ಮಹಿಳೆಯರಿಗೆ ಉಚಿತ ಪ್ರಯಾಣ ಸ್ತ್ರೀಶಕ್ತಿ ಯೋಜನೆ ಬಂದಾಗಿನಿಂದ ಸಮಯಕ್ಕೆ ಸರಿಯಾಗಿ ಕಚೇರಿಗಳಿಗೆ ನೌಕರರು, ಶಾಲೆ-ಕಾಲೇಜುಗಳಿಗೆ ಮಕ್ಕಳು ತೆರಳಲಾಗದೇ ಪಾಠ-ಪ್ರವಚನಗಳಿಂದ ದೂರವಾಗುವಂತಾಗಿದೆ. ನೌಕರರು ದಿನನಿತ್ಯ ಮೇಲಧಿಕಾರಿಗಳಿಂದ ಅವಮಾನಿತರಾಗುವಂತಾಗಿದೆ.
ಶಿವಾನಂದ ಮಹಾಬಲಶೆಟ್ಟಿ
ರಬಕವಿ-ಬನಹಟ್ಟಿ(ಜು.16): ರಾಜ್ಯ ಸರ್ಕಾರ ಮಹಿಳೆಯರಿಗೆ ರೂಪಿಸಿದ ಶಕ್ತಿ ಯೋಜನೆಯಿಂದಾಗಿ ದಿನನಿತ್ಯ ನೌಕರಿಗಾಗಿ ಪರಸ್ಥಳಗಳಿಗೆ ತೆರಳಬೇಕಿದ್ದ ನೌಕರರು ಮತ್ತು ಶಾಲೆ-ಕಾಲೇಜುಗಳ ವಿದ್ಯಾರ್ಥಿಗಳು ಬಸ್ ತುಂಬಿ ತುಳುಕುವುದರಿಂದ ನಿರ್ವಾಹಕರು ಅನಿವಾರ್ಯವಾಗಿ ಇತರೆ ಪ್ರಯಾಣಿಕರನ್ನು ಬಿಟ್ಟು ತೆರಳುತ್ತಿರುವುದರಿಂದ ನಿಗದಿತ ಸಮಯದಲ್ಲಿ ಕಚೇರಿಗಳಿಗೆ, ಶಾಲೆ-ಕಾಲೇಜುಗಳಿಗೆ ತೆರಳಲಾಗದೇ ಹೈರಾಣಾಗುತ್ತಿರುವ ಪ್ರಸಂಗ ಕಳೆದೆರಡು ತಿಂಗಳಿಂದ ಅವ್ಯಾಹತವಾಗಿ ನಡೆಯುತ್ತಿದ್ದು, ನೌಕರರು, ವಿದ್ಯಾರ್ಥಿಗಳು ಇದರಿಂದ ರೋಸಿ ಹೋಗಿದ್ದಾರೆ.
