
ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್, ಬೆಳಗಾವಿ
ಬೆಳಗಾವಿ (ಜು. 22): ಕಾಡುಕೋಣ ಇರಿದು ಎಡಗೈ ಮೂಳೆ ಮುರಿದು ಕೆಲಸ ಸಿಗದೇ, ಸಂಬಳವೂ ಸಿಗದೇ ತುತ್ತು ಅನ್ನಕ್ಕಾಗಿ ಅರಣ್ಯ ಇಲಾಖೆ ದಿನಗೂಲಿ ನೌಕರ ಪರದಾಡುವ ಸ್ಥಿತಿ ಅರಣ್ಯ ಸಚಿವ ಉಮೇಶ್ ಕತ್ತಿ ತವರು ಜಿಲ್ಲೆ ಬೆಳಗಾವಿಯಲ್ಲಿ (Belagavi) ನಡೆದಿದೆ. ಅರಣ್ಯ ಸಚಿವರ ತವರು ಜಿಲ್ಲೆಯಲ್ಲೇ ಅರಣ್ಯ ವೀಕ್ಷಕರಿಗೆ ರಕ್ಷಣೆ ಇಲ್ವಾ ಅಂತಾ ಸಾರ್ವಜನಿಕರು ಪ್ರಶ್ನೆ ಮಾಡ್ತಿದ್ದಾರೆ. ಬೆಳಗಾವಿ ಜಿಲ್ಲೆ ಚಿಕ್ಕೋಡಿ ಅರಣ್ಯ ವಲಯದಲ್ಲಿ ದಿನಗೂಲಿ ಆಧಾರದಲ್ಲಿ ಅರಣ್ಯ ವೀಕ್ಷಕನಾಗಿ ಹತ್ತರವಾಟ ಗ್ರಾಮದ ಕೃಷ್ಣಾ ಗುರವ್ ಕಳೆದ ಐದು ವರ್ಷಗಳಿಂದ ಕೆಲಸ ಮಾಡುತ್ತಿದ್ದರು.
ಮೇ 2ರಂದು ರಾಯಬಾಗ ತಾಲೂಕಿನ ಕೆಂಪಟ್ಟಿ ಗ್ರಾಮದಲ್ಲಿ ಎರಡು ಕಾಡುಕೋಣಗಳು ಪ್ರತ್ಯಕ್ಷ ಆಗಿದ್ದವು. ಈ ಬಗ್ಗೆ ಕೆಂಪಟ್ಟಿ ಗ್ರಾಮಸ್ಥರು ಅರಣ್ಯ ಇಲಾಖೆಗೆ ದೂರು ನೀಡಿದ್ದರು. ಆಗ ಅರಣ್ಯ ಇಲಾಖೆ ಸಿಬ್ಬಂದಿ ಕಾಡುಕೋಣಗಳ ಸೆರೆಗೆ ಕಾರ್ಯಾಚರಣೆ ನಡೆಸಿದ್ದರು. ಈ ಕಾರ್ಯಾಚರಣೆಗೆ ದಿನಗೂಲಿ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಕೃಷ್ಣಾ ಗುರವ್‌ಗೆ ತೆರಳುವಂತೆ ಮೇಲಾಧಿಕಾರಿ ಉಮೇಶ್ ಪ್ರದಾನಿ ಎಂಬುವರು ಹೇಳಿದ್ದರಂತೆ.
ತಾನು ಹೋಗಲು ಒಪ್ಪದಿದ್ದಾಗ ಅವಾಚ್ಯ ಶಬ್ದಗಳಿಂದ ಬೈದು ಕಳಿಸಿದ್ದರಂತೆ. ಕಾಡುಕೋಣ ಸೆರೆ ಹಿಡಿಯಲು ಹೋಗಿದ್ದ ಕೃಷ್ಣಾ ಗುರವ್‌ಗೆ ಕಾಡುಕೋಣ ಎಡಗೈಗೆ ಇರಿದು ಬೀಳಿಸಿ ಎದೆ ಮೇಲೆ ಕಾಲಿಟ್ಟು ಓಡಿ ಹೋಗಿದೆ. ಕಾಡುಕೋಣ ಇರಿದ ರಭಸಕ್ಕೆ ಕೃಷ್ಣಾ ಗುರವ್ ಅವರ ಎಡಗೈ ಮೂಳೆ ಕಟ್ ಆಗಿ ಆಸ್ಪತ್ರೆ ಸೇರಿದ್ದರು.
