ಬೆಂಗಳೂರು : ಹುಳಿಮಾವು ಕೆರೆ ಒತ್ತುವರಿ ತೆರವು ಶುರು

By Kannadaprabha NewsFirst Published Jan 3, 2020, 7:42 AM IST
Highlights

ಕೆರೆ ಕಟ್ಟೆ ಒಡೆದು ನೂರಾರು ಕುಟುಂಬಗಳನ್ನು ಅತಂತ್ರ ಮಾಡಿದ್ದ ಹುಳಿ ಮಾವು ಕೆರೆ ಒತ್ತುವರಿ ಕಾರ್ಯಾಚರಣೆಯೂ  ಆರಂಭವಾಗಿದೆ. 

ಬೆಂಗಳೂರು [ಜ.03]:  ಕೆರೆ ಏರಿ ಒಡೆದು ಅನಾಹುತಕ್ಕೆ ಒಳಗಾಗಿದ್ದ ಹುಳಿಮಾವು ಕೆರೆ ಪ್ರದೇಶದಲ್ಲಿ ಗುರುವಾರ ಬಿಬಿಎಂಪಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಒತ್ತುವರಿಯಾಗಿದ್ದ ಎರಡು ಕಟ್ಟಡ ತೆರವುಗೊಳಿಸಿ ಹಲವರಿಗೆ ನೋಟಿಸ್‌ ಜಾರಿ ಮಾಡಿದ್ದಾರೆ.

ನ.24ರಂದು ಹುಳಿಮಾವು ಕೆರೆಯ ಏರಿ ಒಡೆದು ಹುಳಿಮಾವು ಕೆರೆಯ ಸುತ್ತಮುತ್ತಲಿನ ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಹಾನಿಯಾಗಿತ್ತು. ಕೆರೆಗಳ ಸುರಕ್ಷತೆ ಬಗ್ಗೆ ಅಧ್ಯಯನಕ್ಕೆ ಸರ್ಕಾರ ನೇಮಿಸಿದ್ದ ಭಾರತೀಯ ವಿಜ್ಞಾನ ಸಂಸ್ಥೆಯ ನಿವೃತ್ತ ಪ್ರಾಧ್ಯಾಪಕ ಡಾ.ಬಿ.ಆರ್‌.ಶ್ರೀನಿವಾಸಮೂರ್ತಿ ಅವರ ನೇತೃತ್ವದ ತ್ರಿಸದಸ್ಯರ ತಾಂತ್ರಿಕ ಸಮಿತಿಯೂ ಒತ್ತುವರಿಯಾಗಿದೆ ಎಂಬ ಅಂಶವನ್ನು ತಮ್ಮ ಮಧ್ಯಂತರ ವರದಿಯಲ್ಲಿ ದೃಢೀಕರಿಸಿತ್ತು.

ಈ ಹಿನ್ನೆಲೆಯಲ್ಲಿ ಗುರುವಾರ ಬಿಬಿಎಂಪಿ ಕೆರೆ ವಿಭಾಗದ ಮುಖ್ಯ ಎಂಜಿನಿಯರ್‌ ಮೋಹನ್‌ ಕೃಷ್ಣ, ತಹಸೀಲ್ದಾರ್‌ ಶಿವಪ್ಪ ಲಮಾಣಿ ನೇತೃತ್ವದಲ್ಲಿ 70 ಪೊಲೀಸ್‌ ಸಿಬ್ಬಂದಿ, ಆರು ಜೆಸಿಬಿ ಹಾಗೂ ಎರಡು ಹಿಟಾಚಿ ಯಂತ್ರ ಬಳಸಿ ಕೆರೆ ಒತ್ತುವರಿ ಮಾಡಿಕೊಂಡಿದ್ದ ಎರಡು ಕಟ್ಟಡಗಳನ್ನು ತೆರವುಗೊಳಿಸಲಾಯಿತು.

ಕೋರ್ಟ್‌ನಿಂದ ತಡೆಯಾಜ್ಞೆ:

