ಮಾಲಿಕನ ಮಾಸ್ಟರ್ ಪ್ಲಾನ್ ಫ್ಲಾಪ್ : ಡಸ್ಟರ್‌ ಕಾರು ಆರ್‌ಟಿಓ ಬಲೆಗೆ

By Kannadaprabha NewsFirst Published Jan 5, 2020, 8:28 AM IST
Highlights

ಡಸ್ಟರ್ ಕಾರು ಮಾಲಿಕನ ಮಾಸ್ಟರ್ ಪ್ಲಾನ್ ಫ್ಲಾಫ್ ಆಗಿದೆ. ನಕಲಿ ನೋಂದಣಿ ಮಾಡಿಕೊಂಡು ಸಂಚರಿಸುತ್ತಿದ್ದವ ಈಗ RTO ಅಧಿಕಾರಿಗಳ ಬಲೆಗೆ ಬಿದ್ದಿದ್ದಾನೆ. 

ಬೆಂಗಳೂರು [ಜ.05]:  ನಕಲಿ ನೋಂದಣಿ ಫಲಕ ಅಳವಡಿಸಿ ಅಕ್ರಮವಾಗಿ ಸಂಚರಿಸುತ್ತಿದ್ದ ಡಸ್ಟರ್‌ ಕಾರನ್ನು ಯಶವಂತಪುರ ಆರ್‌ಟಿಓ ಅಧಿಕಾರಿಗಳು  ಜಪ್ತಿ ಮಾಡಿದ್ದಾರೆ.

ಅನ್ನಪೂರ್ಣೇಶ್ವರಿ ನಗರ ನಿವಾಸಿ ಸತೀಶ್‌ಕುಮಾರ್‌ ಎಂಬಾತ ಈ ಡಸ್ಟರ್‌ ಕಾರಿಗೆ ‘ಕೆಎ 01 ಎಫ್‌ಎನ್‌ 6223’ ನೋಂದಣಿ ಸಂಖ್ಯೆ ಅಳವಡಿಸಿಕೊಂಡು ಅಕ್ರಮವಾಗಿ ಓಡಾಡುತ್ತಿರುವುದು ಇದೀಗ ಪತ್ತೆಯಾಗಿದೆ. ತೆರಿಗೆ ವಂಚಿಸಲು ಈ ಅಕ್ರಮ ಮಾರ್ಗ ಅನುಸರಿಸಿರುವುದು ಪ್ರಾಥಮಿಕ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

ವಾಹನ ಸವಾರರೇ ಎಚ್ಚರ ! ನಂಬರ್ ಪ್ಲೇಟ್ ಮೇಲೂ ಬಿದ್ದಿದೆ ಪೊಲೀಸ್ ಕಣ್ಣು!.

ಶನಿವಾರ ಬೆಳಗ್ಗೆ ಅನ್ನಪೂಣೇಶ್ವರಿನಗರದ ರಸ್ತೆ ಬದಿಯಲ್ಲಿ ಈ ಕಾರು ನಿಂತಿತ್ತು. ಈ ವೇಳೆ ಕಾರಿನ ನೋಂದಣಿ ಸಂಖ್ಯೆ ನೋಡಿದಾಗ ‘ಕೆಎ 01 ಎಫ್‌ಎನ್‌ 6223’ ಎಂದಿತ್ತು. ರಾಜ್ಯದಲ್ಲಿ ಎಫ್‌ಎನ್‌ ಸರಣಿಯ ನೋಂದಣಿ ಸಂಖ್ಯೆಯೇ ಇಲ್ಲ. ಹೀಗಾಗಿ ಅನುಮಾನ ಬಂದಿತು. ಬಳಿಕ ಸತೀಶ್‌ನನ್ನು ಕರೆಸಿ ವಿಚಾರಣೆ ಮಾಡಿದಾಗ ತೆರಿಗೆ ಪಾವತಿಸಲು ಹಣವಿಲ್ಲದೆ ನಕಲಿ ನೋಂದಣಿ ಫಲಕ ಅಳವಡಿಸಿಕೊಂಡು ಓಡಾಡುತ್ತಿದ್ದುದ್ದಾಗಿ ಹೇಳಿದರು. 4 ವರ್ಷದ ಹಿಂದೆ ಪರಿಚಿತ ವ್ಯಕ್ತಿಯಿಂದ ಈ ಕಾರನ್ನು ಖರೀದಿಸಿದ್ದೆ. ಆಗ ಕಾರಿನಲ್ಲಿ ಪಂಜಾಬ್‌ ನೋಂದಣಿ ಸಂಖ್ಯೆ ಇತ್ತು.

ಶಾಸಕರು, ಸಂಸದರ ‘ಖಾಸಗಿ ನಂಬರ್‌ ಪ್ಲೇಟ್‌’ ನಿಷೇಧ!...

ತೆರಿಗೆ ಪಾವತಿಸಲು ಹಣದ ಸಮಸ್ಯೆ ಇದ್ದುದ್ದರಿಂದ ನಕಲಿ ನೋಂದಣಿ ಫಲಕದ ದಾರಿ ಹಿಡಿದೆ ಎಂದು ಸತೀಶ್‌ ತಪ್ಪೊಪ್ಪಿಕೊಂಡಿದ್ದಾರೆ ಎಂದು ಯಶವಂತಪುರ ಆರ್‌ಟಿಓ ಕಚೇರಿಯ ಹಿರಿಯ ಮೋಟಾರು ವಾಹನ ನಿರೀಕ್ಷಕ ರಾಜಣ್ಣ ಹೇಳಿದರು.

ಅಯ್ಯಪ್ಪ ಮಾಲೆಧರಿಸಿ ಸತೀಶ್‌ ಶಬರಿಮಲೆಗೆ ತೆರಳುತ್ತಿದ್ದಾರೆ. ಕಾರಿನ ಮೂಲ ದಾಖಲೆ ಸ್ನೇಹಿತರ ಬಳಿ ಇದ್ದು, ಹಾಜರು ಪಡಿಸಲು ಕಾಲಾವಕಾಶ ಕೇಳಿದ್ದಾರೆ. ಈಗಾಗಲೇ ಕಾರು ಜಪ್ತಿ ಮಾಡಿ ತೆರಿಗೆ ವಂಚನೆ ಪ್ರಕರಣ ದಾಖಲಿಸಲಾಗಿದೆ. ಸದ್ಯಕ್ಕೆ ಈ ಕಾರಿನ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ. ಮೂಲ ದಾಖಲೆಗಳ ಪರಿಶೀಲನೆ ಬಳಿಕ ಮತ್ತಷ್ಟುಮಾಹಿತಿ ದೊರೆಯಲಿದೆ ಎಂದು ತಿಳಿಸಿದರು.

click me!