ಬಸವಕಲ್ಯಾಣ: ಹಣ ಕೊಟ್ಟರೂ ಕೈಸೇರದ ಸ್ಪ್ರಿಂಕ್ಲರ್‌, ರೈತ ಕಂಗಾಲು

By Kannadaprabha News  |  First Published Aug 20, 2023, 9:30 PM IST

ಕೈಕೊಟ್ಟ ಮುಂಗಾರು ಮಳೆಯಿಂದಾಗಿ ಅನ್ನದಾತರು ಆತಂಕದಲ್ಲಿದ್ದಾರೆ. ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಸುರಿದಿಲ್ಲ. ನೀರಾವರಿ ಸೌಲಭ್ಯ ಹೊಂದಿರುವವರು ನೀರು ಉಣಿಸಿಯಾದರೂ ಸ್ವಲ್ಪ ಅನುಕೂಲ ಮಾಡಿಕೊಳ್ಳುವ ಎಂದರೆ ಕೃಷಿ ಇಲಾಖೆಯಿಂದ ಸ್ಪ್ರಿಂಕ್ಲರ್‌ ಸೆಟ್‌ ನೀಡಿಲ್ಲ.


ಬಸವಕಲ್ಯಾಣ(ಆ.20):  ಆರಂಭದ ಮಳೆಗೆ ಬಿತ್ತನೆ ಮಾಡಿರುವ ಬೆಳೆಗಳು ಹೂವು ಕಾಯಿ ಕಟ್ಟುವ ಹಂತದಲ್ಲಿವೆ. ಆದರೆ, ರೈತರಿಗೆ ಕೃಷಿ ಇಲಾಖೆಯಿಂದ ಸ್ಪ್ರಿಂಕ್ಲರ್‌ ಸೆಟ್‌ ನೀಡದೆ ಇರುವುದರಿಂದ ನೀರುಣಿಸದೆ ಬೆಳೆಗಳು ಒಣಗುವ ಭೀತಿ ಎದುರಾಗಿದೆ.

ಹುಲಸೂರ ತಾಲೂಕಿನ ಸಾಯಗಾಂವ್‌ ರೈತ ಸಂಪರ್ಕ ಕೇಂದ್ರದ ವ್ಯಾಪ್ತಿಗೆ ಬರುವ ಸಾಯಗಾಂವ್‌, ಅಟ್ಟರಗಾ, ಅಳವಾಯಿ, ಮೇಹಕರ ಸೇರಿ ಇತರೆ ಹಳ್ಳಿಯ ರೈತರ ಬೆಳೆಗಳು ತೇವಾಂಶದ ಕೊರತೆಯಿಂದ ಒಣಗುತ್ತಿವೆ. ಆರಂಭದಲ್ಲೆ ಕೈಕೊಟ್ಟ ಮುಂಗಾರು ಮಳೆಯಿಂದಾಗಿ ಅನ್ನದಾತರು ಆತಂಕದಲ್ಲಿದ್ದಾರೆ. ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಸುರಿದಿಲ್ಲ. ನೀರಾವರಿ ಸೌಲಭ್ಯ ಹೊಂದಿರುವವರು ನೀರು ಉಣಿಸಿಯಾದರೂ ಸ್ವಲ್ಪ ಅನುಕೂಲ ಮಾಡಿಕೊಳ್ಳುವ ಎಂದರೆ ಕೃಷಿ ಇಲಾಖೆಯಿಂದ ಸ್ಪ್ರಿಂಕ್ಲರ್‌ ಸೆಟ್‌ ನೀಡಿಲ್ಲ.

Latest Videos

undefined

ಬದುಕಿರುವವರೆಗೆ ಬಿಜೆಪಿಯಲ್ಲಿರುವೆ ಕಾಂಗ್ರೆಸ್‌ಗೆ ಸೇರಲ್ಲ: ಶಾಸಕ ಶರಣು ಸಲಗರ ಸ್ಪಷ್ಟನೆ

ಜಲಮೂಲಗಳು ಸಾಕಷ್ಟಿದ್ದರೂ ಸ್ವಲ್ಪ ಪ್ರಮಾಣದ ಭೂಮಿಯ ಬೆಳೆಗಳಿಗೆ ಮಾತ್ರ ನೀರು ಹರಿಸಲು ಸಾಧ್ಯವಾಗುತ್ತಿದೆ. ಅಲ್ಪಾವಧಿಯಲ್ಲೇ ಲಾಭ ಮಾಡಿಕೊಡುವ ಹೆಸರು, ಉದ್ದು ಕೈಸೇರದಂತಾಗಿದೆ. ಅಳಿದುಳಿದ ಬೆಳೆಗಳಾದ ಸೋಯಾ, ಅವರೆ ಹಾಗೂ ತೊಗರಿ ಬೆಳೆಗಳಿಗೆ ತುಂತುರು ನೀರಾವರಿ ಮೂಲಕ ನೀರುಣಿಸಲಾಗದೆ ರೈತರು ಬೆಳೆಗಳನ್ನು ಉಳಿಸುವಲ್ಲಿ ವಿಫಲರಾಗಿದ್ದಾರೆ.

