ಶಿವಮೊಗ್ಗ (ಅ.18) : ನಗರದ ಸಮೀಪದ ಮಲ್ಲಿಗೇನಹಳ್ಳಿ ಬಳಿ ತುಂಗಾ ಮೇಲ್ದಂಡೆ ಇಲಾಖೆಗೆ ಸೇರಿದ ಜಾಗದಲ್ಲಿ ಹಕ್ಕಿಪಿಕ್ಕಿ ಸಮುದಾಯದವರು ನಿರ್ಮಿಸಿಕೊಂಡಿದ್ದ ಮನೆಗಳನ್ನು ಅಧಿಕಾರಿಗಳು ತೆರವಿಗೆ ಮುಂದಾದಾಗ ಇಲ್ಲಿನ ನಿವಾಸಿಗಳು ಮೈಮೇಲೆ ಪೆಟ್ರೋಲ್ ಸುರಿದುಕೊಂಡು ವಿರೋಧ ವ್ಯಕ್ತಪಡಿಸಿದ ಘಟನೆ ನಡೆಯಿತು. ಮಲ್ಲಿಗೇನಹಳ್ಳಿ ಸಮೀಪದ ಅಂಬೇಡ್ಕರ್ ಕಾಲೋನಿಯಲ್ಲಿ ನೀರಾವರಿ ಇಲಾಖೆಯ ತುಂಗಾ ಮೇಲ್ದಂಡೆ ಯೋಜನೆಯ ಬರ್ಫ ಜೋನ್ನಲ್ಲಿ 5 ಎಕರೆ 3 ಗುಂಟೆ ಜಾಗ ಒತ್ತುವರಿ ಆಗಿದ್ದು, ಹೈಕೋರ್ಚ್ ಆದೇಶದ ಹಿನ್ನೆಲೆಯಲ್ಲಿ ಸೋಮವಾರ ಮನೆ ತೆರವು ಕಾರ್ಯಾಚರಣೆ ನಡೆಸಿದರು.
ಹಕ್ಕಿಪಿಕ್ಕಿ ಜನಾಂಗದವರಿಗೆ ಹೈಫೈ ಲೇಔಟ್, ಹೊಸದುರ್ಗವನ್ನು ಮಾದರಿ ಕ್ಷೇತ್ರ ಮಾಡಲು ಹೊರಟ ಗೂಳಿಹಟ್ಟಿ
ನೀರಾವರಿ ಇಲಾಖೆಗೆ ಸೇರಿದ 5 ಎಕರೆ 3 ಗುಂಟೆ ಜಾಗದಲ್ಲಿ 129 ಮನೆಗಳನ್ನು ಹಕ್ಕಿಪಿಕ್ಕಿ ಜನಾಂಗದವರು ನಿರ್ಮಿಸಿಕೊಂಡಿದ್ದಾರೆ. ಈ ಹಿಂದೆ ಜಾಗ ತೆರವುಗೊಳಿಸುವಂತೆ ನೀರಾವರಿ ಇಲಾಖೆ ನೋಟಿಸ್ ನೀಡಿದ್ದರೂ ಯಾವುದೇ ಉತ್ತರ ನೀಡಿಲ್ಲ, ಈಗ ಜಿಲ್ಲಾಧಿಕಾರಿಗಳ ಆದೇಶದಂತೆ ಇಲಾಖೆಗೆ ಸೇರಿದ ಜಾಗವನ್ನು ಸುಪರ್ದಿಗೆ ಪಡೆಯಲು ಕಾರ್ಯಚರಣೆ ಮಾಡಲಾಗುತ್ತಿದೆ. ಇಲಾಖೆ ಜಾಗದಲ್ಲಿ ನಿರ್ಮಿಸಿಕೊಂಡಿರುವ 129 ಮನೆಗಳನ್ನೂ ತೆರವುಗೊಳಿಸಲಾಗುವುದು ಎಂದು ಇಲಾಖೆಯ ಮುಖ್ಯ ಎಂಜಿನಿಯರ್ ತಿಳಿಸಿದ್ದಾರೆ.