undefined
ಮಹಿಳೆಯರಿಗೆ ಉಚಿತ ಪ್ರಯಾಣ ಸ್ತ್ರೀಶಕ್ತಿ ಯೋಜನೆ ಬಂದಾಗಿನಿಂದ ಸಮಯಕ್ಕೆ ಸರಿಯಾಗಿ ಕಚೇರಿಗಳಿಗೆ ನೌಕರರು, ಶಾಲೆ-ಕಾಲೇಜುಗಳಿಗೆ ಮಕ್ಕಳು ತೆರಳಲಾಗದೇ ಪಾಠ-ಪ್ರವಚನಗಳಿಂದ ದೂರವಾಗುವಂತಾಗಿದೆ. ನೌಕರರು ದಿನನಿತ್ಯ ಮೇಲಧಿಕಾರಿಗಳಿಂದ ಅವಮಾನಿತರಾಗುವಂತಾಗಿದೆ. ಈ ಬಗ್ಗೆ ಜಮಖಂಡಿ ಸಾರಿಗೆ ಮುಖ್ಯಸ್ಥರನ್ನು ಸಂಪರ್ಕಿಸಿದರೆ ಹೆಚ್ಚುವರಿ ಬಸ್‌ಗಳನ್ನು ಓಡಿಸಲು ಅಗತ್ಯ ಸಿಬ್ಬಂದಿ ಇಲ್ಲ. ಇರುವ ಬಸ್‌ಗಳನ್ನೇ ಬಳಸಿ ಇರುವ ಸಿಬ್ಬಂದಿಯನ್ನೇ ಬಳಸಿಕೊಂಡು ಸಾರಿಗೆ ಸೇವೆ ನೀಡುತ್ತಿದ್ದೇವೆ. ಹೆಚ್ಚುವರಿ ಬಸ್‌ಗಳನ್ನು ಓಡಿಸಬೇಕಾದರೆ ಸಿಬ್ಬಂದಿ ಕೊರತೆಯ ಕಾರಣ ಚಾಲಕ ಮತ್ತು ನಿರ್ವಾಹಕರನ್ನು ಎಲ್ಲಿಂದ ತರುವುದು ಎಂದು ಮರು ಪ್ರಶ್ನಿಸುತ್ತಿರುವ ಕಾರಣ ನೌಕರರು ಮತ್ತು ವಿದ್ಯಾರ್ಥಿಗಳು ಪೂರ್ವ ಸಿದ್ಧತೆಯಿಲ್ಲದೇ ಯೋಜನೆ ಜಾರಿಗೊಳಿಸಿರುವ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಮಾಸಿಕ ಪಾಸ್‌ಗಳನ್ನು ಹೊಂದಿರುವ ನೌಕರರು ಮತ್ತು ವಿದ್ಯಾರ್ಥಿಗಳು ಹಣ ನೀಡಿದರೂ ಬಸ್‌ಗಳಲ್ಲಿ ಸೀಟು ಸಿಗದಿದ್ದರೂ ಪರವಾಗಿಲ್ಲ ನಿಲ್ಲಲು ಸ್ಥಳ ಸಿಕ್ಕರೆ ಸಾಕು ಎಂಬಂತಾಗಿದೆ ಎಂದು ಅಲವತ್ತುಕೊಂಡಿದ್ದಾರೆ.
ಉಚಿತ ಪ್ರಯಾಣಕ್ಕೆ ಸ್ತ್ರೀಯರಿಗೆ ಮೆಟ್ರೋ ರೀತಿ ಸ್ಮಾರ್ಟ್‌ಕಾರ್ಡ್?
ತೇರದಾಳದಿಂದ ಜಮಖಂಡಿಗೆ ದಿನನಿತ್ಯ ಕೆಲಸಕ್ಕೆಂದು ನೂರಾರು ನೌಕರರು ಮತ್ತು ಕಾಲೇಜುಗಳಿಗೆ ವಿದ್ಯಾರ್ಥಿಗಳು ತೆರಳುತ್ತಿದ್ದಾರೆ. ಆದರೆ ಇರುವ ಬಸ್‌ಗಳಲ್ಲಿ ಮಹಿಳೆಯರೇ ದಡಬಡಾಯಿಸಿ ಹತ್ತಿ ಬಸ್ ಫುಲ್ ಆಗುವುದರಿಂದ ನಿತ್ಯ ನಮಗೆ ತೊಂದರೆಯಾಗುತ್ತಿದೆ. ಶಾಲೆ-ಕಾಲೇಜುಗಳ ಮತ್ತು ಕಚೇರಿ ಆರಂಭಿಕ ವೇಳೆಯಲ್ಲಿ ಹೆಚ್ಚುವರಿ ಬಸ್‌ಗಳನ್ನು ಓಡಿಸಲು ಸಾರಿಗೆ ಸಂಸ್ಥೆ ಮುಂದಾಗುತ್ತಿಲ್ಲ. ಇದರಿಂದ ನಾವು ಅನಗತ್ಯವಾಗಿ ನಿತ್ಯ ತೊಂದರೆ ಅನುಭವಿಸುವಂತಾಗಿದೆ ಎಂದು ಪ್ರಯಾಣಿಕ ಡಾ.ಸಿದ್ದು ಹಂಜಿ ತಮ್ಮ ಶೋಚನೀಯ ಸ್ಥಿತಿ ಹೇಳಿದ್ದಾರೆ.
