ಬೆಳಗಾವಿ: ಕಬ್ಬಿನ ಬಾಕಿ ಬಿಲ್‌ಗಾಗಿ ಆಗ್ರಹಿಸಿ ಸಮಾಧಿಯಲ್ಲೇ ಧರಣಿ ಕುಳಿತ ರೈತ

By Kannadaprabha NewsFirst Published Oct 10, 2020, 3:15 PM IST
Highlights

114 ಟನ್‌ ಕಬ್ಬು, 85 ಸಾವಿರ ಬಾಕಿ ಬಿಲ್‌| ವರ್ಷ ಕಳೆದರೂ ಹಣವಿಲ್ಲ: ರೈತ ಶಿವಪ್ಪ ಆಕ್ರೋಶ| ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿಯಲ್ಲಿ ನಡೆದ ಘಟನೆ| ಅಳಲು ತೋಡಿಕೊಂಡ ಇತರ ರೈತರು| 
 
 

ಬೆಳಗಾವಿ(ಅ.10):ಕಬ್ಬಿನ ಬಾಕಿ ಬಿಲ್‌ ಪಾವತಿಸುವಂತೆ ಆಗ್ರಹಿಸಿದ ರೈತನೊಬ್ಬ ಶವ ಸಂಸ್ಕಾರಕ್ಕೆ ಅಗೆಯಲಾಗಿದ್ದ ಸಮಾಧಿಯಲ್ಲಿ ಕುಳಿತು ಆಕ್ರೋಶ ಹೊರಹಾಕಿದ ಘಟನೆ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿಯಲ್ಲಿ ಶುಕ್ರವಾರ ನಡೆದಿದೆ.

ಎಂ.ಕೆ.ಹುಬ್ಬಳ್ಳಿ ಪಟ್ಟಣದ ಶಿವಪ್ಪ ಪದ್ಮಪ್ಪ ಬೋಗಾರ (50) ಎಂಬ ರೈತನೇ ಸಮಾಧಿಯಲ್ಲಿ ಕುಳಿತು ಧರಣಿ ನಡೆಸಿದಾತ. ಈತ ವೃದ್ಧೆಯೊಬ್ಬಳ ಶವ ಸಂಸ್ಕಾರಕ್ಕೆ ಸ್ಮಶಾನದಲ್ಲಿ ಅಗೆಯಲಾಗಿದ್ದ ಸಮಾಧಿಯಲ್ಲಿ ಕುಳಿತು ಕಬ್ಬಿನ ಬಾಕಿ ಬಿಲ್‌ ಪಾವತಿಸುವಂತೆ ಆಗ್ರಹಿಸಿದ್ದಾನೆ.

ರಾಮದುರ್ಗ: ವಿದ್ಯಾಗಮದಡಿ ಪಾಠ, 30 ವಿದ್ಯಾರ್ಥಿಗಳಿಗೆ ಕೊರೋನಾ ದೃಢ

ಎಂ.ಕೆ.ಹುಬ್ಬಳ್ಳಿಯ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಗೆ 114 ಟನ್‌ ಕಬ್ಬು ಕಳಿಸಿದ್ದೇನೆ. ಅದಕ್ಕೆ ನನಗೆ 85 ಸಾವಿರ ಬಾಕಿ ಬಿಲ್‌ ಬರಬೇಕು. ಆದರೆ, ವರ್ಷ ಕಳೆದರೂ ಹಣ ಬಂದಿಲ್ಲ. ಹಣಕ್ಕಾಗಿ ಕಾರ್ಖಾನೆಗೆ ಅಲೆದು ಸಾಕಾಗಿದೆ. ಜೀವನ ನಡೆಸುವುದೇ ಕಷ್ಟವಾಗಿದೆ. ಹಾಗಾಗಿ ಸಮಾಧಿಯಲ್ಲಿ ಕುಳಿತಿದ್ದೇನೆ. ಸಾಯುವುದೊಂದೇ ಬಾಕಿ ಇದೆ. ಕಾರ್ಖಾನೆ ಅಧ್ಯಕ್ಷರು, ನಿರ್ದೇಶಕರು ಇಲ್ಲಿಗೆ ಬಂದು ನನಗೆ ಮಣ್ಣಾದರು ಹಾಕಿ ಹೋಗಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾನೆ. ಕಾರ್ಖಾನೆ ನಿರ್ದೇಶಕರಾಗಿದ್ದ ಕೇಂದ್ರದ ಮಾಜಿ ಸಚಿವ ಬಾಬಾಗೌಡ ಪಾಟೀಲ್‌ ಅವರ ಹೆಸರನ್ನು ಪ್ರಸ್ತಾಪಿಸಿ ಬಿಲ್‌ ಕೊಡಿ ಎಂದು ಆಗ್ರಹಿಸಿದ್ದಾನೆ.

ಅಳಲು ತೋಡಿಕೊಂಡ ಇತರ ರೈತರು:

ಸಮಾಧಿಯಲ್ಲಿ ಕುಳಿತ ರೈತ ಶಿವಪ್ಪ ಬೋಗಾರ ಅವರು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಂತೆ ಇತರೆ ರೈತರು ಸಹ ಬಾಕಿ ಕಬ್ಬಿನ ಬಿಲ್‌ಗಾಗಿ ಧ್ವನಿ ಎತ್ತಿದ್ದಾರೆ. ರೈತರ ಸ್ಥಿತಿ ಕಷ್ಟಕರವಾಗಿದೆ. ಸಾಯುವುದು ಅನಿವಾರ್ಯವಾಗಿದೆ. ನಾವು ಕಳಿಸಿದ ಕಬ್ಬಿನ ಬಾಕಿ ಬಿಲ್‌ ಪಡೆಯಲು ವರ್ಷಗಳೇ ಕಾಯುವಂತಾಗಿದೆ. ಕಾರ್ಖಾನೆಯಿಂದ ಪಾವತಿಯಾಗಬೇಕಿರುವ ಎಲ್ಲ ರೈತರ ಸುಮಾರು 25 ಕೋಟಿ ಕಬ್ಬಿನ ಬಾಕಿ ಬಿಲ್‌ ತಕ್ಷಣ ಪಾವತಿಸಬೇಕು ಎಂದು ಆಗ್ರಹಿಸಿದ್ದಾರೆ.
 

click me!