ಕೊಪ್ಪಳದಲ್ಲಿ ಶುರುವಾಗಲಿದೆ ಕಾರ್ಮಿಕರ ವಿಮಾ ಆಸ್ಪತ್ರೆ: ಸಂಗಣ್ಣ ಕರಡಿ

By Kannadaprabha NewsFirst Published Dec 18, 2022, 2:15 PM IST
Highlights

ಬಹು ವರ್ಷಗಳ ಬೇಡಿಕೆ ಈಡೇರಿಕೆ, ಕಲಬುರಗಿ, ಹುಬ್ಬಳ್ಳಿ ಆನಂತರ ಕೊಪ್ಪಳದಲ್ಲಿ ಶುರು, ಸುತ್ತಮುತ್ತಲ ಜಿಲ್ಲೆಯ ಕಾರ್ಮಿಕರಿಗೂ ಅನುಕೂಲ. 

ಸೋಮರಡ್ಡಿ ಅಳವಂಡಿ

ಕೊಪ್ಪಳ(ಡಿ.18): ಹಲವು ವರ್ಷಗಳ ಬೇಡಿಕೆಗೆ ರಾಜ್ಯ ಸರ್ಕಾರ ಆಸ್ತು ಎಂದಿದ್ದು, ಜಿಲ್ಲಾ ಕೇಂದ್ರ ಕೊಪ್ಪಳದಲ್ಲಿ ಇನ್ನೇನು ಶೀಘ್ರದಲ್ಲಿಯೇ ಇಎಸ್‌ಐ (ಕಾರ್ಮಿಕರ ವಿಮಾ ಆಸ್ಪತ್ರೆ) ಪ್ರಾರಂಭವಾಗಲಿದೆ. ಇದರಿಂದ ಜಿಲ್ಲೆ ಸೇರಿದಂತೆ ಸುತ್ತಮುತ್ತಲ ಜಿಲ್ಲೆಯ ಕಾರ್ಮಿಕರು ನಿಟ್ಟುಸಿರು ಬಿಡುವಂತೆ ಆಗಿದೆ. ಕೊಪ್ಪಳ ಜಿಲ್ಲೆಯಲ್ಲಿ ಹಲವು ಕೈಗಾರಿಕೆ ಸೇರಿದಂತೆ ಉದ್ಯಮ ವಲಯ ಇದ್ದು, ಇದುವರೆಗೂ ಸುಮಾರು 22 ಸಾವಿರ ಕಾರ್ಮಿಕರು ನೋಂದಣಿಯಾಗಿದ್ದಾರೆ. ಇವರಲ್ಲದೆ ಇನ್ನೂ 30 ಸಾವಿರಕ್ಕೂ ಅಧಿಕ ಕಾರ್ಮಿಕರು ಇದ್ದಾರೆ.

ನೋಂದಣಿಯಾಗಿರುವ ಕಾರ್ಮಿಕರಿಗೆ ಸಂಪೂರ್ಣ ಉಚಿತವಾಗಿ ಚಿಕಿತ್ಸೆ ದೊರೆಯಲಿದೆ. ಕೇಂದ್ರ ಸರ್ಕಾರದ ಶೇ. 80ರಷ್ಟು ಅನುದಾನದಲ್ಲಿ ರಾಜ್ಯ ಸರ್ಕಾರ ಈ ಆಸ್ಪತ್ರೆಗಳನ್ನು ನಡೆಸುತ್ತದೆ. ಸದ್ಯ ಈಗ ಉತ್ತರ ಕರ್ನಾಟಕದಲ್ಲಿ ಹುಬ್ಬಳ್ಳಿ ಮತ್ತು ಕಲಬರಗಿಯಲ್ಲಿ ಮಾತ್ರ ಕಾರ್ಮಿಕರ ವಿಮಾ ಆಸ್ಪತ್ರೆಗಳು ಇದ್ದವು. ಆದರೆ, ಈಗ ಕೊಪ್ಪಳ ಜಿಲ್ಲೆಯಲ್ಲಿ ಕಾರ್ಮಿಕರ ಆಸ್ಪತ್ರೆ ಪ್ರಾರಂಭವಾಗುವಂತಾಗಿರುವುದು ಇಲ್ಲಿಯ ಕಾರ್ಮಿಕರ ಬಹು ವರ್ಷಗಳ ಬೇಡಿಕೆ ಈಡೇರಿದಂತೆ ಆಗಿದೆ.

ಸಿದ್ದರಾಮಯ್ಯ ಟಿಕೆಟ್‌ ಘೋಷಣೆ ಮಾಡೋದು ಸರಿಯಲ್ಲ: ಸತೀಶ್‌

ಆಸ್ಪತ್ರೆಗೆ ಶುರು ಮಾಡಲು ಅಸ್ತು:

ರಾಜ್ಯ ಸರ್ಕಾರದ ಕಾರ್ಮಿಕ ಇಲಾಖೆ ಡಿ. 12ರಂದು ಈ ಕುರಿತು ಆದೇಶ ಹೊರಡಿಸಿ ಕೊಪ್ಪಳ ಜಿಲ್ಲೆಯಲ್ಲಿ ಕಾರ್ಮಿಕರ ವಿಮಾ ಆಸ್ಪತ್ರೆ ಪ್ರಾರಂಭಿಸುವುದಕ್ಕೆ ಅಸ್ತು ಎಂದಿದೆ. ಅಷ್ಟೇ ಅಲ್ಲ, ಅಗತ್ಯ ಸಿಬ್ಬಂದಿ ಮತ್ತು ವೈದ್ಯರನ್ನು ಸಹ ಮಂಜೂರಿ ಮಾಡಿದೆ. ಈಗ ಕಾರ್ಮಿಕರ ವಿಮಾ ಆಸ್ಪತ್ರೆಗೆ ಸ್ವಂತ ಕಟ್ಟಡ ಆಗುವವರೆಗೂ ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಇರುವ ತಾಯಿ-ಮಗು ಆಸ್ಪತ್ರೆಯಲ್ಲಿಯೇ ಕಾರ್ಮಿಕ ವಿಮಾ ಆಸ್ಪತ್ರೆ ಪ್ರಾರಂಭಿಸುವಂತೆ ಸೂಚಿಸಲಾಗಿದೆ. ಸ್ವಂತ ಕಟ್ಟಡವಾಗುವ ವರೆಗೂ ಕಾಯುವುದು ಬೇಡ. ಕೂಡಲೇ ಆಸ್ಪತ್ರೆ ಪ್ರಾರಂಭಿಸಿ ಎಂದು ಕಟ್ಟುನಿಟ್ಟಾಗಿ ಸೂಚಿಸಲಾಗಿದೆ.

ಅಲೆಯುವುದು ತಪ್ಪಲಿದೆ:

ನೋಂದಾಯಿತ ಕಾರ್ಮಿಕರಿಗೆ ಕಾರ್ಮಿಕರ ವಿಮಾ ಆಸ್ಪತ್ರೆಯಲ್ಲಿ ಸಂಪೂರ್ಣ ಉಚಿತ ಚಿಕಿತ್ಸೆ ದೊರೆಯುತ್ತದೆ. ಇದುವರೆಗೆ ಕೊಪ್ಪಳ ಸೇರಿದಂತೆ ನೆರೆಯ ಬಳ್ಳಾರಿ, ಗದಗ, ವಿಜಯನಗರ ಜಿಲ್ಲೆಯ ಕಾರ್ಮಿಕರು ಹುಬ್ಬಳ್ಳಿಯ ಕಾರ್ಮಿಕರ ವಿಮಾ ಆಸ್ಪತ್ರೆಗೆ ಅಲೆಯಬೇಕಾಗಿತ್ತು. ಇದು ಕಾರ್ಮಿಕರಿಗೆ ಬಹುದೊಡ್ಡ ಸಮಸ್ಯೆಯಾಗಿತ್ತು. ಸಣ್ಣಪುಟ್ಟಕಾಯಿಲೆಗೂ ಅಲೆಯಬೇಕಾಗಿತ್ತಲ್ಲದೆ ಕಾರ್ಮಿಕರಿಗೆ ಹೊರೆಯಾಗಿತ್ತು. ಈಗ ಕೊಪ್ಪಳದಲ್ಲಿಯೇ ಕಾರ್ಮಿಕರ ವಿಮಾ ಆಸ್ಪತ್ರೆ ಪ್ರಾರಂಭವಾಗುವುದರಿಂದ ಪಕ್ಕದ ಜಿಲ್ಲೆಯ ಕಾರ್ಮಿಕರು ಸೇರಿದಂತೆ ಜಿಲ್ಲೆಯ ಕಾರ್ಮಿಕರಿಗೆ ಬಹುದೊಡ್ಡ ಅನುಕೂಲವಾಗಲಿದೆ.

