ಚುನಾವಣೆಗೆ ಸ್ಪರ್ಧಿಸಿದ್ದಕ್ಕೆ ಗ್ರಾಮದಿಂದಲೇ ಬಹಿಷ್ಕಾರ..!

By Kannadaprabha NewsFirst Published Dec 19, 2020, 1:39 PM IST
Highlights

ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ತೊಗರಿಕಟ್ಟೆ ಗ್ರಾಪಂ ವ್ಯಾಪ್ತಿಯ ಬಾಪೂಜಿ ನಗರದಲ್ಲಿ ಘಟನೆ| ತಹಸೀಲ್ದಾರ್‌ಗೆ ಅಭ್ಯರ್ಥಿಗಳ ದೂರು| 5.25 ಲಕ್ಷ ರು. ಪಡೆದು ಅವಿರೋಧವಾಗಿ ಆಯ್ಕೆ ಮಾಡಲು ಮುಂದಾದ ಗ್ರಾಮದ ಮುಖಂಡರು| 

ಹರಪನಹಳ್ಳಿ(ಡಿ.19): ಗ್ರಾಮ ಪಂಚಾಯ್ತಿ ಚುನಾವಣೆಗೆ ಸ್ಪರ್ಧಿಸಿದ್ದಕ್ಕೆ ಊರಿನ ಪ್ರಮುಖರು ಗ್ರಾಮದಿಂದ ಬಹಿಷ್ಕಾರ ಹಾಕುವುದರ ಜೊತೆ ಬೆದರಿಕೆ ಒಡ್ಡಿರುವ ಘಟನೆ ತಾಲೂಕಿನ ಬಾಪೂಜಿ ನಗರದಲ್ಲಿ ಜರುಗಿದೆ.

ಈ ಕುರಿತು ತಹಸೀಲ್ದಾರ್‌ಗೆ ಶುಕ್ರವಾರ ದೂರು ನೀಡಿರುವ ಗ್ರಾ.ಪಂ. ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಹಾಗೂ ಎಐವೈಎಫ್‌ ರಾಜ್ಯ ಉಪಾಧ್ಯಕ್ಷ ಚಂದ್ರನಾಯ್ಕ ಮತ್ತು ಕಾರ್ಯದರ್ಶಿ ರಮೇಶ ನಾಯ್ಕ ಅವರು, ಹರಪನಹಳ್ಳಿ ತಾಲೂಕು ತೊಗರಿಕಟ್ಟೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬಾಪೂಜಿ ನಗರ ಗ್ರಾಮ ವಾರ್ಡ್‌ ಸಂಖ್ಯೆ 5 ಮತ್ತು 6ರಲ್ಲಿ ಸ್ಪರ್ಧಿಸಿದ್ದೇವೆ. ಆದರೆ ನಮ್ಮ ಸ್ಪರ್ಧೆಗೆ ಊರಿನ ಮುಖಂಡರು ವಿರೋಧಿಸುತ್ತಿದ್ದಾರೆ.

ಚುನಾವಣೆ ನಡೆಸದೇ ನಿಗದಿತ ಐದು ಸ್ಥಾನಗಳಿಗೆ ತಮಗೆ ಬೇಕಾದ ಐದು ಅಭ್ಯರ್ಥಿಗಳನ್ನು ಗುರುತಿಸಿ ಅವರಿಂದ ತಲಾ 5.25 ಲಕ್ಷ ರು.ಗಳನ್ನು ಪಡೆದು ಅವಿರೋಧವಾಗಿ ಆಯ್ಕೆ ಮಾಡಲು ಗ್ರಾಮದ ಮುಖಂಡರು ಮುಂದಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಗ್ರಾಮದಲ್ಲಿ ನಡೆಯುತ್ತಿರುವ ಈ ಪ್ರಜಾಪ್ರಭುತ್ವ ವಿರೋಧಿ ಚಟುವಟಿಕೆ ವಿರೋಧಿಸಿ ನಾವು ಸ್ಪರ್ಧೆ ಮಾಡುವ ಮೂಲಕ ಸಂವಿಧಾನಿಕ ಆಶಯವನ್ನು ಉಳಿಸಲು ಮುಂದಾಗಿದ್ದೇವೆ. ನಮ್ಮ ಸ್ಪರ್ಧೆಗೆ ವಿರೋಧ ವ್ಯಕ್ತಪಡಿಸುತ್ತ ನಮ್ಮ ಮತ್ತು ನಮ್ಮ ಕುಟುಂಬ ಹಾಗೂ ಈ ಚುನಾವಣೆಯಲ್ಲಿ ನಮಗೆ ಸೂಚಕ, ಅನುಮೋದಕರಾಗಿರುವವರಿಗೆ ಗ್ರಾಮದಿಂದ ಬಹಿಷ್ಕಾರ ಹಾಕುವ ಹಾಗೂ ಪ್ರಾಣ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ಅವರು ಮನವಿ ಪತ್ರದಲ್ಲಿ ದೂರಿದ್ದಾರೆ.

