ದಿಂಗಾ​ಲೇ​ಶ್ವರ ಮಠದಲ್ಲಿ ಡಿಕೆಶಿಗೆ ಪೂರ್ಣಕುಂಭ ಸ್ವಾಗತ: ಶ್ರೀಗಳ ನಡೆಗೆ ಭಕ್ತರಲ್ಲಿ ತೀವ್ರ ಅಸಮಾಧಾನ

By Kannadaprabha News  |  First Published Dec 19, 2020, 1:22 PM IST

ಯಾವುದೇ ರಾಜ​ಕೀಯ ಉದ್ದೇ​ಶಕ್ಕೆ ಡಿಕೆಶಿ ಮಠಕ್ಕೆ ಬಂದಿ​ಲ್ಲ: ದಿಂಗಾ​ಲೇ​ಶ್ವರ ಶ್ರೀ| ರಾಜಕಾರಣಿಗಳಿಗೆ ಆಶೀರ್ವಾದ, ಸಲಹೆ, ಮಾರ್ಗದರ್ಶನ ಮಾಡುವುದಷ್ಟೇ ಮಠಾಧೀಶರ ಕೆಲಸ. ಅದು ಬಿಟ್ಟು ಈ ರೀತಿ ರಾಜಕಾರಣಿಗಳ ಓಲೈಕೆ ಮಾಡುವುದರಿಂದ ಮಠದ ಘನತೆಗೆ ದಕ್ಕೆ ಬರುತ್ತದೆ: ಭಕ್ತರು| 


ಗದಗ/ಲಕ್ಷ್ಮೇ​ಶ್ವ​ರ(ಡಿ.19): ಉತ್ತರ ಕರ್ನಾಟಕದ ಪ್ರಮುಖ ವೀರಶೈವ ಲಿಂಗಾ​ಯಿತ ಮಠ​ವಾದ ಬಾಲೆ​ಹೊ​ಸೂ​ರಿನ ದಿಂಗಾ​ಲೇ​ಶ್ವರ ಮಠಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವ​ಕು​ಮಾರ ಶುಕ್ರವಾರ ದಿಢೀರ ಭೇಟಿ ನೀಡಿದ ಸಂದರ್ಭದಲ್ಲಿ ಡಿಕೆಶಿಗೆ ದಿಂಗಾ​ಲೇ​ಶ್ವರ ಶ್ರೀಗಳು ಪೂರ್ಣಕುಂಭದ ಸ್ವಾಗತ ನೀಡಿ ಭಕ್ತರಲ್ಲಿ ಅಚ್ಚರಿ ಮೂಡಿಸಿದ್ದಾರೆ.

ಮೈಲಾ​ರ​ದಿಂದ ಬೆಳ​ಗಾ​ವಿಗೆ ಹೋಗು​ವಾಗ ಮಾರ್ಗ ಮಧ್ಯೆ ದಿಂಗಾಲೇಶ್ವರ ಮಠಕ್ಕೆ ಭೇಟಿ ನೀಡಿರುವ ಡಿ.ಕೆ. ಶಿವ​ಕು​ಮಾರ ಹಲವು ವಿಷ​ಯ​ಗಳ ಕುರಿತು ಶ್ರೀಗ​ಳೊಂದಿಗೆ ಒಂದು ಗಂಟೆಗೂ ಅಧಿಕ ಕಾಲ ಚರ್ಚಿ​ಸಿದರು ಎನ್ನಲಾಗಿದೆ. ಹೀಗೆ ಡಿಕೆಶಿ ದಿಢೀರ್‌ ಭೇಟಿ ಮತ್ತು ಪೂರ್ಣಕುಂಭದ ಸ್ವಾಗತ ಭಕ್ತ ವಲಯದಲ್ಲಿ ತೀವ್ರ ಕುತೂ​ಹಲ ಕೆರ​ಳಿ​ಸಿವೆ. ಆದರೆ, ಬಳಿಕ ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿದ ಶ್ರೀಗಳು, ಅಂತಹ ಯಾವುದೇ ರಾಜ​ಕೀಯ ಚರ್ಚಿ​ಗಳು ನಡೆ​ದಿಲ್ಲ. ಇದೊಂದು ಸೌಹಾ​ರ್ದ​ಯುತ ಭೇಟಿ​. ಯಾವುದೇ ರಾಜ​ಕೀಯ ಉದ್ದೇಶದಿಂದ ಡಿಕೆಶಿ ಅವರು ನನ್ನನ್ನು ಭೇಟಿ ಮಾಡಿ ಚರ್ಚಿ​ಸಿಲ್ಲ. ಧಾರ್ಮಿಕ, ಸಾಮಾ​ಜಿಕ ಹಾಗೂ ವೈಯ​ಕ್ತಿಕ ವಿಚಾ​ರ​ಗಳ ಕುರಿತು ಚರ್ಚಿ​ಸಲು ಬಂದಿ​ದ್ದರು. ಮಠ​ಗ​ಳಿಗೆ ನಾಯ​ಕರು ಭೇಟಿ ನೀಡು​ವುದು ನಮ್ಮ ನಾಡಿನ ಸಂಸ್ಕೃತಿ. ನಮ್ಮ ಮಠಕ್ಕೆ ಬಿಜೆಪಿ, ಕಾಂಗ್ರೆ​ಸ್‌, ಜೆಡಿ​ಎಸ್‌ ಸೇರಿ​ದಂತೆ ಎಲ್ಲ ರಾಜ​ಕೀಯ ನಾಯ​ಕರು ಭೇಟಿ ನೀಡು​ತ್ತಾರೆ ಎಂದು ಸಮರ್ಥಿಸಿಕೊಂಡರು.

