* ಸೋಂಕಿತರಿಗೆ ಚಿಕಿತ್ಸೆ ಸೌಲಭ್ಯ ನೀಡಲು ಅನುಕೂಲ
* ಶೀತವಾವಸ್ಥೆಯಲ್ಲಿದ್ದ ಅಸ್ಪತ್ರೆಗೆ ಆಧುನಿಕ ಸ್ಪರ್ಶ
* ಆಸ್ಪತ್ರೆಯಲ್ಲಿ ಸೋಂಕಿತರಿಗೆ ಉತ್ತಮ ವೈದ್ಯಕೀಯ ಸೌಲಭ್ಯ
ಬೆಂಗಳೂರು(ಮೇ.12): ಕಲಬುರಗಿ ಜಿಲ್ಲೆಯ ಶಹಬಾದ್ ಪಟ್ಟಣದ ಶಿತಲಾವಸ್ಥೆಯಲ್ಲಿರುವ ಇಎಸ್‌ಐ ಆಸ್ಪತ್ರೆಗೆ ಆತ್ಯಾಧುನಿಕ ಸೌಲಭ್ಯ ಕಲ್ಪಿಸಿ ಕೋವಿಡ್ ಕೇರ್ ಸೆಂಟರ್ ಅನ್ನಾಗಿ ಪರಿವರ್ತಿಸಲು ತೀರ್ಮಾನಿಸಲಾಗಿದೆ ಎಂದು ಗಣಿ ಮತ್ತು ಭೂವಿಜ್ಞಾನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ.
undefined
ಇಂದು(ಬುಧವಾರ) ನಗರದಲ್ಲಿ ಅಧಿಕಾರಿಗಳ ಜೊತೆ ಚರ್ಚಿಸಿದ ಮುರುಗೇಶ್ ನಿರಾಣಿ ಅವರು, ಕೂಡಲೇ ಶಹಬಾದ್ ಪಟ್ಟಣದ ವಾಡಿ ರಸ್ತೆಯಲ್ಲಿರುವ ಇಎಸ್‌ಐ ಆಸ್ಪತ್ರೆಯನ್ನು ಕೋವಿಡ್ ಕೇರ್ ಕೇಂದ್ರವಾಗಿ ಪರಿವರ್ತಿಸಲು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದಾರೆ.
ಕಲಬುರಗಿ ಜಿಲ್ಲಾಧಿಕಾರಿ ವಿ.ವಿ ಜೋಶ್ನಾ, ಶಹಬಾದ್ ತಹಸೀಲ್ದಾರ್ ಸುರೇಶ್ ವರ್ಮ, ಪುರಸಭೆ ಆಯುಕ್ತ ಕೆ.ಗುರುಲಿಂಗಪ್ಪ, ಕಂದಾಯ, ಮತ್ತು ಆರೋಗ್ಯ ಇಲಾಖೆ ಸೇರಿದಂತೆ ಮತ್ತಿತರ ಅಧಿಕಾರಿಗಳ ಜೊತೆ ಚರ್ಚೆಸಿ ಅತೀ ಶೀಘ್ರದಲ್ಲಿ ಕಾರ್ಯಾರಂಭ ಮಾಡುವಂತೆ ಪೂರ್ವ ಸಿದ್ಧತೆಗಳನ್ನು ಕೂಗೊಳಬೇಕೆಂದು ತಾಕೀತು ಮಾಡಿದ್ದಾರೆ. ಸಚಿವರು ಸೂಚನೆ ಕೊಟ್ಡ ಬೆನ್ನಲ್ಲೇ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿದ್ದಾರೆ. ಭಾನುವಾರ ಖುದ್ದು ಸಚಿವ ನಿರಾಣಿ ಅವರೇ ಶಹಬಾದ್ ಪಟ್ಟಣಕ್ಕೆ ಭೇಟಿ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.
