ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿದ್ದಾರೆ ಎಂದಿದ್ದಕ್ಕೆ ಕೋರ್ಟ್ ಆಕ್ಷೇಪ| ಹೊಸದಾಗಿ ವರದಿ ಸಲ್ಲಿಸಲು ಅನುಮತಿ ನೀಡಿದ ಕೋರ್ಟ್| ಕಲಬುರಗಿ ನಗರದಲ್ಲಿ ಕಾಲು ಜಾರಿ ಮ್ಯಾನ್‌ಹೋಲ್‌ಗೆ ಬಿದ್ದು ಮೃತಪಟ್ಟಿದ್ದ ಇಬ್ಬರು ಕಾರ್ಮಿಕರು|
ಬೆಂಗಳೂರು(ಮಾ.17): ಕಲಬುರಗಿ ಜಿಲ್ಲೆಯ ಕೈಲಾಶ್ ನಗರದಲ್ಲಿ ಇಬ್ಬರು ಕಾರ್ಮಿಕರು ಕಾಲು ಜಾರಿ ಮ್ಯಾನ್‌ಹೋಲ್‌ಗೆ ಬಿದ್ದು ಮೃತಪಟ್ಟಿದ್ದಾರೆ ಎಂದು ತಿಳಿಸಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕಾರ್ಯಕಾರಿ ಇಂಜಿನಿಯರ್ ಹೈಕೋರ್ಟ್‌ಗೆ ಸಲ್ಲಿಸಿದ್ದ ವರದಿಯನ್ನು ಹಿಂಪಡೆಯಲಾಗಿದೆ.
ಮನುಷ್ಯರಿಂದ ಮಲಗುಂಡಿಗಳನ್ನು ಸ್ವಚ್ಛಗೊಳಿಸುವ ಪದ್ಧತಿ ನಿಷೇಧ ಮತ್ತು ಪುನರ್ವಸತಿ ಕಾಯ್ದೆ-2013ರ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಎಐಸಿಸಿಟಿಯುನ ರಾಜ್ಯ ಘಟಕ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದೆ.
undefined
ಕಲಬುರಗಿಯಲ್ಲಿ ಮ್ಯಾನ್‌ಹೋಲ್ ದುರಂತ: ಉಸಿರುಗಟ್ಟಿ ಇಬ್ಬರು ಕಾರ್ಮಿಕರ ಸಾವು
ಪ್ರಕರಣ ಸಂಬಂಧ ತನಿಖಾ ವರದಿ ಸಲ್ಲಿಸುವಂತೆ ಹೈಕೋರ್ಟ್ ಅರ್ಜಿಯ ಹಿಂದಿನ ವಿಚಾರಣೆ ವೇಳೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ನಿರ್ದೇಶಿಸಿತ್ತು. ಅದರಂತೆ ಮಂಡಳಿಯ ಕಾರ್ಯಕಾರಿ ಎಂಜಿನಿಯರ್ ಹೈಕೋರ್ಟ್‌ಗೆ ವರದಿ ಸಲ್ಲಿಸಿ, ‘ಕಾರ್ಮಿಕರು ಆಕಸ್ಮಿಕವಾಗಿ ಕಾಲು ಜಾರಿ ಮ್ಯಾನ್‌ಹೋಲ್‌ಗೆ ಬಿದ್ದು ಸಾವನ್ನಪ್ಪಿದ್ದಾರೆ’ ಎಂದು ತಿಳಿಸಿದ್ದರು. ಅದನ್ನು ತೀವ್ರವಾಗಿ ಆಕ್ಷೇಪಿಸಿದ್ದ ನ್ಯಾಯಪೀಠ, ಸಮರ್ಪಕವಾಗಿ ತನಿಖೆ ನಡೆಸದೆ ವರದಿ ಸಲ್ಲಿಸಿದಂತಿದೆ. ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಸೂಚಿಸಿತ್ತು.
ಮಂಗಳವಾರ ಅರ್ಜಿ ಮತ್ತೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ಅವರ ನೇತೃತ್ವದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು. ಆ ವೇಳೆ ಮಂಡಳಿಯ ಪರ ವಕೀಲರು ಹಾಜರಾಗಿ, ಕಾರ್ಯಕಾರಿ ಎಂಜಿನಿಯರ್ ಅವರ ವರದಿ ವಾಪಸ್ ಪಡೆದುಕೊಂಡು ಹೊಸದಾಗಿ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಅದನ್ನು ಪರಿಗಣಿಸಿದ ನ್ಯಾಯಪೀಠ, ಹೊಸದಾಗಿ ವರದಿ ಸಲ್ಲಿಸಲು ಅನುಮತಿ ನೀಡಿತು. ಅಲ್ಲದೆ, ಮನುಷ್ಯರಿಂದ ಮಲಗುಂಡಿಗಳನ್ನು ಸ್ವಚ್ಛಗೊಳಿಸುವ ಪದ್ಧತಿ ನಿಷೇಧ ಮತ್ತು ಪುನರ್ವಸತಿ ಕಾಯ್ದೆ-2013ರ ಪರಿಣಾಮಕಾರಿ ಜಾರಿಗೆ ಸಂಬಂಧಿಸಿದಂತೆ ಹೈಕೋರ್ಟ್ ಕಾಲ ಕಾಲಕ್ಕೆ ನೀಡಿರುವ ನಿರ್ದೇಶನ ಪಾಲಿಸಿರುವ ಬಗ್ಗೆ ಸಮಗ್ರ ವರದಿ ಸಲ್ಲಿಸಲು ಸೂಚಿಸಿ ವಿಚಾರಣೆ ಮುಂದೂಡಿತು.