ಬಡ ಕೂಲಿ ಕಾರ್ಮಿಕರ ನೀರಡಿಕೆ ನೀಗಿಸಲು ಪಣತೊಟ್ಟ ಚಿನ್ನದ ವ್ಯಾಪಾರಿಯೊಬ್ಬರು ಲಕ್ಷಾಂತರ ರೂಪಾಯಿ ವ್ಯಯಿಸಿ ಶುದ್ಧ ಕುಡಿಯುವ ನೀರಿನ ಘಟಕವನ್ನು ನಿರ್ಮಿಸಿ ಉಚಿತವಾಗಿ ನೀರು ಕೊಡುವ ಮೂಲಕ ಪುಣ್ಯದ ಕೆಲಸ ಮಾಡುತ್ತಿದ್ದಾರೆ.
ವರದಿ: ರವಿ.ಎಸ್.ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು
ಕೊಡಗು (ಫೆ.18): ಬಡ ಕೂಲಿ ಕಾರ್ಮಿಕರ ನೀರಡಿಕೆ ನೀಗಿಸಲು ಪಣತೊಟ್ಟ ಚಿನ್ನದ ವ್ಯಾಪಾರಿಯೊಬ್ಬರು ಲಕ್ಷಾಂತರ ರೂಪಾಯಿ ವ್ಯಯಿಸಿ ಶುದ್ಧ ಕುಡಿಯುವ ನೀರಿನ ಘಟಕವನ್ನು ನಿರ್ಮಿಸಿ ಉಚಿತವಾಗಿ ನೀರು ಕೊಡುವ ಮೂಲಕ ಪುಣ್ಯದ ಕೆಲಸ ಮಾಡುತ್ತಿದ್ದಾರೆ. ಹೌದು! ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರದಲ್ಲಿ ಹಲವು ವರ್ಷಗಳಿಂದ ಚಿನ್ನಬೆಳ್ಳಿ ವ್ಯಾಪಾರ ಮಾಡುತ್ತಿರುವ ಅವರು ಕೇವಲ ವ್ಯಾಪಾರ ಮಾಡಿ ಲಾಭ ಗಳಿಸುವುದಷ್ಟಕ್ಕೇ ಸೀಮಿತವಾಗದೆ ವಿವಿಧ ಸಾಮಾಜಿಕ ಕಾರ್ಯಗಳನ್ನು ಮಾಡುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ರಾಜೇಂದ್ರ ಸಿಂಗ್ ಮೂಲತಃ ರಾಜಸ್ಥಾನದ ನಾಗವಾರ ಜಿಲ್ಲೆಯ ಪುರೋಹಿತಾಸನಿ ಗ್ರಾಮದವರು.
undefined
ವೃತ್ತಿಯಲ್ಲಿ ಚಿನ್ನದ ವ್ಯಾಪಾರಿ, ಇವರು ಕಳೆದ 22 ವರ್ಷಗಳಿಂದ ಸಿದ್ದಾಪುರದಲ್ಲಿ ಮೀನಾಕ್ಷಿ ಚಿನ್ನದ ಅಂಗಡಿಯನ್ನು ನಡೆಸುತ್ತಾ ತಮ್ಮ ಕುಟುಂಬದೊಂದಿಗೆ ನೆಲೆಸಿದ್ದಾರೆ. ರಾಜೇಂದ್ರ ಸಿಂಗ್ ಅವರು ಚಿನ್ನದ ಅಂಗಡಿಯಲ್ಲಿ ಬರುವ ಲಾಭದಲ್ಲಿ ತಮ್ಮ ಗ್ರಾಮದಲ್ಲಿನ ಶಾಲೆಗಳಿಗೆ, ನಿರ್ಗತಿಕರಿಗೆ, ಅನಾರೋಗ ಪೀಡಿತರ ಚಿಕಿತ್ಸೆಗಾಗಿ ನಿಸ್ವಾರ್ಥವಾಗಿ ಸಹಾಯ ನೀಡುವುದು ಇವರ ಕಾಯಕವಾಗಿದೆ. ಅಂಗಡಿ ಬಾಗಿಲಿಗೆ ಬಂದು ಸಹಾಯ ಯಾಚಿಸುವವರಿಗೆ ಜಾತಿ ಧರ್ಮ ಬೇದ ಭಾವವಿಲ್ಲದೆ ಎಲ್ಲರಿಗೂ ಮುಕ್ತವಾಗಿ ಸಹಾಯ ಹಸ್ತ ಚಾಚುತ್ತಿದ್ದಾರೆ. ಸಿದ್ದಾಪುರದಲ್ಲಿ ಸಣ್ಣ ಉದ್ಯಮನಡೆಸುತ್ತಿರುವ ಇವರು ತನ್ನ ಕುಟುಂಬಕ್ಕೆ ಅನ್ನ ನೀಡಿದ ಮಣ್ಣಿನರಕ್ಷಣೆಗಾಗಿ ಪ್ರತೀವರ್ಷ ಪರಿಸರ ದಿನದಂದು ವಿವಿಧ ಶಾಲೆಗಳ ಸಹಯೋಗದೊಂದಿಗೆ ವನಮಹೋತ್ಸವ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ನೂರಾರು ಗಿಡಗಳನ್ನು ನೆಡುತ್ತಿದ್ದರು.
