ಮಹದಾಯಿಗಾಗಿ ಸಿಎಂಗೆ ರಕ್ತದಲ್ಲಿ ಅನ್ನದಾತನ ಪತ್ರ

By Kannadaprabha News  |  First Published Jul 22, 2022, 9:19 PM IST

ರೈತ ಹುತಾತ್ಮ ದಿನ ನಿಮಿತ್ತ ಬಂಡಾಯ ನೆಲದಲ್ಲಿ ಮತ್ತೊಮ್ಮೆ ಮೊಳಗಿದ ಕೂಗು


ನವಲಗುಂದ(ಜು.22):  ಮಹದಾಯಿ ತೀರ್ಪಿನಂತೆ ಕರ್ನಾಟಕದ ಪಾಲಿನ ನೀರಿನ ಬಳಕೆಗೆ ಮುಂದಾಗುವಂತೆ ರೈತ ಮೈಲಾರಪ್ಪ ವೈದ್ಯ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ರಕ್ತದಲ್ಲಿ ಪತ್ರ ಬರೆದು ಗಮನ ಸೆಳೆದರು. ರೈತ ಹುತಾತ್ಮ ದಿನ ಅಂಗವಾಗಿ ಗುರುವಾರ ಇಲ್ಲಿ ಆಯೊಜಿಸಲಾಗಿದ್ದ ಅನ್ನದಾತರ ಬೃಹತ್‌ ಸಮಾವೇಶದಲ್ಲಿ ಈ ಘಟನೆ ನಡೆಯಿತು. ‘ಮಹದಾಯಿ, ಕಳಸಾ-ಬಂಡೂರಿ ಯೋಜನೆ ಅನುಷ್ಠಾನಕ್ಕೆ ತಾವು ಹೋರಾಟ ಮಾಡಿದ್ದೀರಿ. ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ರಕ್ತದಲ್ಲಿ ಪತ್ರ ಬರೆದುಕೊಟ್ಟಿದ್ದೀರಿ. ಈಗ ನೀವೇ ಮುಖ್ಯಮಂತ್ರಿಗಳಾಗಿರುವುದರಿಂದ ನಿಮಗೆ ನೆನಪಿಸುವ ಸಲುವಾಗಿ ಮಹದಾಯಿ ಯೋಜನೆಯ ಅನುಷ್ಠಾನಕ್ಕಾಗಿ ಹಾಗೂ ರೈತರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ನಾನು ಕೂಡಾ ರಕ್ತದಲ್ಲಿ ಪತ್ರ ಬರೆದಿದ್ದೇನೆ’ ಎಂದು ರೈತ ಮೈಲಾರಪ್ಪ ಪತ್ರದಲ್ಲಿ ಬರೆದಿದ್ದಾರೆ.

ಈ ಹಿಂದೆ ಇಂಥದೇ ಹೋರಾಟಗಳಲ್ಲಿ ಬಸವರಾಜ ಬೊಮ್ಮಾಯಿ ಅವರೂ ಸಹ ಅಂದಿನ ಮುಖ್ಯಮಂತ್ರಿಗೆ ರಕ್ತದಲ್ಲಿ ಪತ್ರ ಬರೆದಿದ್ದನ್ನು ಇಲ್ಲಿ ಸ್ಮರಿಸಬಹುದು.

Tap to resize

Latest Videos

ಮಹದಾಯಿ ನದಿ ವಿಚಾರ; ರಾಜಕಾರಣಿಗಳು ಪ್ರಮಾಣಿಕ ಪ್ರಯತ್ನ ಮಾಡಿಲ್ಲ

ಮೂರು ವೇದಿಕೆಯಲ್ಲಿ ಸಮಾವೇಶ:

ರೈತ ಹುತಾತ್ಮ ದಿನಾಚರಣೆಯನ್ನು ಪಟ್ಟಣದಲ್ಲಿ ಮೂರು ವೇದಿಕೆಯಲ್ಲಿ ಆಚರಿಸಲಾಯಿತು. ‘ಮಹದಾಯಿಗಾಗಿ ಮಹಾ ವೇದಿಕೆ ’, ‘ರೈತಭವನ ವೇದಿಕೆ’ ಹಾಗೂ ‘ಮಹದಾಯಿ ರೈತಪರ ಹೋರಾಟ ಸಮಿತಿ ವೇದಿಕೆ’ಯಲ್ಲಿ ಮಹದಾಯಿ ಮುಂದಿನ ಹೋರಾಟದ ಕುರಿತ ಚರ್ಚೆಯಾದರೂ ರೈತರ ನಡುವಿನ ಭಿನ್ನಾಭಿಪ್ರಾಯವನ್ನೂ ತೋರಿಸಿತು. ಇಲ್ಲಿನ ಲಿಂಗರಾಜ ಸರ್ಕಲ್‌ ಬಳಿಯೇ ಈ ಮೂರು ವೇದಿಕೆಗಳನ್ನು ಸಂಘಟನೆಗಳು ನಿರ್ಮಿಸಿದ್ದವು. ಹುತಾತ್ಮ ರೈತ ಬಸಪ್ಪ ಲಕ್ಕುಂಡಿ ವೀರಗಲ್ಲಿಗೆ ಮಾಲಾರ್ಪಣೆ ಮಾಡಿ ತಮ್ಮ ತಮ್ಮ ವೇದಿಕೆಗೆ ತೆರಳಿದರು.

