ಭೂಕುಸಿತ ಹಿನ್ನೆಲೆ: 2 ದಿನ ಮಡಿಕೇರಿ- ಮಂಗಳೂರು ಹೆದ್ದಾರಿ ಸಂಚಾರ ಬಂದ್‌: ಡಿಸಿ

By Kannadaprabha NewsFirst Published Aug 11, 2022, 12:10 PM IST
Highlights

ಕೊಡಗು ಜಿಲ್ಲೆಯಲ್ಲಿ ಬುಧವಾರ ಮಳೆ ವಾತಾವರಣ ಕೊಂಚ ಇಳಿಮುಖವಾಗಿದೆ.  ಆದರೆ ಭೂಕುಸಿತ ಹಿನ್ನೆಲೆ: 2 ದಿನ ಮಡಿಕೇರಿ- ಮಂಗಳೂರು ಹೆದ್ದಾರಿ ಸಂಚಾರ ಬಂದ್‌ ಇರಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ

ಮಡಿಕೇರಿ (ಆ.11) : ಕೊಡಗು ಜಿಲ್ಲೆಯಲ್ಲಿ ಬುಧವಾರ ಮಳೆ ವಾತಾವರಣ ಕೊಂಚ ಇಳಿಮುಖವಾಗಿದೆ. ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಹಲವುಕಡೆ ಮಳೆ ಬಿಡುವು ನೀಡಿ ಸರಿಯಿತು. ಮಳೆ ಕಡಿಮೆಯಾಗಿದ್ದ ಹಿನ್ನೆಲೆಯಲ್ಲಿ ಮಳೆಯಿಂದ ಹಾನಿಯ ಪ್ರಮಾಣವೂ ಕಡಿಮೆಯಿತ್ತು. ಜಿಲ್ಲೆಯಲ್ಲಿ ಮಳೆಯಿಂದ ಕಳೆದೊಂದು ವಾರದಲ್ಲಿ 10 ಮನೆಗಳು ಪೂರ್ಣ ಹಾನಿಯಾಗಿದೆ. 37 ಮನೆಗಳು ಭಾಗಶಃ ಹಾಗೂ 222 ಮನೆಗಳಿಗೆ ಸಾಧಾರಣ ಹಾನಿಯಾಗಿದೆ. ಮಡಿಕೇರಿ ತಾಲೂಕಿನ ಮದೆ ಗ್ರಾಮ ಪಂಚಾಯಿತಿಯ ಬೆಟ್ಟದೂರು ಗ್ರಾಮದ ಚೆರಿಯಮನೆ ಆನಂದ ರವರ ಮನೆಯ ಮಳೆಯಿಂದ ಸಂಪೂರ್ಣ ಹಾನಿಯಾಗಿದೆ. ಸೋಮವಾರಪೇಟೆ ಸಮೀಪದ ಯಡೂರಿನ ರಾಣಿ ಎಂಬವರ ಮನೆಗೆ ಹಾನಿಯಾಗಿದೆ. ಸೋಮವಾರಪೇಟೆ ತಾಲೂಕಿನ ಮಾದಾಪುರ ಸಮೀಪದ ರಸ್ತೆಯಲ್ಲಿ ಬರೆ ಕುಸಿತ ಹಿನ್ನಲೆಯಲ್ಲಿ ಜೆಸಿಬಿ ಮೂಲಕ ಮಣ್ಣು ತೆರವುಗೊಳಿಸಲಾಯಿತು.

Kodagu Rain : ಭಾರಿ ಮಳೆಗೆ ರಸ್ತೆಗಳಲ್ಲಿ ಬಿರುಕು, ಕುಸಿತ

ಬೆಟ್ಟದಲ್ಲಿ ಭಾರೀ ಭೂಕುಸಿತ: ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಹರಪಳ್ಳಿಯ ಬೆಟ್ಟದಲ್ಲಿ ಭಾರೀ ಭೂಕುಸಿತ ಉಂಟಾಗಿದೆ. ಬೆಟ್ಟದ ಒಂದು ಭಾಗ ಕೊಚ್ಚಿ ಹೋಗಿದೆ. ಬೆಟ್ಟದ ಮೇಲ್ಭಾಗದಲ್ಲಿ ಬಿರುಕು ಕಾಣಿಸಿಕೊಂಡಿದೆ. ಅಪಾಯದಲ್ಲಿರುವ ಕುಟುಂಬಗಳು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ.