ಮಾತಿನ ಚಕಮಕಿ: ಮನೆ ತೆರವು ಕಾರ್ಯಾಚರಣೆ ವಿರೋಧಿಸಿ ದಲಿತ ಸಂಘರ್ಷ ಸಮಿತಿ ಮುಖಂಡರು ಸ್ಥಳದಲ್ಲಿ ಧರಣಿ ನಡೆಸಿದರು. ಈಗಾಗಲೇ ಈ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಲಾಗಿದ್ದು, ಕಳೆದ 7-8 ವರ್ಷಗಳಿಂದ ವಿದ್ಯುತ್ ನೀಡಲಾಗಿದೆ. ಆಧಾರ್ ಕಾರ್ಡ್, ಪಡಿತರ ಚೀಟಿ, ಮತದಾರ ಚೀಟಿ ನೀಡಿದ್ದು, ಇಲ್ಲಿ ಸರ್ಕಾರದ ಅಂಗನವಾಡಿ ಕೂಡ ಇದೆ ಎಂದು ಸ್ಥಳೀಯರು ಹೇಳಿದರು. ಆದರೂ, ನೀರಾವರಿ ಇಲಾಖೆ ಸುಮಾರು ಪೊಲೀಸರ ನೆರವಿನೊಂದಿಗೆ ತೆರವಿಗೆ ಮುಂದಾದಾಗ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾನಿರತರ ಜೊತೆ ಮಾತನಾಡಿದ ಎಕ್ಸಿಕ್ಯೂಟಿವ್ ಎಂಜಿನಿಯರ್ ಸುರೇಶ್, ನೀವು ತಡೆ ನೀಡಲು ಕೋರ್ಚ್ನಿಂದ ತಡೆಯಾಜ್ಞೆ ತಂದಿಲ್ಲ. ಹಾಗಾಗಿ ತೆರವುಗೊಳಿಸುತ್ತಿದ್ದೇವೆ. ಕರ್ತವ್ಯಕ್ಕೆ ಅಡ್ಡಿಪಡಿಸಬೇಡಿ ಎಂದು ಮನವಿ ಮಾಡಿದರು.
20 ನಿಮಿಷ ಕಾಲಾವಕಾಶ ಕೊಟ್ಟಅಧಿಕಾರಿಗಳು: ಮನೆ ತೆರವು ಕಾರ್ಯಾಚರಣೆಗೆ ಅಡ್ಡಿಪಡಿಸದಂತೆ ನೀರಾವರಿ ಇಲಾಖೆ ಅಧಿಕಾರಿಗಳು ಪ್ರತಿಭಟನಾನಿರತ ಸ್ಥಳೀಯ ನಿವಾಸಿಗಳಿಗೆ 20 ನಿಮಿಷ ಕಾಲಾವಕಾಶ ನೀಡಿದರು. ಆದರೆ, ಸ್ಥಳೀಯ ಜೆಸಿಬಿ ಯಂತ್ರಗಳ ಮುಂದೆ ಮಲಗಿ ಕಾರ್ಯಾಚರಣೆಗೆ ಅಡ್ಡಿಪಡಿಸಿದರು. ಅಧಿಕಾರಿಗಳು ಯಾವುದಕ್ಕೂ ಬಗ್ಗದೆ ಮನೆ ತೆರವು ಕಾರ್ಯಾಚರಣೆ ನಡೆಸಿದರು. ಈ ವೇಳೆ ಪ್ರತಿಭಟನಾನಿರತ ಮುಖಂಡರಿಬ್ಬರು ಮೈ ಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದರು. ತಕ್ಷಣ ಪೊಲೀಸ್ ಸಿಬ್ಬಂದಿ ಆ ಇಬ್ಬರನ್ನು ವಶಕ್ಕೆ ಪಡೆದುಕೊಂಡರು. ಖಾಲಿ ಇರುವ 4 ಮನೆಗಳನ್ನು ನೆಲಸಮಗೊಳಿಸಿದ್ದು, ವಾಸವಿರುವವರಿಗೆ 15 ದಿನದ ಗಡುವು ನೀಡಿ ಕಾರ್ಯಾಚರಣೆ ಮುಂದೂಡಲಾಗಿದೆ. ಪ್ರತಿಭಟನೆ ಕೈಗೊಂಡು ತೆರವು ಕಾರ್ಯಾಚರಣೆಗೆ ಅಡ್ಡಿಪಡಿಸಿದವರನ್ನು ಪೊಲೀಸರು ವಾಹನದಲ್ಲಿ ಕರೆದೊಯ್ದರು.
ಪ್ರಸನ್ನ ಕುಮಾರ್ ಭೇಟಿ: ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಭೇಟಿ ತೆರವಿಗೆ ವಿರೋಧ ವ್ಯಕ್ತಪಡಿಸಿದರು. ಸುಮಾರು ವರ್ಷಗಳಿಂದ 199 ಮನೆಗಳಲ್ಲಿ ಜನ ಇಲ್ಲಿ ವಾಸವಾಗಿದ್ದಾರೆ. ಏಕಾಏಕಿ ತುಂಗಾ ಮೇಲ್ಡಂಡೆ ಇಲಾಖೆ ಅಧಿಕಾರಿ ತೆರವುಗೊಳಿಸಲು ಮುಂದಾಗಿದ್ದಾರೆ. ಆದರೆ, ಇವರ ಸಮಸ್ಯೆಗೆ ಸ್ಪಂದಿಸಬೇಕಾದ ಜನಪ್ರತಿನಿಧಿಗಳು ನನಗೂ ಇದಕ್ಕೂ ಸಂಬಂಧ ಇಲ್ಲ ಎಂಬಂತೆ ಇದ್ದಾರೆ. ಬಡವರ ಮೇಲೆ ದೌರ್ಜನ್ಯ ಮಾಡುವುದೇ ಬಿಜೆಪಿಯರ ಕೆಲಸ. ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಇಲ್ಲಿನ ನಿವಾಸಿಗಳ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದರು.
