ಚಿಕ್ಕಮಗಳೂರು: ಜಪಾವತಿ ನದಿಯ ಅಬ್ಬರಕ್ಕೆ ಕೊಚ್ಚಿ ಹೋದ ಕಾಫಿ, ಅಡಿಕೆ ತೋಟ, ಕಂಗಾಲಾದ ರೈತ

By Girish Goudar  |  First Published Sep 14, 2022, 12:35 PM IST

ಜಪಾವತಿ ನದಿಯಲ್ಲಿ ತೇಲುತ್ತಿರುವ ಅಡಿಕೆ ಮರಗಳು, ಹೆಗ್ಗರವಳ್ಳಿ ಗ್ರಾಮದ ಸುಪ್ರಿಮ್ ಎಂಬುವರಿಗೆ ಸೇರಿದ ತೋಟ , ತೋಟದ ಸ್ಥಿತಿ ಕಂಡು ಕಂಗಾಲಾಗಿರೋ ಸುಪ್ರಿಮ್ ಕುಟುಂಬ


ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು

ಚಿಕ್ಕಮಗಳೂರು(ಸೆ.14):  ಮಲೆನಾಡಿನಲ್ಲಿ ಮಳೆಯಿಂದ ದಿನಂಪ್ರತಿ ಒಂದಲ್ಲ ಒಂದು ಅನಾಹುತಗಳು ಸಂಭವಿಸುತ್ತಿವೆ. ಅದರಲ್ಲೂ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಭಾಗದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ಕಾಫಿ ಬೆಳೆಗಾರರನ್ನು ಅಕ್ಷರಶಃ ಕಣ್ಣೀರಲ್ಲಿ ಕೈ ತುಳಿಯುವಂತೆ ಮಾಡುತ್ತಿದೆ. ಸಂಜೆ ಚೆನ್ನಾಗಿದ್ದ ತೋಟವನ್ನು ಬೆಳಗ್ಗೆ ಎದ್ದು ನೋಡಿದ್ರೆ ಕೊಚ್ಚಿ ಹೋಗಿರುವ ಪ್ರಕರಣಗಳು ಮಲೆನಾಡಿನಲ್ಲಿ ಜಾಸ್ತಿಯಾಗುತ್ತಿದೆ. ಇದರ ಸಾಲಿಗೆ ಮೂಡಿಗೆರೆ ತಾಲೂಕಿನ ಹೆಗ್ಗರವಳ್ಳಿ ಗ್ರಾಮದ ಸುಪ್ರೀಮ್ ರವರ ತೋಟವೂ ಮಳೆಯಿಂದ ಕೊಚ್ಚಿ ಹೋಗಿದೆ. 

Tap to resize

Latest Videos

ನದಿ ಅಬ್ಬರಕ್ಕೆ ಕೊಚ್ಚಿ ಹೋದ ತೋಟ

ಹೇಮಾವತಿಯ ಉಪನದಿ ಜಪಾವತಿಯ ಅಬ್ಬರಕ್ಕೆ ಸುಮಾರು ಒಂದು ಎಕರೆಯಷ್ಟು ಕಾಫಿ ಹಾಗೂ ಅಡಿಕೆ ತೋಟ ಕೊಚ್ಚಿ ಹೋಗಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಹೆಗ್ಗರವಳ್ಳಿ ಗ್ರಾಮದಲ್ಲಿ ನಡೆದಿದೆ. ಹೆಗ್ಗರವಳ್ಳಿ ಸಮೀಪದ ಸುಪ್ರಿಮ್ ಎಂಬುವರ ಅಡಿಕೆ ಹಾಗೂ ಕಾಫಿತೋಟ 2013ರಿಂದಲೂ ಪ್ರತಿವರ್ಷ ಮಳೆಗಾಲಕ್ಕೆ ಕೊಚ್ಚಿ ಹೋಗುತ್ತಿದೆ. ಪ್ರತಿ ವರ್ಷ ಒಂದು-ಎರಡು ಗುಂಟೆ ಕೊಚ್ಚಿ ಹೋಗುತ್ತಿತ್ತು. ಆದರೆ, ಈ ವರ್ಷ ಒಂದೇ ರಾತ್ರಿಗೆ ಸುಮಾರು ಒಂದು ಎಕರೆಯಷ್ಟು ಕಾಫಿ-ಅಡಿಕೆ ತೋಟ ಕೊಚ್ಚಿ ಹೋಗಿದೆ. ಅಡಿಕೆ ಮರಗಳು ನದಿಯಲ್ಲಿ ತರಗೆಲೆಯಂತೆ ತೇಲುತ್ತಿವೆ. 2013ರಿಂದ ಈವರೆಗೆ ಸುಪ್ರಿಮ್ ಅವರು ಸುಮಾರು 3 ರಿಂದ 4 ಎಕರೆಯಷ್ಟು ತೋಟವನ್ನ ಕಳೆದುಕೊಂಡಿದ್ದಾರೆ. ತೋಟವಿದ್ದ ಜಾಗದಲ್ಲಿ ನದಿ ಪ್ರತಿ ವರ್ಷ ಕೊರೆದು-ಕೊರೆದು ತೋಟದ ಕುರುಹುಗಳೇ ಇಲ್ಲದಂತೆ ಕೊಚ್ಚಿ ಹೋಗಿವೆ. 