ಮಹದಾಯಿ ವಿಚಾರವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವವರೆಗೂ ಹೋರಾಟ ಕೈಗೊಳ್ಳುವುದು, ಕೇಂದ್ರ ಸಚಿವರ ಭೇಟಿಯಾಗಿ ಹಕ್ಕೊತ್ತಾಯ, ಮುಖ್ಯಮಂತ್ರಿ ಸೇರಿ ರಾಜ್ಯದ ಜನಪ್ರತಿನಿಧಿಗಳ ಮೂಲಕ ಒತ್ತಡ ತರುವ ಕುರಿತಂತೆ ಚರ್ಚೆಯಾಯಿತು. ರೈತ ಮುಖಂಡರು ನೆರೆದಿದ್ದ ಸಾವಿರಾರು ರೈತರ ಸಮ್ಮುಖದಲ್ಲಿ ಮಹದಾಯಿಗಾಗಿ ಪುನಃ ಹೋರಾಟ ಆರಂಭಿಸಬೇಕಾದ ಅಗತ್ಯತೆ ಕುರಿತು ಒತ್ತಿ ಹೇಳಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಹುಸಿ ಭರವಸೆಗೆ ಕಿಡಿ ಕಾರಿದರು.

ಮಹದಾಯಿಗಾಗಿ ಮಹಾ ವೇದಿಕೆಯಲ್ಲಿ ಮಾತನಾಡಿದ ಮಹದಾಯಿ ಹೋರಾಟಗಾರ ಶಂಕರ ಅಂಬ್ಲಿ, ಮಹದಾಯಿ ಹೋರಾಟಕ್ಕೆ ನಾಲ್ಕು ದಶಕ ಕಳೆದಿದೆ. ಮಹದಾಯಿ ಹೋರಾಟ, ಕಬ್ಬಿಗೆ ನಿಗದಿತ ಬೆಲೆ ಸಲುವಾಗಿ ಹೋರಾಟ ನಡೆಸಿದೆ. ಮೂರು ಕಡೆ ವೇದಿಕೆ ಇದ್ದರೂ ಎಲ್ಲರ ಉದ್ದೇಶ ಒಂದೇ. ಮಹದಾಯಿಗಾಗಿ ಗುರುವಾರದಿಂದಲೇ ಸರಣಿ ಉಪವಾಸ ಸತ್ಯಾಗ್ರಹ ಆರಂಭಿಸುತ್ತೇವೆ ಎಂದರು.

ಕೂಡಲ ಸಂಗಮದ ಜಯಮೃತ್ಯುಂಜಯ ಶ್ರೀ ಮಾತನಾಡಿ, ಉತ್ತರ ಕರ್ನಾಟಕದವರೇ ಆದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಕನಸು ನನಸಾಗಿಸಬೇಕು. ಅಧಿಕಾರಿಗಳು, ರಾಜಕೀಯ ಮುಖಂಡರ ನಿರ್ಲಕ್ಷ್ಯ, ರೈತರ ಒಗ್ಗಟ್ಟಿನ ಕೊರತೆ ಕಾರಣಕ್ಕೆ ಯೋಜನೆ ನನೆಗುದಿಗೆ ಬಿದ್ದಿದೆ. ಸಿಎಂ ತಮ್ಮ ಅಧಿಕಾರದ ಅವಧಿಯಲ್ಲಿಯೆ ಮಹದಾಯಿ ಕಾಮಗಾರಿಗೆ ಚಾಲನೆ ಕೊಡಲಿ ಎಂದರು.