ಮಂಗನ ಕಾಯಿಲೆ ಲಸಿಕೆ ಉತ್ಪಾದನೆ ಸ್ಥಗಿತ, ಆತಂಕ
ಕಾರ್ಯಾಚರಣೆಯಲ್ಲಿ ತುಂಗಾ ಮೇಲ್ದಂಡೆ ಯೋಜನೆ ಕಾರ್ಯನಿರ್ವಾಹಕ ಇಂಜಿನಿಯರ್ ಸುರೇಶ್, ಡಿವೈಎಸ್ಪಿ ಪ್ರಭು, ಪೊಲೀಸ್ ಇನ್ಸ್ಪೆಕ್ಟರ್ ದೀಪಕ್, ಭರತ್, ಮಂಜುನಾಥ್,ಅಭಯಪ್ರಕಾಶ್ ಸೋಮನಾಳ್ ಇದ್ದರು.
ಅಂಬೇಡ್ಕರ್ ನಗರದ ಹಕ್ಕಿಪಿಕ್ಕಿ ಕ್ಯಾಂಪ್ ಗೆ ಸರಕಾರ ಕುಡಿಯುವ ನೀರು, ಅಂಗನವಾಡಿ ವ್ಯವಸ್ಥೆ ಮಾಡಿದೆ. ಈ ಜಾಗದ ಮಾಲೀಕರು ಸರ್ಕಾರ ಮತ್ತು ತುಂಗಾ ಮೇಲ್ದಂಡೆ ಪ್ರಾಧಿಕಾರ. ಸರ್ಕಾರಿ ಅಧಿಕಾರಿಗಳು ನೋಟಿಸ್ ಕೊಟ್ಟಿದ್ದೇವೆ ಎಂದು ಹೇಳುತ್ತಿದ್ದಾರೆ. 129 ಮನೆಗಳನ್ನು ತೆರವು ಮಾಡುವಂತೆ ತಿಳಿಸಿದ್ದಾರೆ. ಸ್ಲಂ ನಿವಾಸಿಗಳಿಗೆ ರಕ್ಷಣೆ ಕೊಡಲು ಸ್ಲಂ ಬೋರ್ಡ್ ಇದೆ. ಆದರೆ, ಯಾವೊಬ್ಬ ಸ್ಲಂ ಬೋರ್ಡ್ ಅಧಿಕಾರಿಯೂ ಬಂದಿಲ್ಲ. ಇದಕ್ಕೆ ಸರ್ಕಾರ ಕುಮ್ಮಕ್ಕು ಇದೆ. ಕಾನೂನು ಪ್ರಕಾರ ಇಲ್ಲಿನ ನಿವಾಸಿಗಳಿಗೆ ಖಾತೆ ಮಾಡಿಕೊಡಬೇಕು.
-ಕೆ.ಬಿ.ಪ್ರಸನ್ನ ಕುಮಾರ್, ಮಾಜಿ ಶಾಸಕ.
ಕಷ್ಟಪಟ್ಟು ಹಣ ಹೊಂದಿಸಿ ನಿರ್ಮಿಸಿದ ಮನೆಯನ್ನು ಏಕಾಏಕಿ ಕೆಡವಲು ಬಂದಿದ್ದಾರೆ. ನಮ್ಮ ಮನೆಯ ಒಂದು ಇಟ್ಟಿಗೆ ಬಿದ್ದರೂ ನಾವು ಸಾಯಲು ಸಿದ್ದರಿದ್ದೇವೆ. ಇಲ್ಲವಾದಲ್ಲಿ ನಮಗೆ ಲೈಸೆನ್ಸ್ ಕೊಡಲಿ. ನಾವು ಮರಳಿ ಕಾಡಿಗೆ ಹೋಗುತ್ತೇವೆ. ತೆರವು ಕಾರ್ಯಾಚರಣೆ ಕೈಗೊಂಡರೆ ರಾಜ್ಯಾದ್ಯಂತ ಹಕ್ಕಿಪಿಕ್ಕಿ ಸಮಾಜ ಪ್ರತಿಭಟನೆ ಮಾಡುತ್ತದೆ.
-ಜಗ್ಗು,ರಾಜ್ಯಾಧ್ಯಕ್ಷ,ಕರ್ನಾಟಕಅಲೆಮಾರಿ ಬುಡಕಟ್ಟು ಹಕ್ಕಿಪಿಕ್ಕಿ ಸಂರಕ್ಷಣಾ ಸಮಿತಿ,