ಹೊಸಪೇಟೆ: ಪುನೀತ್‌ ರಾಜಕುಮಾರ್ ಪ್ರತಿಮೆ, ವೃತ್ತಕ್ಕೆ ಆಗ್ರಹ

By Kannadaprabha NewsFirst Published Nov 1, 2021, 12:32 PM IST
Highlights

*  ಹೊಸಪೇಟೆಯ ಪವರ್‌ಸ್ಟಾರ್ ಅಭಿಮಾನಿಗಳ ಬೇಡಿಕೆ
*  ಹೊಸಪೇಟೆ ಭಾಗದ ಅಭಿಮಾನಿಗಳ ಜತೆಗೆ ಉತ್ತಮ ಬಾಂಧವ್ಯ ಹೊಂದಿದ್ದ ಪುನೀತ್
*  ಜೆಡಿಎಸ್‌ದಿಂದ ನಟ ಪುನೀತ್‌ಗೆ ಶ್ರದ್ಧಾಂಜಲಿ
 

ಹೊಸಪೇಟೆ(ನ.01): ಪವರ್ ಸ್ಟಾರ್ ಪುನೀತ್ ರಾಜಕುಮಾರ(Puneeth Rajkumar) ಅವರು ಹಂಪಿ(Hampi) ಹಾಗೂ ಹೊಸಪೇಟೆ(Hosapete) ಜತೆಗೆ ಅವಿನಾಭಾವ ನಂಟು ಹೊಂದಿರುವ ಹಿನ್ನೆಲೆ ವಿಜಯನಗರ(Vijayanagara) ಜಿಲ್ಲಾ ಕೇಂದ್ರ ಹೊಸಪೇಟೆಯಲ್ಲಿ ಅವರ ಪ್ರತಿಮೆ ನಿರ್ಮಿಸಬೇಕು. ಜತೆಗೆ ನಗರದ ಪ್ರಮುಖ ವೃತ್ತಯೊಂದಕ್ಕೆ ಅವರ ಹೆಸರಿಡಬೇಕು ಎಂಬ ಕೂಗು ಜೋರಾಗಿದೆ.

ಪುನೀತ್ ರಾಜಕುಮಾರ ಅವರು ಹೊಸಪೇಟೆ ಭಾಗದ ಅಭಿಮಾನಿಗಳ ಜತೆಗೆ ಉತ್ತಮ ಬಾಂಧವ್ಯ ಹೊಂದಿದ್ದರು. ವರನಟ ಡಾ. ರಾಜ್‌ಕುಮಾರ(Dr Rajkumar) ಕಾಲದಿಂದಲೂ ಹೊಸಪೇಟೆ ಜನತೆ ಹಾಗೂ ರಾಜ್ ಕುಟುಂಬದ(Rajkumar Family) ನಡುವೆ ಉತ್ತಮ ಒಡನಾಟ ಇದೆ. ಹಾಗಾಗಿ ಅದೇ ಬಾಂಧವ್ಯವನ್ನು ಪುನೀತ್ ರಾಜಕುಮಾರ ಅವರು ಮುಂದುವರಿಸಿದ್ದರು. ಶಿವಣ್ಣ(Shivanna) ಕೂಡ ಹೊಸಪೇಟೆ ಭಾಗದ ಅಭಿಮಾನಿಗಳು ಎಂದರೆ ಸಾಕು ಬಹಳ ಗೌರವ ನೀಡುತ್ತಾರೆ. ಪುನೀತ್ ಅವರು ಹೊಸಪೇಟೆ ಕ್ರೀಡಾಂಗಣದಲ್ಲಿ ದೊಡ್ಮನೆ ಹುಡುಗ ಚಿತ್ರದ ಹಾಡಿನ ಚಿತ್ರೀಕರಣ ಮಾಡಿದ್ದರು.