ನಮ್ಮೂರಲ್ಲಿ ಕೋವಿಡ್ ಸೆಂಟರ್ ಬೇಡ ಎಂದು ಆಕ್ರೋಶ : ವೈದ್ಯರ ಮೇಲೆ ಹಲ್ಲೆ
ಎಲ್ಲ ರೀತಿಯ ಸವಲತ್ತು ಕಲ್ಪಿಸಲು ಸೂಚನೆ
ಆಸ್ಪತ್ರೆ ಆವರಣದಲ್ಲಿ ಬೆಳೆದು ನಿಂತಿರುವ ಗಿಡ-ಗಂಟೆಗಳು, ಬಿರುಕು ಬಿಟ್ಟಿರುವ ಗೋಡೆಗಳು, ಕೈಕೊಟ್ಟಿರುವ ವಿದ್ಯುತ್ ಸಂಪರ್ಕ, ಹಾಳಾಗಿರುವ ಬೆಡ್‍ಗಳು, ಚಿಕಿತ್ಸಾ ಕೊಠಡಿ, ರೋಗಿಗಳು ತಂಗುವ ಕೊಠಡಿಗಳು, ಶೌಚಾಲಯ, ಅಡುಗೆ ಮನೆ, ಸ್ನಾನದ ಕೋಣೆ ಸೇರಿದಂತೆ ಎಲ್ಲ ರೀತಿಯ ಸವಲತ್ತುಗಳನ್ನು ಕಲ್ಪಿಸಬೇಕೆಂದು ಜಿಲ್ಲಾಡಳಿತಕ್ಕೆ ಸಚಿವರು ನಿರ್ದೇಶನ ನೀಡಿದ್ದಾರೆ.
ಕೋವಿಡ್ ಸೋಂಕಿತರಿಗೆ ಅಗತ್ಯವಿರುವ ವೈದ್ಯಕೀಯ ಸೌಲಭ್ಯಗಳನ್ನು ಈ ಆಸ್ಪತ್ರೆಯಲ್ಲಿ ಕಲ್ಪಿಸಬೇಕು. ಹಾಸಿಗೆ, ವೆಂಟಿಲೇಟರ್, ಆಕ್ಸಿಜನ್ ಪೂರೈಕೆ, ಕುಡಿಯುವ ನೀರು, ಅಡುಗೆ ಮನೆ, ಶೌಚಾಲಯ ಸೇರಿದಂತೆ ಆಧುನಿಕ ಆಸ್ಪತ್ರೆಗೆ ಇರಬೇಕಾದ ಎಲ್ಲ ಮೂಲ ಸೌಕರ್ಯಗಳನ್ನೂ ಕಲ್ಪಿಸಬೇಕು. ಇದು ಸಮರೋಪಾದಿಯಲ್ಲಿ ನಡೆಯಬೇಕೆಂದು ಖಡಕ್ ಸೂಚನೆ ನೀಡಿದ್ದಾರೆ.
ಎಷ್ಟು ಸಾಧ್ಯವೋ ಅಷ್ಟು ಬೇಗ ಕೋವಿಡ್ ಸೆಂಟರ್ ಕಾರ್ಯಾರಂಭ ಮಾಡಬೇಕು. ಅಧಿಕಾರಿಗಳು ಇಲ್ಲದ ಸಬೂಬು ಹೇಳುವುದು. ಕಾರಣ ಕೊಟ್ಟು ವಿಳಂಬ ಮಾಡುವುದು, ಅನಗತ್ಯವಾಗಿ ಅಸಡ್ಡೆ ತೋರಿದರೆ ಅಂತಹವರ ಮೇಲೆ ಶಿಸ್ತುಕ್ರಮ ಜರುಗಿಸುವುದಾಗಿಯೂ ಎಚ್ಚರಿಕೆಯನ್ನೂ ಕೊಟ್ಟಿದ್ದಾರೆ.
ಇಎಸ್‍ಐ ಆಸ್ಪತ್ರೆಯು ನಮಗೆ ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತನೆಯಾದರೆ ನೂರಾರು ಸಂಖ್ಯೆಯ ಸೋಂಕಿತರಿಗೆ ಇಲ್ಲಿ ಚಿಕಿತ್ಸೆ ನೀಡಬಹುದು. ಈಗ ಜಿಲ್ಲೆಯಲ್ಲಿ ಬೆಡ್ ಸಿಗದೆ ಸೋಂಕಿತರು ಪರದಾಡುತ್ತಿದ್ದಾರೆ. ಹೀಗಾಗಿ ಪಾಳು ಬಿದ್ದಿರುವ ಆಸ್ಪತ್ರೆಗೆ ಆಧುನಿಕ ಸ್ಪರ್ಶ ನೀಡಿ ಭವಿಷ್ಯದಲ್ಲಿಯೂ ಬಳಕೆ ಮಾಡಿಕೊಳ್ಳುವ ಯೋಜನೆ ಸಚಿವರದ್ದಾಗಿದೆ.