ಶಕ್ತಿ ಯೋಜನೆ ಜಾರಿಯಾಗಿ ತಿಂಗಳುಗಳೇ ಕಳೆದರೂ ರಶ್ ಮಾತ್ರ ಇನ್ನು ಕಡಿಮೆ ಆಗಿಲ್ಲ. ಹೀಗಾಗಿ ನೌಕರರು, ವಿದ್ಯಾರ್ಥಿಗಳು ಸ್ಥಿತಿ ಆ ದೇವರಿಗೆ ಪ್ರೀತಿ ಅನ್ನುವಂತಾಗಿದೆ. ಹೀಗಾಗಿ ಸಂಬಂಧಪಟ್ಟಅಧಿಕಾರಿಗಳು, ಜನಪ್ರತಿನಿಧಿಗಳು ಹೆಚ್ಚುವರಿ ಬಸ್ ಕಲ್ಪಿಸಿ ಈ ಸಮಸ್ಯೆಗೆ ಮುಕ್ತಿ ಆಗಿ ಶಕ್ತಿ ಯೋಜನೆಗೆ ಮತ್ತಷ್ಟುಬಲ ತುಂಬಬೇಕಾಗಿದೆ.
ಪದವಿ ಮತ್ತು ಸ್ನಾತಕ ಪದವಿ ವಿದ್ಯಾರ್ಥಿನಿಯರಿಗೆ ನಿಗದಿತ ಸಮಯದಲ್ಲಿ ಬಸ್‌ಗಳು ಸಿಗದೇ ತೊಂದರೆ ಆಗುತ್ತಿದೆ. ಶಾಲೆ-ಕಾಲೇಜುಗಳಿಗೆ ರಬಕವಿ ಮತ್ತು ಬನಹಟ್ಟಿಯಿಂದ ತೆರಳುವ ವಿದ್ಯಾರ್ಥಿಗಳು ಮಹಿಳೆಯರಿಂದ ಬಸ್‌ಗಳು ಫುಲ್ ಆಗುವುದರಿಂದ ನಿರ್ವಾಹಕರು ಬೇರೊಂದು ಬಸ್ ಮೂಲಕ ತೆರಳಲು ಸೂಚಿಸಿ ಬಿಟ್ಟು ಹೋಗುತ್ತಾರೆ. ಇದರಿಂದ ನಾವು ಪ್ರತಿನಿತ್ಯ ತರಗತಿಗಳಿಗೆ ವಿಳಂಬವಾಗಿ ತೆರಳುವುದರಿಂದ ಒಂದೆರಡು ತರಗತಿಗಳಿಗೆ ಹಾಜರಾಗಲಾಗುತ್ತಿಲ್ಲ. ಸರ್ಕಾರ ಯೋಜನೆ ರೂಪಿಸುವ ಮುನ್ನ ಬಸ್‌ಗಳ ಮತ್ತು ಸಿಬ್ಬಂದಿಯ ಲಭ್ಯತೆ ಗಮನಿಸಿ ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಮಾಡಬೇಕಿತ್ತು. ಸರ್ಕಾರದ ಬೇಜವಾಬ್ದಾರಿ ಕಾರಣಕ್ಕೆ ನಾವು ಪ್ರತಿದಿನ ನಮ್ಮದಲ್ಲದ ತಪ್ಪಿಗೆ ಸಮಸ್ಯೆ ಎದುರಿಸುವಂತಾಗಿದೆ ಅಂತ ಸೌಮ್ಯ ಶಿವಾನಂದ ಮಹಾಬಲಶೆಟ್ಟಿ ತಿಳಿಸಿದ್ದಾರೆ.