ಹೊಸಪೇಟೆ ನಂಟು: 

ಜೇಮ್ಸ್‌(James) ಚಿತ್ರದ ನಿರ್ಮಾಪಕ(Producer) ಕಿಶೋರ ಪತ್ತಿಕೊಂಡ(Kishore Pattikond) ಅವರು ಹೊಸಪೇಟೆಯವರೇ ಆಗಿದ್ದಾರೆ. ಹೊಸಪೇಟೆ ಭಾಗದ ಅಭಿಮಾನಿಗಳು(Fans) ಎಂದರೆ ಬಲು ಇಷ್ಟಪಡುತ್ತಿದ್ದ ಪುನೀತ್ ಅವರು ಸರಳ ವ್ಯಕ್ತಿತ್ವ ಹೊಂದಿದ್ದರು. ಅವರು ಅಭಿಮಾನಿಗಳ ಮನೆಗಳಿಗೆ ಬಂದು ಹೋಗಿದ್ದಾರೆ. ಇನ್ನೂ ರಣವಿಕ್ರಮ, ಜೇಮ್ಸ್‌ ಚಿತ್ರದ ಶೂಟಿಂಗ್ ಕೂಡ ಹಂಪಿ, ಹೊಸಪೇಟೆ ಭಾಗದಲ್ಲಿ ನಡೆದಿದೆ. ಇನ್ನೂ ಶಿವಣ್ಣ ಅಭಿನಯದ ಟಗರು ಚಿತ್ರದ ಶೂಟಿಂಗ್ ಕೂಡ ಹೊಸಪೇಟೆಯಲ್ಲೇ ನಡೆದಿದೆ. ಇನ್ನೂ ಈ ಚಿತ್ರದ ಆಡಿಯೊ ಬಿಡುಗಡೆ ಸಮಾರಂಭ ಹೊಸಪೇಟೆಯಲ್ಲೇ ನಡೆದಿದೆ. ಯುವರತ್ನ ಚಿತ್ರ ಏಕಕಾಲಕ್ಕೆ ನಾಲ್ಕು ಚಿತ್ರ ಮಂದಿರದಲ್ಲಿ ಬಿಡುಗಡೆಯಾಗಿ ಯಶಸ್ವಿ ಕಂಡಿತ್ತು. 

ಕೂಡ್ಲಿಗಿ ವಿಸ್ಮಯ ಕಲ್ಲು ನೋಡಿ ವಾವ್‌ ಎಂದಿದ್ದ ಪುನೀತ್‌ ರಾಜಕುಮಾರ್‌

ಅಭಿಮಾನಿಗಳ ಬೇಡಿಕೆ: 

ಪುನೀತ್ ಅವರ ಹೆಸರಿನಲ್ಲಿ ಹೊಸಪೇಟೆಯಲ್ಲಿ ವೃತ್ತ(Circle) ನಿರ್ಮಿಸಬೇಕು. ಅವರು ಹೊಸಪೇಟೆಯ ಅಭಿಮಾನಿಗಳ ಮೇಲೆ ವಿಶೇಷ ಪ್ರೀತಿ ಹೊಂದಿದ್ದರು. ಅವರು ಈ ಭಾಗದ ಜನರ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿದ್ದಾರೆ. ಹಾಗಾಗಿ ಹೊಸಪೇಟೆಯಲ್ಲಿ ಅವರ ಹೆಸರಿನಲ್ಲಿ ವೃತ್ತ ನಿರ್ಮಿಸಬೇಕು ಎಂದು ಯುವ ಮುಖಂಡ ಗುಜ್ಜಲ ರಘು ಒತ್ತಾಯಿಸಿದ್ದಾರೆ. ಪುನೀತ್ ಅಭಿಮಾನಿಗಳು ಹೊಸಪೇಟೆಯಲ್ಲೇ ಅವರ ಪ್ರತಿಮೆ(Statue) ನಿರ್ಮಾಣವಾಗಲಿ ಎಂದು ಒತ್ತಾಯಿಸುತ್ತಿದ್ದಾರೆ. ಈ ಮೂಲಕ ಪುನೀತ್ ರಾಜಕುಮಾರ ಹಾಗೂ ಹೊಸಪೇಟೆ ಸಂಬಂಧ ಸದಾಕಾಲ ಚಿರಸ್ಥಾಯಿಯಾಗಿ ಉಳಿಯಲಿ ಎಂಬ ಸದಾಶಯ ಅಭಿಮಾನಿಗಳು ಹೊಂದಿದ್ದಾರೆ.

