Desur IT Park: ಬೆಳಗಾವಿ ಜಿಲ್ಲಾಡಳಿತ ನಿರ್ಲಕ್ಷ್ಯಕ್ಕೆ ಕೈಗನ್ನಡಿ: ರೈತರ ಆಕ್ರೋಶ

By Govindaraj S  |  First Published May 24, 2022, 12:25 AM IST

• ಐಟಿ ಪಾರ್ಕ್‌ಗೆ ರೈತರ ಜಮೀನು ಪಡೆದು ದಶಕ ಕಳೆದರೂ ನೋ ಯೂಸ್
• ದೇಸೂರು ರೈತರ ಜಮೀನು ವಾಪಸ್ ನೀಡಲು ಆಗ್ರಹ
• 145 ಎಕರೆ ಜಮೀನು - 14 ವರ್ಷ - ಬೆರಳೆಣಿಕೆಯಷ್ಟು ಕೈಗಾರಿಕೆ


ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್, ಬೆಳಗಾವಿ

ಬೆಳಗಾವಿ (ಮೇ.24): ಕುಂದಾನಗರಿ ಬೆಳಗಾವಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ರೈತರ ಫಲವತ್ತಾದ ಜಮೀನು ವಶಕ್ಕೆ ಪಡೆಯುತ್ತಿರೋದು ಅನ್ನದಾತರ ಆಕ್ರೋಶಕ್ಕೆ ಕಾರಣವಾಗಿದೆ. ಹಲಗಾ ಮಚ್ಛೆ ಬೈಪಾಸ್ ರಸ್ತೆ ಕಾಮಗಾರಿ, ಧಾರವಾಡ - ಕಿತ್ತೂರು - ಬೆಳಗಾವಿ ರೈಲು ಮಾರ್ಗ ಯೋಜನೆಗೆ ಭೂಮಿ ನೀಡಲ್ಲ ಅಂತಾ ಒಂದೆಡೆ ರೈತರು ಪಟ್ಟು ಹಿಡಿದಿದ್ದಾರೆ. ಮತ್ತೊಂದೆಡೆ ಕುಂದಾನಗರಿ ಬೆಳಗಾವಿಯಲ್ಲಿ ಸುಸಜ್ಜಿತ ಐಟಿ ಪಾರ್ಕ್ ಆಗಬೇಕು ಎಂಬುದು ಈ ಭಾಗದ ಜನರ ಬಹುದಿನಗಳ ಬೇಡಿಕೆ. 

Latest Videos

undefined

ಸದ್ಯ ಬೆಳಗಾವಿ ನಗರದ ಶ್ರೀನಗರ ಬಳಿ ಇರುವ 742 ಎಕರೆ ರಾಜ್ಯ ಸರ್ಕಾರದ ಜಮೀನು ರಕ್ಷಣಾ ಇಲಾಖೆ ವಶದಲ್ಲಿದ್ದು, ಇದನ್ನ ಮರಳಿ ಪಡೆದು ಸುಸಜ್ಜಿತ ಐಟಿ ಪಾರ್ಕ್ ನಿರ್ಮಾಣ ಮಾಡಬೇಕೆಂದು ಶಾಸಕ ಅಭಯ್ ಪಾಟೀಲ್ ಕಳೆದೊಂದು ದಶಕದಿಂದ ಶತಪ್ರಯತ್ನ ಪಡುತ್ತಿದ್ದಾರೆ.  ಈ ಮಧ್ಯೆ 2008-09ರಲ್ಲಿ ಬೆಳಗಾವಿ ನಗರದಿಂದ ಸುಮಾರು 16 ಕಿಮೀ ದೂರವಿರುವ ದೇಸೂರು ಗ್ರಾಮದ ಬಳಿ 145 ಎಕರೆ ಜಮೀನು ಸ್ವಾಧೀನ ಪಡೆಸಿಕೊಂಡು ಐಟಿ ಪಾರ್ಕ್ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿತ್ತು. ಇಲ್ಲಿ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತ 41 ಎಕರೆ 34 ಗುಂಟೆ ಜಾಗ ಅಭಿವೃದ್ಧಿ ಪಡಿಸಿ ಅಲ್ಲಿ 68 ಪ್ಲಾಟ್ ನಿರ್ಮಾಣ ಮಾಡಿದ್ದು 65 ಕಂಪನಿಗಳಿಗೆ ನೀಡಲಾಗಿದೆ. 

