
ಭೀಮಣ್ಣ ಗಜಾಪುರ
ಕೂಡ್ಲಿಗಿ (ವಿಜಯನಗರ) (ಅ.17)
ಪ್ರತಿ ವರ್ಷ ಬೆರಳೆಣಿಕೆಯಷ್ಟು ತಾತ್ಕಾಲಿಕ ಅತಿಥಿಗಳಾಗಿ ಬರುವ ಯುರೋಪಿಯನ್ ರೋಲರ್ ಪಕ್ಷಿಗಳು ಈ ಬಾರಿ ತಂಡೋಪ ತಂಡವಾಗಿ 10 ಸಾವಿರ ಕಿ.ಮೀ. ದೂರ ಹಾರಿಕೊಂಡು ಕೂಡ್ಲಿಗಿ ತಾಲೂಕಿನ ಗುಡೇಕೋಟೆಗೂ ಬಂದಿವೆ.ಮೊದಲು ಗುಜರಾತ್ಗೆ ಕಾಲಿಡುವ ಯುರೋಪಿಯನ್ ರೋಲರ್ ನಂತರ ದೇಶದ ಮೂಲೆ ಮೂಲೆಗಳಿಗೆ ಬರುತ್ತವೆ. ಯುರೋಪಿಯನ್ ರೋಲರ್ (Coracias garrulus) ಎಂಬುದು ದೂರ ಪ್ರಯಾಣ ಬೆಳೆಸುವ ಒಂದು ಅಪೂರ್ವ ವಲಸೆ ಹಕ್ಕಿಯಾಗಿದೆ. ಭಾರತದಲ್ಲಿ ಈ ಪ್ರಬೇಧದ ಹಕ್ಕಿಯನ್ನು ನೀಲಕಂಠ ಎಂದು ಕರೆಯಲಾಗುತ್ತಿದ್ದು, ಇದು ಕರ್ನಾಟಕದ ರಾಜ್ಯ ಪಕ್ಷಿಯಾಗಿದೆ ಎಂಬುದು ಮತ್ತೊಂದು ವಿಶೇಷ.
ಪಶ್ಚಿಮ ಯುರೋಪ್, ಮಧ್ಯ ಏಷ್ಯಾ, ರಷ್ಯಾ ಹಾಗೂ ಪೂರ್ವದ ಕಾಶ್ಮೀರ ಮತ್ತು ವಾಯುವ್ಯ ಚೀನಾದವರೆಗೆ ಸಂತಾನೋತ್ಪತ್ತಿ ವಲಯ ಹರಡಿದೆ.
ಚಳಿಗಾಲದ ನೆಲೆ:
ಸೆನೆಗಲ್ನಿಂದ ಕ್ಯಾಮರೂನ್, ಪೂರ್ವ ಆಫ್ರಿಕಾ (ಕೀನ್ಯಾ) ಮತ್ತು ದಕ್ಷಿಣ ಆಫ್ರಿಕಾ (ದಕ್ಷಿಣ ಆಫ್ರಿಕಾ ದೇಶ, ಅಂಗೋಲಾ ಮತ್ತು ಬೋಟ್ಸ್ವಾನಾ) ಸೇರಿದಂತೆ ಉಪ-ಸಹಾರನ್ ಆಫ್ರಿಕಾ ಭಾಗಗಳಲ್ಲಿ ಇವು ಚಳಿಗಾಲ ಕಳೆಯುತ್ತವೆ. ಕೀಟ (ಜೀರುಂಡೆಗಳು, ಮಿಡತೆಗಳು), ಸಣ್ಣ ಸರಿಸೃಪ ಅಥವಾ ಕಪ್ಪೆಯನ್ನು ಆಹಾರವಾಗಿ ಸೇವನೆ ಮಾಡುತ್ತದೆ. ನವೆಂಬರ್ ವರೆಗೆ ಇದ್ದು, ಬಳಿಕ ಅವು ತಮ್ಮ ತಾಯಿ ನಾಡಿಗೆ ಪ್ರಯಾಣ ಬೆಳೆಸುತ್ತವೆ.
ಬರ್ಡ್ಲೈಫ್ ಸೌತ್ ಆಫ್ರಿಕಾದಂತಹ ಸಂಸ್ಥೆಗಳು ಹೇರಾ ಮತ್ತು ರೋರಿ ಎಂಬ ಹಕ್ಕಿಗಳಿಗೆ ಟ್ಯಾಗ್ ಅಳವಡಿಸಿ ಅವುಗಳ 10,000 ಕಿಮೀ ಪ್ರಯಾಣ ಯಶಸ್ವಿಯಾಗಿ ಪತ್ತೆ ಹಚ್ಚಿವೆ.