ಕೋಟಿ ಖರ್ಚಾದ್ರು ಕಳಪೆ ಕಾಮಗಾರಿ ಆರಂಭಗೊಂಡ ಕೆಲವೇ ದಿನಕ್ಕೆ ಕಿತ್ತು ಹೋದ ಮೇಲ್ಸೇತುವೆ ರಸ್ತೆ, ಅಧಿಕಾರಿ, ಜನಪ್ರತಿನಿಧಿಗಳಿಗೆ ಜನರ ಹಿಡಿಶಾಪ
ಶ್ರೀಶೈಲ ಮಠದ
ಬೆಳಗಾವಿ(ಅ.19): ಕೋಟಿ ಕೋಟಿ ಖರ್ಚು ಮಾಡಿ ನಿರ್ಮಿಸಿದ ಟಿಳಕವಾಡಿಯ ರೈಲ್ವೆ ಮೂರನೇ ಗೇಟ್‌ನ ಮೇಲ್ಸೇತುವೆ ಕಾಮಗಾರಿ ಬಣ್ಣ ಎರಡೇ ದಿನದಲ್ಲೇ ಬಯಲಾಗಿದೆ. ಸಂಚಾರಕ್ಕೆ ಮುಕ್ತಗೊಂಡಿದ್ದ ಈ ಸೇತುವೆ ಮೇಲಿನ ಸಂಚಾರ ಇದೀಗ ಸ್ಥಗಿತಗೊಂಡಿದ್ದು, ಇದು ಕಳಪೆ ಕಾಮಗಾರಿಗೆ ಹಿಡಿದ ಕೈಗನ್ನಡಿಯಾಗಿದೆ. ರೈಲ್ವೆ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳ್ಳಲು ನಿಗದಿತ ಅವಧಿಗಿಂತ ಎರಡು ಪಟ್ಟು ಹೆಚ್ಚು ಅವಧಿ ತೆಗೆದುಕೊಂಡಿದ್ದಲ್ಲದೇ, ಕಾಮಗಾರಿ ಯೋಜನಾ ವೆಚ್ಚವೂ ಹೆಚ್ಚಳವಾಗಿದೆ. ಕೋಟಿ ರುಪಾಯಿ ವೆಚ್ಚ ಮಾಡಿ, ನಿರ್ಮಿಸಿದ ರೈಲ್ವೆ ಮೇಲ್ಸೆತುವೆ ಕಾಮಗಾರಿ ಗುಣಮಟ್ಟಕಾಯ್ದುಕೊಳ್ಳದಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ.
ಅ.12 ರಂದು ಸಂಸದೆ ಮಂಗಲ ಅಂಗಡಿ ಅವರು ಈ ರೈಲ್ವೆ ಮೇಲ್ಸೇತುವೆಯನ್ನು ಲೋಕಾರ್ಪಣೆಗೊಳಿಸಿ, ಈ ಸೇತುವೆಯನ್ನು ಸಂಚಾರಕ್ಕೆ ಮುಕ್ತಗೊಳಿಸಿದ್ದರು. ಈ ಸೇತುವೆ ಉದ್ಘಾಟನಾ ಕಾರ್ಯಕ್ರಮದಲ್ಲೇ ಬೆಳಗಾವಿ ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ಅಭಯ ಪಾಟೀಲ ಅವರು ರೈಲ್ವೆ ಇಲಾಖೆ ಅಧಿಕಾರಿಗಳ ಬಹಿರಂಗವಾಗಿಯೇ ಹರಿಹಾಯ್ದಿದ್ದರು. ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕಿದ್ದ ರೈಲ್ವೆ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳಿಸಲು ನಾಲ್ಕು ವರ್ಷಗಳೇ ಬೇಕಾಯಿತು. ರೈಲ್ವೆ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿಯಿಂದ ಕಾಮಗಾರಿ ವಿಳಂಬವಾಗಿದ್ದರಿಂದ ಸಾರ್ವಜನಿಕರು ನಮ್ಮನ್ನು ನಿಂದಿಸುವಂತಾಗಿದೆ ಎಂದು ಅಧಿಕಾರಿಗಳ ಕಾರ್ಯವೈಖರಿ ವಿರುದ್ಧ ತೀವ್ರ ಅಸಮಾಧಾನವ್ಯಕ್ತಪಡಿಸಿದ್ದರು.
