ಮಳೆ ಬಾರದಿದ್ದರೂ ಚಾರ್ಮಾಡಿ ಪರಿಸರದ ನದಿಗಳಲ್ಲಿ ನೀರಿನ ಮಟ್ಟದಿಢೀರ್‌ ಏರಿಕೆ

Published : Sep 07, 2022, 12:51 PM ISTUpdated : Sep 07, 2022, 12:53 PM IST
ಮಳೆ ಬಾರದಿದ್ದರೂ ಚಾರ್ಮಾಡಿ ಪರಿಸರದ ನದಿಗಳಲ್ಲಿ ನೀರಿನ ಮಟ್ಟದಿಢೀರ್‌ ಏರಿಕೆ

ಸಾರಾಂಶ

2019ರ ಸೆಪ್ಟೆಂಬರ್‌ನಲ್ಲಿ ಸಂಭವಿಸಿದ ಭೀಕರ ಪ್ರವಾಹವನ್ನು ನೆನಪಿಸುವಂತೆ ಮಂಗಳವಾರ ಚಾರ್ಮಾಡಿ ಪ್ರದೇಶದಲ್ಲಿ ಹರಿಯುವ ನದಿಗಳ ನೀರಿನ ಮಟ್ಟಧಿಡೀರ್‌ ಹೆಚ್ಚಾಗಿ ಆತಂಕ ಹುಟ್ಟಿಸಿದೆ. ನದಿಗಳು ಹರಿಯುವ ಪರಿಸರದಲ್ಲಿ ಹೆಚ್ಚಿನ ಮಳೆ ಇಲ್ಲದಿದ್ದರೂ ಮೃತ್ಯುಂಜಯ ಹಾಗೂ ನೇತ್ರಾವತಿ ನದಿಗಳಲ್ಲಿ ನೀರು ದಿಢೀರ್‌ ಏರಿಕೆಯಾದ ವಿದ್ಯಮಾನ ಮಂಗಳವಾರ ಸಂಜೆ ನಡೆದಿದೆ.

ಬೆಳ್ತಂಗಡಿ (ಸೆ.7) : 2019ರ ಸೆಪ್ಟೆಂಬರ್‌ನಲ್ಲಿ ಸಂಭವಿಸಿದ ಭೀಕರ ಪ್ರವಾಹವನ್ನು ನೆನಪಿಸುವಂತೆ ಮಂಗಳವಾರ ಚಾರ್ಮಾಡಿ ಪ್ರದೇಶದಲ್ಲಿ ಹರಿಯುವ ನದಿಗಳ ನೀರಿನ ಮಟ್ಟಧಿಡೀರ್‌ ಹೆಚ್ಚಾಗಿ ಆತಂಕ ಹುಟ್ಟಿಸಿದೆ. ನದಿಗಳು ಹರಿಯುವ ಪರಿಸರದಲ್ಲಿ ಹೆಚ್ಚಿನ ಮಳೆ ಇಲ್ಲದಿದ್ದರೂ ಮೃತ್ಯುಂಜಯ ಹಾಗೂ ನೇತ್ರಾವತಿ ನದಿಗಳಲ್ಲಿ ನೀರು ದಿಢೀರ್‌ ಏರಿಕೆಯಾದ ವಿದ್ಯಮಾನ ಮಂಗಳವಾರ ಸಂಜೆ ನಡೆದಿದೆ. ಇದರಿಂದ ನದಿತೀರದಲ್ಲಿ ವಾಸಿಸುವ ಜನರಲ್ಲಿ ಆತಂಕ ಸೃಷ್ಟಿಯಾಯಿತು. ದಿಡುಪೆ, ಮಲವಂತಿಗೆ, ಮಿತ್ತಬಾಗಿಲು, ಕಡಿರುದ್ಯಾವರ, ಮುಂಡಾಜೆ, ಕಲ್ಮಂಜ ಮೊದಲಾದ ಗ್ರಾಮಗಳಲ್ಲಿ ಮಳೆ ಇಲ್ಲದಿದ್ದರೂ ಸಂಜೆ 4 ಗಂಟೆ ಬಳಿಕ ನದಿಗಳ ನೀರಿನಲ್ಲಿ ವಿಪರೀತ ಏರಿಕೆ ಕಂಡು ಬಂತು.

 

ನಾಲ್ಕೈದು ದಿನದಲ್ಲಿ ಶಿರಾಡಿ ವಾಹನ ಸಂಚಾರಕ್ಕೆ ಮುಕ್ತ ಸಾಧ್ಯತೆ: ಹಾಸನ ಡಿ.ಸಿ.