Belagavi: ಶಾಲಾ ದುರಸ್ತಿ ಬಗ್ಗೆ ಕೇಳಿದ್ದೇ ತಪ್ಪಾ? ಎಸ್‌ಡಿಎಂಸಿ ಅಧ್ಯಕ್ಷ ಸದಸ್ಯನ ವಿರುದ್ಧ FIR

ರಸ್ತೆ, ಚರಂಡಿ, ವಿದ್ಯುತ್ ಸಂಪರ್ಕ ಸೇರಿ ಎಲ್ಲಾ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ ಒಂದೇ ಒಂದು ಐಟಿ ಕಂಪನಿ ಬಂದಿಲ್ಲ. ಹೀಗಾಗಿ ಈ ಜಮೀನು ಇತರ ಕೈಗಾರಿಕೆಗೆ ನೀಡಲು ಕೆಎಸ್‌ಎಸ್ಐಡಿಸಿ ನಿರ್ಧರಿಸಿದ್ದು ಬೆಳಗಾವಿ ಡಿಸಿ ಅನುಮತಿ ಪಡೆದಿದ್ದಾರಂತೆ. ಆದ್ರೆ ಕೆಲವೊಂದಿಷ್ಟು ಇತರ ಸಣ್ಣ ಕೈಗಾರಿಕೆಗಳು ಬಂದಿದ್ದು ಉಳಿದಂತೆ ಎಲ್ಲಾ ಪಾಳು ಬಿದ್ದಿದ್ದು ರೈತರಿಂದ ಪಡೆದ ಜಮೀನು ಮರಳಿ ರೈತರಿಗೆ ನೀಡಿ  ಇಲ್ಲವಾದ್ರೆ ಉಗ್ರ ಹೋರಾಟ ಮಾಡೋದಾಗಿ ರೈತರು ಎಚ್ಚರಿಕೆ ನೀಡಿದ್ದಾರೆ.

ರೈತರ ಜಮೀನು ಕಿತ್ತುಕೊಂಡು ರಿಯಲ್ ಎಸ್ಟೇಟ್ ಮಾಫಿಯಾ ಆರೋಪ: ದೇಸೂರು ಬಳಿ ಜಮೀನು ಸ್ವಾಧೀನ ಪಡಿಸಿಕೊಂಡು ಯಾವುದೇ ಐಟಿ ಉದ್ಯಮ ಬಾರದ ವಿಚಾರಕ್ಕೆ ಪ್ರತಿಕ್ರಿಯಿಸಿರುವ ರೈತ ಮುಖಂಡ ಪ್ರಕಾಶ್ ನಾಯಕ್ ಜನಪ್ರತಿನಿಧಿಗಳು ಹಾಗೂ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ರಾಜ್ಯದಲ್ಲಿ ಯಾವುದೇ ಪಕ್ಷದ ಸರ್ಕಾರ ಬರಲಿ ಹಾಡಹಗಲೇ ದರೋಡೆ ಮಾಡಲಾಗುತ್ತದೆ. ಎಲ್ಲಾ ಪಕ್ಷದ ಸರ್ಕಾರಗಳು ರೈತರಿಗೆ ಅನ್ಯಾಯ ಮಾಡಿವೆ. ಫಲವತ್ತಾದ ಜಮೀನನ್ನು ರೈತರಿಂದ ಕಿತ್ತುಕೊಂಡು ರಿಯಲ್ ಎಸ್ಟೇಟ್ ಮಾಫಿಯಾಗೆ ಬಳಸಲಾಗುತ್ತಿದೆ. 2008-09ರಲ್ಲಿ ಕೆಂಪು ಮಣ್ಣು ಇರುವಂತಹ ಫಲವತ್ತಾದ ಭೂಮಿ ಸ್ವಾಧೀನ ಮಾಡಿಕೊಂಡಿದ್ದಾರೆ. 

