22 ವರ್ಷದಿಂದ ಭೂಮಿ ಮಂಜೂರಾತಿ ಅಲೆದಾಡಿ ಬೇಸತ್ತ ಮಾಜಿ ಸೈನಿಕ ಶಿವಾನಂದರೆಡ್ಡಿ
ಕಾಗತಿ ನಾಗರಾಜಪ್ಪ
ಚಿಕ್ಕಬಳ್ಳಾಪುರ(ಆ.12): ಇಡೀ ದೇಶವೇ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮದಲ್ಲಿದೆ. ದೇಶಕ್ಕಾಗಿ ತ್ಯಾಗ, ಬಲಿದಾನ ಮಾಡಿದವರ ಲೆಕ್ಕ ಇಲ್ಲ. ಆದರೆ ದೇಶದ ರಕ್ಷಣೆಗಾಗಿ ಚಳಿ, ಗಾಳಿ ಎನ್ನದೇ ಗಡಿ ಕಾದ ಮಾಜಿ ಯೋಧರೊಬ್ಬರು ಭೂಮಿ ಮಂಜೂರಾತಿಗಾಗಿ ಅಧಿಕಾರಿಗಳು ತೋರುತ್ತಿರುವ ನಿರ್ಲಕ್ಷ್ಯವನ್ನು ಖಂಡಿಸಿ ಮುಖ್ಯಮಂತ್ರಿ ಮನೆಗೆ ಕಾಲ್ನಡಿಗೆಯಲ್ಲಿ ಪಾದಯಾತ್ರೆ ಹೊರಟಿದ್ದಾರೆ. ಹೌದು, ಜಿಲ್ಲೆಯ ಕಂದಾಯ ಇಲಾಖೆಯ ಕಾರ್ಯವೈಖರಿಯನ್ನು ನಾಚಿಸುವ ರೀತಿಯಲ್ಲಿ ಮಾಜಿ ವಿಕಲಾಂಗ ಯೋಧರೊಬ್ಬರು ಇದೀಗ ಸತತ 22 ವರ್ಷಗಳಿಂದ ಸರ್ಕಾರಿ ಕಚೇರಿಗಳಿಗೆ ಸುತ್ತಾಡಿ ಸುಸ್ತಾಗಿ ಇದೀಗ ಸಿಎಂ ಮೊರೆ ಹೋಗಲು ನಿರ್ಧರಿಸಿ ಜಿಲ್ಲೆಯ ಚಿಂತಾಮಣಿಯಿಂದ ಬೆಂಗಳೂರು ವರೆಗೂ ಕಾಲ್ನಡಿಗೆ ಜಾಥಾ ನಡೆಸುತ್ತಿದ್ದಾರೆ.
ಚಿಂತಾಮಣಿ ತಾಲೂಕಿನ ಅಂಬಾರ್ಜಿ ದುರ್ಗ ಹೋಬಳಿಯ ರಾಯಣ್ಣಹಳ್ಳಿಯ ಮಾಜಿ ನಿವೃತ್ತ ಯೋಧ ಶಿವಾನಂದರೆಡ್ಡಿ ಸದ್ಯ ಭೂಮಿಗಾಗಿ 22 ವರ್ಷಗಳಿಂದ ಹೋರಾಟ ನಡೆಸುತ್ತಿರುವ ವ್ಯಕ್ತಿ ಭಾರತೀಯ ಸೇನೆಯಲ್ಲಿ ಹತ್ತಾರು ವರ್ಷ ಸೇವೆ ಸಲ್ಲಿಸಿ 2002 ರಲ್ಲಿ ಕಾಶ್ಮೀರದಲ್ಲಿ ನಡೆದ ದುರಂತದಲ್ಲಿ ಕಾಲಿಗೆ ಪೆಟ್ಟು ತಿಂದು ಬಳಿಕ ಸೇನೆಯಿಂದ ನಿವೃತ್ತರಾಗಿರುವ ಶಿವಾನಂದಗೆ 5 ಎಕೆರೆ ಜಮೀನು ಮಂಜೂರು ಮಾಡುವಂತೆ ಸರ್ಕಾರ ಆದೇಶಿಸಿದೆ. ಆದರೆ ಇದವರೆಗೂ ಸ್ಥಳೀಯ ಕಂದಾಯ ಅಧಿಕಾರಿಗಳು ಮಾಜಿ ಸೈನಿಕನ ಮನವಿಗೆ ಕ್ಯಾರೆ ಎಂದಿಲ್ಲ. ರಾತ್ರೋರಾತ್ರಿ ಭೂ ಗಳ್ಳರಿಗೆ, ರೀಯಲ್ ಎಸ್ಟೇಟ್ ಕುಳಗಳಿಗೆ ಜಮೀನು ನೀಡುವ ಕಂದಾಯ ಇಲಾಖೆ ಅಧಿಕಾರಿಗಳು ದೇಶದ ರಕ್ಷಣೆಗಾಗಿ ಹೋರಾಡಿ ಬಂದ ಸೈನಿಕನಿಗೆ ಸರ್ಕಾರ ಹೇಳಿದರೂ ಭೂಮಿ ಮಂಜೂರು ಮಾಡದೇ ಇರುವುದು ಖಂಡಿಸಿ ಇದೀಗ ರೈತ ಸಂಘಟನೆಗಳ ನೆರವಿನೊಂದಿಗೆ ಮಾಜಿ ಯೋಧ ಶಿವಾನಂದರೆಡ್ಡಿ ಕಾಲ್ನಡಿಗೆಯಲ್ಲಿಗೆ ಚಿಂತಾಮಣಿಯಿಂದ ಬೆಂಗಳೂರು ತನಕ ಬರೋಬ್ಬರಿ 70 ಕಿ.ಮೀ ಉದ್ದರ ಪಾದಯಾತ್ರೆಯನ್ನು ಚಿಂತಾಮಣಿಯಿಂದ ಬುಧವಾರ ಆರಂಭಿಸಿದ್ದಾರೆ. ಮಾಜಿ ಯೋಧನ ಹೋರಾಟಕ್ಕೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಸಾಮೂಹಿಕ ನಾಯಕತ್ವದ ತಂಡ ಬೆಂಬಲಿಸಿದ್ದು ಯೋಧ ನಡೆಸುತ್ತಿರುವ ಕಾಲ್ನಡಿಗೆ ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.
ಮಲೆನಾಡಾಗಿರುವ ಚಿಕ್ಕಬಳ್ಳಾಪುರ! ಮೂರು ದಶಕಗಳಿಂದ ಭರ್ತಿಯಾಗದ ಕೆರೆಗಳೂ ಭರ್ತಿ!
ಅಧಿಕಾರಿಗಳ ಮನವೊಲಿಕೆ:
ನಿವೃತ್ತ ಮಾಜಿ ಯೋಧ ಕಂದಾಯ ಅಧಿಕಾರಿಗಳ ಧೋರಣೆ ಖಂಡಿಸಿ ಬೆಂಗಳೂರಿಗೆ ಪಾದಯಾತ್ರೆ ನಡೆಸಿರುವ ವಿಷಯ ತಿಳಿದ ಕೂಡಲೇ ಚಿಂತಾಮಣಿ ತಹಶೀಲ್ದಾರ್ ಹನುಮಂತರಾಯಪ್ಪ ಮತ್ತಿತರರು ಆಗಮಿಸಿ ಪಾದಯಾತ್ರೆ ನಡೆಸುತ್ತಿರುವ ಮಾಜಿ ಯೋಧನ ಮನವೊಲಿಕೆಗೆ ಹರಸಾಹಸ ಪಟ್ಟಿದ್ದಾರೆ. ಆದರೂ ಅವರ ಮೇಲೆ ವಿಶ್ವಾಸ ಇಲ್ಲದ ಮಾಜಿ ಯೋಧ ಇದೀಗ ತನಗೆ 5 ಎಕರೆ ಜಮೀನು ಮಂಜೂರು ಮಾಡಿಕೊಡುವಂತೆ ಕೋರಿ ಬೆಂಗಳೂರಿನಲ್ಲಿ ಸಿಎಂಗೆ ಮನವಿ ಸಲ್ಲಿಸಲು ಕಾಲ್ನಡಿಗೆ ಮೂಲಕ ಪಾದಯಾತ್ರೆ ನಡೆಸುತ್ತಿದ್ದಾರೆ.