ಚಾರ್ಮಾಡಿ ಕಡೆಯಿಂದ ಹರಿಯುವ ಮೃತ್ಯುಂಜಯ ನದಿಯಲ್ಲಿ ಅತ್ಯಧಿಕ ನೀರು ಹರಿದು ಬಂದಿದೆ. ಈ ವರ್ಷ ನದಿ ಅನೇಕ ಬಾರಿ ತುಂಬಿ ಹರಿದಿದ್ದರೂ ಇಷ್ಟೊಂದು ಪ್ರಮಾಣದ ನೀರು ಏರಿಕೆಯಾಗಿರಲಿಲ್ಲ. ಮೃತ್ಯುಂಜಯ ನದಿಯ ಉಗಮ ಸ್ಥಳವಾದ ಬಿದಿರುತಳ, ಚಾರ್ಮಾಡಿ ಮತ್ತು ಘಾಟಿ ಪ್ರದೇಶದಲ್ಲಿ ಸಂಜೆ 3 ಗಂಟೆ ಬಳಿಕ ಸುಮಾರು ಮೂರು ತಾಸು ಕಾಲ ನಿರಂತರ ಸುರಿದ ವಿಪರೀತ ಮಳೆ ಇದಕ್ಕೆ ಕಾರಣವಾಯಿತು. ನದಿ ಬದಿಯಲ್ಲಿರುವ ಅನೇಕ ಅಡಕೆ ತೋಟ, ಗದ್ದೆ, ಕಿರು ಸೇತುವೆ, ಕಿಂಡಿ ಅಣೆಕಟ್ಟುಗಳು ಜಲಾವೃತವಾದವು.

ಉಕ್ಕೇರಿದ ನೇತ್ರಾವತಿ: ದಿಡುಪ ಕಡೆಯಿಂದ ಹರಿಯುವ ನೇತ್ರಾವತಿ ನದಿಯ ಸಂಪರ್ಕ ಹಳ್ಳಗಳಾದ ಕುಕ್ಕಾವಿನ ಏಳೂವರೆ ಹಳ್ಳ ಹಾಗೂ ಕೂಡಬೆಟ್ಟು ಹಳ್ಳಗಳು ಉಕ್ಕಿಹರಿದ ಪರಿಣಾಮ ನೇತ್ರಾವತಿ ನದಿಯ ತಗ್ಗು ಪ್ರದೇಶಗಳಾದ ಕಡಿರುದ್ಯಾವರ, ಕಾನರ್ಪ, ಪರಮುಖ, ನಿಡಿಗಲ್‌, ಕಾಯರ್ತೋಡಿ ಕುಡೆಂಚಿ ಹಾಗೂ ಮೃತ್ಯುಂಜಯ ಮತ್ತು ನೇತ್ರಾವತಿ ಸಂಗಮ ಸ್ಥಳವಾದ ಪಜಿರಡ್ಕ ಹಾಗೂ ಕೆಳಭಾಗದ ಪರಿಸರಗಳಲ್ಲಿ ನದಿ ನೀರು ಏರಿಕೆ ಕಂಡಿತು. ಈ ಪ್ರದೇಶಗಳ ಅನೇಕರ ಅಡಕೆ ತೋಟಗಳಿಗೆ ನೀರು ನುಗ್ಗಿದೆ. ದಿಡುಪೆ, ಕೊಲ್ಲಿ ಭಾಗದಲ್ಲಿ ನದಿ ಶಾಂತವಾಗಿದ್ದ ಕಾರಣದಿಂದ ಭಾರಿ ಪ್ರವಾಹದ ಸ್ಥಿತಿ ಉಂಟಾಗಿಲ್ಲ. ಏಳೂವರೆ ಹಳ್ಳ ಹಾಗೂ ಕೂಡ ಬಟ್ಟು ಹಳ್ಳಗಳಿಗೆ ಚಾರ್ಮಾಡಿ ಭಾಗದ ಸಂಪರ್ಕ ಇರುವ ಕಾರಣ ನೀರು ಏರಿಕೆಯಾಗಿದೆ.

ರಾತ್ರಿ 7.30ರ ಬಳಿಕ ಎರಡು ನದಿಗಳ ನೀರು ಇಳಿಯ ತೊಡಗಿದುದರಿಂದ ಪರಿಸರದ ಜನರಲ್ಲಿ ಉಂಟಾಗಿದ್ದ ಆತಂಕ ದೂರವಾಯಿತು.