ರೈತ ಭವನ ವೇದಿಕೆ

ಇಲ್ಲಿ ಮಾತನಾಡಿದ ಪಕ್ಷಾತೀತ ರೈತ ಹೋರಾಟ ಸಮಿತಿ ಅಧ್ಯಕ್ಷ ಬಸಪ್ಪ ಮುಪ್ಪಯ್ಯನವರ, ನ್ಯಾಯಾಧೀಕರಣವು 13.05 ಟಿಎಂಸಿ ನೀರನ್ನು ಕರ್ನಾಟಕ ಸರ್ಕಾರಕ್ಕೆ ನಿಗಧಿಪಡಿಸಿ ಆದೇಶ ಹೊರಡಿಸಿ ಮೂರು ವರ್ಷ ಕಳೆದಿವೆ. ಕಾಮಗಾರಿಗೆ ಹಣ ಮೀಸಲಾಗಿದ್ದರೂ ಕಾಮಗಾರಿ ಪ್ರಾರಂಭಿಸಿಲ್ಲ. ಸಚಿವ ಪ್ರಹ್ಲಾದ ಜೋಶಿ ಅವರ ಮೇಲೆ ಒತ್ತಡ ತಂದು ಕೇಂದ್ರ ನೀರಾವರಿ ಮಂತ್ರಿ ಶೇಖಾವಥ್‌ ಅವರನ್ನು ಭೇಟಿಯಾಗಿ ಈ ಕುರಿತು ಚರ್ಚಿಸಲು ನಿರ್ಧರಿಸಲಾಗಿದೆ. ಅದಕ್ಕಾಗಿ ಇದೇ ಜು.24 ರಂದು ದೆಹಲಿ ಚಲೋ ಮಾಡುತ್ತಿದ್ದೇವೆ ಎಂದರು.

ನರಗುಂದ: ಕುಂಟುತ್ತ ಎಂಟನೇ ವರ್ಷಕ್ಕೆ ಕಾಲಿಟ್ಟ ಮಹದಾಯಿ ಹೋರಾಟ..!

ಆಮ್‌ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಭಾಸ್ಕರರಾವ್‌, ಮೂರು ರಾಜ್ಯದ ಮಂತ್ರಿಗಳನ್ನು ಒಗ್ಗೂಡಿಸಿ ಪ್ರಧಾನ ಮಂತ್ರಿಗಳ ನೇತೃತ್ವದಲ್ಲಿ ಕಳಸಾ ಬಂಡೂರಿ ಮಹದಾಯಿ ಜೋಡಣೆಯಾಗಬೇಕಾಗಿದೆ ಎಂದರು. ರೈತ ಭವನದಲ್ಲಿ ಪಕ್ಷಾತೀತ ರೈತ ಹೋರಾಟ ಸಮಿತಿ ರೈತ ಮುಖಂಡ ಸುಭಾಷಚಂದ್ರಗೌಡ ಪಾಟೀಲ, ಸಂಗಪ್ಪ ಸಂಗಳದ, ಎಸ್‌.ಆರ್‌.ಹಿರೇಮಠ, ಗೋಪಾಲಕೃಷ್ಣ, ನಾಗರತ್ನಾ ಧವನಮ್ಮನವರ ಇತರರಿದ್ದರು.

ಪಾಲ್ಗೊಂಡಿದ್ದ ಸಂಘಟನೆಗಳು

ಸಮಗ್ರ ಕರ್ನಾಟಕ ಹೋರಾಟ ಒಕ್ಕೂಟ ಅಧ್ಯಕ್ಷ ಲೋಕನಾಥ ಹೆಬಸೂರ, ರೈತ ಸಂಘ ಅಧ್ಯಕ್ಷ ಮಧುಸೂದನ್‌ ತಿವಾರಿ, ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಕ್ರಾಂತಿ ಅಧ್ಯಕ್ಷ ಬಸವರಾಜಪ್ಪ, ಸಾಮೂಹಿಕ ರೈತ ನಾಯಕತ್ವ ಸಂಘದ ಚುಕ್ಕಿ ನಂಜುಂಡಸ್ವಾಮಿ, ಅಖಂಡ ಕರ್ನಾಟಕ ರೈತ ಸಂಘ ಸಿದ್ದನಗೌಡ ಪಾಟೀಲ್‌ ಭಾರತೀಯ ಕೃಷಿಕ ಸಮಾಜದ ಸಿದ್ದು ಗೌಡ, ಮೋದಗಿ ರೈತ ಮುಖಂಡ ಸುಭಾಷ ಸಿರಬೋಕ್‌, ಜನಶಕ್ತಿ ರಾಜ್ಯ ಸಮಿತಿಸೂರು ಶ್ರೀಧರ ಕರ್ನಾಟಕ ರೈತ ಸೇನೆ ಶಂಕರಗೌಡ ಪಾಟೀಲ್‌, ರೈತ ಸಂಘ ರಾಮಣ್ಣ ಕೆಂಚಳ್ಳಿರ, ಅಖಂಡ ಕರ್ನಾಟಕ ರೈತ ಸಂಘ ಜಿ.ಬಿ. ಪಾಟೀಲ್‌ ಇದ್ದರು.
 

click me!