Latest Videos

undefined

ಹುಬ್ಬ​ಳ್ಳಿಯ ಮೂರುಸಾವಿರ ಮಠದ ಅಧಿ​ಕಾ​ರಕ್ಕೆ ಸಂಬಂಧಿ​ಸಿದ ಪ್ರಶ್ನೆಗೆ ಉತ್ತ​ರಿ​ಸಿದ ಶ್ರೀಗಳು, ಕೊರೋನಾ ಅಡ್ಡಿ​ಯಾ​ಗಿದೆ. ಕೊರೋನಾ ನಿವಾ​ರ​ಣೆ​ಯಾದ ಬಳಿಕ ಅಧಿ​ಕಾ​ರಕ್ಕೆ ಸಂಬಂಧಿ​ಸಿದ ಸಮಸ್ಯೆಯೂ ನಿವಾ​ರ​ಣೆ​ಯಾ​ಗಲಿದೆ. ಈ ವಿಷ​ಯಕ್ಕೆ ಸಂಬಂಧಿ​ಸಿ​ದಂತೆ ಯಾರೂ ಅಡ್ಡಿ​ಯುಂಟು ಮಾಡಿಲ್ಲ ಎಂದು ತಿಳಿ​ಸಿ​ದ​ರು.

ದಾಸೋಹ ಮೂರ್ತಿ ಹಾಲಕೆರೆ ಅನ್ನದಾನೇಶ್ವರ ಶ್ರೀಗಳಿಗೆ ಜನ್ಮ​ದಿ​ನೋ​ತ್ಸ​ವ

ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದ ಪ್ರಶ್ನೆಗೆ, ಸಮಾಜ ಒಡೆಯುವ ಕೆಲಸ ಮಾಡಿ​ದರೆ ದುಷ್ಪ​ರಿ​ಣಾಮ ಎದು​ರಿ​ಸ​ಬೇ​ಕಾ​ಗು​ತ್ತದೆ. ಅಂತಹ ವಿಚಾರದಿಂದ ಪಕ್ಷ ಹಾಗೂ ನಾಯ​ಕ​ತ್ವಕ್ಕೆ ಧಕ್ಕೆ​ಯಾ​ಗ​ಲಿದೆ. ಧರ್ಮದ ವಿಚಾರದಲ್ಲಿ ರಾಜಕೀಯ ಹಸ್ತ​ಕ್ಷೇಪ ಇರ​ಬಾ​ರದು. ಸದ್ಯ ವೀರಶೈವ ಲಿಂಗಾಯತ ವಿಚಾರ ಮುಗಿದ ಅಧ್ಯಾ​ಯ​ವಾ​ಗಿ​ದೆ ಎಂದ​ರು.