ಮೈಲಾರಲಿಂಗೇಶ್ವರನಿಗೆ ಹೆಲಿಕಾಪ್ಟರ್‌ ಅನ್ನೇ ಕೊಟ್ಟಿದ್ಯಾಕೆ? ಇಲ್ಲಿದೆ ಡಿಕೆಶಿ ಕಾಣಿಕೆ ರಹಸ್ಯ

ಇದು ತಳ ಸಮುದಾಯದವರಿಂದಲೇ ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಸಂವಿಧಾನಕ್ಕೆ ಕೊಡಲಿ ಪೆಟ್ಟು ಹಾಕುವ ಎಲ್ಲಾ ಪ್ರಯತ್ನಗಳ ಪ್ರಥಮ ಹೆಜ್ಜೆಯಾಗಿದೆ. ತಾಲೂಕು ದಂಡಾಧಿಕಾರಿಗಳಾದ ತಾವು ನಮ್ಮ ಗ್ರಾಮದಲ್ಲಿ ಪ್ರಜಾಪ್ರಭುತ್ವ ಉಳಿವಿಗಾಗಿ ಗ್ರಾಮ ಪಂಚಾಯಿತಿಯಲ್ಲಿ ಸ್ಪರ್ಧಿಸಿರುವ ನಮಗೆ ಮತ್ತು ನಮ್ಮ ಕುಟುಂಬಕ್ಕೆ ಹಾಗೂ ನಮ್ಮ ಸೂಚಕರು ಹಾಗೂ ಅವರ ಕುಟುಂಬ ವರ್ಗದವರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಬಾಪೂಜಿ ನಗರ 5 ಮತ್ತು 6 ವಾರ್ಡ್‌ಗಳ ಕ್ಷೇತ್ರಗಳನ್ನು ಅತಿಸೂಕ್ಷ್ಮ ಕೇಂದ್ರವೆಂದು ಪರಿಗಣಿಸಿ, ಚುನಾವಣೆಯ ಎಲ್ಲಾ ಪ್ರಕ್ರಿಯೆಗಳಾದ ಸ್ಪರ್ಧೆ, ಪ್ರಚಾರ ಹಾಗೂ ಅಕ್ರಮ ರಹಿತ ಮತಧಾನಕ್ಕೆ ಅವಕಾಶ ಕಲ್ಪಿಸಿಕೊಡಬೇಕೆಂದು ಅವರು ಕೋರಿದ್ದಾರೆ.

ತಾವುಗಳು ಈ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಿದರೆ ಮುಂದೆ ಆಗುವ ಅನಾಹುತಗಳಿಗೆ ತಾವೇ ಜವಾಬ್ದಾರರಾಗಿರುತ್ತೀರಿ ಎಂದು ಅವರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಎಐವೈಎಫ್‌ ರಾಜ್ಯ ಕಾರ್ಯದರ್ಶಿ ಎಚ್‌ ಎಂ. ಸಂತೋಷ ಹಾಗೂ ಎಐಕೆಎಸ್‌ ರಾಜ್ಯ ಉಪಾಧ್ಯಕ್ಷ ಹೊಸಹಳ್ಳಿ ಮಲ್ಲೇಶ ಅವರೂ ಹಾಜರಿದ್ದರು.

ನಾನು ಮತ್ತು ಸಬ್‌ ಇನ್ಸಪೆಕ್ಟರ್‌ ಡಿ. 19ರಂದು ಬಾಪೂಜಿ ನಗರಕ್ಕೆ ತೆರಳಿ ಸಭೆ ನಡೆಸಿ ಗ್ರಾಮದ ಮುಖಂಡರಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆ ರೀತಿ ಮಾಡಬಾರದು ಎಂದು ತಿಳಿವಳಿಕೆ ಹೇಳಿ ಮನವರಿಕೆ ಮಾಡುತ್ತೇವೆ ಎಂದು  ಹರಪನಹಳ್ಳಿ ತಹಸೀಲ್ದಾರ್‌ ಎಲ್‌.ಎಂ. ನಂದೀಶ ತಿಳಿಸಿದ್ದಾರೆ. 
 

click me!