ಕಬ್ಬು, ರಸಾಳಿ, ಗೇರು ಸೇರಿದಂತೆ ಇತರೆ ವಾಣಿಜ್ಯ ಬೆಳೆ ಬೆಳೆಯುವ ಸಾಮರ್ಥ್ಯ ಹೊಂದಿದ ಭೂಮಿ ಇದಾಗಿದೆ. ಡ್ಯಾಂ ನಿರ್ಮಾಣ ವೇಳೆ ಮುಳುಗಡೆಯಾದ ಜನರಿಗೆ ಪುನರ್ವಸತಿ ನೀಡಿದ ಜಾಗ ವಶಪಡಿಸಿಕೊಂಡಿದ್ದಾರೆ. ಜನಪ್ರತಿನಿಧಿಗಳು ಹುಚ್ಚಾಟ ಮಾಡುವುದು ಬಿಡಲಿ. ರೈತರಿಂದ ವಶಕ್ಕೆ ಪಡೆದ ಭೂಮಿ ಮರಳಿ ನೀಡಬೇಕು. ಹೆಚ್ಚಿನ ಪರಿಹಾರ ನೀಡಬೇಕು' ಎಂದು ಆಗ್ರಹಿಸಿದ್ದಾರೆ. 'ಐಟಿ ಪಾರ್ಕ್‌ ನಿರ್ಮಾಣ ಒಳ್ಳೆಯ ಯೋಜನೆಯಾಗಿತ್ತು. ಆದ್ರೆ 2008ರಲ್ಲಿ ವಶಕ್ಕೆ ಪಡೆದು ಈಗ 2022 ಆದರೂ ಪಾಳು ಬಿದ್ದಿದೆ. ರೈತರ ಬಳಿ ಇದ್ದಿದ್ರೆ ಏನಾದರೂ ಬೆಳೆ ಬೆಳೆದು ಬದುಕು ಸಾಗಿಸುತ್ತಿದ್ದರು‌. ಸರ್ಕಾರ ಬುದ್ದಿಭ್ರಮಣೆಯಾಗಿ ಭೂಮಿ ವಶಕ್ಕೆ ಪಡೆದುಕೊಂಡಿತ್ತಾ?' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

MLC Elections: ಬೆಳಗಾವಿ ಭಿನ್ನಮತ ಶಮ‌ನಕ್ಕೆ ಪ್ರಹ್ಲಾದ್ ಜೋಶಿ ಸಭೆ!

ಒಟ್ಟಿನಲ್ಲಿ ಬೆಳಗಾವಿಗೆ ಐಟಿ ಉದ್ಯಮ, ಸೆಮಿಕಂಡಕ್ಟರ್ ಪಾರ್ಕ್ ಬರಬೇಕು ಅನ್ನೋದು ಉತ್ತರ ಕರ್ನಾಟಕ ನಿರುದ್ಯೋಗಿ ಯುವಕರ ಬಹುದಿನಗಳ ಕನಸಾಗಿದೆ. ಮತ್ತೊಂದೆಡೆ ಜಮೀನು ವಶಕ್ಕೆ ಪಡೆದು 14 ವರ್ಷಗಳಾಗುತ್ತಾ ಬಂದರೂ ಅದು ಉಪಯೋಗ ಆಗದೇ ಇರೋದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ ಸ್ವಾಧೀನ ಪಡಿಸಿಕೊಂಡ ಜಮೀನು ರೈತರಿಗಾದರೂ ನೀಡಿ ಬೆಳೆ ಬೆಳೆದು ನೆಮ್ಮದಿ ಜೀವನವಾದರೂ ಸಾಗಿಸುತ್ತೇವೆ ಎಂಬುದು ಅನ್ನದಾತರ ಆಗ್ರಹ.

click me!