ಹುದ್ದೆಗಳು ಮಂಜೂರಿ:

ಕೊಪ್ಪಳದಲ್ಲಿ ಪ್ರಾರಂಭವಾಗುವ ಕಾರ್ಮಿಕರ ವಿಮಾ ಆಸ್ಪತ್ರೆಗೆ ಅಗತ್ಯ ಹುದ್ದೆಗಳನ್ನು ಮಂಜೂರಾತಿ ಮಾಡಿಯೂ ಆದೇಶಿಸಲಾಗಿದೆ. 17 ವೈದ್ಯಾಧಿಕಾರಿಗಳು, 1 ಆರ್ಯುವೇದಿಕ ವೈದ್ಯಾಧಿಕಾರಿಗಳು, 15 ಶುಶ್ರೂಕಿಯರು, 4 ಫಾರ್ಮಿಸಿ ಅಧಿಕಾರಿಗಳು, ಕಚೇರಿ ಅಧೀಕ್ಷಕರು, ಇತರೆ ಸಿಬ್ಬಂದಿ ಸೇರಿದಂತೆ ಸುಮಾರು 108 ಹುದ್ದೆಗಳನ್ನು ಮಂಜೂರಾತಿ ಮಾಡಿ, ಆದೇಶಿಸಲಾಗಿದೆ.

ಕೇಂದ್ರದ ₹5495 ಕೋಟಿ ಪಡೆವಲ್ಲಿ ಬಿಜೆಪಿ ಸಂಸದರು ವಿಫಲ: ಸಿದ್ದು

ಕೊಪ್ಪಳ ಜಿಲ್ಲೆಯಲ್ಲಿ ಇಎಸ್‌ಐ ಆಸ್ಪತ್ರೆ ಪ್ರಾರಂಭಿಸಲು ನಡೆಸಿದ ನಾಲ್ಕಾರು ವರ್ಷಗಳ ಸತತ ಪ್ರಯತ್ನಕ್ಕೆ ಈಗ ಸರ್ಕಾರ ಆಸ್ತು ಎಂದಿದೆ. ಇದರಿಂದ ಕಾರ್ಮಿಕರ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಜಿಲ್ಲೆ ಸೇರಿದಂತೆ ನೆರೆಯ ಜಿಲ್ಲೆಯಲ್ಲಿ ಇರುವ ಸಹಸ್ರಾರು ಕಾರ್ಮಿಕರ ಕುಟುಂಬಗಳಿಗೆ ಅನುಕೂಲವಾಗಲಿದೆ ಅಂತ ಕೊಪ್ಪಳ ಸಂಸದ ಸಂಗಣ್ಣ ಕರಡಿ ತಿಳಿಸಿದ್ದಾರೆ. 

ಕಾರ್ಮಿಕರ ವಿಮಾ ಆಸ್ಪತ್ರೆಗಾಗಿ ಹಲವು ವರ್ಷಗಳಿಂದ ಸಂಸದರು ಶ್ರಮಿಸುತ್ತಿದ್ದರು. ಈ ಕುರಿತು ನಾವು ಸಹ ಅನೇಕ ಬಾರಿ ಮನವಿ ನೀಡಿದ್ದೇವೆ. ಈಗ ಪ್ರಾರಂಭವಾಗುತ್ತಿರುವುದಕ್ಕೆ ಖುಷಿಯಾಗುತ್ತದೆ. ಸಂಸದ ಸಂಗಣ್ಣ ಕರಡಿ ಅವರಿಗೆ ಧನ್ಯವಾದ ಹೇಳುತ್ತೇವೆ ಅಂತ ಕಾರ್ಮಿಕ ಮರಿಯಪ್ಪ ಹೇಳಿದ್ದಾರೆ. 
 

click me!