ಕೊಟ್ಟೂರಿನಲ್ಲಿ ಪುನೀತ್ ರಾಜಕುಮಾರಗೆ ನಮನ

ಕೊಟ್ಟೂರು: ನಟ ಪುನೀತ್ ರಾಜಕುಮಾರ ಅವರ ಹಠಾತ್ ಆಗಲಿಕೆ ಅಭಿಮಾನಿಗಳಲ್ಲಿ ತೀವ್ರ ದುಃಖ ಮೂಡಿಸಿದ್ದು, ತಾಲೂಕಿನ ಪ್ರತಿ ತಾಲೂಕಿನ ಗ್ರಾಮಗಳಲ್ಲಿ ಅವರ ಭಾವಚಿತ್ರಗಳನ್ನು ವೃತ್ತಗಳಲ್ಲಿ ಅಪ್ಪುವಿನ ಇರಿಸಿ ನಮನ ಸಲ್ಲಿಸಲಾಯಿತು.

ಕೊಟ್ಟೂರು(Kotturu) ಪಟ್ಟಣದ ಬಸ್ ನಿಲ್ದಾಣ, ಗಾಂಧಿ ವೃತ್ತ ಮತ್ತಿತರ ಕಡೆ ಪುನೀತ್ ರಾಜ್‌ಕುಮಾರ್‌ವರ ಭಾವಚಿತ್ರಕ್ಕೆ ಹಾರ ಹಾಕಿ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ತಮ್ಮ ಅಭಿಮಾನವನ್ನು ಮೆರೆದಿದ್ದಾರೆ. ಕೆಲ ಅಭಿಮಾನಿಗಳು ತಮ್ಮ ಮನೆಗಳಲ್ಲಿಯೇ ಪುನೀತ್ ಭಾವಚಿತ್ರಕ್ಕೆ ಪೂಜೆ ನೆರವೇರಿಸಿದರು. 

ಅಪ್ಪು ಎಂದೆಂದೂ ಅಜರಾಮರ

ಕೂಡ್ಲಿಗಿ: ಅಪ್ಪು ಎಂಬ ಹೆಸರೇ ಅಜರಾಮರ. ಅವರು ಅಭಿಮಾನಿಗಳ ಹೃದಯದಲ್ಲಿ ಜೀವಂತ ಇದ್ದಾರೆ ಎಂದು ಕೂಡ್ಲಿಗಿಯ(Kudligi) ನೂರಾರು ಯುವಕ- ಯುವತಿಯರು ಶನಿವಾರ ರಾತ್ರಿ ಅಪ್ಪು ಭಾವಚಿತ್ರಕ್ಕೆ ಮೊಂಬತ್ತಿ ಬೆಳಗಿ ಪುಷ್ಪನಮನ ಸಲ್ಲಿಸಿ ಒಂದು ನಿಮಿಷ ಮೌನಾಚರಣೆ ಸಲ್ಲಿಸಿದರು. ಪಟ್ಟಣದ ರಾಜವೀರಮದಕರಿ ನಾಯಕ ವೃತ್ತದಲ್ಲಿ ಸಮಸ್ತ ನಾಗರಿಕರ ಪರವಾಗಿ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ವೇಳೆ ಕಾವಲ್ಲಿ ಶಿವಪ್ಪ ನಾಯಕ ಮಾತನಾಡಿ, ಪುನೀತ್ ರಾಜಕುಮಾರ ಒಬ್ಬ ರಾಜನಂತೆ ಬೆಳೆದರೂ ಕಷ್ಟ ಎಂದು ಬಂದವರಿಗೆ, ನೊಂದವರಿಗೆ ಖಾಲಿ ಕೈಯಲ್ಲಿ ಕಳುಹಿಸಿಲ್ಲ. ಅವರ ಸೇವೆ ನಮ್ಮ ಹಿಂದುಳಿದ ಕೂಡ್ಲಿಗಿ ತಾಲೂಕಿಗೂ ವ್ಯಾಪಿಸಿದ್ದು, ಪಟ್ಟಣದ ಸರ್ಕಾರಿ ಸಂಯುಕ್ತ ಪದವಿಪೂರ್ವ ಕಾಲೇಜಿನ ಪ್ರೌಢಶಾಲೆಯ ಮಕ್ಕಳ(Children) ಊಟದ ಕೊಠಡಿಗೆ ಒಂದು ಲಕ್ಷ ರುಪಾಯಿ ಅಪ್ಪು ನೀಡಿದ್ದಾರೆ ಎಂದರು ಸ್ಮರಿಸಿದರು.