ಕೊರೋನಾ ವಿರುದ್ಧ ಹೋರಾಟ: ಬೋಯಿಂಗ್ ಇಂಡಿಯಾದಿಂದ ಬೆಂಗ್ಳೂರು, ಕಲಬುರಗಿಯಲ್ಲಿ ಆಸ್ಪತ್ರೆ
ಅಸ್ಪತ್ರೆಯ ಹಿನ್ನೆಲೆ
1994ರಲ್ಲಿ ಶಹಬಾದ್ ಪಟ್ಟಣದಲ್ಲಿ ಕಾರ್ಮಿಕರಿಗಾಗಿಯೇ ಇಎಸ್‍ಐ ಆಸ್ಪತ್ರೆಯನ್ನು ನಿರ್ಮಾಣ ಮಾಡಲಾಗಿತ್ತು. ಪ್ರಾರಂಭದಲ್ಲಿ ಈ ಆಸ್ಪತ್ರೆಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಜಿಲ್ಲೆಯ ನಾನಾ ಭಾಗಗಳಿಂದ ಪ್ರತಿದಿನ ನೂರಾರು ಸಂಖ್ಯೆಯಲ್ಲಿ ಕಾರ್ಮಿಕರು, ಜನಸಾಮಾನ್ಯರು ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯುತ್ತಿದ್ದರು.
ನುರಿತ ವೈದ್ಯರು ಉತ್ತಮ ಚಿಕಿತ್ಸೆ ಕೊಡುತ್ತಿದ್ದರಿಂದ ಇದೊಂದು ಉತ್ತಮ ಇಎಸ್‍ಐ ಆಸ್ಪತ್ರೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು. ಆಸ್ಪತ್ರೆ ಸುತ್ತಮುತ್ತ ಸಿಮೆಂಟ್ ಫ್ಯಾಕ್ಟರಿಗಳು ಇದ್ದವು. ಕಾಲಕ್ರಮೇಣ ಈ ಕಾರ್ಖಾನೆಗಳು ಮಹಾರಾಷ್ಟ್ರ, ಆಂಧ್ರ ಪ್ರದೇಶ, ತೆಲಂಗಾಣ ರಾಜ್ಯಗಳಿಗೆ ಸ್ಥಳಾಂತರಗೊಂಡರೆ, ಇನ್ನೂ ಕೆಲವು ಕಾರ್ಖಾನೆಗಳು ಬೇರೆ ಬೇರೆ ಕಾರಣಗಳಿಂದ ಸ್ಥಗಿತಗೊಂಡವು.
ಹೀಗೆ ಕಾರ್ಖಾನೆ ಸ್ಥಗಿತಗೊಂಡಿದ್ದರಿಂದ ಈ ಆಸ್ಪತ್ರೆಗೆ ದಿನದಿಂದ ದಿನಕ್ಕೆ ಕಾರ್ಮಿಕರು ಬರುವ ಸಂಖ್ಯೆ ಕಡಿಮೆಯಾಗುತ್ತ ಕೊನೆಗೊಂದು ದಿನ ಮುಚ್ಚುವ ಹಂತಕ್ಕೆ ಬಂದಿತು. ಈಗ ಪಾಳು ಬಿದ್ದಿರುವ ಆಸ್ಪತ್ರೆಗೆ ಆಧುನಿಕ ಸ್ಪರ್ಶ ನೀಡಿ ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತನೆ ಮಾಡಲು ಸಚಿವ ನಿರಾಣಿ ಮುಂದಾಗಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.
ಪಾಳುಬಿದ್ದಿರುವ ಇಎಸ್‌ಐ ಆಸ್ಪತ್ರೆಯಲ್ಲಿ ಎಲ್ಲಾ ರೀತಿಯ ವೈದ್ಯಕೀಯ ಸೌಲಭ್ಯಗಳನ್ನು ಕಲ್ಪಿಸಲು ಅಗತ್ಯ ಕ್ರಮಗಳನ್ನುತೆಗೆದುಕೊಳ್ಳುವಂತೆ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ. ಇದರಿಂದಾಗಿ ಸೋಂಕಿತರಿಗೆ ಹೆಚ್ಚಿನ ಅನುಕೂಲವಾಗಲಿದೆ. ಭಾನುವಾರ ನಾನೇ ಖುದ್ದಾಗಿ ಭೇಟಿ ನೀಡಲಿದ್ದೇನೆ ಎಂದು ಮುರುಗೇಶ್ ನಿರಾಣಿ ತಿಳಿಸಿದ್ದಾರೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ನ್ಯೂಸ್‌ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona