ಈ ಬಾರಿ ಬೆಂಬಲ ಬೆಲೆ ಖರೀದಿ ಕೇಂದ್ರ ಇಲ್ಲ, ಸಂಬಳ ಕೊಡೋದಕ್ಕೂ ಹಣವಿಲ್ಲ, ಸಿಎಂ

By Kannadaprabha News  |  First Published Oct 10, 2020, 2:36 PM IST

ಅತ್ಯುತ್ತಮ ಮಳೆಯಿಂದಾಗಿ ಬಂಪರ್‌ ಬೆಳೆ ಬಂದಿದೆ,ಅತ್ಯಧಿಕ ಇಳುವರಿಯೂ ಬರುತ್ತದೆ. ಆದರೆ, ಘೋಷಿತ ಬೆಂಬಲ ಬೆಲೆಯಂತೆ ಖರೀದಿ ಮಾಡಲು ಬೇಕಾಗುವಷ್ಟು ಹಣ ರಾಜ್ಯ ಸರ್ಕಾರದ ಬಳಿ ಇಲ್ಲ. ಈಗಿರುವ ನೌಕರರಿಗೆ ಸಂಬಳ ಕೊಡುವುದಕ್ಕೆ ಸವಾಲು ಎನ್ನುವಂತಾಗಿದೆ. ಹೀಗಾಗಿ, ಬೆಂಬಲ ಬೆಲೆಯಲ್ಲಿ ಖರೀದಿ ಮಾಡುವುದಾದರೂ ಹೇಗೆ? ಎಂದ ಸಿಎಂ 


ಕೊಪ್ಪಳ(ಅ.10): ಘೋಷಿತ ಬೆಂಬಲ ಬೆಲೆಯಂತೆ ಖರೀದಿ ಮಾಡಲು ಖರೀದಿ ಕೇಂದ್ರವನ್ನು ತೆರೆಯುವುದು ಅಸಾಧ್ಯ. ಸಂಬಳ ಕೊಡುವುದಕ್ಕೆ ಹಣ ಇಲ್ಲ ಎಂದ ಮೇಲೆ ಇನ್ನು ಬೆಂಬಲ ಬೆಲೆ ಖರೀದಿ ಮಾಡಲು ಹಣ ಎಲ್ಲಿಂದ ತರಲಿ? ಇದು, ಅವರಿವರ ಹೇಳಿಕ ಅಥವಾ ಪ್ರಶ್ನೆಯಲ್ಲ. ಸ್ವತಃ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರೇ ಕೈಚೆಲ್ಲಿದ ಪರಿ ಇದು.

ಮೆಕ್ಕೆಜೋಳ ಮತ್ತು ಸಜ್ಜೆ ಬೆಂಬಲ ಬೆಲೆ ಕೇಂದ್ರವನ್ನು ತೆರೆಯುವಂತೆ ಕೊಪ್ಪಳ ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಪ್ರಾರಂಭಿಸಿದ್ದ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಪದಾಧಿಕಾರಿಗಳು ಧರಣಿ ಕೈಬಿಟ್ಟು ಬೆಂಗಳೂರಿಗೆ ನಿಯೋಗದಲ್ಲಿ ತೆರಳಿದ್ದರು. ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಅವರ ಸಾರಥ್ಯದಲ್ಲಿ ಜಿಲ್ಲೆಯ ನಿಯೋಗ ಗುರುವಾರ ಸಿ.ಎಂ. ಯಡಿಯೂರಪ್ಪ ಅವರನ್ನು ಖುದ್ದು ಭೇಟಿಯಾಗಿ ಮನವಿ ಸಲ್ಲಿಸಿತು.

Tap to resize

Latest Videos

ಕನ್ನಡಪ್ರಭದಲ್ಲಿ ಪ್ರಕಟವಾದ ಸರಣಿ ವರದಿಗಳು ಹಾಗೂ ಕರ್ನಾಟಕ ರಾಜ್ಯ ರೈತ ಸಂಘದ ಮನವಿಯನ್ನು ಸಲ್ಲಿಸಿ, ಕೂಡಲೇ ಬೆಂಬಲ ಬೆಲೆ ಕೇಂದ್ರ ತೆರೆಯುವಂತೆ ಮನವಿ ಮಾಡಿದ್ದಾರೆ. ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಈ ವರ್ಷ ಬೆಂಬಲ ಬೆಲೆ ಖರೀದಿ ಕೇಂದ್ರ ತೆರೆಯುವುದು ಅಸಾಧ್ಯ ಎಂದಿದ್ದಾರೆ.

'ಜೈಲಿಗೆ ಹೋಗಿ ಬಂದ್ರು ಡಿ.ಕೆ.ಶಿವಕುಮಾರ್‌ಗೆ ಬುದ್ಧಿ ಬಂದಿಲ್ಲ'

ಅತ್ಯುತ್ತಮ ಮಳೆಯಿಂದಾಗಿ ಬಂಪರ್‌ ಬೆಳೆ ಬಂದಿದೆ. ಅತ್ಯಧಿಕ ಇಳುವರಿಯೂ ಬರುತ್ತದೆ. ಆದರೆ, ಘೋಷಿತ ಬೆಂಬಲ ಬೆಲೆಯಂತೆ ಖರೀದಿ ಮಾಡಲು ಬೇಕಾಗುವಷ್ಟುಹಣ ರಾಜ್ಯ ಸರ್ಕಾರದ ಬಳಿ ಇಲ್ಲ. ಈಗಿರುವ ನೌಕರರಿಗೆ ಸಂಬಳ ಕೊಡುವುದಕ್ಕೆ ಸವಾಲು ಎನ್ನುವಂತಾಗಿದೆ. ಹೀಗಾಗಿ, ಬೆಂಬಲ ಬೆಲೆಯಲ್ಲಿ ಖರೀದಿ ಮಾಡುವುದಾದರೂ ಹೇಗೆ? ಕೇವಲ ಮೆಕ್ಕೆಜೋಳ ಅಲ್ಲ, ರಾಗಿ, ಭತ್ತ, ಸಜ್ಜೆ ಸೇರಿದಂತೆ ಎಲ್ಲ ಬೆಳೆಗಳು ಅತ್ಯುತ್ತಮವಾಗಿಯೇ ಬಂದಿವೆ. ಮಾರುಕಟ್ಟೆಯಲ್ಲಿ ಇದರಿಂದ ಸಹಜವಾಗಿಯೇ ದರ ಕುಸಿಯುತ್ತಿದೆ. ಅಷ್ಟುಬೆಳೆ ಹೇಗೆ ಖರೀದಿ ಮಾಡುವುದು ಎಂದು ಪ್ರಶ್ನೆ ಮಾಡಿದ್ದಾರೆ.

ನೀವು ಅರ್ಥ ಮಾಡಿಕೊಳ್ಳಿ, ಕೋವಿಡ್‌ನಿಂದಾಗಿ ರಾಜ್ಯದ ಆರ್ಥಿಕ ಪರಿಸ್ಥಿತಿ ಏನಿದೆ ಎಂದು. ಇಂಥ ಸ್ಥಿತಿಯಲ್ಲಿ ಅಷ್ಟುದೊಡ್ಡ ಪ್ರಮಾಣದ ಬೆಳೆ ಖರೀದಿ ಮಾಡುವುದಾದರೂ ಹೇಗೆ ಎಂದು ಯೋಚಿಸಿ ಎಂದಿದ್ದಾರೆ. ರೈತರ ಹಿತ ಮುಖ್ಯ. ಆದರೆ, ಪರಿಸ್ಥಿತಿ ಹಾಗೆ ಇಲ್ಲವಾದ್ದರಿಂದ ಏನು ಮಾಡಬೇಕು ನೀವೇ ಹೇಳಿ ಎಂದಿದ್ದಾರೆ.

ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಮಾತನಾಡಿ, ರೈತರ ಉತ್ಪನ್ನ ಖರೀದಿಗಾಗಿಯೇ ಇಟ್ಟಿದ್ದ ಆವರ್ತ ನಿಧಿ ಎಲ್ಲಿ ಹೋಯಿತು? ಅದನ್ನು ಯಾತಕ್ಕೆ ಬಳಕೆ ಮಾಡಲಾಯಿತು ಎಂದು ಪ್ರಶ್ನೆ ಮಾಡಿದ್ದಾರೆ. ನಮಗೂ ರಾಜ್ಯದ ಪರಿಸ್ಥಿತಿ ಅರ್ಥವಾಗುತ್ತದೆ. ಹಾಗಂತ ರೈತರನ್ನು ಕಡೆಗಣಿಸುವುದು ಎಷ್ಟುಸರಿ? ನೌಕರರಿಗೆ ಸಂಬಳ ಕೊಡಬೇಕು ಎಂದು ರೈತರು ಬೆಳೆದಿರುವ ಉತ್ಪನ್ನ ಖರೀದಿ ಮಾಡದಿದ್ದರೆ ಹೇಗೆ? ಈಗಾಗಲೇ ರೈತರು ತಮ್ಮ ಉತ್ಪನ್ನಗಳನ್ನು ಅಗ್ಗದ ದರಕ್ಕೆ ಮಾರಿದ್ದಾರೆ. ಬೆಂಬಲ ಬೆಲೆ ಕೇಂದ್ರ ತೆರೆಯದಿದ್ದರೂ ಪರವಾಗಿಲ್ಲ, ರೈತರ ಖಾತೆಗೆ ನೇರವಾಗಿ ಹಣವನ್ನಾದರೂ ಜಮಾ ಮಾಡಿ ಎಂದು ಒತ್ತಾಯಿಸಿದ್ದಾರೆ.

ಇದಕ್ಕೂ ಸಿ.ಎಂ. ಯಡಿಯೂರಪ್ಪ ಅವರು ಯಾವುದೇ ನಿಖರ ಪ್ರತಿಕ್ರಿಯೆ ನೀಡಿಲ್ಲ. ಆಯ್ತು ನೋಡೋಣ ಎಂದಷ್ಟೇ ಹೇಳಿ ಕಳುಹಿಸಿದ್ದಾರೆ. ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರೇ ಬೆಂಬಲ ಬೆಲೆ ಕೇಂದ್ರವನ್ನು ತೆರೆಯುವ ಕುರಿತು ಕೈ ಚೆಲ್ಲಿದ್ದಾರೆ. ಹೀಗಾಗಿ, ಮುಂದಿನ ಹೋರಾಟದ ಕುರಿತು ಚಿಂತನೆ ಮಾಡಲಾಗುವುದು ಎಂದು ಕೊಪ್ಪಳದ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾಧ್ಯಕ್ಷ ನಜೀರಸಾಬ್‌ ಮೂಲಿಮನಿ ಅವರು ತಿಳಿಸಿದ್ದಾರೆ.

ಮುಖ್ಯಮಂತ್ರಿಗಳು ಈಗ ಕೈ ಚೆಲ್ಲಿದ್ದಾರೆ. ಬೆಂಬಲ ಬೆಲೆ ಕೇಂದ್ರ ತೆರೆಯದಿದ್ದರೂ ಪರವಾಗಿಲ್ಲ, ರೈತರ ಖಾತೆಗೆ ನೇರವಾಗಿ ಇಂತಿಷ್ಟುಹಣ ಎಂದು ಜಮೆ ಮಾಡುವಂತೆ ಒತ್ತಾಯಿಸುತ್ತೇವೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಅವರು ತಿಳಿಸಿದ್ದಾರೆ. 
 

click me!