ಈ ಕುರಿತು ಮಾತನಾಡಿದ ಬಿಬಿಎಂಪಿ ಕೆರೆ ವಿಭಾಗದ ಮುಖ್ಯ ಎಂಜಿನಿಯರ್‌ ಮೋಹನ್‌ ಕೃಷ್ಣ, ಕಮ್ಮನಹಳ್ಳಿ ಸರ್ವೆ ಮತ್ತು ಹುಳಿಮಾವು ಸರ್ವೆ ನಂಬರ್‌ನಲ್ಲಿ ಕೆರೆ ಒತ್ತುವರಿ ಮಾಡಿಕೊಂಡ ಎಲ್ಲರಿಗೂ ನೋಟಿಸ್‌ ನೀಡಲಾಗುತ್ತಿದೆ. ಎಂಟು ಕಟ್ಟಡಗಳ ಮಾಲೀಕರು ಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದಾರೆ. ಇವುಗಳ ದಾಖಲೆ ಪರಿಶೀಲಿಸಲಾಗುತ್ತಿದೆ. ಇನ್ನು ಬಿಬಿಎಂಪಿಯಿಂದ ನಿರ್ಮಿಸಿರುವ ಪಾರ್ಕ್, ಆರು ಖಾಲಿ ನಿವೇಶನವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಕಮ್ಮನಹಳ್ಳಿ ಸರ್ವೆ ನಂಬರ್‌ನಲ್ಲಿ ರಸ್ತೆ ಸೇರಿದಂತೆ ವಿವಿಧ ಕಾಮಗಾರಿಗಳಿಗೆ 27 ಗುಂಟೆ ಬಳಸಿಕೊಳ್ಳಲಾಗಿದೆ. ಖಾಸಗಿಯವರಿಂದ 1.30 ಎಕರೆ ಒತ್ತುವರಿಯಾಗಿದೆ. ಒಂದು ಗುಂಟೆಯಲ್ಲಿ ಅನಧಿಕೃತ ಮನೆಗಳು ನಿರ್ಮಾಣವಾಗಿದ್ದು, ತೆರವು ಮಾಡಲು ಸೂಚನೆ ನೀಡಲಾಗಿದೆ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಹುಳಿಮಾವು ಸರ್ವೆ ನಂಬರ್‌ ವ್ಯಾಪ್ತಿಯಲ್ಲಿ ಆರು ಎಕರೆ ರಸ್ತೆ ನಿರ್ಮಿಸಿದೆ. ಬಿಡಿಎ ಬಡಾವಣೆ 11ಎಕರೆ 20 ಗುಂಟೆ, 12 ಗುಂಟೆ ಬಿಬಿಎಂಪಿ ಪಾರ್ಕ್, 15 ಗುಂಟೆ ವ್ಯಾಪ್ತಿಯಲ್ಲಿ ಅಂಗನವಾಡಿ ನಿರ್ಮಾಣ ಹಾಗೂ 6 ಗುಂಟೆ ವ್ಯಾಪ್ತಿಯಲ್ಲಿ ಸರ್ಕಾರಿ ಶಾಲೆ ನಿರ್ಮಾಣ ಮಾಡಲಾಗಿದೆ. ಇನ್ನು ಸಾಯಿ ಮಂದಿರ 5 ಗುಂಟೆ, ಪ್ರವಚನ ಮಂದಿರ 4 ಗುಂಟೆ, ಚೌಡೇಶ್ವರಿ ದೇವಸ್ಥಾನ 2 ಗುಂಟೆ, ವೈಷ್ಣವಿದೇವಿ ದೇವಸ್ಥಾನ 3 ಗುಂಟೆ ಕೆರೆಯ ಭಾಗವನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ. ದೇವಸ್ಥಾನದ ಮಾಲೀಕರಿಗೆ ನೋಟಿಸ್‌ ನೀಡಲಾಗಿದೆ ಎಂದು ತಿಳಿಸಿದರು.

ಶಾಸಕರ ಮಧ್ಯೆ ಪ್ರವೇಶ ತೆರವು ಸ್ಥಗಿತ

ಗುರುವಾರ ಒತ್ತುವರಿ ಕಾರ್ಯಾಚರಣೆ ವೇಳೆ ಕೆಲವರು ಬಿಬಿಎಂಪಿ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದರು. ಕೆಲವರು ಖಾಲಿ ಮಾಡುವುದಕ್ಕೆ ಸಮಯ ನೀಡುವಂತೆ ಮನವಿ ಮಾಡಿದರು. ಆದರೆ, ಬಿಬಿಎಂಪಿ ಅಧಿಕಾರಿಗಳು ಯಾವುದರೂ ಅವಕಾಶ ನೀಡದೇ ಒತ್ತವರಿ ತೆರವು ಮುಂದುವರೆಸಿದರು. ಆಗ ಬೆಂ. ದಕ್ಷಿಣ ವಿಧಾನಸಭಾ ಕ್ಷೇತ್ರ ಶಾಸಕ ಎಂ. ಕೃಷ್ಣಪ್ಪ ಮಧ್ಯೆ ಪ್ರವೇಶಿಸಿದ ಹಿನ್ನೆಲೆಯಲ್ಲಿ ಅಧಿಕಾರಿಗಳು ಕಾರ್ಯಾಚರಣೆ ಸ್ಥಗಿತಗೊಳಿಸಿದರು.

ಒತ್ತುವರಿ ತೆರವುವಿಗೆ ಸೂಚನೆ ನೀಡಲಾಗಿದೆ. ಒಂದು ವೇಳೆ ತೆರವು ಮಾಡದಿದ್ದರೆ, 15 ದಿನಗಳ ನಂತರ ಮತ್ತೆ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸಲಾಗುವುದು.

- ಮೋಹನ್‌ ಕೃಷ್ಣ, ಬಿಬಿಎಂಪಿ ಕೆರೆಗಳ ವಿಭಾಗದ ಮುಖ್ಯಎಂಜಿನಿಯರ್‌

ನ್ಯಾಯಾಲಯ ಕೆಲವು ಪ್ರಕರಣಗಳಲ್ಲಿ ತಡೆಯಾಜ್ಞೆ ನೀಡಿದೆ. ಕೆಲವು ಮನೆ ಮಾಲೀಕರು ಮನೆಯಲ್ಲಿ ವಸ್ತುಗಳಿವೆ. ಅವುಗಳನ್ನು ತೆಗೆದುಕೊಳ್ಳಲು ಕಾಲಾವಕಾಶ ಕೇಳಿದ್ದಾರೆ. ಇದರಿಂದಾಗಿ ಕಾರ್ಯಾಚರಣೆ ಸ್ಥಗಿತ ಮಾಡುವಂತೆ ಸೂಚಿಸಲಾಗಿದೆಯೇ ಹೊರತು. ಯಾರನ್ನೋ ರಕ್ಷಿಸುವುದಕ್ಕೆ ಅಲ್ಲ.

- ಎಂ. ಕೃಷ್ಣಪ್ಪ, ಬೆಂಗಳೂರು ದಕ್ಷಿಣ ಕ್ಷೇತ್ರದ ಶಾಸಕ

click me!