ಎರಡು ದಿನ ಹೆದ್ದಾರಿ ಬಂದ್‌: ಮಡಿಕೇರಿ- ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಕರ್ತೋಜಿ ಬಳಿ ಹೆದ್ದಾರಿ ಭೂಕುಸಿತ ಆತಂಕ ಇರುವ ಹಿನ್ನೆಲೆಯಲ್ಲಿ ಬುಧವಾರ ಮತ್ತು ಹಾಗೂ ರಾತ್ರಿ 8.30 ರಿಂದ ಬೆಳಗ್ಗೆ 6.30 ಗಂಟೆಯವರೆಗೆ ಮಡಿಕೇರಿ - ಸಂಪಾಜೆ ಹೆದ್ದಾರಿ ಬಂದ್‌ ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಮದೆನಾಡು ಬಳಿ ಭೂಕುಸಿತದ ಭೀತಿ ಹಿನ್ನೆಲೆಯಲ್ಲಿ ಯಾವುದೇ ಕ್ಷಣದಲ್ಲಿ ಮಣ್ಣು ಜರಿದು ಹೆದ್ದಾರಿಗೆ ಬೀಳುವ ಸಾಧ್ಯತೆಯಿದೆ. ಇದರಿಂದ ಎಲ್ಲ ರೀತಿಯ ವಾಹನ ಸಂಚಾರ ಬಂದ್‌ ಮಾಡಿ ಕೊಡಗು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್‌ ಆದೇಶ ಹೊರಡಿಸಿದ್ದಾರೆ.

ಮೂರು ನಾಲ್ಕು ದಿನ ಮಳೆ ಇಳಿಕೆ:

ಕಳೆದ ಹತ್ತು ದಿನಗಳಿಂದ ಕೆಂಪು (20.45 ಸೆಂ.ಮೀ ಗಿಂತ ಹೆಚ್ಚು) ಅಥವಾ ಕಿತ್ತಳೆ (11.56 ಸೆಂ.ಮೀ ನಿಂದ 20.44 ಸೆಂ.ಮೀ) ಎಚ್ಚರಿಕೆ ಪಡೆಯುತ್ತಿದ್ದ ಕರಾವಳಿ ಮತ್ತು ಮಲೆನಾಡಿನ ಜಿಲ್ಲೆಗಳಲ್ಲಿಯೂ ಮಳೆ ಕ್ಷೀಣಿಸುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಆದರೆ ಗಾಳಿಯ ವೇಗ ಹೆಚ್ಚಿರುವ ಸಾಧ್ಯತೆ ಇರುವು ಹಿನ್ನೆಲೆಯಲ್ಲಿ ಮೀನುಗಾರರಿಗೆ ಸಮುದ್ರಕ್ಕಿಳಿಯದಂತೆ ಹವಾಮಾನ ಕೇಂದ್ರ ಸೂಚಿಸಿದೆ.

ಶುಕ್ರವಾರ ಬೆಳಗ್ಗೆ 8.30 ರ ತನಕ ಬೆಳಗಾವಿ, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಕೊಡಗು, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಜಿಲ್ಲೆಗೆ ಯೆಲ್ಲೋ ಅಲರ್ಚ್‌ (6.45 ಸೆಂ.ಮೀ ನಿಂದ 11.55 ಸೆಂ.ಮೀ) ನೀಡಲಾಗಿದೆ. ಈ ಅವಧಿಯಲ್ಲಿ ಗಂಟೆಗೆ 60 ಕಿಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಮತ್ತು 3.5 ಮೀ ನಿಂದ 4.4 ಮೀ ಎತ್ತರದವರೆಗಿನ ಅಲೆ ಅಪ್ಪಳಿಸುವ ಸಂಭವ ಇರುವುದರಿಂದ ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ. ಶನಿವಾರ ಕರಾವಳಿಯಲ್ಲಿ ಮಾತ್ರ ಭಾರಿ ಮಳೆಯಾಗುವ ಸಂಭವವಿರುವುದರಿಂದ ಯೆಲ್ಲೋ ಅಲರ್ಚ್‌ ನೀಡಲಾಗಿದೆ. ಭಾನುವಾರ ಮತ್ತು ಸೋಮವಾರ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆಯಿದ್ದು ಯಾವುದೇ ಅಲರ್ಚ್‌ ನೀಡಲಾಗಿಲ್ಲ.

ಬುಧವಾರ ಬೆಳಗ್ಗೆ 8.30ಕ್ಕೆ ಪೂರ್ಣಗೊಂಡ 24 ಗಂಟೆ ಅವಧಿಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಸಿದ್ದಾಪುರ 13 ಸೆಂ.ಮೀ, ಬೆಳಗಾವಿಯ ಲೋಂಡಾ 11, ಚಿಕ್ಕಮಗಳೂರಿನ ಕೊಟ್ಟಿಗೆಹಾರ, ಕಮ್ಮರಡಿ ತಲಾ 9 ಸೆಂ.ಮೀ ಮಳೆಯಾಗಿದೆ

click me!