ಮಂಗಳೂರಿನಲ್ಲಿ ಪೌರತ್ವ ಕಾಯ್ದೆ ವಿರೋಧಿಸಿ ಡಿಸೆಂಬರ್ 19 ರಂದು ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮಹತ್ವದ ಸಾಕ್ಷ್ಯಗಳನ್ನು ಸಿಐಡಿ ತಂಡ ಕಲೆಹಾಕಿದೆ.
ಮಂಗಳೂರು (ಡಿ.03): ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಬಿಹಾರ ಮತ್ತು ಒಡಿಶಾ ರಾಜ್ಯಗಳಲ್ಲಿ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿದ್ದ ಕೋಮು ಸಂಘಟನೆಯೇ ಮಂಗಳೂರಿನಲ್ಲಿ ನಡೆದ ಹಿಂಸಾಚಾರಕ್ಕೆ ಸ್ಕೆಚ್ ಹಾಕಿತ್ತು ಎಂಬ ಬಗ್ಗೆ ಮಂಗಳೂರು ಪೊಲೀಸರಿಗೆ ಬಲವಾದ ಸಾಕ್ಷ್ಯ ದೊರಕಿದ್ದು, ಇದೀಗ ಸಿಐಡಿ ತನಿಖಾ ತಂಡಕ್ಕೆ ಹಸ್ತಾಂತರಗೊಂಡ ಮಾಹಿತಿ ಲಭಿಸಿದೆ.
ನಿಷೇಧಾಜ್ಞೆ ಹೊರತಾಗಿಯೂ ಡಿ.19ರಂದು ನಗರದಲ್ಲಿ ನಡೆದ ಹಿಂಸಾತ್ಮಕ ಘಟನೆಗಳು ಸಾಕಷ್ಟುಪೂರ್ವಯೋಜಿತವಾಗಿದ್ದವು ಎಂಬುದಕ್ಕೆ ಪೊಲೀಸರು ಪುರಾವೆ ಸಂಗ್ರಹಿಸಿದ್ದಾರೆ. ಹಿಂಸಾಚಾರ ಘಟನೆಗೆ ಬಿಹಾರದಲ್ಲಿ ಕುಳಿತು ಮಂಗಳೂರು ಸಮೀಪದ ಕೋಮು ಸಂಘಟನೆಗೆ ಸೇರಿದ ವ್ಯಕ್ತಿಯೊಬ್ಬರು ಕುಮ್ಮಕ್ಕು ನೀಡಿದ್ದಾರೆ. ಅವರು ಪ್ರತಿಭಟನೆಗೂ ಮುನ್ನಾ ದಿನ ಜಾಲತಾಣಗಳ ಮೂಲಕ ಪ್ರತಿಭಟನಾಕಾರರಿಗೆ ಕಳುಹಿಸಿರುವ ಪ್ರಚೋದನಾತ್ಮಕ ಸಂದೇಶವನ್ನು ಪತ್ತೆಮಾಡಿದ್ದಾರೆ. ಬಿಹಾರ ಮತ್ತು ಒಡಿಶಾದಲ್ಲಿ ನಡೆದ ಹಿಂಸಾಚಾರದ ಹಿಂದೆಯೂ ಇದೇ ಸಂಘಟನೆ ಹಾಗೂ ವ್ಯಕ್ತಿಗಳು ಶಾಮೀಲಾಗಿರುವ ಬಗ್ಗೆ ಕೂಡ ಇಲ್ಲಿನ ಪೊಲೀಸರು ಮಹತ್ವದ ಸಾಕ್ಷ್ಯ ಲಭಿಸಿದೆ.