ಕೊಚ್ಚಿ ಹೋದ ಮರಮಟ್ಟು: ಎರಡು ನದಿಗಳಲ್ಲಿ ಹಸಿಮರಗಳ ಸಹಿತ ಭಾರಿ ಸಂಖ್ಯೆಯ ಮರಮಟ್ಟು ಕೊಚ್ಚಿಕೊಂಡು ಹೋಗಿದೆ. ಭಾರಿ ಮಣ್ಣು ಮಿಶ್ರಿತ ನೀರು ಕೂಡ ಹರಿದಿದ್ದು ಘಟ್ಟಪ್ರದೇಶದಲ್ಲಿ ಗುಡ್ಡ ಕುಸಿತವೇನಾದರೂ ಉಂಟಾಗಿರಬಹುದೇ ಎಂಬ ಸಂಶಯ ಸ್ಥಳೀಯರಲ್ಲಿ ಉಂಟಾಗಿದೆ.

2019ರಲ್ಲಿ ಎರಡು ನದಿಗಳಲ್ಲಿ ಪ್ರವಾಹ ಬಂದು ಜನಜೀವನ ಅಸ್ತವ್ಯಸ್ತವಾದ ಬಳಿಕ ಈ ನದಿಗಳ ನೀರಿನ ಮಟ್ಟಕೊಂಚ ಏರಿಕೆ ಕಂಡರೂ ಪ್ರದೇಶಗಳ ಜನರಲ್ಲಿ ಭೀತಿ ಆವರಿಸುತ್ತದೆ. ಅಡಕೆ ತೋಟಗಳಿಗೆ ನೀರಿನ ಜತೆ ಮರಮಟ್ಟಗಳು ನುಗ್ಗಿದ್ದು ಹಾನಿ ಪ್ರಮಾಣ ಇನ್ನಷ್ಟೇ ತಿಳಿದು ಬರಬೇಕಿದೆ.

ಇಂದು ಕರಾವಳಿಯಲ್ಲಿ ಭಾರಿ ಮಳೆ ಮುನ್ಸೂಚನೆ

ಮಂಗಳೂರು: ದ.ಕ.ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ನಿರಂತರ ಹನಿ ಮಳೆಯಾಗುತ್ತಿದ್ದು, ಮಂಗಳವಾರವೂ ಅಲ್ಲಲ್ಲಿ ತುಂತುರು ಮಳೆಯಾಗಿದೆ. ಭಾರತೀಯ ಹವಾಮಾನ ಇಲಾಖೆ ಪ್ರಕಾರ ಕರಾವಳಿಯಲ್ಲಿ ಸೆ. 7ರಂದು ಆರೆಂಜ್‌ ಹಾಗೂ 8ರಂದು ರೆಡ್‌ ಅಲರ್ಚ್‌ ಘೋಷಿಸಲಾಗಿದೆ.

ಚಿಕ್ಕಮಗಳೂರು: ಚಾರ್ಮಾಡಿ ಘಾಟ್‌ನಲ್ಲಿ ಟ್ರಾಫಿಕ್ ಜಾಮ್‌, ಬೇಸತ್ತ ವಾಹನ ಸವಾರರು

ಗ್ರಾಮೀಣ ಪ್ರದೇಶ ಸುಳ್ಯ ಮತ್ತು ಬೆಳ್ತಂಗಡಿಯಲ್ಲಿ ಮಂಗಳವಾರ ಬೆಳಗ್ಗೆ ಮಳೆ ಸುರಿದಿದೆ. ಬೆಳ್ತಂಗಡಿಯಲ್ಲಿ ನದಿ ನೀರಿನಲ್ಲಿ ಹಠಾತ್‌ ಏರಿಕೆ ಕಂಡುಬಂದಿದೆ. ಮಂಗಳೂರು ಸೇರಿದಂತೆ ಗ್ರಾಮಾಂತರಗಳಲ್ಲಿ ಸಂಜೆ ವೇಳೆಗೆ ತುಂತುರು ಮಳೆಯಾಗಿದೆ. ಬುಧವಾರ ಕರಾವಳಿಯಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.

PREV
Read more Articles on
click me!

Recommended Stories

ಸಿದ್ದರಾಮಯ್ಯ ಆಡಳಿತ ಕೇವಲ ಟೀಕೆಯಲ್ಲಿ ಮುಳುಗಿದೆ: ಕೇಂದ್ರ ಸಚಿವ ವಿ.ಸೋಮಣ್ಣ ಆರೋಪ
ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮಧ್ಯೆ ಖುರ್ಚಿ ಕಾದಾಟ ಇಲ್ಲ: ಬಸವರಾಜ ರಾಯರೆಡ್ಡಿ