ಚಾಮರಾಜನಗರ: ಕೊನೆಗೂ ಸಿಕ್ಕಿಬಿದ್ದ ಹುಲಿರಾಯ, ನಿಟ್ಟುಸಿರು ಬಿಟ್ಟ ಜನತೆ..!
ಈ ವೇಳೆ ಯಾವುದೇ ದೂರು ನೀಡಬೇಡ ನಿನ್ನ ಆಸ್ಪತ್ರೆಯ ಸಂಪೂರ್ಣ ಚಿಕಿತ್ಸಾ ವೆಚ್ಚ ನೋಡಿಕೊಳ್ಳುತ್ತೇವೆ. ಅಷ್ಟೇ ಅಲ್ಲದೇ ನಿನ್ನ ಮರಳಿ ಖಾಯಂ ಆಗಿ ಕೆಲಸಕ್ಕೆ ಸೇರಿಸಿಕೊಳ್ಳುತ್ತೇವೆ ಎಂದಿದ್ದರಂತೆ. ಇದಾದ ಬಳಿಕ ಆಸ್ಪತ್ರೆಯ ವೆಚ್ಚ 60 ಸಾವಿರ ಭರಿಸಿ ಅಧಿಕಾರಿಗಳು ಕೈ ತೊಳೆದುಕೊಂಡಿದ್ದಾರಂತೆ. ಘಟನೆಗೂ ಮುನ್ನ ತಾನು ಕೆಲಸ ಮಾಡಿದ ಎರಡು ತಿಂಗಳ ಸಂಬಳ ಹಾಗೂ ಆಸ್ಪತ್ರೆಗೆ ದಾಖಲಾದ ವೇಳೆಯ ಸಂಬಳವನ್ನು ಸಹ ನೀಡಿಲ್ಲ. ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದರೆ ಯಾರೊಬ್ಬರೂ ಕಿವಿಗೊಡುತ್ತಿಲ್ಲ ಎಂದು ಕೃಷ್ಣಾ ಗುರವ್ ಅಳಲು ತೋಡಿಕೊಂಡಿದ್ದಾರೆ.
ಕಾಡುಕೋಣ ಸೆರೆ ಹಿಡಿಯಲು ಹೋಗಲ್ಲ ಅಂದ್ರು ನನ್ನ ಬೆದರಿಸಿ ಕಳಿಸಿದ್ರು: ಬೆಳಗಾವಿಯಲ್ಲಿ ಏಷ್ಯಾನೆಟ್ ಸುವರ್ಣನ್ಯೂಸ್ ಜೊತೆ ಮಾತನಾಡಿದ ಕೃಷ್ಣಾ ಗುರವ್, 'ಕಾಡುಕೋಣ ಸೆರೆ ಹಿಡಿಯುವ ಬಗ್ಗೆ ನನಗೆ ಗೊತ್ತೇ ಇಲ್ಲ. ಮೊದಲ ಬಾರಿ ನಾನು ಕಾಡುಕೋಣ ನೋಡಿದ್ದು. ಚಿಕ್ಕೋಡಿ ಅರಣ್ಯ ವಲಯದಲ್ಲಿ ವಾಚರ್ ಆಗಿ ಐದು ವರ್ಷಗಳಿಂದ ಕೆಲಸ ಮಾಡ್ತಿದ್ದೆ. ನಾನು ಕಾಡುಕೋಣ ಸೆರೆ ಹಿಡಿಯಲು ಹೋಗಲ್ಲ ಅಂದ್ರು ನನ್ನ ಬೆದರಿಸಿ ಕಳಿಸಿದ್ರು. ಕಾಡುಕೋಣ ಇರಿದು ಎಡಗೈ ಮೂಲೆ ಮುರಿದು ಆಸ್ಪತ್ರೆ ದಾಖಲಾಗಿದ್ದೆ" ಎಂದಿದ್ದಾರೆ.
"ಆಸ್ಪತ್ರೆ ಸಂಪೂರ್ಣ ಚಿಕಿತ್ಸಾ ವೆಚ್ಚ ಸಮೇತ ಖಾಯಂ ನೌಕರಿ, ವೇತನ ನೀಡುವ ಭರವಸೆ ನೀಡಿದ ಅಧಿಕಾರಿಗಳು ಆಸ್ಪತ್ರೆ ಚಿಕಿತ್ಸಾ ವೆಚ್ಚ 60 ಸಾವಿರ ರೂ. ನೀಡಿ ಮೌನವಾಗಿದ್ದಾರೆ. ನಾನು ಸೇವೆ ಸಲ್ಲಿಸಿದ ಎರಡು ತಿಂಗಳ ವೇತನವನ್ನೂ ಸಹ ನೀಡುತ್ತಿಲ್ಲ. ಕೈ ಮೂಳೆ ಮುರಿದುಕೊಂಡು ಬೇರೆಡೆ ಕೆಲಸಕ್ಕೆ ಹೋಗಬೇಕಂದ್ರೆ ಯಾರೂ ಕೆಲಸ ನೀಡುತ್ತಿಲ್ಲ" ಎಂದು ಕೃಷ್ಣಾ ಗುರವ್ ತಿಳಿಸಿದ್ದಾರೆ.
ಕಡುಬಡತನದಲ್ಲಿ ಅರಳಿದ ಪ್ರತಿಭೆ: ಅಂಗವಿಕಲ ಯುವತಿಯ ಶಿಕ್ಷಣಕ್ಕೆ ಬೇಕಿದೆ ಸಹಾಯ ಹಸ್ತ
"ಮನೆಯಲ್ಲಿ ಇಬ್ಬರು ಚಿಕ್ಕಮಕ್ಕಳು, ಪತ್ನಿ, ವೃದ್ಧ ತಂದೆ ತಾಯಿ ಇದ್ದಾರೆ. ನನಗೆ ಹೀಗಾದ ಸುದ್ದಿ ತಿಳಿದು 85 ವರ್ಷದ ತಂದೆ ಹಾಸಿಗೆ ಹಿಡಿದಿದ್ದಾರೆ. ಹೇಗಾದರೂ ಮಾಡಿ ಸಹಾಯ ಮಾಡಿ ಕೆಲಸ, ಬಾಕಿ ವೇತನ ಕೊಡಿಸಿ.ನಾಲ್ಕು ತಿಂಗಳಿಂದ ಮನೆಯಲ್ಲಿ ಇದ್ದೇನೆ. ಕುಟುಂಬ ನಿರ್ವಹಣೆ ಮಾಡಲಾಗದೇ ತುತ್ತು ಅಣ್ಣ ತಿನ್ನಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ದಯವಿಟ್ಟು ಸಹಾಯ ಮಾಡಿ" ಎಂದು ಕೃಷ್ಣಾ ಗುರವ್ ಅಳಲು ತೋಡಿಕೊಂಡಿದ್ದಾರೆ.
ಇನ್ನು ತನ್ನ ಮೇಲಾಧಿಕಾರಿ ಉಮೇಶ್ ಪ್ರದಾನಿ ವಿರುದ್ಧ ರಾಯಬಾಗ ಪೊಲೀಸರಿಗೆ ದೂರು ನೀಡಿರುವ ಕೃಷ್ಣಾ ಗುರವ್ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ. ಅರಣ್ಯ ಸಚಿವ ಉಮೇಶ್ ಕತ್ತಿ ಬೆಳಗಾವಿ ಜಿಲ್ಲೆಯವರೇ ಆಗಿದ್ದು ಅವರು ಮನಸು ಮಾಡಿದ್ರೆ ಕ್ಷಣಾರ್ಧದಲ್ಲಿ ಕೆಲಸ ಕೊಡಿಸಬಹುದು. ಅರಣ್ಯ ಇಲಾಖೆ ಸಿಬ್ಬಂದಿ ನಿರ್ಲಕ್ಷ್ಯದಿಂದ ತುತ್ತು ಅನ್ನಕ್ಕಾಗಿ ಪರದಾಡುತ್ತಿರುವ ಅರಣ್ಯ ಇಲಾಖೆಯ ದಿನಗೂಲಿ ನೌಕರನ ನೆರವಿಗೆ ಸಚಿವರು ಮುಂದಾಗಲಿ ಎಂದು ಸಾರ್ವಜನಿಕರ ಆಗ್ರಹಿಸಿದ್ದಾರೆ.