ದೇಶದಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಅಂತಲ್ಲ ಯಾವುದೇ ಪಕ್ಷಗಳು ಅಧಿಕಾರಕ್ಕೆ ಬಂದರೂ ಕೂಡ ರೈತರಿಗೆ ಮಾತ್ರ ಮೋಸವಾಗುತ್ತಿದೆ. ಇದು ನಿಜಕ್ಕೂ ದೇಶದ ಹಿತದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಲ್ಲ ಎಂದ ರೈತ ಮುಖಂಡ ಶ್ರೀಮಂತ ಬಿರಾದಾರ
ಚವಡಾಪುರ(ಅ.19): ದೇಶದಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಅಂತಲ್ಲ ಯಾವುದೇ ಪಕ್ಷಗಳು ಅಧಿಕಾರಕ್ಕೆ ಬಂದರೂ ಕೂಡ ರೈತರಿಗೆ ಮಾತ್ರ ಮೋಸವಾಗುತ್ತಿದೆ. ಇದು ನಿಜಕ್ಕೂ ದೇಶದ ಹಿತದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಲ್ಲ ಎಂದು ರೈತ ಮುಖಂಡ ಶ್ರೀಮಂತ ಬಿರಾದಾರ ಕಳವಳ ವ್ಯಕ್ತ ಪಡಿಸಿದರು. ಅಫಜಲ್ಪುರ ತಾಲೂಕಿನ ಚವಡಾಪುರದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ ಕಬ್ಬು ರೈತರ ಹೋರಾಟ ಸಮಿತಿ ವತಿಯಿಂದ ರಾಷ್ಟ್ರೀಯ ಹೆದ್ದಾರಿ ತಡೆ ಹಿಡಿದು ಪ್ರತಿಭಟನೆ ನಡೆಸಿ ಮಾತನಾಡಿದರು.
ಅಫಜಲ್ಪುರ ತಾಲೂಕನ್ನು ರಾಷ್ಟ್ರೀಯ ಪ್ರಕೃತಿ ವಿಕೋಪವೆಂದು ಘೋಷಣೆ ಮಾಡಿ ಪ್ರತಿ ಎಕರೆ ರು.25 ಸಾವಿರ ಪರಿಹಾರ ನೀಡಬೇಕು. ಸಕ್ಕರೆ ಕಾರ್ಖಾನೆ ಪ್ರಾರಂಭಿಸುವ ಮುನ್ನ ರೈತರ ಜೇಷ್ಠತಾ ಪಟ್ಟಿಒಂದು ತಿಂಗಳ ಮುಂಚೆ ಸೂಚನಾ ಫಲಕಕ್ಕೆ ಲಗತ್ತಿಸಿ, ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಕ್ಕರೆ ಕಾರ್ಖಾನೆಗಳು ಪ್ರಾರಂಭಿಸುವ ಮುನ್ನ ಜಿಲ್ಲಾಧಿಕಾರಿಗಳ ಮಧ್ಯಸ್ಥಿಕೆಯಲ್ಲಿ ಕಾರ್ಖಾನೆ ಮಟ್ಟದ ರೈತರ ಸಭೆ ನಡೆಸಿ ಸೂಕ್ತ ಬೆಲೆ ನಿಗದಿ ಮಾಡಿ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.