ಕಾಂಗ್ರೆಸ್‌ನವರಿಗೆ ಚೆಂಡುಹೂವು ಇನ್ನೂ ಪರ್ಮನೆಂಟ್: ಸಿ.ಟಿ.ರವಿ ವ್ಯಂಗ್ಯ
ಆ ಮೂಲಕ ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣೆಯ ಜಾಗೃತಿ ಮೂಡಿಸುತ್ತಿದ್ದರು. ಅಲ್ಲದೆ ಸಂಘ ಸಂಸ್ಥೆಗಳಿಗೆ, ಸಾರ್ವಜನಿಕ ಕಚೇರಿಗಳಿಗೆ ತಮ್ಮ ಸ್ವಂತ ಖರ್ಚಿನಲ್ಲಿ ಗಿಡಗಳನ್ನು ನೆಡುವ ಮೂಲಕ ಮಣ್ಣಿನ ಸಂರಕ್ಷಣೆಯಲ್ಲಿ ತೊಡಗಿರುವುದು ಇವರ ಪರಿಸರ ಕಾಳಜಿಯನ್ನು ತೋರಿಸುತ್ತದೆ. ಹೀಗೆ ಪರಿಸರ ಕಾಳಜಿ ಹೊಂದಿರುವ ರಾಜೇಂದ್ರ ಸಿಂಗ್ ಅವರು ಇದೀಗ ಬಡ ಕೂಲಿ ಕಾರ್ಮಿಕರಿಗೆ ಅನುಕೂಲವಾಗುವಂತೆ ಉಚಿತ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸಿದ್ದಾಪುರ ಗ್ರಾಮದಲ್ಲಿನ ಬಸ್ ನಿಲ್ದಾಣಕ್ಕೆ ಪ್ರತಿದಿನ ನೂರಾರು ಪ್ರಯಾಣಿಕರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಆಗಮಿಸುತ್ತಾರೆ.
ಹೀಗೆ ಬರುವವರಲ್ಲಿ ಬಹುತೇಕರಿಗೆ ನೀರಡಿಕೆಯಾಗಿ ತಮ್ಮ ದಾಹ ನೀಗಿಸಿಕೊಳ್ಳಲು ಹಣ ನೀಡಿ ಬಾಟಲಿ ನೀರನ್ನು ಖರೀದಿಸುತ್ತಿದ್ದರು. ಆದರೆ ಇಲ್ಲಿಗೆ ಬರುವ ಬಹುತೇಕರು ಕೂಲಿ ಕಾರ್ಮಿಕರು ಮತ್ತು ಬಡವರಾಗಿದ್ದು, ಬಸ್ ನಿಲ್ದಾಣದ ಸುತ್ತಮುತ್ತ ಇರುವ ಹೊಟೇಲ್ಗೆಳಿಗೆ ತೆರಳಿ ನೀರು ಕುಡಿಯುತ್ತಿದ್ದರು. ಇನ್ನು ಕೆಲವರು ಹೊಟೇಲ್ಗೆ ಹೋಗಿ ಬರೀ ನೀರು ಕೊಡಿ ಎಂದು ಕೇಳುವುದಕ್ಕೆ ಹಿಂಜರಿಯುತ್ತಿದ್ದರು. ಇದನ್ನು ಗಮನಿಸಿದ್ದ ರಾಜೇಂದ್ರ ಸಿಂಗ್ ಅವರು ತಮ್ಮ ಚಿನ್ನದ ಅಂಗಡಿಯಲ್ಲೇ ಒಂದು ಕ್ಯಾನ್ ಇರಿಸಿ ಓಡಾಡುವ ಜನರಿಗಾಗಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದರು. ಆದರೆ ಚಿನ್ನದ ಅಂಗಡಿಗೆ ಹೋಗಿ ನೀರು ಕುಡಿಯುವುದಕ್ಕೂ ಜನರು ಹಿಂದುಮುಂದು ಯೋಚಿಸುತ್ತಿದ್ದರು.
ಮದ್ದೂರು ಗೆಲ್ಲಲು ಕಾಂಗ್ರೆಸ್ ಭರ್ಜರಿ ಪ್ಲಾನ್: ಡಿಕೆಶಿ ನೇತೃತ್ವದಲ್ಲಿ ಮಹತ್ವದ ಚರ್ಚೆ
ಹೀಗಾಗಿ ರಾಜೇಂದ್ರ ಸಿಂಗ್ ಅವರು ಸಾರ್ವಜನಿಕರ ಬಾಯಾರಿಕೆ ನೀಗಿಸಲು ಸಿದ್ದಾಪುರ ಬಸ್ಸು ನಿಲ್ದಾಣದಲ್ಲಿ ಇದೀಗ ರೂ 1.50 ಲಕ್ಷ ವೆಚ್ಚದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಶುದ್ದ ಕುಡಿಯುವ ನೀರಿನ ಘಟಕವನ್ನು ಪ್ರಾರಂಭಿಸುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅಷ್ಟೇ ಏಕೆ ಅಲ್ಲಿ ಸೋರುವ ಅಲ್ಪಸ್ವಲ್ಪ ನೀರು ಕೂಡ ವ್ಯರ್ಥವಾಗಿ ಹರಿದು ಹೋಗುವುದು ಬೇಡ ಎಂದು ಎರಡು ಗಿಡಗಳನ್ನು ಹಾಕಿರುವ ಅವರು ಆ ವ್ಯರ್ಥ ನೀರು ಕೂಡ ಆ ಗಿಡಗಳಿಗೆ ಹೋಗುವಂತೆ ಮಾಡಿದ್ದಾರೆ. ಒಟ್ಟಿನಲ್ಲಿ ಸ್ಥಳೀಯ ಗ್ರಾಮ ಪಂಚಾಯತಿ ಹಾಗೂ ಜನಪ್ರತಿನಿಧಿಗಳು ಮಾಡಬೇಕಾದ ಕಾರ್ಯವನ್ನು ರಾಜೇಂದ್ರ ಸಿಂಗ್ ಅವರು ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ಸಾರ್ವಜನಿಕರು ಅಭಿಪ್ರಾಯಿಸಿದ್ದಾರೆ.