ಇದಕ್ಕೂ ಮುನ್ನ ಮಠಕ್ಕೆ ಭೇಟಿ ನೀಡಿ ದಿಂಗಾ​ಲೇ​ಶ್ವರ ಶ್ರೀಗಳ ಆಶೀ​ರ್ವಾದ ಪಡೆದ ಡಿ.ಕೆ. ಶಿವ​ಕು​ಮಾರ ಸುದ್ದಿ​ಗಾ​ರ​ರೊಂದಿಗೆ ಮಾತ​ನಾಡಿ, ಶ್ರೀಗಳು ಈ ಭಾಗದ ಜನತೆಯಲ್ಲಿ ಶಾಂತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಶ್ರೀಗ​ಳನ್ನು ಭೇಟಿ ಮಾಡಿ, ಮಾರ್ಗದರ್ಶನ ಪಡೆದಿದ್ದೇನೆ. ಎಲ್ಲಿ ಶಕ್ತಿ ಇರುತ್ತದೆಯೋ ಅಲ್ಲಿ ಎಲ್ಲರೂ ಹೋಗುತ್ತಾರೆ. ಶ್ರೀಮಠ​ದಲ್ಲಿ ಅಪಾರ ಶಕ್ತಿ, ಜ್ಞಾನ ಭಂಡಾರ ಇದೆ. ಈ ಹಿನ್ನೆ​ಲೆ​ಯಲ್ಲಿ ನಾನೂ ಇಲ್ಲಿಗೆ ಬಂದಿದ್ದೇನೆ ಎಂದರು. ಮಾಜಿ ಸಚಿವ ರುದ್ರಪ್ಪ ಲಮಾಣಿ, ನಾಗರಾಜ ಛಬ್ಬಿ, ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ಆನಂದ ಗಡ್ಡದೇವರಮಠ, ಯು.ಎನ್‌. ಹೊಳಲಾಪೂರ, ಹುಮಾಯೂನ್‌ ಮಾಗಡಿ, ರಾಜು ಕುಂಬಿ. ಫಕೀರೇಶ ಮ್ಯಾಟಣ್ಣವರ, ಜಯಕ್ಕ ಕಳ್ಳಿ, ಸೋಮಣ್ಣ ಬೆಟಗೇರಿ ಇದ್ದರು.

ಪೂರ್ಣಕುಂಭ ಸ್ವಾಗತಕ್ಕೆ ಆಕ್ಷೇಪ

ಮಠಕ್ಕೆ ಬಂದ ಓರ್ವ ರಾಜಕಾರಣಿ ಡಿ.ಕೆ.ಶಿವಕುಮಾರ ಅವರಿಗೆ ಪೂರ್ಣಕುಂಭದ ಸ್ವಾಗತ ನೀಡಿರುವ ದಿಂಗಾಲೇಶ್ವರ ಶ್ರೀಗಳ ನಡೆಗೆ ಭಕ್ತರಲ್ಲಿ ಅಚ್ಚರಿ ಮೂಡಿದೆ. ಜತೆಗೇ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮಠಕ್ಕೆ ಈ ಹಿಂದೆ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ನ ಹಲವು ನಾಯಕರು, ಸಚಿವರು, ಸಂಸದರು ಭೇಟಿ ನೀಡಿದ್ದಾರೆ. ಅವರಿಗಿಲ್ಲದ ಗೌರವ ಡಿಕೆಶಿಗೆ ಏಕೆ ಎನ್ನುವುದು ಭಕ್ತರ ಆಕ್ಷೇಪ. ಮೇಲಾಗಿ ರಾಜಕಾರಣಿಗಳಿಗೆ ಆಶೀರ್ವಾದ, ಸಲಹೆ, ಮಾರ್ಗದರ್ಶನ ಮಾಡುವುದಷ್ಟೇ ಮಠಾಧೀಶರ ಕೆಲಸ. ಅದು ಬಿಟ್ಟು ಈ ರೀತಿ ರಾಜಕಾರಣಿಗಳ ಓಲೈಕೆ ಮಾಡುವುದರಿಂದ ಮಠದ ಘನತೆಗೆ ದಕ್ಕೆ ಬರುತ್ತದೆ ಎಂದು ಹೆಸರು ಹೇಳಲು ಇಚ್ಚಿಸದ ಅನೇಕ ಹಿರಿಯ ಭಕ್ತರು ಪತ್ರಿಕೆ ಎದುರು ಅಸಮಾಧಾನ ತೋಡಿಕೊಂಡರು.
 

click me!