LUMPY SKIN DISEASE: ಚರ್ಮಗಂಟಿಗೆ ಹೆದರಿ ಹೈನುತ್ಪನ್ನ ಖರೀದಿಗೆ ಗ್ರಾಹಕ ಹಿಂದೇಟು..!
ಅಂಗಡಿ ಕನಸಿನ ಕೂಸು:
ಟಿಳಕವಾಡಿಯ 3ನೇ ರೈಲ್ವೆ ಗೇಟ್ ಬಳಿಯಲ್ಲಿ ಲೆವೆಲ್ ಕ್ರಾಸಿಂಗ್ ಗೇಟ್ ಸಂಖ್ಯೆ 381ಕ್ಕೆ ಬದಲಾಗಿ ರಸ್ತೆ ಮೇಲ್ಸೇತುವೆ ನಿರ್ಮಿಸಲಾಗಿದೆ. ಇದು ದಿ. ಸುರೇಶ ಅಂಗಡಿ ಅವರ ಕನಸಿನ ಕೂಸಾಗಿತ್ತು. ಶಾಲಾ ಮಕ್ಕಳು, ಕಚೇರಿ ಕೆಲಸಕ್ಕೆ ಹೋಗುವವರು, ಖಾನಾಪುರ, ಮಚ್ಚೆ, ಪೀರನವಾಡಿ ಸೇರಿದಂತೆ ಸ್ಥಳೀಯ ಬಾಗದ ವಾಹನ ಸವಾರರಿಗೆ ಗೇಟ್ ಕ್ರಾಸ್ ಮಾಡಿ ಹೋಗಲು ತುಂಬಾ ತೊಂದರೆ ಇತ್ತು. ಈ ಸೇತುವೆ ನಿರ್ಮಾಣದಿಂದ ವಾಹನ ಸಂಚಾರರಿಗೆ ಅನುಕೂಲವಾಗುತ್ತದೆ ಎಂದು ಭಾವಿಸಲಾಗಿತ್ತು. ಆದರೆ, ಇದೆಲ್ಲವೂ ತಲೆಕೆಳಗಾಗುವಂತಾಗಿದೆ.
ಕಳೆಪೆ ಕಾಮಗಾರಿಗೆ ಹಿಡಿದ ಕೈಗನ್ನಡಿ:
ರೈಲ್ವೆ ಮೇಲ್ಸೇತುವೆ ಉದ್ಘಾಟನೆಯಾದ ಎರಡೇ ದಿನದಲ್ಲಿ ಈ ಕಾಮಗಾರಿ ನಿಜವಾದ ಬಣ್ಣ ಬಯಲಾಗುವ ಮೂಲಕ ಕಾಮಗಾರಿ ಕಳಪೆಮಟ್ಟದಿಂದ ಕೂಡಿರುವುದು ಬೆಳಕಿಗೆ ಬಂದಿದೆ. ವಾಹನ ಸಂಚಾರಕ್ಕೆ ಸಂಚಕಾರ ತಂದಿದೆ. ಮಳೆ ಸುರಿದಿದ್ದರಿಂದ ಈ ಸೇತುವೆ ರಸ್ತೆಗಳ ನಡುವೆ ಗುಂಡಿಗಳು ಬಿದ್ದಿದ್ದು, ಬಾಯ್ತೆರೆದು ನಿಂತಿವೆ. ಸೇತುವೆಯೂ ಅಲ್ಲಲ್ಲಿ ಬಿರುಕುಬಿಟ್ಟಿದೆ. ಇದು ಕಳಪೆ ಕಾಮಗಾರಿಗೆ ಹಿಡಿದ ಕೈಗನ್ನಡಿಯಂತಾಗಿದೆ. ರೈಲ್ವೆ ಮೇಲ್ಸೇತುವೆ ಲೋಕಾರ್ಪಣೆಗೊಂಡಿದ್ದರಿಂದ ಇನ್ನೇನೂ ಸಂಚಾರಕ್ಕೆ ಅನುಕೂಲವಾಗುತ್ತದೆ ಎನ್ನುವಷ್ಟರಲ್ಲೇ ರಸ್ತೆಯಲ್ಲಿ ಗುಂಡಿಗಳು ಬಾಯ್ತೆರೆದು ನಿಂತಿವೆ. ವಾಹನ ಸವಾರರಿಗೆ ಅಪಘಾತಕ್ಕೆ ಆಹ್ವಾನವನ್ನೂ ನೀಡುತ್ತಿವೆ. ರಸ್ತೆಯಲ್ಲಿ ಬಿದ್ದಿರುವ ತೆಗ್ಗು ಗುಂಡಿಗಳನ್ನು ಮುಚ್ಚುವ ಕಾರ್ಯವನ್ನು ಗುತ್ತಿಗೆದಾರರ ಕೈಗೊಂಡಿದ್ದಾರೆ. ಗುಂಡಿಗಳನ್ನು ಪ್ಯಾಚ್‌ವರ್ಕ್ ಮೂಲಕ ಮುಚ್ಚಲಾಗಿದೆ. ವಾಹನ ಸವಾರರು ರೈಲ್ವೆ ಇಲಾಖೆ ಅಧಿಕಾರಿಗಳು ಹಾಗೂ ಕಾಮಗಾರಿ ಗುತ್ತಿಗೆದಾರರರಿಗೆ ಹಿಡಿಶಾಪ ಹಾಕುವಂತಾಗಿದೆ.
ನಾಲ್ಕು ವರ್ಷ ತೆಗೆದುಕೊಂಡ್ರು ನೆಟ್ಟಗಾಗದ ಸೇತುವೆ
ಸಂಚಾರ ದಟ್ಟನೆ ನಿಯಂತ್ರಿಸುವ ಹಿನ್ನೆಲೆಯಲ್ಲಿ 2019ರಲ್ಲಿ ರೈಲ್ವೆ ಮೇಲ್ಸೇತುವೆ ಕಾಮಗಾರಿಗೆ ಅಂದಿನ ಕೇಂದ್ರ ರಾಜ್ಯ ರೈಲ್ವೆ ಸಚಿವರಾಗಿದ್ದ ದಿ. ಸುರೇಶ ಅಂಗಡಿ ಚಾಲನೆ ನೀಡಿದ್ದರು. .18 ಕೋಟಿ ವೆಚ್ಚದಲ್ಲಿ ಮೇಲ್ಸೆತುವೆ ಕಾಮಗಾರಿ ಕೈಗೊಳ್ಳಲಾಗಿತ್ತು. ಆದರೆ, ಕಾಮಗಾರಿ ವಿಳಂಬವಾಗಿದ್ದರಿಂದ ಈ ಕಾಮಗಾರಿ ಯೋಜನಾ ವೆಚ್ಚವೂ ದುಪ್ಪಟ್ಟಾಗಿದೆ. ಹೆಚ್ಚಿನ ಕಾಮಗಾರಿಗೆ .35.46 ಕೋಟಿ ವೆಚ್ಚ ಮಾಡಲಾಗಿದೆ. ಕೋಟಿ ಕೋಟಿ ರುಪಾಯಿಯನ್ನು ರೈಲ್ವೆ ಮೇಲ್ಸೇತುವೆ ಕಾಮಗಾರಿಗೆ ಸುರಿದರೂ ಈ ಸೇತುವೆ ಕಾಮಗಾರಿ ಗುಣಮಟ್ಟದಿಂದ ಕೂಡದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಬರೋಬ್ಬರಿ ನಾಲ್ಕು ವರ್ಷಗಳ ಅವಧಿಯನ್ನು ತೆಗೆದುಕೊಂಡರೂ ರೈಲ್ವೆ ಮೇಲ್ಸೇತುವೆ ಕಾಮಗಾರಿ ಹಳ್ಳಹಿಡಿದಂತಾಗಿದೆ.