ನಮ್ಮ ಮೆಟ್ರೋ ಸೇವೆಯನ್ನು ದಾಬಸ್ ಪೇಟೆವರೆಗೂ ವಿಸ್ತರಣೆ ಮಾಡುವಂತೆ ಮನವಿ ಮಾಡಲಾಗಿದೆ. ಯಲಹಂಕ ಶಾಸಕ SR ವಿಶ್ವನಾಥ್ ಈ ಬಗ್ಗೆ ಮನವಿ ಮಾಡಿದ್ದಾರೆ.
ಬೆಂಗಳೂರು [ಜ.19]: ಕೈಗಾರಿಕಾ ಪ್ರದೇಶವಾಗಿರುವ ಹಾಗೂ ಅನೇಕ ಹೊಸ ಕೈಗಾರಿಕೆಗಳು ಸ್ಥಾಪನೆಯಾಗಲಿರುವ ದಾಬಸ್‌ಪೇಟೆವರೆಗೆ ಮೆಟ್ರೋ ಯೋಜನೆ ವಿಸ್ತರಿಸುವಂತೆ ಮೆಟ್ರೋ ರೈಲು ನಿಗಮಕ್ಕೆ ಮನವಿ ಮಾಡಿರುವುದಾಗಿ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಬೆಂಗಳೂರು ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರದವರಿಗೆ (ಬಿಐಇಸಿ) ಮೆಟ್ರೋ ಕಾಮಗಾರಿ ನಡೆಯುತ್ತಿದ್ದು, ಇದನ್ನು ದಾಬಸ್‌ಪೇಟೆವರೆಗೆ ವಿಸ್ತರಿಸುವುದರಿಂದ ಕಾರ್ಮಿಕರಿಗೆ ಹೆಚ್ಚಿನ ಅನುಕೂಲವಾಗುತ್ತದೆ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಮಾಡಿದ್ದೇನೆ. ಈಗ ನಡೆಯುತ್ತಿರುವ ಯೋಜನೆ ಪೂರ್ಣಗೊಂಡ ನಂತರ ಈ ಬಗ್ಗೆ ಪರಿಶೀಲಿಸುವುದಾಗಿ ಭರವಸೆ ನೀಡಿದ್ದಾರೆ. ಅಲ್ಲದೇ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಪರ್ಕಿಸುವ ಮೆಟ್ರೋ ಯೋಜನೆ ಕಾಮಗಾರಿಗೆ ಇನ್ನೆರಡು ತಿಂಗಳಲ್ಲಿ ಟೆಂಡರ್ ಕರೆದು ಕಾಮಗಾರಿ ಆರಂಭಿಸುವುದಾಗಿ ತಿಳಿಸಿದ್ದಾಗಿ ಅವರು ವಿವರಿಸಿದರು.
ಬೆಂಗಳೂರು : ಮಾರ್ಚ್ ವೇಳೆಗೆ ಮೆಟ್ರೋ ಸುರಂಗ ಕಾಮಗಾರಿ?... f
ಬಿಐಇಸಿವರೆಗೆ ನಡೆಯುತ್ತಿರುವ ಮೆಟ್ರೋ ಕಾಮಗಾರಿ ಸಂಬಂಧ ಚುಂಚಘಟ್ಟದಲ್ಲಿ ಮೆಟ್ರೋ ನಿಲ್ದಾಣ ಸ್ಥಾಪಿಸುವಂತೆ ಗ್ರಾಮಸ್ಥರು ಕಳೆದ ಒಂದು ತಿಂಗಳಿಂದ ಪ್ರತಿಭಟನೆ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಮೆಟ್ರೋ ನಿಗಮ ವ್ಯವಸ್ಥಾಪಕ ನಿರ್ದೇಶಕರು, ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳ ಸಭೆ ನಡೆಸಿದೆ. ತಮ್ಮ ಗ್ರಾಮ ಸಮೀಪ ನಿಲ್ದಾಣ ಸ್ಥಾಪಿಸದೇ ಜಿಂದಾಲ್ ಸಂಸ್ಥೆಗೆ ಹಾಗೂ ಅಲ್ಲಿರುವ ಅಪಾರ್ಟ್‌ಮೆಂಟ್‌ಗಳಿಗೆ ಅನುಕೂಲವಾಗುವಂತೆ ನಿಲ್ದಾಣ ನಿರ್ಮಾಣ ಮಾಡಲಾಗುತ್ತಿದೆ ಎಂದು ಗ್ರಾಮಸ್ಥರು ಆರೋಪ ಮಾಡಿದ್ದಾರೆ. ಆದರೆ ಅವರ ಆರೋಪಗಳನ್ನು ನಿರಾಕರಿಸಿರುವ ಅಧಿಕಾರಿಗಳು, ಗ್ರಾಮಸ್ಥರು ಹೇಳಿರುವ ಜಾಗ ನೈಸ್ ಸಂಸ್ಥೆಗೆ ಸೇರಿದೆ. ಹಾಗಾಗಿ ಅಲ್ಲಿ ನಿಲ್ದಾಣ ನಿರ್ಮಿಸಲು ಆಗುವುದಿಲ್ಲ. ಜತೆಗೆ ಈ ಯೋಜನೆ 2013ರಲ್ಲಿ ಸಿದ್ಧಪಡಿಸಲಾಗಿದೆ. ಯಾವುದೇ ಅಪಾರ್ಟ್‌ಮೆಂಟ್‌ಗೆ ಅನುಕೂಲವಾಗುವ ರೀತಿಯಲ್ಲಿ ನಿಲ್ದಾಣ ನಿರ್ಮಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
ಹೀಗಿದ್ದಾಗ್ಯೂ ಜ.28 ರಂದು ವಿಧಾನಸೌಧದಲ್ಲಿ ಚುಂಚಘಟ್ಟಗ್ರಾಮಸ್ಥರು, ಅಧಿಕಾರಿಗಳ ಸಭೆ ಕರೆದು ಮನವೊಲಿಕೆ ಮಾಡಲು ಪ್ರಯತ್ನಿಸಲಾಗುವುದು ಎಂದು ಅವರು ಹೇಳಿದರು.