ಶ್ರೀರಾಮುಲರನ್ನ ಪೆದ್ದ ಎಂದ ಸಿದ್ದರಾಮಯ್ಯಗೆ ದುರಂಹಕಾರ: ರವಿಕುಮಾರ್
ಕಬ್ಬು ಕಟಾವು ಮಾಡುವ ಮೂರು ತಿಂಗಳ ಮುಂಚೆ ರೈತರಿಗೆ ತಿಳಿಸಿ ಕ್ರಮಬದ್ದವಾಗಿ ಕಟಾವು ಮಾಡಲು ಕ್ರಮ ಕೈಗೊಳ್ಳಬೇಕು, ಡಾ. ಸ್ವಾಮಿನಾಥನ ಆಯೋಗ ನೀಡಿರುವ ಶಿಫಾರಸ್ಸಿನತೆ ಕಬ್ಬು ಸೇರಿ ಇತರ ಬೆಳೆಗಳ ಬೆಲೆ ನಿಗದಿ ಮಾಡಬೇಕು, ರೈತರು ಸಕ್ಕರೆ ಕಾರ್ಖಾನೆಗಳಿಗೆ ಕೊಟ್ಟಕಬ್ಬಿನ ತೂಕ ರಸೀದಿಯ ಜೊತೆಗೆ ಇಳುವರಿಯ ಮಾಹಿತಿಯನ್ನು ಕೂಡ ನೀಡಬೇಕು. ಕಬ್ಬು ಕಟಾವು ಸಮಯದಲ್ಲಿ ರೈತರಿಂದ ಹಣ ವಸೂಲಿ ಮಾಡುವುದನ್ನು ತಪ್ಪಿಸಲು ಕ್ರಮ ಕೈಗೊಳ್ಳಬೇಕು, ಸಕ್ಕರೆ ಕಾರ್ಖಾನೆಯವರು ನೀಡುವ ಸಕ್ಕರೆಯನ್ನು ಉಚಿತವಾಗಿ ಪ್ರತಿ ಟನ್‌ಗೆ ಒಂದು ಕೆ.ಜಿಯಂತೆ ನೀಡಲು ನಿರ್ದೇಶನ ಮಾಡಬೇಕು, ತೂಕದಲ್ಲಿ ಆಗುತ್ತಿರುವ ಮೋಸವನ್ನು ಸರಿಪಡಿಸಿ ರೈತರಿಗೆ ನ್ಯಾಯ ಒದಗಿಸಬೇಕು, ವಿದ್ಯುತ್ ಇಲಾಖೆಯವರು ಟಿ.ಸಿ ಸುಟ್ಟಾಗ ರೈತರಿಂದ ಹಣ ವಸೂಲಿ ಮಾಡುವುದರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಮ್ಮ ಬೇಡಿಕೆಗಳನ್ನು ತಹಸೀಲ್ದಾರ ಸಂಜೀವಕುಮಾರ ದಾಸರ್ ಅವರಿಗೆ ಮನವಿ ಮೂಲಕ ಸಲ್ಲಿಸಿದರು.
ಕಾಂಗ್ರೆಸ್ ಮುಖಂಡ ರಾಜೇಂದ್ರಕುಮಾರ ಪಾಟೀಲ್ ಹಾಗೂ ಮುಖಂಡ ಅಮೃತರಾವ್ ಪಾಟೀಲ್ ಮಾತನಾಡಿ, ಸರ್ಕಾರ ರೈತರ ಬದುಕಿನ ಜೊತೆ ಚೆಲ್ಲಾಟವಾಡುತ್ತಿದೆ. ಬೆಳೆಗೆ ತಕ್ಕ ಬೆಲೆ ಇಲ್ಲ. ಈ ಸತ್ಯವನ್ನು ಸರ್ಕಾರ ಅರಿತು ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ಆಗ್ರಹಿಸಿದರು.
ಪ್ರತಿಭಟನೆ ಪ್ರಯುಕ್ತ ಅಫಜಲ್ಪುರ, ದೇವಲ ಗಾಣಗಾಪೂರ, ಕಲಬುರಗಿ ಹೆದ್ದಾರಿ 2 ಗಂಟೆಗಳ ಕಾಲ ಜಾಮ್ ಆಗಿತ್ತು. ಪ್ರತಿಭಟನೆ ಹಿನ್ನೆಲೆ ದೇವಲ ಗಾಣಗಾಪೂರ ಪೊಲೀಸ್‌ರು ಬಂದೋಬಸ್‌್ತ ವ್ಯವಸ್ಥೆ ಮಾಡಿದ್ದರು.
ತಹಸೀಲ್ದಾರ ಸಂಜೀವಕುಮಾರ ದಾಸರ್ ಮಾತನಾಡಿ, ಕಬ್ಬು ಖರೀದಿಗೆ ಸಂಬಂಧಿಸಿದಂತೆ ಸಕ್ಕರೆ ಕಾರ್ಖಾನೆ ಮಾಲೀಕರು, ರೈತರೊಂದಿಗೆ ಸಭೆಯನ್ನು ವಾರದೊಳಗೆ ಕರೆಯಲಾಗುತ್ತದೆ ಎಂದರು. ಈ ಸಂದರ್ಭದಲ್ಲಿ ರೈತ ಮುಖಂಡರಾದ ಸಿದ್ದಾರಾಮ ದಣ್ಣೂರ, ಗುರನಗೌಡ ಪಾಟೀಲ್, ಗುರು ಚಾಂದಕವಟೆ, ಯಶವಂತ ಪಟ್ಟೆದಾರ, ಧನರಾಜ್ ಖೈರಾಟ್, ಜಗಲೆಪ್ಪ ಪೂಜಾರಿ, ಶಂಕರ ಸೋಬಾನಿ ಸೇರಿದಂತೆ ಅನೇಕರು ಇದ್ದರು.