವಿಚಕ್ರ ವಾಹನ ಚಾಲಕರಿಗೆ ತುಂಬಾ ಕಿರಿ ಕಿರಿಯನ್ನುಂಟು ಮಾಡುತ್ತದೆ. ಕಾರು ಚಾಲಕರಿಗಂತೂ ಎಲ್ಲಿಯೋ ಘಾಟ್‌ ಸೆಕ್ಷನ್‌ನಲ್ಲಿ ಹೋಗುತ್ತಿರುವ ಅನುಭವ

ನಿರ್ವಹಣೆ ಇಲ್ಲದೆ ಚಿತ್ರದುರ್ಗದ ಉದ್ಯಾನವನಗಳು ನಶಿಸಿ ಹೋಗುತ್ತಿವೆ. ಇಂತಹುದರ ಮಧ್ಯೆ ಡಿವೈಡರ್‌ನಲ್ಲಿ ಗಿಡಗಳ ಸಾಕುವುದು ನಗರಸಭೆಗೆ ಹೇಗೆ ಸಾಧ್ಯವಾಗುತ್ತದೆ. ಸರ್ಕಾರಿ ಅನುದಾನದ ಮತ್ತೊಂದು ಅಪವ್ಯಯ ಇದಷ್ಟೇ.

click me!