ಪರಿಶಿಷ್ಟಜಾತಿ, ಪರಿಶಿಷ್ಟಪಂಗಡ ಹಾಗೂ ಸಾಮಾನ್ಯ ವರ್ಗದ 150ಕ್ಕೂ ಹೆಚ್ಚು ಜನ ರೈತರು ಸರ್ಕಾರದಿಂದ ರಿಯಾಯಿತಿ ದರದಲ್ಲಿ ನೀಡುವ ಸ್ಟ್ರಿಂಕ್ಲರ್‌ಗಳಿಗೆ ವಂತಿಕೆ ಹಣವನ್ನು ಖಾಸಗಿ ಕಂಪನಿಗಳಿಗೆ ಪಾವತಿಸಿದ್ದಾರೆ. ಆದರೆ ಇಲ್ಲಿಯವರೆಗೆ ಸ್ಪ್ರಿಂಕ್ಲರ್‌ ಸೆಟ್‌ ರೈತರ ಕೈಸೇರಿಲ್ಲ. ಇದಕ್ಕೆ ಖಾಸಗಿ ಕಂಪನಿಗಳು ಹಾಗೂ ಕೃಷಿ ಇಲಾಖೆಯ ನಿಷ್ಕಾಳಜಿ ಕಾರಣ ಎಂದು ರೈತರು ದೂರಿದ್ದಾರೆ.

ಕೃಷಿ ಇಲಾಖೆಯಿಂದ ರೈತರಿಗೆ ಎರಡು ಕಂತುಗಳಲ್ಲಿ ಖಾಸಗಿ ಕಂಪನಿಗಳಿಗೆ ತುಂತುರು ನೀರಾವರಿ ಯೋಜನೆಗಾಗಿ ಹಣ ಪಾವತಿಸಲು ತಿಳಿಸಲಾಗಿತ್ತು. ಅದರಂತೆ ರೈತರು ಹಣ ಪಾವತಿಸಿದ್ದಾರೆ. ಹಣ ಪಾವತಿಯಾದ 15 ದಿನಗಳ ಒಳಗಾಗಿ ಕೈಸೇರಬೇಕಿದ್ದ ಸ್ಪ್ರಿಂಕ್ಲರ್‌ ಸೆಟ್‌ ಇನ್ನೂ ನೀಡಿಲ್ಲ ಎಂದು ರೈತರು ಆರೋಪಿಸಿದ್ದಾರೆ.

ಹೌದು ಮೋದಿ ನನ್ನ ನಾಯಕ, ನನ್ನ ಹೆಮ್ಮೆ ಅವರಿಂದಲೇ ನಾನು ಗೆದ್ದಿರುವುದು: ಖಂಡ್ರೆಗೆ ಖೂಬಾ ತಿರುಗೇಟು

ಶೀಘ್ರದಲ್ಲಿ ಸ್ಟ್ರಿಂಕ್ಲರ್‌ ಸೆಟ್‌ ಬಾರದೇ ಇದ್ದರೆ ಅಥವಾ ರೈತರ ಹಣ ಮರುಪಾವತಿಯಾಗದಿದ್ದಲ್ಲಿ ರೈತ ಸಂಪರ್ಕ ಕೇಂದ್ರದ ಎದುರು ಉಗ್ರ ಹೋರಾಟ ಮಾಡಲಾಗುವುದು ಎಂದು ರೈತರಾದ ವಿನಾಯಕ ಮಾಣಿಕಪ್ಪ ತಿಳಿಸಿದ್ದಾರೆ.

ಖಾಸಗಿ ಕಂಪನಿಯವರಿಗೆ ರೈತರ ಹಣ ಮರು ಪಾವತಿಸಲು ಎರಡು ಸಲ ನೋಟಿಸ್‌ ಕಳುಹಿಸಿದ್ದೇವೆ. ಆದರೆ, ಇಲ್ಲಿಯವರೆಗೆ ಹಣ ಪಾವತಿಸದ ಕಾರಣ ಇಲಾಖೆಯಿಂದ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಆ ಕಂಪನಿಗೆ ಹಣ ಪಾವತಿಸಿದ ರೈತರಿಗೆ ಎರಡು ದಿನಗಳಲ್ಲಿ ಸ್ಪ್ರಿಂಕ್ಲರ್‌ ಸೆಟ್‌ ನೀಡುವ ವ್ಯವಸ್ಥೆ ಮಾಡಲಾಗುವುದು ಎಂದು ಸಹಾಯಕ ಕೃಷಿ ನಿರ್ದೇಶಕ ಮಲ್ಲಿಕಾರ್ಜುನ ಮೇತ್ರೆ ತಿಳಿಸಿದ್ದಾರೆ.  

click me!