ಹಂಪಿ, ಹೊಸಪೇಟೆ ಪುನೀತ್‌ಗೆ ಪಂಚಪ್ರಾಣ..!

ಜೆಡಿಎಸ್‌ದಿಂದ ನಟ ಪುನೀತ್‌ಗೆ ಶ್ರದ್ಧಾಂಜಲಿ

ಕುರುಗೋಡು: ಪಟ್ಟಣದ ಜೆಡಿಎಸ್(JDS) ಕಚೇರಿಯಲ್ಲಿ ಪವರ್‌ ಸ್ಟಾರ್(Power Star) ಪುನೀತ್‌ ರಾಜ್‌ಕುಮಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಭೆಯಲ್ಲಿ ಪಕ್ಷದ ಕಂಪ್ಲಿ ಕ್ಷೇತ್ರ ಕಾರ್ಯಾಧ್ಯಕ್ಷ ಎಚ್.ಎಂ. ವಿಶ್ವನಾಥಸ್ವಾಮಿ, ಮದಿರೆ ಎಂ. ಹೇಮರೆಡ್ಡಿ ಮಾತನಾಡಿ, ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಟನೆಯ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಿದ್ದಾರೆ. ಅಲ್ಲದೇ ಸಮಾಜಮುಖಿ ಕಾರ್ಯಗಳ ಮೂಲಕ ಜನಮಾನಸದಲ್ಲಿ ಅಚ್ಚೊತ್ತಿದ್ದಾರೆ ಎಂದರು.

ಕೋಳೂರು ಹೋಬಳಿ ಅಧ್ಯಕ್ಷ ದಮ್ಮೂರು ನಾರಾಯಣರೆಡ್ಡಿ, ಕಂಪ್ಲಿ ಮುಖಂಡ ಹಡ್ಲಿಗಿ ಮಲ್ಲಿಕಾರ್ಜುನ, ಮುಖಂಡ ಮುದಿಮಲ್ಲನಗೌಡ, ಬಂಗಿಸಾದಣ್ಣ, ಕೊಟ್ಟಾಲ್ ರಾಂಭೂಷಣ, ಹಡ್ಲಿಗಿ ಈಶ್ವರನಾಯಕ್, ಚಿಕ್ಕಜಾಯಿಗನೂರು ಜೆ. ಅಂಬರೀಷ್, ಜೆ. ಹೇಮರೆಡ್ಡಿ, ಕೆ. ಜಗದೀಶ, ಗೂಡುವಲಿ, ಇಡ್ಲಿಬಂಡಿಮೌಲ, ಕೊಟ್ಟಾಲ್ ಹನುಮಂತ, ಕಲ್ಲುಕಂಬ ಪಕ್ಕೀರಪ್ಪ ಇತರರು ಇದ್ದರು.
 

click me!