ಇದಕ್ಕೆ ಸಂಬಂಧಿಸಿ ಮಂಗಳೂರು ಹೊರವಲಯದ ಫರಂಗಿಪೇಟೆ ನಿವಾಸಿಯಾದ ಸಂಘಟನೆಯ ಮುಖಂಡನ ವಿರುದ್ಧ ಈಗಾಗಲೇ ಸೈಬರ್ ಕ್ರೈಂ ಹಾಗೂ ಮಂಗಳೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ ದಾಖಲಾಗುತ್ತಿದ್ದಂತೆ ಈ ಆರೋಪಿ ಸದ್ಯ ತಲೆಮರೆಸಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸಿಐಡಿ ಪ್ರಾಥಮಿಕ ತನಿಖೆ:
ರಾಜ್ಯ ಸರ್ಕಾರದ ಆದೇಶದ ಮೇರೆಗೆ ವಾರದ ಹಿಂದೆ ಮಂಗಳೂರಿಗೆ ಆಗಮಿಸಿರುವ ಸಿಐಡಿ ಎಸ್ಪಿ ರಾಹುಲ್ ನೇತೃತ್ವದ ತಂಡ ಪ್ರಾಥಮಿಕ ಮಾಹಿತಿಯನ್ನು ಪಡೆದುಕೊಂಡು ವಾಪಸ್ ತೆರಳಿದೆ. ಎಸ್ಪಿ ರಾಹುಲ್ ನೇತೃತ್ವದಲ್ಲಿ ಐವರು ಪೊಲೀಸ್ ಅಧಿಕಾರಿಗಳ ತಂಡ ಮಂಗಳೂರಿಗೆ ಆಗಮಿಸಿ ಹಿಂಸಾಚಾರ ಘಟನೆ ನಡೆದ ಸ್ಥಳ ಪರಿಶೀಲನೆ ನಡೆಸಿತ್ತು. ಅಲ್ಲದೆ ಗೋಲಿಬಾರ್ ಘಟನೆಗೆ ಸಂಬಂಧಿಸಿ ಪ್ರಾಥಮಿಕ ಮಾಹಿತಿಗಳನ್ನು ಕಲೆಹಾಕಿ ಬೆಂಗಳೂರಿಗೆ ತೆರಳಿದೆ. ಉಳಿದಂತೆ ಘಟನೆ ಬಗ್ಗೆ ಪರಿಪೂರ್ಣ ತನಿಖೆ ಇನ್ನಷ್ಟೇ ನಡೆಯಬೇಕು.
ಪಾಸ್‌ಪೋರ್ಟ್ ರದ್ಧತಿಗೆ ಕ್ರಮ
ವಿದೇಶದಲ್ಲಿದ್ದುಕೊಂಡು ಸಾಮಾಜಿಕ ತಾಣಗಳಲ್ಲಿ ಹಿಂಸೆಗೆ ಪ್ರಚೋದಿಸಿ ಸಂದೇಶಗಳನ್ನು ಹಾಕಿ ವೈರಲ್ ಮಾಡಿದವರ ವಿರುದ್ಧವೂ ಮಂಗಳೂರು ಸೈಬರ್ ಪೊಲೀಸರ ತನಿಖೆ ಮುಂದುವರಿದಿದೆ. ಡಿ.19ರ ಹಿಂಸಾಚಾರಕ್ಕೆ ಮುನ್ನ ಹಾಗೂ ನಂತರ ಶಾಂತಿಕದಡಲು ಕಾರಣರಾಗಿರುವ ಪ್ರಚೋದನಾತ್ಮಕ ಸಂದೇಶ, ವಾಯ್ಸ್ ಮೆಸೇಜ್ ಮುಂತಾದವುಗಳನ್ನು ಹರಿಯಬಿಟ್ಟವರಲ್ಲಿ 50ಕ್ಕೂ ಹೆಚ್ಚು ಮಂದಿ ವಿದೇಶದಲ್ಲಿದ್ದಾರೆ ಎಂಬುದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಇಲಾಖೆ ಸಿದ್ಧತೆ ನಡೆಸಿದೆ. ಈಗಾಗಲೇ ಇದಕ್ಕಾಗಿ ಎಲ್ಲ ಆರೋಪಿಗಳ ಪಾಸ್‌ಪೋರ್ಟ್ ರದ್ಧತಿಗೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲು ಪೊಲೀಸರು ಮುಂದಾಗಿದ್ದಾರೆ. ಜೊತೆಗೆ ಆರೋಪಿಗಳ ವೀಸಾ ರದ್ದುಗೊಳಿಸುವ ಬಗ್ಗೆಯೂ ಕಾನೂನು ತಜ್ಞರಿಂದ ಸಲಹೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.