ಸಿ.ಟಿ ರವಿಗೆ ಹರಕು ಕಚ್ಚೆ ಪಾರ್ಸೆಲ್ ಕಳುಹಿಸುವ ಎಚ್ಚರಿಕೆ!

ತೋಟದಲ್ಲಿ ಭಾರೀ ಪ್ರಮಾಣದಲ್ಲಿ ಹರಿಯುತ್ತಿರುವ ನೀರು

ತೋಟವಿದ್ದ ಜಾಗದಲ್ಲಿ ಜಪಾವತಿ ನದಿ ವಿಶಾಲವಾಗಿ ಹರಿಯುತ್ತಿದ್ದಾಳೆ. ಇದನ್ನ ನೋಡಿದವರಿಗೆ ನದಿ ಜಾಗದಲ್ಲಿ ತೋಟ ಇದೆಯೋ ಅಥವ ತೋಟದಲ್ಲಿ ಹರಿಯುತ್ತಿದೆಯೋ ಎಂಬ ಅನುಮಾನ ಕೂಡ ಉಂಟಾಗುತ್ತೆ. ಆ ರೀತಿ ತೋಟದಲ್ಲಿ ನದಿ ಹರಿಯುತ್ತಿದೆ. ಸುಮಾರು ಮೂರು ದಶಕಗಳಿಂದ ಸುಪ್ರಿಮ್ ಕುಟುಂಬಕ್ಕೆ ಆಧಾರವಾಗಿದ್ದ ತೋಟ ಹೀಗೆ ಪ್ರತಿ ವರ್ಷ ಕೊಚ್ಚಿ ಹೋಗಿ ನದಿ ಪಾಲಾಗುತ್ತಿರುವುದರಿಂದ ತೋಟದ ಮಾಲೀಕರು ಕೂಡ ಕಂಗಾಲಾಗಿದ್ದಾರೆ. ಆದರೆ, ಈವರೆಗೂ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿಲ್ಲ. ಭೇಟಿ ನೀಡಿದ್ದರೂ ಒಂದೇ ಪೈಸೆ ಪರಿಹಾರ ನೀಡಿಲ್ಲ. ಪ್ರತಿವರ್ಷ ತೋಟವನ್ನ ಕಳೆದುಕೊಳ್ಳುತ್ತಿರುವುದರಿಂದ ತೋಟದ ಮಾಲೀಕ ಕಂಗಾಲಾಗಿದ್ದಾರೆ. 

2020ರಲ್ಲೂ ತೋಟ ಕೊಚ್ಚಿ ಹೋಗಿತ್ತು. ಆಗ ಸ್ಥಳಕ್ಕೆ ಬಂದಿದ್ದ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮಾಹಿತಿ ಪಡೆದು, ದಾಖಲೆ ಪಡೆದು ಹೋಗಿದ್ದರು. ಆದರೆ, ಅವರು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಯಾವುದೇ ಉಪಯೋಗವೂ ಆಗಿಲ್ಲ. ಪರಿಹಾರವೂ ಬಂದಿಲ್ಲ. ಈ ವರ್ಷವೂ ಕೂಡ ಸುಮಾರು ಒಂದು ಎಕರೆಯಷ್ಟು ಕಾಫಿತೋಟ ಸಂಪೂರ್ಣವಾಗಿ ಕೊಚ್ಚಿ ಹೋಗಿದೆ. ಇದರಿಂದ ತೋಟವನ್ನೇ ನೆಚ್ಚಿಕೊಂಡು ಬದುಕು ಕಟ್ಟಿಕೊಂಡಿದ್ದ ಕುಟುಂಬ ವರ್ಷದಿಂದ ವರ್ಷಕ್ಕೆ ಮಳೆ ಅಬ್ಬರಕ್ಕೆ ತೋಟವನ್ನ ಕಳೆದುಕೊಂಡು ಆತಂಕಕ್ಕೀಡಾಗಿದೆ.
 

click me!